ಸಂದೂಕ – ಕೊಡವ ಸಂಸ್ಕೃತಿಯ ವರ್ಚುವಲ್ ವಸ್ತು ಸಂಗ್ರಹಾಲಯ

 

ಫೆಬ್ರವರಿ 2023ರಲ್ಲಿ ಪ್ರಾರಂಭ

 

ಕೊಡವ ಸಂಸ್ಕೃತಿ-ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವುದ ರೊಂದಿಗೆ ಕೊಡವರ ಇತಿಹಾಸ, ಭೂಮಿ, ಜೀವನ ಕಲೆ, ಅಪರೂಪದ ಪುರಾತನ ಬಳಕೆಯ ವಸ್ತುಗಳು ಸೇರಿದಂತೆ ಕ್ರೋಢೀಕೃತ ವಿಚಾರಧಾರೆಗಳನ್ನು ಒಳಗೊಂಡ ‘ಸಂದೂಕ’ ಎಂಬ ವರ್ಚುವಲ್ ಮ್ಯೂಸಿಯಂ (ವಸ್ತು ಸಂಗ್ರಹಾಲಯ) ಯೋಜನೆಯೊಂದು ಕಾರ್ಯರೂಪಕ್ಕೆ ಬರುತ್ತಿದೆ. ಇದೊಂದು ಹೊಸ ಪರಿಕಲ್ಪನೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳು ಆರಂಭಗೊಂಡಿದ್ದು, 2023ರಲ್ಲಿ ಇದು ಕಾರ್ಯಾರಂಭಗೊಳ್ಳಲಿರುವ ನಿರೀಕ್ಷೆಯಿದೆ.

 

ಈ ವರ್ಚುವಲ್ ವಸ್ತು ಸಂಗ್ರಹಾಲಯವನ್ನು ಸೃಷ್ಟಿಸುವ ಯೋಜನೆಯನ್ನು ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್ (ಐ.ಎಫ್.ಎ) ಸಂಸ್ಥೆ ಕೈಗೆತ್ತಿಕೊಂಡಿದೆ. ಕರ್ನಾಟಕ ರಾಜ್ಯದ, ಕೊಡಗಿನಲ್ಲಿರುವ ಕೊಡವರ ಶ್ರೀಮಂತ ಹಾಗೂ ಪ್ರವರ್ಧಮಾನದ ಪರಂಪರೆಗಳ ಕುರಿತಾದ ಅಂಶಗಳನ್ನು ಒಳಗೊಂಡ ಆನ್‌ಲೈನ್ ವೇದಿಕೆ ಇದಾಗಿದೆ. ಕೊಡವರ ಇತಿಹಾಸ, ಭೂಮಿ, ಜೀವನಕಲೆ, ಸಂಪ್ರದಾಯಗಳು, ಸಾಂಸ್ಕೃತಿಕತೆಯ ನೋಟಗಳನ್ನು ಇದು ಕಟ್ಟಿಕೊಡಲಿದೆ. ಇವೆಲ್ಲದರ ಕ್ರೋಢೀಕರಣದೊಂದಿಗೆ ಈ ವರ್ಚುವಲ್ ಮ್ಯೂಸಿಯಂ ಕಾರ್ಯನಿರ್ವಹಿಸಲಿದೆ.

ಈ ಪ್ರಾರಂಭಿಕ ಯೋಜನೆಯನ್ನು ಐ.ಎಫ್.ಎ. ಸಂಸ್ಥೆಯು ನಿರ್ವಹಿಸಲಿದ್ದು, ಇದಕ್ಕೆ ರೆಕೆರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬೆಂಬಲ ನೀಡುತ್ತಿದೆ. ಈ ಯೋಜನೆಯ ತಂಡದಲ್ಲಿ ಅಜ್ಜೆಕ್ಟ್ ಸ್ಪೀಕ್‌ನ ಮೇಲ್ವಿಚಾರಕರು ಹಾಗೂ ಕಲಾ ಇತಿಹಾಸಕಾರರಾದ ಲೀನಾ ವಿನ್ಸೆಂಟ್, ಸಂಶೋಧಕರಾದ ಮೂಕೋಂಡ ನಿತಿನ್ ಕುಶಾಲಪ್ಪ, ‘ಸ್ವಿಚ್’ ಸಂಸ್ಥೆಯ ಸಂಸ್ಥಾಪಕರಾದ ಸೌರವ್ ರಾಯ್ ಹಾಗೂ ಉಪಾಸನಾರಾಯ್ ಅವರುಗಳಿದ್ದಾರೆ. ಈ ತಂಡಕ್ಕೆ ಗೌರವಾನ್ವಿತ ಸಲಹೆಗಾರರಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಕೊಡಗಿನವರೇ ಆದ ರತಿ ವಿನಯ್‌ಯೂ, ಸಿ.ಪಿ. ಬೆಳ್ಳಿಯಪ್ಪ ಹಾಗೂ ಹೇಮಂತ್ ಸತ್ಯನಾರಾಯಣ ಅವರುಗಳಿದ್ದಾರೆ.

