200 ಕಾಡಾನೆಗಳು ನಾಗರಹೊಳೆ ಉದ್ಯಾನವನಕ್ಕೆ

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ದಿಟ್ಟ ಹೆಜ್ಜೆ 

ಕೊಡಗಿನ ಪ್ರಮುಖ ಆನೆ ಹಾವಳಿ ಪ್ರದೇಶಗಳಾದ ಸಿದ್ದಾಪುರ, ತಿತಿಮತಿ, ಬಾಳೆಲೆ, ಮಾಯಮುಡಿ ಹಾಗೂ ಇತರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ನಾಡಿನ ಕಾಫಿ ಬೆಳೆಗಾರರ ತೋಟಗಳಲ್ಲಿ ನೆಲೆ ನಿಂತಿದ್ದು, ಇವುಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಳುಹಿಸುವ ವಿಶೇಷ ಯೋಜನೆಯನ್ನು ಸರ್ಕಾರದ ಮುಂದಿಡಲು ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ನೀಲಿನಕ್ಷೆ ತಯಾರಿಸಿದ್ದಾರೆ. 

ಕೊಡಗಿನ ಪ್ರಮುಖ ಪ್ರದೇಶ ಗಳಲ್ಲಿ, 200 ಕಾಡಾನೆಗಳು  ರೈತರ ಕಾಫಿ ತೋಟ ಹಾಗೂ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಆಗಿಂದ್ದಾಗಿಯೇ ಕಾಣಿಸಿಕೊಳ್ಳುತ್ತಿದ್ದು, ಹಲವು ಮಾನವರ ಪ್ರಾಣಗಳಿಗೆ ಹಾನಿ ಹಾಗೂ ಹಲವು ಕಾರ್ಮಿಕರ ಮೇಲೆ ದಾಳಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು ಇಲ್ಲಿರುವ ಕಾಡಾನೆಗಳನ್ನು ನಾಗರಹೊಳೆ ಅರಣ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಗಾಗಲೇ 1,200 ರಿಂದ 1,400 ಕಾಡಾನೆಗಳು ವಾಸವಿರುತ್ತವೆ. ಇದರೊಂದಿಗೆ ನಾಡಿನಲ್ಲಿ ನಾಗರಿಕರಿಗೆ ತೊಂದರೆ ನೀಡುತ್ತಿರುವ ಹಾಗೂ  ಕಾಫಿ ತೋಟಗಳಲ್ಲಿ ನೆಲೆನಿಂತಿರುವ 200 ಕಾಡಾನೆಗಳನ್ನು ವಿಸ್ತಾರವಾದ ಅರಣ್ಯಕ್ಕೆ ಸೇರಿಸುವ ಪ್ರಸ್ತಾಪವು ಇಲಾಖೆಯ ಅಧಿಕಾರಿಗಳ ಮುಂದಿದೆ. ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡನ್ನು ಸಂಪೂರ್ಣ ಗೊಳಿಸಿ ನಂತರ ನಾಡಿನಲ್ಲಿ ಕಂಡು ಬರುವ ಆನೆಗಳನ್ನು  ಇದರೊಳಗೆ ಸೇರಿಸುವುದು ಇಲಾಖೆಯ ಮುಂದಿರುವ ಸವಾಲಾಗಿದೆ.

ಕಳೆದ ಎರಡು  ದಶಕಗಳಿಂದ ಕೊಡಗನ್ನು ಅದರಲ್ಲಿಯೂ ವಿಶೇಷವಾಗಿ ದ.ಕೊಡಗು ಹಾಗೂ ಸಿದ್ದಾಪುರ ಭಾಗದಲ್ಲಿ ಅತ್ಯಂತ ಗಂಭೀರವಾಗಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ  ಕಾರ್ಯೋನ್ಮುಖ ರಾಗಿದ್ದಾರೆ. ಶಾಸಕರಾಗಿ ಚುನಾಯಿತ ರಾದ ನಂತರ ಆನೆ ಮಾನವ ಸಂಘರ್ಷ ತಡೆಯಲು ಸರ್ಕಾರದಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಅರಣ್ಯ ಮಂತ್ರಿಗಳೊAದಿಗೆ, ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಜಿಲ್ಲೆಯಲ್ಲಿನ ಆನೆ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಕೊಡಗಿನಲ್ಲಿ ಕಾಡಾನೆ ದಾಳಿಗೆ ಹಲವಾರು ಜನ ಪ್ರಾಣ  ಕಳೆದು ಕೊಂಡಿದ್ದಾರೆ.  ಹಲವಾರು ಮಂದಿ ಗಾಯಗೊಂಡಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ನಾಗರಹೊಳೆ ರಾಷ್ಟಿçÃಯ ಉದ್ಯಾನ ವನದ ಅಂಚಿನಲ್ಲಿರುವ  ಗ್ರಾಮಗಳಲ್ಲಿ ಕಾಡಾನೆ ಸಮಸ್ಯೆ ಹೆಚ್ಚಿನ  ಪ್ರಮಾಣ ದಲ್ಲಿದೆ. ಇದರೊಂದಿಗೆ  ಜಿಲ್ಲೆಯ ವಿವಿಧ ಅರಣ್ಯಗಳ ಅಂಚಿನಲ್ಲಿರುವ ಗ್ರಾಮಸ್ಥರು  ಕಾಡಾನೆ ಭಯದಲ್ಲಿಯೇ ದಿನ ಕಳೆಯುವಂತಾಗಿದೆ.

