ಒಂಟಿ ವೃದ್ಧೆಗೆ ಕಾವಲು ನಿಂತಿರುವ 25 ಸಾಕು ನಾಯಿಗಳು
‘ಶಾಂತಿ’ಯ ಜೀವನಕ್ಕೆ ಜಾನುವಾರುಗಳೇ ಆಧಾರ
ಆಕೆಗೆ 73 ವರ್ಷ, ಯಾರ ಹಂಗು ಅವರಿಗಿಲ್ಲ. ಜೀವನೋತ್ಸಾಹಕ್ಕೆ ಸರಿ ಸಾಟಿ ಇಲ್ಲ. ಜಾನುವಾರುಗಳೇ ‘ಶಾಂತಿ’ ಜೀವನಕ್ಕೆ ಆಧಾರ, ಸಾಕು ನಾಯಿಗಳೇ ರಕ್ಷಣೆ..!
ಹೌದು..ಕೊಡಗು ಗುಡ್ಡುಗಾಡು ಪ್ರದೇಶಗಳಿಂದ ಕೂಡಿರುವ ಜಿಲ್ಲೆ. ಗ್ರಾಮೀಣ ಪ್ರದೇಶಗಳು ಹಚ್ಚ ಹಸಿರಿನ ಅರಣ್ಯ ಪ್ರದೇಶದಿಂದ ತುಂಬಿರುತ್ತವೆೆ. ಹೊರಗಿನಿಂದ ನೋಡುವವರಿಗೆ ಇದು ಸ್ವರ್ಗ. ಆದರೆ, ಬದುಕುವವರಿಗೆ ನೂರೆಂಟು ಸಮಸ್ಯೆ ಇರುತ್ತದೆ. ಈ ನಡುವೆಯೂ ಗ್ರಾಮೀಣ ವಾಸಿಗಳು ಸವಾಲುಗಳನ್ನು ಸಿಹಿಯಾಗಿ ಸ್ವೀಕರಿಸಿಕೊಂಡು ಸ್ವಚ್ಛಂದ ಬದುಕು ಮುನ್ನಡೆಸುತ್ತ ಕಾಲ ಕಳೆಯುತ್ತಾರೆ.
ಅದೇ ರೀತಿಯಲ್ಲಿ ಇಲ್ಲೊಬ್ಬ ವೃದ್ಧೆ ಒಬ್ಬಂಟಿಯಾಗಿ ಯಾರ ಹಂಗಿನಲ್ಲಿರದೆ ಉತ್ಸಾಹದಲ್ಲಿ, ಲವಲವಿಕೆಯಿಂದ ಬದುಕು ಸಾಗಿಸುತ್ತ ಕಷ್ಟ ಎಂದು ಕುಗ್ಗುವವರಿಗೆ ಉದಾಹರಣೆಯಾಗಿ ನಿಂತಿದ್ದಾರೆ.
ಗೋಣಿಕೊಪ್ಪ, ತಿತಿಮತಿ ರಾಷ್ಟ್ರೀಯ ಹೆದ್ದಾರಿಯ ನಡುವಿನ ಚನ್ನಂಗೊಲ್ಲಿ ಪೈಸಾರಿಯ ಸಮೀಪದ ಕಾಫಿ ತೋಟವೊಂದರ ನಡುವಿನ ನಿರ್ಜನ ಪ್ರದೇಶದಲ್ಲಿ ಒಂಟಿ ಮನೆಯಲ್ಲಿ ಬದುಕು ಸಾಗಿಸುತ್ತಿರುವ 73ರ ಪ್ರಾಯದ ಶಾಂತಿ ಎಂಬವರ ಜೀವನೋತ್ಸಾಹ ಗಮನಾರ್ಹವಾಗಿದೆ. ಕೂಲಿ ಕೆಲಸವನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಶಾಂತಿ ತನ್ನ 2 ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸದೊಂದಿಗೆ ಉದ್ಯೋಗವನ್ನು ನೀಡಿ ನೆಲೆಸಲು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಮಕ್ಕಳಿಬ್ಬರಿಗೆ ವಿವಾಹವಾಗುತ್ತಿದ್ದಂತೆಯೇ ಗಂಡನ ಮನೆ ಸೇರಿದ್ದಾರೆ. ಆದರೆ, ಶಾಂತಿ ಮಾತ್ರ ಎದೆಗುಂದದೆ ಸುತ್ತಲಿನ ಕಾಫಿ ತೋಟದ ನಡುವೆ ಇರುವ ಒಂಟಿ ಮನೆಯಲ್ಲಿ ಧೈರ್ಯದಿಂದ ಜೀವನ ಸಾಗಿಸುತ್ತ ಪಶುಪಾಲನೆ ಮೂಲಕ ಸಂಕಷ್ಟಗಳನ್ನು ದಾಟುತ್ತ ತನ್ನ ಜೀವನಕ್ಕೆ ತಾನೇ ಆಸರೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ.
