ಸಿದ್ದಾಪುರ, ಚೆಟ್ಟಳ್ಳಿ ವ್ಯಾಪ್ತಿಯ 20 ಆಸ್ಪತ್ರೆಗಳಿಗೆ ಇಬ್ಬರೇ ಪಶುವೈದ್ಯರು
ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಹರಸಾಹಸ
ಕಳೆದ ಒಂದು ದಶಕದಿಂದ ಸಿದ್ದಾಪುರ ವ್ಯಾಪ್ತಿಯ ನಾಲ್ಕು ಆಸ್ಪತ್ರೆಗಳಿಗೆ ಒಬ್ಬನೇ ಪಶುವೈದ್ಯ. ಮತ್ತೊಂದೆಡೆ ಚೆಟ್ಟಳ್ಳಿ ವ್ಯಾಪ್ತಿಯ ಬರೋಬ್ಬರಿ 16 ಆಸ್ಪತ್ರೆಗಳಿಗೆ ಒಬ್ಬನೇ ವೈದ್ಯ. ಖಾಯಂ ಪಶು ವೈದ್ಯರ ಅಲಭ್ಯದಿಂದ ತಾವು ಸಾಕಿದ ಪ್ರಾಣಿಗಳ ಚಿಕಿತ್ಸೆಗೆ ದೂರದ ನಗರಗಳನ್ನು ಅವಲಂಬಿಸುವ ಪರಿಸ್ಥಿತಿ ಒದಗಿದ್ದು, ಇರುವ ವೈದ್ಯರು ಪ್ರತೀ ದಿನ ಒಂದೊಂದು ಗ್ರಾಮಗಳಿಗೆ ತೆರಳಿ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಒದಗಿದೆ.
ಸಿದ್ದಾಪುರದಲ್ಲಿ ಹೆಸರಿಗೆ ಮಾತ್ರ ಪಶು ಚಿಕಿತ್ಸಾಲಯ
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮಸ್ಥರು ಹಸು, ಹಂದಿ, ಮೇಕೆ, ಕೋಳಿ ಸಾಕಾಣಿಕೆ ಸೇರಿದಂತೆ ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ವಿದೇಶಿ ತಳಿಯ ಬೆಕ್ಕು, ನಾಯಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ವ್ಯಾಪ್ತಿಯ ನಿವಾಸಿಗಳ ಸಾಕು ಪ್ರಾಣಿಗಳಿಗೆ ಅನಾರೋಗ್ಯ ಬಂದು ಸಿದ್ದಾಪುರ ದಲ್ಲಿರುವ ಪಶು ಚಿಕಿತ್ಸಾಲಯಕ್ಕೆ ತೆರಳಿದರೆ ಆಸ್ಪತ್ರೆಯ ಬಾಗಿಲು ಸದಾ ಮುಚ್ಚಿರುತ್ತದೆ. ಆರ್ಥಿಕವಾಗಿ ಮುಂದುವರಿದವರು ಸಾಕು ಪ್ರಾಣಿಗಳನ್ನು ದೂರದ ಕುಶಾಲನಗರ, ಗೋಣಿಕೊಪ್ಪಕ್ಕೆ ಕೊಂಡೊಯ್ದರೆ ಉಳಿದವರು ವೈದ್ಯರ ಆಗಮನಕ್ಕೆ ಅನಾರೋಗ್ಯ ಪೀಡಿತ ಪ್ರಾಣಿಯನ್ನು ಹಿಡಿದು ಆಸ್ಪತ್ರೆ ಮುಂದೆ ನಿಲ್ಲುವಂತಹ ಅವಸ್ಥೆ ಒದಗಿದೆ. ಕೆಲವೊಮ್ಮೆ ಸೂಕ್ತ ಚಿಕಿತ್ಸೆ ದೊರಕದೆ ಪ್ರಾಣಿಗಳು ಸಾವನ್ನಪ್ಪಿರುವ ಘಟನೆಗಳು ಕೂಡ ನಡೆದಿವೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಖಾಯಂ ಪಶುವೈದ್ಯರ ನೇಮಕವಾಗಬೇಕೆಂದು ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂಬುದು ನಿವಾಸಿಗಳ ಅಳಲು.
