ಅಸಾಧ್ಯವೆಂಬಂತಿರುವ ಕಾಡಾನೆ – ಮಾನವ ಸಂಘರ್ಷ ನಿಯಂತ್ರಣ

 

2019 ರಿಂದೀಚೆಗೆ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ 30 ಮಂದಿ ಬಲಿ

ಕರ್ನಾಟಕದಲ್ಲಿ ಪ್ರಮುಖ ಕಾಡುಪ್ರಾಣಿಗಳಾಗಿರುವ ಹುಲಿ, ಆನೆಗಳ ರಕ್ಷಣೆಗೆ ಕೇಂದ್ರ, ರಾಜ್ಯ ಸರಕಾರಗಳು ಹಲವಷ್ಟು ಯೋಜನೆಗಳನ್ನು ಸಿದ್ಧಪಡಿಸುವುದಲ್ಲದೆ ವ್ಯಾಪಕ ಪ್ರಚಾರ, ಜಾಗೃತಿಗಳ ಮೂಲಕ ಇವುಗಳ ರಕ್ಷಣೆ ಮಾತ್ರವಲ್ಲದೆ ಸಂಖ್ಯಾವೃದ್ಧಿಗೂ ಕಳೆದ ಕೆಲ ವರ್ಷಗಳಿಂದ ಶ್ರಮಿಸುತ್ತಿವೆ. ಪರಿಣಾಮ ಇಂತಹ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಏರಿಕೆಗೊಂಡಿದೆ. ಆದರೆ ಇಂತಹ ಪ್ರಾಣಿಗಳಿಗೆ ಅಗತ್ಯವಿರುವ ಪ್ರಮುಖ ಸೌಲಭ್ಯಗಳು, ಅಂದರೆ ಆನೆಗೆ ಆಹಾರ ಹಾಗೂ ಹುಲಿಗೆ ವಿಸ್ತಾರವಾದ ಕಾಡು ಇಲ್ಲದಿರುವುದು ಈ ಪ್ರಮುಖ ಪ್ರಾಣಿಗಳು ಹಾಗೂ ಮಾನವನ ನಡುವೆ ಸಂಘರ್ಷ ಪ್ರತಿ ದಿನ ಹೆಚ್ಚುತ್ತಲಿದೆ. ಇದರ ತಡೆಗೆ ಸರಕಾರ ಆಗಿದ್ದಾಗೆ ನೂತನ ಯೋಜನೆಗಳನ್ನು ರೂಪಿಸುತ್ತಿದೆ ಆದರೆ ಶಾಶ್ವತ ಪರಿಹಾರವಂತು ಇದುವರೆಗೂ ರೂಪಿಸಲ್ಪಟ್ಟಿಲ್ಲ.

4 ವರ್ಷಗಳಲ್ಲಿ ಕರ್ನಾಟಕದಲ್ಲಿ 112, ಕೊಡಗಿನಲ್ಲಿ 30 ಮಂದಿ ಬಲಿ

ಕಾಡಿನಲ್ಲಿ ಆಹಾರವಿಲ್ಲದಿರುವ ಕಾರಣ ತೋಟಗಳಲ್ಲೇ ಉಳಿದಿರುವ ಬಹುತೇಕ ಕಾಡಾನೆಗಳು 2019 ರಿಂದೀಚೆಗೆ ಒಟ್ಟು 30 ಮಂದಿಯನ್ನು ಕೊಡಗು ಜಿಲ್ಲೆಯಲ್ಲಿಯೇ ಬಲಿಪಡೆದುಕೊಂಡಿದೆ. ಕರ್ನಾಟಕದಾದ್ಯಂತ ಈ ಸಂಖ್ಯೆ ಇದೇ ಅವಧಿಯಲ್ಲಿ 112 ಎಂದು ದಾಖಲಾಗಿದೆ. ರಾಜ್ಯಸಭೆಯಲ್ಲಿ ಇತ್ತೀಚೆಗಷ್ಟೆ ಈ ಬಗ್ಗೆ ಸದಸ್ಯ ನಾರಾಯಣ ಕೊರಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಸಚಿವ ಅಶ್ವಿನ್ ಕುಮಾರ್ ಚೌಬೇ ಅವರು, ಈ ಮಾಹಿತಿ ಇತ್ತಿದ್ದಾರೆ. 

2019-20 ಅವಧಿಯಲ್ಲಿ ರಾಜ್ಯದಲ್ಲಿ ಆನೆ ದಾಳಿಗೆ 30 ಮಂದಿ ಬಲಿಯಾಗಿದ್ದು, 2020-21ನೆ ಅವಧಿಯಲ್ಲಿ 24, 2021-22ನೆ ಅವಧಿಯಲ್ಲಿ 27 ಹಾಗೂ 2022-23ನೆ ಅವಧಿಯಲ್ಲಿ 26 ಮಂದಿ ಸೇರಿ ಒಟ್ಟು 4 ವರ್ಷಗಳಲ್ಲಿ 112 ಮಂದಿ ರಾಜ್ಯದಲ್ಲಿ ಹಾಗೂ 30 ಮಂದಿ ಕೊಡಗು ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ 2019-20ನೆ ಅವಧಿಯಲ್ಲಿ 5, 2020-21ನೆ ಅವಧಿಯಲ್ಲಿ 8, 2021-22ನೆ ಅವಧಿಯಲ್ಲಿ 12 ಹಾಗೂ 2022-23ನೆ ಅವಧಿಯಲ್ಲಿ 5 ಮಂದಿ ಬಲಿಯಾಗಿರುವುದಾಗಿ ತಿಳಿಸಿದ್ದಾರೆ. ಭಾರತದಾದ್ಯಂತ ಇತರ ರಾಜ್ಯಗಳನ್ನೂ ಒಳಗೊಂಡರೆ, 2019 ರಿಂದ 2022 ರವರೆಗೆ 1,595 ಮಂದಿ ಆನೆ ದಾಳಿಗೆ ಬಲಿಯಾಗಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. 