ನಾಯಿಗಳ ಕಾವಲು – ಜಾನುವಾರುಗಳೇ ಜೀವನಾಧಾರ
73 ವರ್ಷ ತುಂಬಿದ್ದರೂ ಯಾರ ಆಶ್ರಯವೂ ತನಗೆ ಬೇಡ ಎಂದು ಒಂಟಿ ಮನೆಯಲ್ಲಿ ತನ್ನ ಜೀವನ ಮುಂದುವರೆಸುತ್ತಿದ್ದಾರೆÉ. ಅತ್ಯಂತ ಧೈರ್ಯವಂತೆಯಾದ ಈ ಮಹಿಳೆ 25ಕ್ಕೂ ಅಧಿಕ ಸಾಕು ನಾಯಿಗಳು, 15ಕ್ಕೂ ಅಧಿಕ ಮೇಕೆಗಳು, 30ಕ್ಕೂ ಅಧಿಕ ಕೋಳಿಗಳು, ೫ಕ್ಕೂ ಅಧಿಕ ಬೆಕ್ಕುಗಳೊಂದಿಗೆ ಖುಷಿಖುಷಿಯಾಗಿ ಜೀವನ ಸವೆಸುತ್ತಿದ್ದಾರೆ.
ಸಾಕು ನಾಯಿಗಳಿಗೆ, ಬೆಕ್ಕು, ಕೋಳಿಗಳಿಗೆ ದಿನನಿತ್ಯ ಅಡುಗೆ ಮಾಡಿ ಅದರೊಂದಿಗೆ ಈಕೆಯು ಊಟ ಸೇವಿಸುವುದು ಕಳೆದ 15ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ಮುಂಜಾನೆ, ಮಧ್ಯಾಹ್ನ ಹಾಗೂ ಸಂಜೆಯ ವೇಳೆಯಲ್ಲಿ ನಾಯಿಗಳಿಗೆ ಬೇಕಾದ ಆಹಾರ ಬೇಯಿಸಿ ಹಾಕುತ್ತಾರೆ.
ಒಂಟಿ ಮನೆಯಲ್ಲಿ ಜೀವನ ಕಳೆಯುತ್ತಿರುವ ಶಾಂತಿಗೆ ನಾಯಿಗಳೇ ಕಾವಲುಗಳಾಗಿವೆ. ಯಾರೊಬ್ಬರೂ ಕೂಡ ಮನೆಯ ಬಳಿ ನುಸಳದಂತೆ ನಾಯಿಗಳು ಈಕೆಯನ್ನು ಪ್ರತಿನಿತ್ಯ ಕಾಯುತ್ತಿವೆ. ಇರುವ ಮೇಕೆಗಳು ಮೇಯಲು ಹೊರಟಾಗ ಕೆಲವು ನಾಯಿಗಳು ಮೇಕೆಯೊಂದಿಗೆ ತೆರಳಿ ಇವುಗಳ ರಕ್ಷಣೆಗಾಗಿ ನಿಲ್ಲುತ್ತವೆ. ಸಂಜೆಯ ವೇಳೆ ಮೇಕೆಗಳು ಒಂಟಿ ಮನೆಯತ್ತ ವಾಪಸ್ಸಾಗುತ್ತಿದಂತೆಯೇ ಇವುಗಳನ್ನು ಹಿಂಬಾಲಿಸುತ್ತಲೇ ನಾಯಿಗಳು ಮನೆಯತ್ತ ಆಗಮಿಸುತ್ತವೆ.
