ಕುಶಾಲನಗರ - ಮಡಿಕೇರಿ ಹೆದ್ದಾರಿ ಅಪಾಯಕಾರಿ

ಮಾಯವಾಗಿರುವ ರಿಫ್ಲೆಕ್ಟರ್‌ಗಳು, ಬಿಳಿಪಟ್ಟಿ, ರಸ್ತೆಗೆ ಬಾಗಿರುವ ಕೊಂಬೆಗಳ ನಡುವೆ ಸಾಹಸಮಯ ಸಂಚಾರ 

ಪ್ರಮುಖ ಪ್ರವಾಸಿ ತಾಣವಾಗಿರುವ ಮಡಿಕೇರಿಗೆ ಇತ್ತೀಚೆಗೆ ವಾರಾಂತ್ಯ ಮಾತ್ರವಲ್ಲ, ವಾರದುದ್ದಕ್ಕೂ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅತ್ಯಧಿಕ ಸಂಖ್ಯೆಯಲ್ಲಿ ಮಡಿಕೇರಿ-ಕುಶಾಲನಗರ ಹೆದ್ದಾರಿ ಮೂಲಕವೇ ಪ್ರವಾಸಿಗರು ಮಡಿಕೇರಿ ಸೇರುತ್ತಾರೆ. ಬೆಂಗಳೂರು-ಮೈಸೂರಿನಿಂದ ಮಂಗಳೂರು ಸೇರಬೇಕಿದ್ದರೂ ಕುಶಾಲನಗರದಿಂದ ಹೆದ್ದಾರಿ ದಾಟಿ ಮಡಿಕೇರಿ ಮೂಲಕವೇ ಸಾಗಬೇಕಿದೆ. ಕುಶಾಲನಗರದಿಂದ ಮಡಿಕೇರಿಗೆ, ಮಡಿಕೇರಿಯಿಂದ ಕುಶಾಲನಗರಕ್ಕೆ ದಿನನಿತ್ಯ ನೂರಾರು ಮಂದಿ ವಿವಿಧ ಕೆಲಸ-ಕಾರ್ಯಗಳಿಗೆ ಸಂಚರಿಸುತ್ತಾರೆ. ಲಾರಿ, ಬಸ್, ದ್ವಿಚಕ್ರ, ನಾಲ್ಕು ಚಕ್ರ ವಾಹನಗಳು ನೂರಾರು ಸಂಖ್ಯೆಯಲ್ಲಿ ಹೆದ್ದಾರಿಯನ್ನು ಬಳಸುತ್ತಿದ್ದರೂ ರಸ್ತೆಯ ನಿರ್ವಹಣೆ ಮಾತ್ರ ಶೂನ್ಯದಲ್ಲಿ ನಿಂತಿದೆ. 

ಎನ್‌ಎಚ್-275ರಲ್ಲಿ ರಸ್ತೆ ನಿರ್ವಹಣೆ ಮಾಡಬೇಕಿರುವ ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಇಲ್ಲಿ ವಾಹನ ಚಾಲನೆ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರೀ ಮಳೆಯ ಸಂದರ್ಭದಲ್ಲಿ ಕಾಡಿನಿಂದ ಆವೃತವಾಗಿ ಬ್ಲಾಕ್ ಆಗಿರುವ ಚರಂಡಿಗಳು ತುಂಬಿ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದು, ಹೆದ್ದಾರಿ ಪಕ್ಕದಲ್ಲಿ ಮರಗಳ ಕೊಂಬೆಗಳು ರಸ್ತೆಯತ್ತ ಬಾಗಿ ಸಾಲುಗಟ್ಟಿ ನಿಂತಿದ್ದು ರಸ್ತೆ ತಿರುವಿನಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಹೆದ್ದಾರಿಯ ರಸ್ತೆ ವಿಭಜಕ ಬಿಳಿಪಟ್ಟಿಯು ಮೆಲ್ಲಮೆಲ್ಲನೆ  ಮಾಯವಾಗುತ್ತಿದ್ದು, ರಾತ್ರಿ ಸಂದರ್ಭ ಅತ್ಯಗತ್ಯವಾಗಿರುವ ರಿಫ್ಲೆಕ್ಟರ್‌ಗಳು ಮಾಯವಾಗಿ ವರ್ಷಗಳೇ ಕಳೆದಿವೆ. ಹೆದ್ದಾರಿಯ ನಿರ್ವಹಣಾ ಕಾರ್ಯಗಳು ಕಿಂಚಿತ್ತೂ ನಡೆಯದೆ ಇರುವುದರಿಂದ ಈ ರಸ್ತೆಯ ಮೂಲಕ ಸಂಚರಿಸಲು ರಾತ್ರಿ ವೇಳೆ ಭಯದಿಂದಲೇ ವಾಹನ ಚಲಿಸುವ ಅನಿವಾರ್ಯತೆ ಬಂದೊದಗಿದೆ. 