 

ಸಾರ್ವಜನಿಕರು ಈ ವೆಬ್‌ಸೈಟ್‌ಗೆ ತಮ್ಮಲ್ಲಿರುವ ದಾಖಲೆ, ಮಾಹಿತಿಯನ್ನು ಒದಗಿಸಬಹುದು

https://www.facebook.com/sandookamuseum

https://www.instagram.com/sandokkamuseum

https://www.sandookamuseum.org/from/intro

 

 

 

 

ಸಮುದಾಯದ ಸದಸ್ಯರಿಂದ ಕೊಡುಗೆಗಳಿಗಾಗಿ ಕರೆ

2023 ರಲ್ಲಿ ವಸ್ತು ಸಂಗ್ರಹಾಲಯವು ಪ್ರಾರಂಭಗೊಳ್ಳುವ ನಿರೀಕ್ಷೆ ಇದ್ದು, ವಸ್ತು ಸಂಗ್ರಹಾಲಯಕ್ಕೆ ಅಗತ್ಯವಾದ ಕಥೆಗಳು, ಚಿತ್ರಗಳು, ಹಾಡುಗಳು, ವಸ್ತುಗಳು, ನೆನಪುಗಳು ಮುಂತಾದವುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸುವ ಸಲುವಾಗಿ ಮುಕ್ತ ಆಹ್ವಾನವನ್ನು ನೀಡಲಾಗಿದೆ.

‘ಸಂದೂಕ-ವಸ್ತು ಸಂಗ್ರಹಾಲಯ’ ಯೋಜನೆಯಲ್ಲಿ ಕೊಡವ ಸಂಸ್ಕೃತಿಯ ಭಾಗವಾದ ದಾಖಲೆಗಳನ್ನು ಹಾಗೂ ಸಂರಕ್ಷಿತ ಕಥೆಗಳನ್ನು ಸಮುದಾಯದಿಂದ ಹಾಗೂ ವೈಯಕ್ತಿಕ ನೆಲೆಗಳಿಂದ ಸಂಗ್ರಹಿಸಲಾಗುವುದು. ಈ ಪ್ರಕ್ರಿಯೆಯನ್ನು ಸಂಶೋಧನೆ ಹಾಗೂ ಸಾರ್ವಜನಿಕ ಕೊಡುಗೆಗಳ ಮುಖಾಂತರ ನಡೆಸಲಾಗುವುದು.

 

ಭಾರತವು ಪ್ರಾಯಶಃ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಅಮೂರ್ತ ಪರಂಪರೆಯ ಮತ್ತು ಅಗಾಧ ಸಾಂಸ್ಕೃತಿಕ ವೈವಿಧ್ಯತೆಯ ದೇಶವಾಗಿದೆ. ಆದರೆ ಮುಂದಿನ ಪೀಳಿಗೆಗಾಗಿ ಈ ಪರಂಪರೆಯ ಹೆಚ್ಚಿನದ್ದನ್ನು ದಾಖಲಿಸಲು ಸಾಧ್ಯವಾಗಿಲ್ಲ. ಹೊರ ಜಗತ್ತಿಗೆ ಹೆಚ್ಚು ಗೊತ್ತಿಲ್ಲದ ಸಮುದಾಯಗಳ ಇತಿಹಾಸ, ಅವುಗಳ ಮೂಲ ಮತ್ತು ಅನನ್ಯ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಆ ಸಮುದಾಯಗಳು ಕಣ್ಮರೆಯಾಗುವ ಮೊದಲೇ ಮುಂದಿನ ಪೀಳಿಗೆಗಾಗಿ ದಾಖಲಿಸಬೇಕಾಗಿದೆ.

‘ಸಂದೂಕ’ ಕೊಡವ ಪರಂಪರೆಯನ್ನು ದಾಖಲಿಸುವ ಅಂತಹದ್ದೊಂದು ವರ್ಚುವಲ್ ವಸ್ತು ಸಂಗ್ರಹಾಲಯವಾಗಿದೆ. ಇದು ವಿಶ್ವದಾದ್ಯಂತ ಕೇವಲ ಎರಡು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ ಕೊಡವ ಸಮುದಾಯದ ಸಂಸ್ಕೃತಿಯನ್ನು ದಾಖಲಿಸುತ್ತದೆ ಮತ್ತು ಸಂರಕ್ಷಿಸುತ್ತದೆ. ಇಂತಹ ವಸ್ತು ಸಂಗ್ರಹಾಲಯಗಳ ಉದ್ದೇಶ ಕೇವಲ ಸಂಸ್ಕೃತಿಗಳನ್ನು ಪ್ರಚಾರ ಮಾಡುವುದಷ್ಟೇ ಅಲ್ಲ. ಇದಕ್ಕೂ ಮಿಗಿಲಾಗಿ ಕೊಡವ ಯುವ ಪೀಳಿಗೆ ಹೊಸ ಉದ್ಯೋಗಗಳನ್ನು ಅರಸುತ್ತಾ ತಮ್ಮ ಮೂಲ ಪರಂಪರೆಯ ಕೊಂಡಿಗಳಿAದ ಬೇರ್ಪಟ್ಟಿದ್ದಾರೆ. ಈ ಪ್ರಯತ್ನದ ಮುಖಾಂತರ ಆ ಕೊಂಡಿಗಳನ್ನು ಬೆಸೆಯುವುದನ್ನು ಸಾಧ್ಯವಾಗಿಸುವುದು ಕೂಡ ಒಂದು ಉದ್ದೇಶವಾಗಿದೆ.