 

ಸಂಘರ್ಷ ತಡೆಗೆ ಸರಕಾರದ ಕ್ರಮಗಳು - ಸಚಿವರ ಮಾಹಿತಿ

ಆನೆ-ಮಾನವ ಸಂಘರ್ಷ ಹೆಚ್ಚಿರುವ ಜಿಲ್ಲೆಗಳಾದ ಕೊಡಗು ಸೇರಿದಂತೆ, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಆನೆ-ಟಾಸ್ಕ್ ಫೋರ್ಸ್ ರಚಿಸಲಾಗಿದೆ, ಬೆಳೆ ನಾಶ ಮಾಡುವ ಆನೆಗಳನ್ನು ಪತ್ತೆ ಹಚ್ಚಿ ಹಿಡಿದು ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ-ವಲನಗಳನ್ನು  ಟ್ರಾಕ್  ಮಾಡಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ, ಉಳಿದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಡ್ರೋನ್ ಬಳಸಿ ಆನೆಗಳ ಸ್ಥಳ ಪತ್ತೆ ಕಾರ್ಯವನ್ನು ಮಾಡುತ್ತಿರುವುದಾಗಿ ಅರಣ್ಯ ಇಲಾಖೆ ಮಹಿತಿ ನೀಡಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ.

 

ಹೆಚ್ಚುವರಿ ಕ್ರಮಗಳು

‘ಪ್ರಾಜೆಕ್ಟ್ ಟೈಗರ್ ಹಾಗೂ ಎಲಿಫೆಂಟ್’ ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ಕಾಡು ಪ್ರಾಣಿಗಳ ವಾಸಸ್ಥಾನ ನಿರ್ವಹಣೆಗೆ ಕ್ರಮ ವಹಿಸಿದೆ. ಇಂತಹ ವಾಸಸ್ಥಾನಗಳಲ್ಲಿ ಆನೆಗಳಿಗೆ ನೀರಿನ ಕೊರತೆ ಉಂಟಾಗದ ಹಾಗೆ ಕ್ರಮ ವಹಿಸಿ, ಅವುಗಳಿಗೆ ಅಗತ್ಯವಿರುವ ಆಹಾರ ನೀಡುವ ವೃಕ್ಷಗಳು, ಬಿದಿರು ಬೆಳವಣಿಗೆಗೆ ಕ್ರಮ ವಹಿಸಲಾಗಿದ್ದು, ಕಾಡಾನೆ-ಮಾನವ ಸಂಘರ್ಷ ತಡೆಗೆ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಒತ್ತು ನೀಡಿದೆ ಎಂಬುದಾಗಿ ಸಚಿವರು ಉತ್ತರಿಸಿದ್ದಾರೆ. ಮುಂದುವರಿದು, ಆನೆ ದಾಳಿಗೆ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಹಾಗೂ ಗಾಯಗೊಂಡ ವ್ಯಕ್ತಿಗಳ ಚಿಕಿತ್ಸೆಗೆ ತ್ವರಿತ ಪರಿಹಾರ ನೀಡುತ್ತಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಇತರ ಜಿಲ್ಲೆಗಳಲ್ಲೂ ಜನರು ಬಲಿ

ಕೊಡಗು ಮಾತ್ರವಲ್ಲದೆ ಆನೆ ಸಂಖ್ಯೆ ಹೆಚ್ಚಿರುವ ಇತರ ಜಿಲ್ಲೆಗಳಲ್ಲೂ ಬಹಳಷ್ಟು ಮಂದಿ 4 ವರ್ಷಗಳ ಅವಧಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 2019 ರಿಂದ 2023 ರವರೆಗೆ ಬೆಂಗಳೂರು ಗ್ರಾಮಾಂತರದಲ್ಲಿ 1, ರಾಮನಗರದಲ್ಲಿ 5, ಕೋಲಾರದಲ್ಲಿ 10, ಬನ್ನೆರುಗಟ್ಟ ವ್ಯಾಪ್ತಿಯಲ್ಲಿ 8, ಮೈಸೂರಿನಲ್ಲಿ 5, ಹಾಸನದಲ್ಲಿ 17, ತುಮಕೂರಿನಲ್ಲಿ 1, ಚಾಮರಾಜನಗರದಲ್ಲಿ 24, ಮಂಗಳೂರಿನಲ್ಲಿ 3, ಶಿವಮೊಗ್ಗದಲ್ಲಿ 1 ಹಾಗೂ ಕೊಡಗಿನಲ್ಲಿ ಅತ್ಯಧಿಕ, ಒಟ್ಟು 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 112 ಮಂದಿ ಬಲಿಯಾಗಿದ್ದಾರೆ.