ಈ ಹೆದ್ದಾರಿಯಲ್ಲಿ ಚಲಿಸಲು ಅನುಭವಸ್ಥ ಚಾಲಕರ ಅಗತ್ಯವಿದೆ. ಆದರೆ ಪ್ರವಾಸಿಗರ ಬೀಡಾಗಿರುವ ಮಡಿಕೇರಿ ನಗರಕ್ಕೆ ದಿನನಿತ್ಯ ಬೆಂಗಳೂರು, ಮೈಸೂರಿನ ಕಡೆಯಿಂದ ಆಗಮಿಸುವ ಬಹುತೇಕ ಪ್ರವಾಸಿಗರಿಗೆ ಇಂತಹ ರಸ್ತೆಗಳಲ್ಲಿ ಚಲಿಸಿ ಅನುಭವವಿಲ್ಲದ ಕಾರಣ ಹೆಚ್ಚಾಗಿ ಪ್ರವಾಸಿ ವಾಹನಗಳೇ ಈ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗುತ್ತವೆ. ಈ ಮಧ್ಯೆ ರಸ್ತೆಯೂ ಸರಿಯಿಲ್ಲದೇ ಹೋದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಮಳೆಗಾಲ ಸಂದರ್ಭವಾಗಿರುವ ಕಾರಣ ಹೆಚ್ಚು ಜಾಗ್ರತೆ ವಹಿಸಿ ಈ ರಸ್ತೆಯಲ್ಲಿ ಚಲಿಸುವ ಅಗತ್ಯ ಬಂದೊದಗಿದೆ. 

ತಡರಾತ್ರಿ ಕುಶಾಲನಗರದಿಂದ ಮಡಿಕೇರಿಗೆ ವಾಹನ ಚಲಾಯಿಸುವುದು ಅಸಾಧ್ಯವೆಂಬಂತಾಗಿದೆ. ಹೆದ್ದಾರಿ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳು, ಮಾಯವಾಗಿರುವ ಬಿಳಿಪಟ್ಟಿ ರಸ್ತೆ ವಿಭಜಕ ಹಾಗೂ ರಿಫ್ಲೆಕ್ಟರ್‌ಗಳಿಂದಾಗಿ ಕೆಲವೆಡೆ ರಾತ್ರಿ ಸಂದರ್ಭ ರಸ್ತೆಯೇ ಕಾಣದಂತಾಗುತ್ತದೆ. ಹಲವಾರು ಪ್ರದೇಶಗಳಲ್ಲಿ, ಮರದ ಕೊಂಬೆಗಳು ರಸ್ತೆಯ ಕಡೆಗೆ ಬಾಗಿ ನಿಂತಿವೆಯಲ್ಲದೆ, ಜೋರಾದ ಗಾಳಿಯೊಂದಿಗೆ ಭಾರೀ ಮಳೆಯ ಸಂದರ್ಭದಲ್ಲಿ ಮರಗಳು ಹೆದ್ದಾರಿಗೆ ಉರುಳಿರುವ ಘಟನೆಗಳು ಸಂಭವಿಸಿವೆ.

ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತು ಸಮಸ್ಯೆ ಬಗೆಹರಿಸುವಿಕೆಯತ್ತ ಚಿತ್ತ ಹರಿಸಬೇಕಿದೆ.