‘ಸಂದೂಕ’ ಯೋಜನೆಯು ಈ ಎರಡೂ ಉದ್ದೇಶಗಳನ್ನು ಈಡೇರಿಸುವುದು ಎಂಬುದು ಗಟ್ಟಿ ನಂಬಿಕೆಯಾಗಿದೆ. ವೈಯಕ್ತಿಕವಾಗಿ ನಾನು ಒಬ್ಬ ಕೊಡವನಾಗಿ ಇಂತಹ ವಸ್ತು ಸಂಗ್ರಹಾಲಯವೊAದನ್ನು ಸ್ಥಾಪಿಸುವ ನನ್ನ ಹಳೆಯ ಕನಸಿನ ಸಾಕಾರವಾಗಿದೆ ಎಂಬದಾಗಿ ರತಿ ವಿನಯ್ ಝಾ| ಸಲಹಾ ಸಮಿತಿ ಸದಸ್ಯರು, ಸಂದೂಕ ವಸ್ತು ಸಂಗ್ರಹಾಲಯ ಇವರು ಅಭಿಪ್ರಾಯಪಟ್ಟಿದ್ದಾರೆ.

ಈ ವಸ್ತು ಸಂಗ್ರಹಾಲಯವು ಇನ್ನೂ ಅಪರಿಚಿತವಾಗಿರುವ ಮತ್ತು ಪೂರ್ಣ ಪ್ರಮಾಣದಲ್ಲಿ ದಾಖಲಾಗಿಲ್ಲದ ಕೊಡವರ ಶ್ರೀಮಂತ ಪರಂಪರೆಯ ಸಂಪತ್ತನ್ನು ಹಂಚಿಕೊಳ್ಳಲು ಉಪಯೋಗವಾಗಲಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಇಂತಹ ವರ್ಚುವಲ್ ವೇದಿಕೆಗಳ ಸಾಧ್ಯತೆಗಳನ್ನು ಹಾಗೂ ಸಾಮರ್ಥ್ಯಗಳನ್ನು ಅರಿತಿದ್ದೇವೆ. ಈ ವರ್ಚುವಲ್ ವೇದಿಕೆಗಳ ಮೂಲಕ ಸರಳವಾಗಿ ಜಗತ್ತನ್ನು ಮುಟ್ಟುವ ಅವಕಾಶವನ್ನು ಕೂಡ ಅರಿತಿದ್ದೇವೆ. ಈ ಆನ್‌ಲೈನ್ ವಸ್ತು ಸಂಗ್ರಹಾಲಯವು ಆ ಎಲ್ಲಾ ಕಲಿಕೆಗಳನ್ನು ಸ್ಫೂರ್ತಿಗಳನ್ನು ಬಳಸಿಕೊಂಡು ವೈವಿಧ್ಯಮಯ, ಶ್ರೀಮಂತ ಹಾಗೂ ಸೃಜನಶೀಲ ಸಾರ್ವಜನಿಕ ಅನುಭವಗಳನ್ನು ಕಟ್ಟಿಕೊಡುವ ಭರವಸೆ ನಮ್ಮದಾಗಿದೆ ಎಂದು ಅರುಂಧತಿ ಘೋಷ್, ಕಾರ್ಯನಿರ್ವಹಣಾ ನಿರ್ದೇಶಕರು, ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಇವರು ಹೇಳುತ್ತಾರೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿದ್ದು, ಹಬ್ಬ ಹರಿದಿನಗಳು ಮತ್ತಿತರ ವಿಚಾರಧಾರೆಗಳ ದಾಖಲೀಕರಣವಾಗುತ್ತಿದೆ.

 


ಸಾಂಪ್ರದಾಯಿಕ ಘನ ಯೂರಿಯಾಗಿಂತ ದ್ರವ ರೂಪದ ನ್ಯಾನೋ ಯೂರಿಯಾ ಪರಿಣಾಮಕಾರಿ

 

ವಿನೂತನ ತಂತ್ರಜ್ಞಾನದ ಬಳಕೆಗೆ ಕೇಂದ್ರ ಕಾಫಿ ಸಂಶೋಧನಾ ಕೇಂದ್ರ, ಕೆ.ವಿ.ಕೆ ಸಲಹೆ 

 

ಭತ್ತ ಕೃಷಿ, ಕಾಫಿ ಬೆಳೆಗೆ ಅತ್ಯಮೂಲ್ಯವಾಗಿರುವ ಯೂರಿಯಾ ರಸಗೊಬ್ಬರವನ್ನು ದ್ರವ ರೂಪದಲ್ಲಿ ಆವಿಷ್ಕರಿಸಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (IFFCO) ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ 11 ಸಾವಿರ ರೈತರ ತಾಕುಗಳಲ್ಲಿ 94 ವಿವಿಧ ಬೆಳೆಗಳ ಮೇಲೆ ಪ್ರಯೋಗಗಳನ್ನು ಮಾಡಿ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗಿದೆ. 2021ರ ಜೂನ್‌ನಲ್ಲಿಯೇ ಈ ಪರಿಣಾಮಕಾರಿ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, IFFCOಇ-ಕಾಮರ್ಸ್ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರುಕಟ್ಟೆ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ಲಭ್ಯವಿದೆ.