ಮೇಕೆಗಳು ಹಾಗೂ ಸಾಕು ನಾಯಿಗಳು ಆಗಮಿಸುತ್ತಿದ್ದಂತೆಯೇ ಅದಕ್ಕೆ ಬೇಕಾದ ಆಹಾರ ತಯಾರಿಸಿ ಇವುಗಳ ಬರುವಿಕೆಗಾಗಿ ಶಾಂತಿ ಎದುರು ನೋಡುತ್ತಿರುತಾರೆ. ಪ್ರೀತಿಯ ನಾಯಿಗಳು ಹಾಗೂ ಮೇಕೆಗಳು ಮನೆಯತ್ತ ಬರುತ್ತಿದ್ದಂತೆಯೇ ಮನೆಯ ಬಳಿ ಇರುವ ಕೋಳಿಗಳು,ಬೆಕ್ಕುಗಳು ಒಟ್ಟಾಗುತ್ತವೆ. ಮಾಡಿದ ಆಹಾರ ಪದಾರ್ಥಗಳನ್ನು ಇವುಗಳಿಗೆ ಹಾಕುತ್ತಲೇ ತಾನೂ ಕೂಡ ಇದೇ ಆಹಾರವನ್ನು ಸೇವಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ತನ್ನ ಯಜಮಾನಿ ಮನೆಯೊಳಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆಯೇ ನಾಯಿಗಳು ಆಕೆಯ ಮಲಗುವ ಕೊಠಡಿ ಪ್ರವೇಶ ಮಾಡುತ್ತವೆ. ಕೆಲವು ನಾಯಿಗಳು ಮಂಚದ ಅಡಿಯಲ್ಲಿ ನಿದ್ರಿಸುತ್ತಿದ್ದರೆ, ಇನ್ನು ಕೆಲವು ಮಂಚದ ಮೇಲೆಯೇ ನಿದ್ರಿಸುತ್ತವೆ. ಉಳಿದ ನಾಯಿಗಳು ಮನೆಯ ಹೊರಗೆ ಕಾವಲು ಕಾಯುತ್ತವೆ. ಮೇಕೆಗಳು, ನಾಯಿಗಳು, ಬೆಕ್ಕುಗಳು ಹಾಗೂ ಕೋಳಿಗಳು ಪರಸ್ಪರ ಹೊಂದಾಣಿಕೆಯಲ್ಲಿ ಇರುವುದು ವಿಶೇಷವಾಗಿದೆ.
ಲವಲವಿಕೆ ಬದುಕು
73 ಪ್ರಾಯದ ಶಾಂತಿಗೆ ಸಿನಿಮಾ ಹಾಡುಗಳಂದರೆ ಎಲ್ಲಿಲ್ಲದ ಪ್ರೀತಿ, ಹಳೆಯ ಸಿನಿಮಾ ಗೀತೆಗಳನ್ನು ಗುನುಗುತ್ತ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.. ಇತ್ತೀಚೆಗೆ ತನ್ನ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭ ಕೆಲವು ಮೇಕೆಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ ಹಣದಿಂದ ಆಸ್ಪತ್ರೆಯ ಖರ್ಚನ್ನು ನೀಗಿಸಿಕೊಂಡರು. ಅಗತ್ಯವಿದ್ದಾಗ ಕೋಳಿಗಳನ್ನು ಕೂಡ ಮಾರಾಟ ಮಾಡುತ್ತಾರೆÉ. ಒಂಟಿ ಜೀವನ ಸಾಗಿಸುತ್ತಿದ್ದರೂ ಆಗಿಂದ್ದಾಗಿಯೇ ಆಕೆಯ ಮಗಳ ಗಂಡ ಮಣಿ ಮನೆಗೆ ತೆರಳಿ ಅತ್ತೆಯ ಯೋಗಕ್ಷೇಮ ವಿಚಾರಿಸಿ ತೆರಳುತ್ತಿದ್ದಾರೆ.
