ಹೆಚ್ಚುತ್ತಿರುವ ತಾಪಮಾನ-ತೋಟಗಳಲ್ಲಿ ಒಣಗುತ್ತಿರುವ ಕರಿಮೆಣಸು ಬಳ್ಳಿ-ಅರೇಬಿಕಾ ಕಾಫಿ
ಆಗಸದತ್ತ ಚಿತ್ತ ನೆಟ್ಟಿರುವ ಬೆಳೆಗಾರ
ಈ ಹಿಂದೆಂದಿಗಿಂತಲೂ ಬಿಸಿಲಿನ ತಾಪಮಾನ ಈ ಬಾರಿ ಹೆಚ್ಚಿದೆ. ಬಿರು ಬೇಸಿಗೆಯ ಅನುಭವ ಎಲ್ಲೆಡೆಯಿದ್ದು, ವಾತಾವರಣ ಬಿಸಿಯೇರಿದೆ. ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಇಳಿದಿದೆ. ಕೆಲವೆಡೆ ಕೆರೆಗಳು ಬತ್ತಿವೆ. ಹೊಳೆ, ನದಿ, ತೊರೆಗಳಲ್ಲಿ ನೀರಿನ ಹರಿವು ಗಣನೀಯವಾಗಿ ತಗ್ಗಿದೆ. ಮೋಡ ಮರೆಯಾಗಿ ಬಿಸಿಲಿನ ಝಳ ಹೆಚ್ಚಳವಾಗುತ್ತಿದೆ. ತೋಟಗಳಲ್ಲಿ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಸೊರಗಿದ್ದರೆ, ಕೆಲವೆಡೆ ಸತ್ತಿವೆ.
ತಾಲೂಕಿನಲ್ಲಿ ವಾಡಿಕೆಯ ಮಳೆ ದೂರವಾಗಿದೆ. ಇಷ್ಟರಲ್ಲಾಗಲೇ ಮಳೆ ಬಿದ್ದು, ವಾತಾವರಣ ತಂಪಾಗಬೇಕಿತ್ತು. ಇದರೊಂದಿಗೆ ಕಾಫಿ ತೋಟಗಳಲ್ಲಿ ಹೂ ಅರಳಿ ಮುಂದಿನ ಫಸಲಿಗೆ ಅಣಿಯಾಗಬೇಕಿತ್ತು. ಆದರೆ ಪ್ರಸಕ್ತ ವರ್ಷ ಹನಿ ಮಳೆಯೂ ಬಿದ್ದಿಲ್ಲ. ನೀರಿನ ಸೌಕರ್ಯ ಹೊಂದಿರುವವರು ಹೇಗೋ ಗಿಡಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಮಳೆಯನ್ನೇ ನಂಬಿರುವ ಬೆಳೆಗಾರರು ಮಾತ್ರ ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ. ಇದರೊಂದಿಗೆ ಕಲ್ಲು ಬಂಡೆಗಳಿರುವ ತೋಟಗಳ ಸ್ಥಿತಿಯಂತೂ ಹೇಳತೀರದ್ದಾಗಿದೆ. ಬಿಸಿಲಿಗೆ ಕಾದ ಕಬ್ಬಿಣದಂತಾಗುವ ಕಲ್ಲುಗಳ ಅಕ್ಕ ಪಕ್ಕ ಇರುವ ಕಾಫಿ ಗಿಡಗಳು, ಮೆಣಸು ಬಳ್ಳಿಗಳು ಸಂಪೂರ್ಣ ಒಣಗಿ ಹೋಗಿವೆ. ಸೂಕ್ತ ಸಮಯದಲ್ಲಿ ಮಳೆ ಬಾರದೆ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರು ಕಂಗಾಲಾಗಿದ್ದಾರೆ. ಹಿಂಗಾರು ಮಳೆ ದೂರವಾಗುತ್ತಿದ್ದಂತೆ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಕಾಫಿ, ಕಾಳು ಮೆಣಸಿನ ಗಿಡಗಳು ಬಾಡುತ್ತಿವೆ. ಇನ್ನು ಒಂದೆರಡು ವಾರಗಳಲ್ಲಿ ಮಳೆ ಬಾರದಿದ್ದಲ್ಲಿ ತೋಟದಲ್ಲಿನ ಕರಿಮೆಣಸು ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಲಿದೆ. ಕಾಫಿ ಗಿಡಗಳೂ ಒಣಗಲಿವೆ.