ಕೇಂದ್ರ ಕಾಫಿ ಸಂಶೋಧನಾ ಕೇಂದ್ರವು ಈ ನೂತನ ದ್ರವ ರೂಪದ ಯೂರಿಯಾ(ನ್ಯಾನೋ ಯೂರಿಯಾ)ವನ್ನು ಕಾಫಿ ಬೆಳೆಯ ಮೇಲೂ ಪ್ರಯೋಗಿಸಿ ಯಶಸ್ವಿ ಕಂಡಿದ್ದು, ಬಳಕೆಗೆ ಸೂಚನೆ ನೀಡಿದೆ. 1 ಲೀಟರ್ ನೀರಿನಲ್ಲಿ 2 ಮಿಲಿ ಲೀಟರ್ ನ್ಯಾನೋ ಯೂರಿಯಾ ಬಳಸಿ ಕಾಫಿ ಎಲೆಗಳ ಮೇಲೆ ಸಿಂಪಡಿಸಿದರೆ ಉತ್ತಮ ಎಂದು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಸೂಚಿಸಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಕೂಡ ನ್ಯಾನೋ ಯೂರಿಯಾ ಬಳಕೆಗೆ ರೈತರಲ್ಲಿ ಪ್ರೋತ್ಸಾಹಿಸಿದ್ದು ಈ ಕುರಿತು ಮಾಹಿತಿ ನೀಡಿದೆ. 

ಏನಿದು ನ್ಯಾನೋ ಯೂರಿಯಾ ದ್ರಾವಣ?

ನ್ಯಾನೋ ಯೂರಿಯಾದ 500 ಮಿಲಿಲೀಟರ್ ಬಾಟಲಿಯು 40,000 ಪಿ.ಪಿ.ಎಂ(parts per million) ಸಾರಜನಕ (Nitrogen) ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಯೂರಿಯಾದ  ಒಂದು ಚೀಲದಿಂದ ಒದಗಿಸುವ ಸಾರಜನಕ ಪೋಷಕಾಂಶಕ್ಕೆ ಸಮವಾಗಿರುತ್ತದೆ. ಈ ಗೊಬ್ಬರವನ್ನು ಗಿಡಗಳ ಮೇಲ್ಭಾಗದಲ್ಲಿ ಸಿಂಪಡಿಸಿದರೆ ಬೇರು ಮಟ್ಟದವರೆಗೆ ತಲುಪಿ ಪರಿಣಾಮ ಬೀರುತ್ತದೆ.

ನ್ಯಾನೋ ಯೂರಿಯಾ ಒಂದು ವಿಶಿಷ್ಟ ಸಾರಜನಕವನ್ನು ಒದಗಿಸುವ ಗೊಬ್ಬರ. ಸಾರಜನಕವು ಸಸ್ಯದ ಪತ್ರ ಹರಿತ್ತಿನ, ಪ್ರೋಟೋ ಪ್ಲಾಸಂ, ಪ್ರೋಟಿನ್ ಹಾಗೂ ನ್ಯೂಕ್ಲಿಕ್ ಆಮ್ಲದ ಒಂದು ಭಾಗವಾಗಿದೆ. ಇದು ಗಿಡದ ಹಸಿರು ಬಣ್ಣಕ್ಕೆ, ಒಳ್ಳೆಯ ಬೆಳವಣಿಗೆಗೆ ಹಾಗೂ ಸಸ್ಯದ ಅಭಿವೃದ್ಧಿಗೆ ಕಾರಣವಾಗುತ್ತದೆ. ಭಾರತದ ಬಹುತೇಕ ಕಡೆಗಳಲ್ಲಿ ದೊರಕುವ ಮಣ್ಣುಗಳಲ್ಲಿ ಸಾರಜನಕದ ಕೊರತೆ ಇದೆ. ನ್ಯಾನೋ ಯೂರಿಯಾ ಬಳಕೆಯಿಂದ ಈ ಕೊರತೆ ನೀಗಿಸಬಹುದಾಗಿದೆ. 

ಶೇಕಡ 80ರಷ್ಟು ಉಪಯೋಗಕಾರಿ

ರೈತರು ಸಾಂಪ್ರದಾಯಿಕ ಗೊಬ್ಬರವನ್ನು ಸಾಮಾನ್ಯಾಗಿ 2-3 ಪಾಲು ಮಾಡಿ, ಭೂಮಿ ಸಿದ್ಧಪಡಿಸುವ ಹಂತದಲ್ಲಿ ಮತ್ತು ಒಂದು ತಿಂಗಳ ನಂತರ ಮೇಲ್ಗೊಬ್ಬರವಾಗಿ ಒದಗಿಸುತ್ತಾರೆ. ಆದರೆ ಬೆಳೆಯು ಈ ಗೊಬ್ಬರವನ್ನು ಕೇವಲ ಶೇ.30-50 ರಷ್ಟು ಮಾತ್ರ ಬಳಸಿಕೊಳುತ್ತದೆ. ಉಳಿದ ಗೊಬ್ಬರ ಅಮೋನಿಯಾ ಅಥವಾ ನೈಟ್ರಸ್ ಆಕ್ಸೆöÊಡ್ ಅಥವಾ ನೈಟ್ರೇಟ್ ರೂಪದಲ್ಲಿ ನಷ್ಟವಾಗುತ್ತದೆ. ಇದರಿಂದ ಮಣ್ಣು, ನೀರು ಮತ್ತು ವಾಯುವಿನ ಮಾಲಿನ್ಯವಾಗುತ್ತದೆ. ಆದರೆ ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸಿದಲ್ಲಿ ಶೇಕಡ ೮೦ ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಜೊತೆಗೆ ಬೇರು ಬೆಳವಣಿಗೆಯಾಗುತ್ತವೆ. ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ. 