73 ವಯಸ್ಸಿನ ಶಾಂತಿ ಆರೋಗ್ಯ ಸಮಸ್ಯೆ ಕಂಡುಬಂದರೆ ಸ್ವತಃ ಆಸ್ಪತ್ರೆಗೆ ತೆರಳುತ್ತ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ತನ್ನ ಸಾಕು ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಶಾಂತಿಗೆ ಇವುಗಳನ್ನು ಬಿಟ್ಟಿರಲಾರದಷ್ಟು ಸಂಬAಧ ಹೊಂದಿದ್ದಾರೆ. ಈಕೆಯ ಸಾಕು ಪ್ರಾಣಿಗಳು ಸುತ್ತಮುತ್ತಲಿನ ಪ್ರದೇಶಕ್ಕೆ ತೆರಳಿದಾಗ ಹಲವರು ಇವುಗಳಿಗೆ ವಿಷ ಉಣಿಸಿ ಸಾಯಿಸಿದ್ದನ್ನು ಈಕೆ ಅತ್ಯಂತ ನೋವಿನಿಂದ ಹೇಳಿಕೊಳ್ಳುತ್ತಾರೆ. ಈಕೆಯ ಪ್ರಾಮಾಣಿಕತೆ ಹಾಗೂ ನಿಷ್ಠೆಗಾಗಿ ಕಾಫಿ ತೋಟದ ಮನೆಯ ಮಾಲೀಕರು ಕಳೆದ 15ವರ್ಷಗಳಿಂದ ಈಕೆಗೆ ಮನೆಯನ್ನು ಉಚಿತವಾಗಿ ನೀಡಿರುವುದು ವಿಶೇಷ. ಬದುಕಿರುವಷ್ಟು ದಿನ ವಾಸಿಸಲು ಅನುಕೂಲ ಕಲ್ಪಿಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಕಾಫಿ ತೋಟದ ಮಧ್ಯದಲ್ಲಿರುವ ಒಂಟಿ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಸಂದರ್ಭ ಕಾಡಾನೆಗಳ ಉಪಟಳ ತೀವ್ರವಾಗಿತ್ತು. ಇದರ ರಕ್ಷಣೆ ಪಡೆಯಲು ಶಾಂತಿ ಸಾಕು ನಾಯಿಗಳನ್ನು ಸಾಕಲು ಆರಂಭಿಸಿದರು. ಕನ್ನಡ,ಮಲಯಾಳ,ತಮಿಳು ಮಾತನಾಡುವ ಶಾಂತಿ ಸಿನಿಮಾ ಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಣೆ ಮಾಡುವುದು, ಹಬ್ಬ ಹರಿದಿನಗಳಲ್ಲಿ ಭಾಗಿಯಾಗುವ ಮೂಲಕ ನೃತ್ಯ ಮಾಡುವುದು ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುವ ಈಕೆ ಜೀವನದಲ್ಲಿ ಏನೂ ಕೂಡ ಶಾಶ್ವತವಿಲ್ಲ. ನಮ್ಮ ಮಕ್ಕಳೆ ನಮಗಿಲ್ಲದ ಸಮಯದಲ್ಲಿ ಸಾಕು ಪ್ರಾಣಿಗಳನ್ನೇ ಮಕ್ಕಳೆಂದು ಪ್ರೀತಿಸುತ್ತಿದ್ದೇನೆ.ಇವುಗಳಿಲ್ಲದೆ ನನ್ನ ಬದುಕು ಸಾಧ್ಯವಿಲ್ಲ ಎನ್ನುತ್ತಿದ್ದಂತೆಯೇ ಆಕೆಗೆ ಅರಿವಿಲ್ಲದಂತೆ ಕಣ್ಣುಗಳಿಂದ ಹನಿಗಳು ತೊಟ್ಟಿಕ್ಕಲಾರಂಭಿಸಿದವು.