ಕಾಫಿ ಗಿಡಗಳನ್ನು, ಕಾಳು ಮೆಣಸಿನ ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ. ಹೊಳೆ, ಕೆರೆಗಳಿಂದ ತೋಟಕ್ಕೆ ಸ್ಪಿç್ಪಂಕ್ಲರ್‌ಗಳ ಮೂಲಕ ನೀರು ಹಾಯಿಸುತ್ತಿದ್ದು, ಈ ಬಾರಿ ಹೊಳೆಯಲ್ಲಿನ ನೀರಿಗೆ ಮೋಟಾರ್ ಅಳವಡಿಸಲು ಜಿಲ್ಲಾಡಳಿತ ತಡೆ ನೀಡಿದೆ. ಇತ್ತ ಮಳೆಯೂ ಇಲ್ಲ; ನದಿಗಳಿಂದ ನೀರೂ ಹಾಯಿಸುವಂತಿಲ್ಲ. ಬೆಳೆಗಳನ್ನು ಉಳಿಸಿಕೊಳ್ಳುವುದಾದರೂ ಹೇಗೆ? ಎಂಬ ತ್ರಿಶಂಕು ಸ್ಥಿತಿಯಲ್ಲಿ ಬೆಳೆಗಾರ ವರ್ಗವಿದೆ. ಮಳೆ ಇನ್ನೂ ಬಾರದ ಕಾರಣ ನೀರಿನ ಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟವು ಕುಸಿತ ಕಂಡು ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ನೀರಿನ ಕೊರತೆಯಿಂದಾಗಿ ಕಾಫಿ ಗಿಡಗಳಲ್ಲಿ ಚಿಗುರು ಒಡೆದಿಲ್ಲ. ಕಾಳುಮೆಣಸುಗಳು ಹಳದಿ ರೂಪ ಪಡೆದು ಒಣಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಅತೀ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಹೋಬಳಿಗಳಲ್ಲಿ ಹೆಚ್ಚಿನ ಬೆಳೆಗಾರರು ಬೋರ್‌ವೆಲ್‌ಗಳಿಂದ ಸ್ಪ್ರಿಂಕ್ಲರ್ ಮಾಡಿ ಹೂ ಅರಳಿಸಿದರೂ ಬ್ಯಾಕಿಂಗ್ ನೀರು ಕೊಡದಿದ್ದರೆ ಕಾಫಿ ಗಿಡಗಳು ಒಣಗುವ ಸಾಧ್ಯತೆ ಇದೆ. ನೀರು ಕೊಡಲೇಬೇಕಾದ ಅನಿವಾರ್ಯತೆ ನಡುವೆ ನೀರಿನ ಸೌಲಭ್ಯವಿಲ್ಲದ ಬೆಳೆಗಾರರು ಮಳೆಗಾಗಿ ಮೊರೆ ಹೋಗುತ್ತಿದ್ದಾರೆ. ಸರಿಯಾದ ಸಮಯದಲ್ಲಿ ನೀರು ಸಿಗದಿದ್ದರೆ ಫಸಲು ಪಡೆಯಲು ಸಾಧ್ಯವೇ ಇಲ್ಲ. ಮಳೆಯನ್ನು ನಂಬಿ ಅರೇಬಿಕಾ ಕಾಫಿ ಬೆಳೆಯುವ ಬೆಳೆಗಾರರು ಹಿಂಗಾರು ಮಳೆ ದೂರವಾಗುತ್ತಿದ್ದಂತೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಅರೇಬಿಕಾ ಬೆಳೆಯುವ ಪ್ರದೇಶದಲ್ಲಿ ಬಿಸಿಲು ಜಾಸ್ತಿಯಾಗಿದ್ದು, ಕಾಫಿ ಗಿಡಗಳ ಮೇಲೆ ದುಷ್ಪರಿಣಾಮ ಹೆಚ್ಚಾಗುತ್ತಿದೆ. ತಾಪಮಾನ ಜಾಸ್ತಿಯಾದರೆ, ಬಿಳಿ ಕಾಂಡ ಕೊರಕ ರೋಗಬಾಧೆ ಉಲ್ಬಣಿಸಬಹುದು ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ತಾಲೂಕಿನ ಬಹುತೇಕ ಕಾಫಿ ಬೆಳೆಗಾರರು ಮಳೆಯನ್ನೇ ಅವಲಂಭಿಸಿದ್ದು, ಎಲ್ಲರೂ ಆಗಸದತ್ತ ಚಿತ್ತ ಹರಿಸಿದ್ದಾರೆ.