ಗುಣಲಕ್ಷಣಗಳು

ನ್ಯಾನೋ ಯೂರಿಯಾ ನೀರಿನಲ್ಲಿ ಸಮವಾಗಿ ಹರಡಿದ ಶೇಕಡ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ. ನ್ಯಾನೋ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕ ಸಸ್ಯದೊಳಗೆ ಹೈಡ್ರೋಲಿಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. 

ಬಳಸುವ ವಿಧಾನ

ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳ ಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4ಮಿ.ಲೀ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಗಳಿಗಾಗಿ ಎರಡು ಬಾರಿ ಸಿಂಪಡಣೆ ಮಾಡಬೇಕು. 

ಮೊದಲ ಸಿಂಪಡಣೆ: ಮೊಳಕೆ ಹೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25ದಿನಗಳ ನಂತರ.

ಎರಡನೆ ಸಿಂಪಡಣೆ: ಹೂ ಬರುವ ಮುಂಚಿತವಾಗಿ ಅಥವಾ 20-25 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಬೆಳೆ ಮತ್ತು ಅದರ ಸಾರಜನಕದ ಅಗತ್ಯವನ್ನು ಅವಲಂಬಿಸಿ ಸಿಂಪಡಿಸುವ ಸಂಖ್ಯೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಕಾರ್ಯ ವಿಧಾನ

ಎಲೆಗಳ ಮೇಲೆ ಸಿಂಪಡಿಸಿದಾಗ, ನ್ಯಾನೋ ಯೂರಿಯಾ ಸುಲಭವಾಗಿ ಸ್ಟೊಮ್ಯಾಟೋ ಮತ್ತು ಇತರ ರಂಧ್ರಗಳ ಮೂಲಕ ಪ್ರವೇಶಿಸಿ ಸಸ್ಯಕೋಶಗಳಲ್ಲಿ ಸೇರಿಕೊಳ್ಳುತ್ತದೆ. ತದನಂತರ, ಆಹಾರ ಸಾಗಿಸುವ ನಾಳವಾದ ಫ್ಲೋಯಂ ಮುಖಾಂತರ ಎಲೆಯಿಂದ ಕಾಯಿ, ಕಾಳುಗಳು ಮತ್ತು ಹೂಗಳಿಗೆ ತಲುಪುತ್ತದೆ. 

 

ಸೂಚನೆ

ಸಿಂಪಡಣೆಗೂ ಮುನ್ನ ನ್ಯಾನೋ ಯೂರಿಯಾ ಬಾಟಲ್‌ನಗನ್ನು ಚೆನ್ನಾಗಿ ಅಲ್ಲಾಡಿಸಬೇಕು. ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪಡಣೆ ಮಾಡಬೇಕು. ಸಿಂಪಡಣೆ ಮಾಡಿದ 12 ಗಂಟೆಯ ಒಳಗಾಗಿ ಮಳೆಯಾದಲ್ಲಿ ಪುನಃ ಸಿಂಪಡಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಜೈವಿಕ ಸಸ್ಯ ಪ್ರಚೋದಕಗಳ ಜೊತೆಗೆ ಸಂಪೂರ್ಣ ನೀರಿನಲ್ಲಿ ಕರಗುವ ಗೊಬ್ಬರ ಮತ್ತು ಕೃಷಿ ರಸಾಯನಗಳೊಂದಿಗೆ ಮಿಶ್ರಣ ಮಾಡಿ ಬಳಸಬಹುದು.

ಸಾಗಾಟದ ಖರ್ಚಿಲ್ಲ

500 ಮಿಲಿ (ಅರ್ಧ ಲೀಟರ್) ಬಾಟಲಿಗೆ ರೂ.240 ರಂತೆ ನಿಗಧಿಪಡಿಸಲಾಗಿದ್ದು, ಇದು ಒಂದು ಬ್ಯಾಗ್ ಯೂರಿಯಾದಷ್ಟು ಸಾಮರ್ಥ್ಯ ಹೊಂದಿದ್ದು, ಸಾಂಪ್ರದಾಯಿಕ ಯೂರಿಯಾಗೆ ಅಗತ್ಯವಿರುವ ಸಾಗಾಟ ವಾಹನಗಳು, ಅದರಿಂದ ಸೃಷ್ಟಿಯಾಗುವ ಖರ್ಚು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. 