ಮಾದರಿ ಬದುಕು ಕಳೆದ ಹಲವಾರು ವರ್ಷಗಳಿಂದ ಒಂಟಿ ಮನೆಯಲ್ಲಿ ಶಾಂತಿ ಎಂಬ ಮಹಿಳೆ ತನ್ನ ಜೀವನ ಸಾಗಿಸುತ್ತಿದ್ದಾರೆ. ಈಕೆಯ ಬದುಕಿಗೆ ಆಶ್ರಯವಾಗಬೇಕಿದ್ದ ಮಕ್ಕಳು ಇದ್ದರೂ ಇಲ್ಲದಂತಾಗಿದೆ. 73ರ ಈಕೆ ತನ್ನ ಜೀವನಕ್ಕೆ ಸಾಕಿರುವ ಮೇಕೆಗಳನ್ನು ಸಂದರ್ಭಕ್ಕನುಗುಣವಾಗಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ ಪಿಂಚಣಿ ಯೋಜನೆಗಳು ಈಕೆಗೆ ತಲುಪಬೇಕಾಗಿದೆ. ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಪ್ರಾಣಿಗಳು ಈಕೆಯನ್ನು ಬಿಟ್ಟಿರಲಾರದಷ್ಟು ಅನ್ಯೋನ್ಯತೆಯಿಂದ ಬದುಕುತ್ತಿವೆ. (ಸಣ್ಣುವಂಡ ವಿಶ್ವನಾಥ್,ಮಾಜಿ ಗ್ರಾ.ಪಂ.ಸದಸ್ಯ, ಧನುಗಾಲ ಮಾಯಮುಡಿ) |
ಮಕ್ಕಳಂತಿರುವ ಪ್ರಾಣಿಗಳು ಮನೆಯ ಹೊರ ಭಾಗದಲ್ಲಿಯೇ ತನ್ನ ಪ್ರೀತಿಯ ಸಾಕು ಪ್ರಾಣಿಗಳಿಗೆ ಆಹಾರ ತಯಾರಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿ ನಿತ್ಯವು ಇವುಗಳಿಗೆ ಬೇಕಾದ ಆಹಾರ ಪದಾರ್ಥಗಳು ದೊಡ್ಡ ಪಾತ್ರೆಯಲ್ಲಿ ಬೇಯುತ್ತಲೇ ಇರುತ್ತವೆ. ತನ್ನಲ್ಲಿರುವ ಸಾಕು ಪ್ರಾಣಿಗಳನ್ನು ಮಕ್ಕಳಂತೆ ಪ್ರೀತಿಸುತ್ತಿರುವ ಶಾಂತಿಗೆ ಇವುಗಳೇ ಮಕ್ಕಳಾಗಿವೆ. ಇರುವ ಸಾಕು ಪ್ರಾಣಿಗಳೂ ಕೂಡ ಅತ್ಯಂತ ವಿಶ್ವಾಸದಿಂದ ತನ್ನ ಯಜಮಾನಿಯ ರಕ್ಷಣೆಗೆ ನಿಂತಿವೆ. ಯಾರೂ ಕೂಡ ಈಕೆಯ ಮನೆಯ ಬಳಿ ತೆರಳಲು ಧೈರ್ಯ ಮಾಡುತ್ತಿಲ್ಲ. ಅಕಸ್ಮಿಕ ತೆರಳಿದರೆ ಮನೆಯ ಹೊರಗೆ ಇರುವ ಕಾವಲು ನಾಯಿಗಳು ಎಚ್ಚರಿಸುತ್ತವೆ. 73ರ ಪ್ರಾಯದಲ್ಲೂ ಲವಲವಿಕೆಯಿಂದ ಓಡಾಡುತ್ತಿರುವ ಶಾಂತಿಗೆ ಆಕೆಯ ಸುತ್ತಮುತ್ತಲಿನಲ್ಲಿ ನಿರಂತರ ಓಡಾಡುವ ಸಾಕು ಪ್ರಾಣಿಗಳೇ ಮಕ್ಕಳಿದಂತೆ. |