18 ವರ್ಷವಾದರೂ ಪೂರ್ಣಗೊಳ್ಳುತ್ತಿಲ್ಲ ಶತಮಾನೋತ್ಸವ ಭವನ

ಭವನದ ನೀಲನಕ್ಷೆ

ಪುಂಡ-ಪೋಕರಿಗಳಿಗೆ ತಾಣವಾಗಿದೆ ಒಂದೂವರೆ ಕೋಟಿಯ ಕಟ್ಟಡ!

ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಸಮೀಪ ನಿರ್ಮಾಣ ಹಂತದಲ್ಲಿರುವ ಶತಮಾನೋತ್ಸವ ಭವನ ಕಾಮಗಾರಿ 18 ವರ್ಷಗಳಾದರೂ ಪೂರ್ಣ ಗೊಳ್ಳುತ್ತಿಲ್ಲ. ಆಡಳಿತದ ದಿವ್ಯ ಅನಾದರಕ್ಕೆ ಒಳಗಾಗಿರುವ ಈ ಭವನ, ಅನುದಾನದೊಂದಿಗೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದ್ದು, 18 ವರ್ಷವಾದರೂ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. 

ಸದ್ಯದ ಮಟ್ಟಿಗೆ ಬೀಡಾಡಿ ಜಾನುವಾರುಗಳು, ಕೆರೆಕಟ್ಟೆ, ರಸ್ತೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗಾಗಿ ನೂರಾರು ಕಿಲೋಮೀಟರ್ ದೂರದಿಂದ ಬರುವ ಅಲೆಮಾರಿ ಕಾರ್ಮಿಕರಿಗೆ, ಗಾಂಜಾ, ಮದ್ಯ ಸೇವಿಸುವ ಪುಂಡರಿಗೆ ಆಶ್ರಯ ಒದಗಿಸುವ ಕಟ್ಟಡವಾಗಿ ಇದು ಬಳಕೆಯಾಗುತ್ತಿದ್ದು, ಜಾನುವಾರುಗಳ ಕೊಟ್ಟಿಗೆಗೆ ಒಂದೂವರೆ ಕೋಟಿ ಈಗಾಗಲೇ ವೆಚ್ಚ ಮಾಡಿರುವ ಕೀರ್ತಿ ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು, ನಮ್ಮದೇ ತೆರಿಗೆಯ ಹಣ ಎಂಬ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಈ ಭಾಗದ ಜನರಿಗೆ ಸಲ್ಲಲೇಬೇಕು!

ಶತಮಾನೋತ್ಸವ ಭವನದ ದುಸ್ಥಿತಿಯ ಬಗ್ಗೆ ಹಲವಷ್ಟು ಬಾರಿ ಈವರೆಗಿನ ಶಾಸಕರು, ಅಧಿಕಾರಿಗಳ ಗಮನ ಸೆಳೆದರೂ ಸಹ ಶತಮಾನೋತ್ಸವ ಭವನಕ್ಕೆ ಹಿಡಿದ ಗ್ರಹಣ ಇಂದಿಗೂ ಬಿಟ್ಟಂತೆ ಕಾಣುತ್ತಿಲ್ಲ. 

          ಶಿಥಿಲಾವಸ್ಥೆಯಲ್ಲಿರುವ ಕಟ್ಟಡ

ಏನಿದು ಭವನ?: ಕಳೆದ 2007 ರಲ್ಲಿ  ಶಾಸಕರಾಗಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಅಭಿಲಾಷೆಯಂತೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷಗಳು ತುಂಬಿದ ಸವಿನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿತ್ತು. 2007ರಲ್ಲಿಯೇ ರೂ. 1.25 ಕೋಟಿ ವೆಚ್ಚದ ಭವನಕ್ಕೆ ಉತ್ಸಾಹದಿಂದ ಚಾಲನೆ ನೀಡಿದ ಜೀವಿಜಯ ಅವರು, ನಂತರದ ಚುನಾವಣೆಗಳಲ್ಲಿ ಸತತವಾಗಿ ಸೋಲು ಕಂಡಿದ್ದರಿAದ, ಶತಮಾನೋತ್ಸವ ಭವನವೂ ಸಹ ಸೋಲು ಕಾಣುವಂತಾಯಿತು.

2007ರಲ್ಲಿ ಎಂಎಲ್‌ಎ ಆಗಿದ್ದ ಬಿ.ಎ. ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾ ಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ ರೂ. 18 ಲಕ್ಷ, ಮಲೆನಾಡು ಅಭಿವೃದ್ಧಿ ಮಂಡಳಿ ಯಿಂದ ವಿವಿಧ ಹಂತಗಳಲ್ಲಿ ರೂ. 15 ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್‌ಖಾನ್ ರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿದ ರೂ 4 ಲಕ್ಷ, ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ 3 ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ.40ರಷ್ಟು ಪೂರ್ಣಗೊಂಡಿದೆ.  