 

500 ಮಿಲಿ ಲೀಟರ್ ನ್ಯಾನೋ ಯೂರಿಯಾ 1 ಚೀಲ ಘನ ಯೂರಿಯಾ ರಸಗೊಬ್ಬರ ಬಳಸಿದಷ್ಟು ಸಮವಾಗಿರುತ್ತದೆ. ಘನ ರಸಗೊಬ್ಬರವು ಚೀಲಕ್ಕೆ ರೂ.266 ಇದ್ದು, ಸಬ್ಸಿಡಿ ಆಧಾರದಲ್ಲಿ ರೈತರಿಗೆ ದೊರಕುತ್ತದೆ. ನ್ಯಾನೋ ಯೂರಿಯಾಗೆ ಸರಕಾರದಿಂದ ಸಬ್ಸಿಡಿ ದೊರಕದಿದ್ದರೂ 500 ಮಿಲಿ ಲೀಟರ್ ನ್ಯಾನೋ ಯೂರಿಯಾವು ರೂ.240 ಕ್ಕೆ ಅಗ್ಗವಾಗಿ ದೊರಕುತ್ತದೆ. ಅತ್ಯಂತ ಪರಿಣಾಮಕಾರಿಯಾಗಿರುವ ಈ ನೂತನ ಗೊಬ್ಬರವನ್ನು ತರಕಾರಿ, ಕೃಷಿ ಬೆಳೆಗಳಿಗೆ, ಕಾಫಿ, ಕರಿಮೆಣಸಿನ ಮೇಲೂ ಬಳಕೆಮಾಡಬಹುದಾಗಿದೆ.

-ಶಬಾನ ಶೇಖ್, ಕೃಷಿ ಇಲಾಖೆ, ಜಿಲ್ಲಾ ಜಂಟಿ ನಿರ್ದೇಶಕಿ

 

ನ್ಯಾನೋ ಯೂರಿಯಾವನ್ನು ಗಿಡಗಳು ಅತ್ಯಂತ ವೇಗವಾಗಿ ಹೀರಿಕೊಳ್ಳುವುದರಿಂದ ತಕ್ಷಣವೇ ಅದರ ಪರಣಾಮವನ್ನು ಗಿಡಗಳ ಮೇಲೆ ಬೀರುತ್ತದೆ. ಸಾಂಪ್ರದಾಯಿಕ ಯೂರಿಯಾದಿಂದ ಮಣ್ಣಿನ ಗುಣಲಕ್ಷಣಗಳು ಕಾಲ-ಕ್ರಮೇಣ ಕುಗ್ಗುತ್ತವೆ. ಆದರೆ ನ್ಯಾನೋ ಯೂರಿಯಾದಿಂದ ಈ ರೀತಿ ಆಗುವುದಿಲ್ಲ . ಫಸಲಿಗೆ ಕೀಟ ಭಾದೆ, ರೋಗದ ಯಾವುದೇ ತೊಂದರೆಗಳು ಬರುವುದಿಲ್ಲ. ನ್ಯಾನೋ ಯೂರಿಯಾ ಬಳಕೆ ಹೆಚ್ಚಾದೊಡನೆ, ಘನ ರೂಪದ ಸಾಂಪ್ರದಾಯಿಕ ಯೂರಿಯಾ ಬಳಕೆ, ಸರಬರಾಜು ಕೂಡ ಕಾಲ-ಕ್ರಮೇಣ ನಿಲ್ಲಬಹುದು 

-ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೆ.ವಿ.ಕೆ, ಗೋಣಿಕೊಪ್ಪಲು

 

 

 


ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಫೀ.ಮಾ. ಕಾರ್ಯಪ್ಪ ಪ್ರತಿಮೆ

ರೂ. 12 ಲಕ್ಷ ವೆಚ್ಚದ ಯೋಜನೆಗೆ ಅವಕಾಶ

 

 

 

      

ಸಾರ್ವಜನಿಕರಲ್ಲಿ ಮನವಿ

 

ಇಂಡಿಯನ್ ಮಿಲಿಟರಿ ಅಕಾಡೆಮಿಯಂತಹ ಪ್ರತಿಷ್ಠಿತ ಆವರಣದಲ್ಲಿ ನಮ್ಮ ಸೇನಾನಿ ಫೀ.ಮಾ.ಕಾರ್ಯಪ್ಪ ಪ್ರತಿಮೆ ನಿರ್ಮಾಣದ ಅವಕಾಶ ದೊರೆತಿರುವುದು ಕೊಡಗಿಗೆ ಹಿರಿಮೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆ, ಸಮಾಜಗಳು ತಮ್ಮಿಂದಾಗುವ ಆರ್ಥಿಕ ಸಹಾಯ ನೀಡಲು ಕೋರಲಾಗಿದೆ. ಇದಕ್ಕಾಗಿ ಶಕ್ತಿ ಪತ್ರಿಕೆಯ ಸಹಕಾರದೊಂದಿಗೆ ಜಂಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ನೆರವು ನೀಡುವವರು ಈ ಖಾತೆಗೆ ಹಣ ಸಂದಾಯ ಮಾಡಲು ಕೋರಿದೆ. ರೂ. 500 ಮೇಲ್ಪಟ್ಟು ಹಣ ನೀಡಿದವರ ವಿವರವನ್ನು ಸಾರ್ವಜನಿಕವಾಗಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಹಣ ಸಂದಾಯ ಮಾಡಿದ ಬಳಿಕ ಹೆಸರು, ಊರು ಹಾಗೂ ಟ್ರಾನ್ಸಾಕ್ಷನ್ ಐ.ಡಿ ಸಹಿತ ಸ್ಕ್ರೀನ್‌ಶಾಟ್ಅನ್ನು ವಾಟ್ಸ್ಯಾಪ್  ಮೂಲಕ 9036149252 ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ.