ಕೊಡಗಿನ ಜನತೆ ಕಾಡಾನೆ ಉಪಟಳದಿಂದ ತತ್ತರಿಸಿಹೋಗಿದ್ದಾರೆ. ಹಲವು  ವರ್ಷಗಳಿಂದ ನಿರಂತರವಾಗಿ ಕಾಡಾನೆ - ಮಾನವ ಸಂಘರ್ಷವನ್ನು ನಿರ್ಲಕ್ಷಿಸಿದ್ದರಿಂದ  ಇಂದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ. ಇದರಿಂದ  ಕಾಡಾನೆಯ ವಿಷಯದಲ್ಲಿ ಜಿಲ್ಲೆಯು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದ ಜನತೆ ಕೊಡಗನ್ನು ಆನೆಗಳ ತಾಣ ಎಂದು ಕರೆಯಲಾರಂಭಿಸಿದ್ದಾರೆ. ಅರಣ್ಯದಂಚಿನ ಪ್ರದೇಶಗಳಿಗೆ ಸಂಜೆಯ ಹಾಗೂ ಮುಂಜಾನೆಯ ವೇಳೆಯಲ್ಲಿ ತೆರಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆಗಳಲ್ಲಿ ಮನೆಯ ಸಮೀಪವಿರುವ ಕಾಫಿ ತೋಟದ ರಸ್ತೆಗಳಲ್ಲಿ ಮುಂಜಾನೆಯ ವಾಯುವಿಹಾರಕ್ಕೆ ತೆರಳಲು ಕೂಡ ಸಾಧ್ಯವಾಗುತ್ತಿಲ್ಲ. ಕಾಡಾನೆ ಸಮಸ್ಯೆಯ ನಿವಾರಣೆಗೆ ಆರ್‌ಆರ್‌ಟಿ ತಂಡ ರಚನೆಯಾಗಿದ್ದರೂ ಇದರಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ನಿಗದಿತ ಸಮಯದಲ್ಲಿ ವೇತನ ಲಭಿಸುತ್ತಿಲ್ಲ. ಇದರಿಂದಾಗಿ ಕರ್ತವ್ಯಕ್ಕೆ  ಸೇರಿದ ಯುವಕರು ಕೆಲಸ ಬಿಡುವಂತಾಗುತ್ತಿದೆ.

ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ಸಾಕಷ್ಟು ಆನೆಗಳು ಕಾಫಿ ತೋಟಗಳಲ್ಲಿಯೇ ಜನಿಸಿದವು ಆಗಿದೆ. ಇಂತಹ ಆನೆಗಳಿಗೆ ಅರಣ್ಯದ ಪರಿಚಯವೇ ಇಲ್ಲದಂತಾಗಿದೆ. ಹೀಗಾಗಿ ಕಾಡಾನೆಗಳು ಕಾಫಿ ತೋಟಗಳನ್ನೇ ಅರಣ್ಯ ಪ್ರದೇಶವೆಂದು ಗ್ರಹಿಸಿವೆ. ನಾಡಿಗೆ ಕಾಡಾನೆಗಳು ನುಸುಳದಂತೆ ತಡೆಗಟ್ಟಲು ಶಾಶ್ವತ ಪರಿಹಾರ ಯೋಜನೆ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದರೂ ಶರವೇಗದಲ್ಲಿ  ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿಲ್ಲ.  ಹಲವು ವರ್ಷಗಳಿಂದ ನಡೆಯುತ್ತಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. 