ಪ.ಪಂ.ನಿಂದ 1 ಕೋಟಿ ಅನುದಾನಕ್ಕೆ ಕೊಕ್ಕೆ:  2013ರಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯುಐಡಿ ಎಸ್‌ಎಸ್‌ಎಂಟಿ ಯೋಜನೆಯಡಿ ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈ ಗೊಳ್ಳಲು 20 ಕೋಟಿ ರೂ. ಗಳ ಕ್ರಿಯಾಯೋಜನೆಯನ್ನು ರೂಪಿಸಲಾಗಿತ್ತು. (ಮೊದಲ ಪುಟದಿಂದ) ಅದರಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಆದರೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದರಿಂದ, ಅಲ್ಲಿಯೂ ಭವನಕ್ಕೆ ಸೋಲಾಯಿತು.

ಮಾಜಿ ಸಚಿವ ಬಿ.ಎ. ಜೀವಿಜಯ ಪ್ರಾರಂಭ ಮಾಡಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು, ಈವರೆಗೆ ಅಧಿಕಾರದಲ್ಲಿದ್ದ ಇನ್ನೊಂದು ಪಕ್ಷದವರಿಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಕಳೆದ 18 ವರ್ಷಗಳಿಂದ ಶತಮಾನೋತ್ಸವ ಭವನಕ್ಕೆ ಸರ್ಕಾರದಿಂದ ಹಣ ಒದಗಿಸಲು ಯಾರೂ ಮುಂದಾಗಿಲ್ಲವೆಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ.

ಭವನ ಕಾಮಗಾರಿ ಆರಂಭಗೊಂಡು 15 ವರ್ಷಗಳ ಬಳಿಕ ಹಿಂದಿನ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಅವರು ಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ್ದ ಅವರು, ಶತಮಾನೋತ್ಸವ ಭವನವನ್ನು ಮಾಜಿ ಸಚಿವ ಜೀವಿಜಯ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಪೂರ್ಣಗೊಳ್ಳಲಿಲ್ಲ. ಸಮಿತಿಯ ಪ್ರಮುಖರು ಭವನ ಪೂರ್ಣಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಜೀವಿಜಯ ಅವರೊಂದಿಗೆ ಸಭೆ ನಡೆಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಈ ಬಗ್ಗೆ ಕ್ರಮವಾಗಲೇ ಇಲ್ಲ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪ್ರಮುಖವಾಗಿ ಶತಮಾನೋತ್ಸವ ಭವನ, ಸಿಂಥೆಟಿಕ್ ಟರ್ಫ್ ಮೈದಾನದ ಅಪೂರ್ಣ ಕಾಮಗಾರಿ ಸದ್ದು ಮಾಡಿತ್ತು. ಚುನಾವಣೆಯ ಪ್ರಚಾರ ಸಭೆಯಲ್ಲಿಯೂ ಟರ್ಫ್ ಮತ್ತು ಭವನ ಎದುರಾಳಿ ಪಕ್ಷಗಳಿಗೆ ಬಹುಮುಖ್ಯ ಅಸ್ತçವಾಗಿತ್ತು. ಈ ಆರೋಪಕ್ಕೆ ಜೀವಂತ ಸಾಕ್ಷಿಯಾಗಿ ಎರಡೂ ಯೋಜನೆಗಳೂ ಕಣ್ಣಮುಂದೆ ಇದ್ದವು. ಇವುಗಳೂ ಸಹ ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಮತಗಳಿಕೆ ಕಡಿಮೆಯಾಗಲು ಕಾರಣವಾಯಿತು ಎಂದು ಅವರದೇ ಪಕ್ಷದ ಹಲವರು ಈಗಲೂ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಇದೀಗ ಟರ್ಫ್ ಮೈದಾನ ಕಾಮಗಾರಿ ಪೂರ್ಣಗೊಂಡು ಶಾಸಕ ಮಂತರ್ ಗೌಡ ಅವರು ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಹಲವಷ್ಟು ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿವೆ. ಹಾಕಿ ಆಟಗಾರರಿಗೆ ತರಬೇತಿ ಪಡೆಯಲು ಸುಸಜ್ಜಿತ ಮೈದಾನ ನಿರ್ಮಾಣಗೊಂಡಿದೆ. ಆದರೆ ಶತಮಾನೋತ್ಸವ ಭವನ ಮಾತ್ರ ಪಾಳುಬಿದ್ದ ಕಟ್ಟಡವಾಗುತ್ತಿದೆ. ಈ ಭವನವನ್ನು ಪೂರ್ಣಗೊಳಿಸಿದರೆ ಹಲವಷ್ಟು ಸಂಘ ಸಂಸ್ಥೆಗಳಿಗೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗವಾಗಲಿದೆ. ಈ ಬಗ್ಗೆ ಶಾಸಕ ಡಾ. ಮಂತರ್ ಗೌಡ ಅವರು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.