- ಸಂ

ಹಣ ಕಳುಹಿಸಬೇಕಾದ ಖಾತೆಯ ವಿವರ

ಖಾತೆ ಹೆಸರು : CARIAPPA PRATIME NIDHI SANGRAHA SAMITHI

ಖಾತೆ ಸಂಖ್ಯೆ : 000721010000008

IFSC Code : UBIN0900079

 

ದೇಶದ ರಕ್ಷಣಾಪಡೆಯಲ್ಲಿ ವಿಶೇಷವಾಗಿ ಕೊಡಗು ಗುರುತಿಸಲ್ಪಡುವಲ್ಲಿ ಕಾರಣೀಭೂತರಾಗಿರುವ ದೇಶದ ರಕ್ಷಣಾ ಪಡೆಗಳ ಪಿತಾಮಹ ಖ್ಯಾತಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಯನ್ನು ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸ್ಥಾಪಿಸುವ ಅವಕಾಶ ಲಭ್ಯವಾಗಿದೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಂತಹ ಪ್ರತಿಷ್ಠಿತವಾದ ಸ್ಥಳದಲ್ಲಿ ಶಾಶ್ವತವಾಗಿ ಐತಿಹ್ಯ ಹೊಂದಲಿರುವಂತಹ ರೀತಿಯಲ್ಲಿ ಸೇನಾನಿಯ ಪ್ರತಿಮೆ ನಿರ್ಮಾಣದ ಅವಕಾಶ ದಕ್ಷಿಣ ಭಾರತ ಕರ್ನಾಟಕ ರಾಜ್ಯದೊಂದಿಗೆ ವಿಶೇಷವಾಗಿ ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೊಂದು ಹಿರಿಮೆಯಾಗಲಿದೆ. ಈಗಾಗಲೇ ನವದೆಹಲಿಯಲ್ಲಿರುವ ಮಿಲಿಟರಿ ಪೆರೇಡ್ ಗ್ರೌಂಡ್‌ನಲ್ಲಿ ಫೀ.ಮಾ. ಕಾರ್ಯಪ್ಪ ಅವರ 8 ಅಡಿ ಎತ್ತರದ ಕಂಚಿನ ಪ್ರತಿಮೆಯೊಂದಿಗೆ ಈ ಮೈದಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಆರ್ಮಿ ಪೆರೇಡ್ ಗ್ರೌಂಡ್ ಎಂಬ ಹೆಸರನ್ನಿಡಲಾಗಿದೆ. ಈ ಹಿಂದಿನ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಮತ್ತು ಜನರಲ್ ದಿವಂಗತ ಬಿಪಿನ್‌ರಾವತ್ ಅವರುಗಳ ಸಹಕಾರದೊಂದಿಗೆ ಈ ಅವಕಾಶ ಲಭ್ಯವಾಗಿದೆ. ಜಿಲ್ಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಪ್ರಯತ್ನದ ಫಲವಾಗಿ ಇದು ಈಡೇರಿರುವದು ಸ್ಮರಣೀಯ. ಇದೀಗ ದೇಶದ ಏಕೈಕ ಮಿಲಿಟರಿ ಅಕಾಡೆಮಿಯಾಗಿರುವ (OTA ಚೆನ್ನೈಹೊರತಾಗಿ - ಶಾರ್ಟ್ ಕಮಿಷನ್) ಡೆಹ್ರಾಡೂನ್‌ನಲ್ಲಿ ಪ್ರತಿಮೆ ನಿರ್ಮಾಣದ ಚಿಂತನೆ ನಡೆದಿದೆ.

 

                                            IMA DEHRADUN              

 

ಅವಕಾಶ ಹೇಗೆ?

ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಮೂಲಕ ಪಾಸಿಂಗ್ ಔಟ್ ಆದ 50ನೇ ಬ್ಯಾಚ್‌ನ 50ನೇ ವರ್ಷದ ಸಂಭ್ರಮಾಚರಣೆ ಈ ವರ್ಷದ ಡಿಸೆಂಬರ್‌ನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ 50ನೇ ಕೋರ್ಸ್ನವರು ಫೀ. ಮಾ. ಕಾರ್ಯಪ್ಪ ಅವರ ಪ್ರತಿಮೆ ಅಳವಡಿಕೆಯ ಕೊಡುಗೆ ನೀಡಲು ಮುಂದಾಗಿದ್ದಾರೆ. 49ನೇ ಕೋರ್ಸ್ನವರು ಕಳೆದ ವರ್ಷ ತಮ್ಮ ಪಾಸಿಂಗ್ ಔಟ್‌ನ ನೆನಪಾಗಿ ದೇಶದ ಮತ್ತೋರ್ವ ಫೀಲ್ಡ್ ಮಾರ್ಷಲ್ ಬಿರುದು ಪಡೆದಿರುವ ಜನರಲ್ ಮಾಣಿಕ್ ಷಾ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಇದರಂತೆ 50ನೇ ಕೋರ್ಸ್ನವರು ಪಾಸಿಂಗ್ ಜಾಟ್ ಆಗಿ 50ನೇ ವರ್ಷದ ನೆನಪಿಗಾಗಿ ದೇಶದ ಇನ್ನೋರ್ವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ಸ್ಥಾಪಿಸಲು ಚಿಂತನೆ ಮಾಡಿದ್ದಾರೆ. 50ನೇ ಬ್ಯಾಚ್‌ನ ಮೂಲಕ ಪಾಸಿಂಗ್ ಔಟ್ ಆದ ಅಧಿಕಾರಿಗಳ ಪೈಕಿ ಕೊಡಗಿನವರಾದ ನಿವೃತ್ತ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ ಅವರು ಒಬ್ಬರಾಗಿದ್ದಾರೆ. ಈ ಹಿಂದೆ ಇವರು ಅಧಿಕಾರಿಯಾಗಿ 50 ವರ್ಷ ಸಂದಿದೆ. ಇದೀಗ 50ನೇ ಬ್ಯಾಚ್‌ನವರು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವರ ಮೂಲಕ ಅವರ ಬ್ಯಾಚ್‌ನವರು ಈ ಪ್ರಯತ್ನಕ್ಕೆ ಚಿಂತನೆ ಮಾಡಿದ್ದು ಕರ್ನಲ್ ಸಿ.ಪಿ. ಮುತ್ತಣ್ಣ ಅವರ ಮೂಲಕ ಹಣ ಕ್ರೋಢೀಕರಣದ ಪ್ರಯತ್ನ ನಡೆಸಿದ್ದಾರೆ. ಮುತ್ತಣ್ಣ ಅವರು ಇದರಂತೆ ಜಿಲ್ಲೆಯಲ್ಲಿ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನವರನ್ನು ಸಂಪರ್ಕಿಸಿದ್ದಾರೆ. ಇವರ ಸಹಕಾರದೊಂದಿಗೆ ಅಗತ್ಯ ಹಣ ಸಂಗ್ರಹಿಸಿ ಡೆಹ್ರಾಡೂನ್‌ನಲ್ಲಿ ಪ್ರತಿಮೆ ನಿರ್ಮಾಣದ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅಂದಾಜು ರೂ. 12 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಾರ್ಯಪ್ಪ ಅವರ 7 ಅಡಿ ಎತ್ತರದ ಕಂಚಿನ ಪ್ರತಿಮೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಪ್ರತಿಮೆಯೊಂದಿಗೆ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಶಾಶ್ವತವಾಗಿ ರೂಪುಗೊಳ್ಳಲಿದ್ದು ಇದು ಕೊಡಗಿಗೂ ಹೆಮ್ಮೆಯ ವಿಚಾರವಾಗಲಿದೆ. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕರ್ನಲ್ ಸಿ.ಪಿ. ಮುತ್ತಣ್ಣ ಹಾಗೂ ಎಫ್.ಎಂ.ಸಿ.ಜಿ.ಟಿ. ಫೋರಂನ ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರುಗಳು ಇದು ಒಂದು ಉತ್ತಮ ಅವಕಾಶವಾಗಿದೆ. ಕೊಡಗಿನವರಿಗೆ ಭವಿಷ್ಯದಲ್ಲೂ ಇದೊಂದು ಪ್ರೇರಣಾತ್ಮಕವಾದ ರೀತಿಯಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿನ ಪ್ರವೇಶ ದ್ವಾರದಲ್ಲಿ ಇತಿಹಾಸ ಹೊಂದಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಭಿಮಾನಿಗಳ ಆರ್ಥಿಕ ಸಹಕಾರ ಬಯಸುವದಾಗಿ ವಿನಂತಿಸಿದ್ದಾರೆ. ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಖ್ಯಾತಿಯ ಫೀ.ಮಾ. ಕಾರ್ಯಪ್ಪ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಗೌರವವಿದೆ. ಇವರು ಅಧಿಕಾರ ಸ್ವೀಕರಿಸಿದ ದಿನವಾದ ಜನವರಿ 14 ಆರ್ಮಿ ಡೇ ಎಂದು ಆಚರಿಸಲ್ಪಡುತ್ತಿರುವುದು ಕೂಡ ಕೊಡಗಿಗೆ, ಕೊಡಗಿನಿಂದ ಸೇನೆಗೆ ಸೇರ್ಪಡೆಗೊಳ್ಳುವವರಿಗೆ ಒಂದು ಪ್ರೌಢಿಮೆಯಾಗಿದೆ. ನವದೆಹಲಿಯ ಆರ್ಮಿ ಪೆರೇಡ್ ಮೈದಾನ ಸೇರಿದಂತೆ ದೇಶದ ಹಲವೆಡೆ ಕಾರ್ಯಪ್ಪ ಅವರ ಪ್ರತಿಮೆ, ಅವರ ಹೆಸರಿನ ರಸ್ತೆಗಳಿದ್ದು, ಇದೀಗ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿಯೂ ಇವರ ಖ್ಯಾತಿ - ಹಿರಿಮೆ ಚಿರಸ್ಥಾಯಿಯಾಗಲಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಸದ್ಯದಲ್ಲಿ ಚಾಲನೆ ದೊರೆಯಲಿದ್ದು, ಇದೀಗ ಸಾರ್ವಜನಿಕರಿಂದ ಅನುದಾನ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಕರ್ನಾಟಕ ಸರಕಾರದಿಂದಲೂ ಅಗತ್ಯ ಸಹಕಾರ ಸಿಗಲಿ ಎಂಬುದು ಆಶಯವಾಗಿದೆ.