ಸಚಿವರು ಉದ್ಘಾಟಿಸಿದ ಪಶು ಚಿಕಿತ್ಸಾಲಯಕ್ಕೆ ವೈದ್ಯರೇ ಇಲ್ಲ
ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಕೈಕ ಪಶು ಚಿಕಿತ್ಸಾಲಯವಿದ್ದು, ಕಳೆದ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ನಾಗೇಶ್, ಮಾಲ್ದಾರೆಯಲ್ಲಿ ರೂ. 27 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಪಶುಚಿಕಿತ್ಸಾಲಯ ಕಟ್ಟಡವನ್ನು ಉದ್ಘಾಟಿಸಿದ್ದರು. ಆದರೆ ಉದ್ಘಾಟಿಸಿ ವರ್ಷಗಳು ಕಳೆದರೂ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಮರೀಚಿಕೆಯಾಗಿದೆ. ಮಾಲ್ದಾರೆ ಗ್ರಾಮವು ಕಾಡಂಚಿ ನಲ್ಲಿರುವುದರಿಂದ ಸಾಕು ಪ್ರಾಣಿಗಳ ಮೇಲೆ ಕಾಡು ಪ್ರಾಣಿಗಳ ದಾಳಿ ಪ್ರತಿನಿತ್ಯ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಮಾಲ್ದಾರೆಯ ಪಶುಚಿಕಿತ್ಸಾಲಯಕ್ಕೆ ತೆರಳಿದರೆ ಆಸ್ಪತ್ರೆ ಬಾಗಿಲು ಮುಚ್ಚಿರುತ್ತದೆ. ಹಲವಾರು ಸಂದರ್ಭದಲ್ಲಿ ಚಿಕಿತ್ಸೆ ದೊರಕದೆ ಪ್ರಾಣಿಗಳು ಸಾವನ್ನಪ್ಪಿವೆ.
ಪಾಲಿಬೆಟ್ಟದಲ್ಲಿಲ್ಲ ಖಾಯಂ ಪಶು ವೈದ್ಯರು
ಪಾಲಿಬೆಟ್ಟ ವ್ಯಾಪ್ತಿಯ ಚೆನ್ನಯ್ಯನಕೋಟೆ, ಹುಂಡಿ, ಬಜೆಕೊಲ್ಲಿ, ಮೇಕೂರು ವ್ಯಾಪ್ತಿಯಲ್ಲಿ ಖಾಯಂ ಪಶುವೈದ್ಯರ ಸೇವೆ ಇಲ್ಲದಂತಾಗಿದೆ. ಇರುವ ವೈದ್ಯರು ಐದಕ್ಕೂ ಅಧಿಕ (ಮೊದಲ ಪುಟದಿಂದ) ಸಂಖ್ಯೆಯ ಆಸ್ಪತ್ರೆಗಳ ಜವಾಬ್ದಾರಿ ವಹಿಸಿದ್ದು, ಒಂದೇ ಕಡೆ ಸೇವೆ ಸಲ್ಲಿಸುವುದು ಅಸಾಧ್ಯ. ವ್ಯಾಪ್ತಿಯಲ್ಲಿ ಹಾಡಿಗಳಿದ್ದು, ಹಾಡಿ ನಿವಾಸಿಗಳು ತಮ್ಮ ಜೀವನೋಪಾಯಕ್ಕೆ ಹಸು, ಹಂದಿ, ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ ಇತ್ತೀಚೆಗೆ ಸಾಕು ಪ್ರಾಣಿಗಳಿಗೆ ಬರುವ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಹಾಡಿ ನಿವಾಸಿಗಳ ಹಸು, ಹಂದಿಗಳು ಸಾವನಪ್ಪಿವೆೆ. ಪಾಲಿಬೆಟ್ಟದ ಪಶುಚಿಕಿತ್ಸಾಲಯಕ್ಕೆ ಬಂದರೆ ವೈದ್ಯರೇ ಇಲ್ಲ.
ನೆಲ್ಯಹುದಿಕೇರಿ, ವಾಲ್ನೂರು ತ್ಯಾಗತ್ತೂರು ಗ್ರಾಮಕ್ಕೆ ಒಬ್ಬನೇ ಪಶು ವೈದ್ಯ
ಈ ಎರಡೂ ಗ್ರಾಮಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವವರ ಸಂಖ್ಯೆ ಅತೀ ಹೆಚ್ಚು. ಆದರೆ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕೃಷಿಕರು ಪರದಾಡುತ್ತಿದ್ದಾರೆ. ವೈದ್ಯರು ಎರಡು ಅಥವಾ ಮೂರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದರಿಂದ ತುರ್ತು ಸಂದರ್ಭದಲ್ಲಿ ಸಾಕು ಪ್ರಾಣಿಗಳಿಗೆ ವೈದ್ಯರ ಸೇವೆ ಲಭ್ಯವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು 30 ಕಿ.ಮೀ ದೂರದ ಕುಶಾಲನಗರಕ್ಕೆ ತೆರಳಬೇಕಾದ ಅನಿವಾರ್ಯತೆ ಒದಗಿದೆ.