ಹಲವು ಭಾಗಗಳಲ್ಲಿ ನಿರಂತರ ಕಾಡಾನೆಗಳ ಸಂಚಾರವಿರುವ ಕಾರಿಡಾರಿನಲ್ಲಿ ಕೆಲವು ರೈತರು ತಮ್ಮ ತೋಟಗಳಿಗೆ ಸೋಲಾರ್ ಬೇಲಿ, ಕಂದಕ ನಿರ್ಮಾಣ ಮಾಡಿರುವುದರಿಂದ ಕಾರಿಡಾರಿನಲ್ಲಿ ಆನೆಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಾಡಾನೆಗಳು ಬೇರೆ ಮಾರ್ಗದಿಂದ ಸಂಚರಿಸುವ ಸಂದರ್ಭ ಹಲವು ಅನಾಹುತಗಳು, ಪ್ರಾಣ ಹಾನಿಯೂ ಸೇರಿದಂತೆ ರೈತರ ತೋಟಗಳು ಕಾಡಾನೆಗಳ ಹಾವಳಿಗೆ ತುತ್ತಾಗುತ್ತಿವೆ.

 ಕಾಡಾನೆ ಸಂಚರಿಸುವ  ಕಾರಿಡಾರ್‌ಗಳಿಗೆ ಹೊಂದಿ ಕೊಂಡತ್ತಿರುವ   ಖಾಸಗಿ ಮಾಲೀಕತ್ವದಲ್ಲಿರುವ  ಕಾಫಿ ತೋಟದ ಜಾಗಗಳನ್ನು ಅರಣ್ಯ ಇಲಾಖೆ  ತಮ್ಮ ವಶಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆಯೂ ಈ ಹಿಂದೆಯೇ ಸರ್ಕಾರದ ಮುಂದಿದೆ.  ಆದರೆ ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಆನೆ ಹಾವಳಿಯ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಇಂತಹ ಕೆಲಸಗಳಿಗೆ ಚಾಲನೆ ದೊರಕಿದ್ದಲ್ಲಿ, ಆನೆ ಕಾರಿಡಾರ್ ನಿರ್ಮಾಣವಾದಲ್ಲಿ ಬಹುತೇಕ ಕಾಡಾನೆ ಮಾನವ ಸಂಘರ್ಷಕ್ಕೆ   ಇತಿಶ್ರೀ ಹಾಡಬಹುದಾಗಿದೆ.

200 ಆನೆಗಳ ಸ್ಥಳಾಂತರ

ನಾಡಿನ ಕಾಫಿ ತೋಟ ಹಾಗೂ ಕಾಡಂಚಿನ  ಪ್ರದೇಶಗಳಲ್ಲಿ 200 ಕಾಡಾನೆಗಳು ವಾಸಿಸುತ್ತಿರುವ ಬಗ್ಗೆ ಇಲಾಖೆಯ ಬಳಿ ಮಾಹಿತಿ ಲಭ್ಯವಿದೆ. ಆನೆ ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟಲು ನಾಡಿನಲ್ಲಿರುವ ಕಾಡಾನೆಗಳನ್ನು ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ  ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಈಗಾಗಲೇ ವರದಿ ಸಿದ್ದಪಡಿಸಲಾಗಿದೆ. ಶಾಸಕರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಕಾಡಾನೆ ಮಾನವ ಸಂಘರ್ಷದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಲಾಗಿದೆ.  

ಇದು ಅನುಷ್ಠಾನಗೊಂಡಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸ ಇದೆ. ವಿಸ್ತಾರವಾದ ನಾಗರಹೊಳೆ, ಆನೆಚೌಕೂರು ಹಾಗೂ ಕಲ್ಲಳ್ಳ ವ್ಯಾಪ್ತಿಯ ಅರಣ್ಯ ಪ್ರದೇಶಗಳನ್ನು ರೈಲ್ವೆ ಬ್ಯಾರಿಕೇಡ್‌ಗಳಿಂದ ಸುತ್ತುವರೆದಲ್ಲಿ ನಗರ  ಹಾಗೂ ಕಾಫಿ ತೋಟದಲ್ಲಿ ಕಂಡು ಬರುತ್ತಿರುವ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಆನೆಗಳಿಗೆ ಈ ವಿಸ್ತಾರವಾದ ಅರಣ್ಯ ಪ್ರದೇಶಗಳಲ್ಲಿ ವಾಸಿಸಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

-ಎ.ಟಿ. ಪೂವಯ್ಯ, ಡಿಸಿಎಫ್, ಕೊಡಗು