ಕೊಡಗಿನ 1,237 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇದುವರೆಗೆ ಬಂದಿಲ್ಲ 2 ಸಾವಿರ..

5,624 ಫಲಾನುಭವಿಗಳ ಖಾತೆಗೆ ಜಮೆ ಆಗದ ಜನವರಿ ತಿಂಗಳ ಗೃಹಲಕ್ಷ್ಮಿ ಹಣ 

ಗ್ಯಾರಂಟಿ ಅನುಷ್ಠಾನ ಸಮಿತಿಯವರೇ ಒಮ್ಮೆ ಇಲ್ಲಿ ನೋಡಿ

 

ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮನೆಯ ಯಜಮಾನಿಯ ಖಾತೆಗೆ  ಮಾಸಿಕ 2 ಸಾವಿರ ರೂ ಗೃಹಲಕ್ಷ್ಮಿ ಯೋಜನೆಯಲ್ಲಿ ಕೊಡಗು ಜಿಲ್ಲೆಯ ಫಲಾನುಭವಿಗಳಲ್ಲಿ ಇದುವರೆಗೆ 1,237ಮಂದಿಗೆ ವಿವಿಧ ಕಾರಣಗಳಿಂದ ಗೃಹಲಕ್ಷ್ಮಿ ಹಣ ಜಮೆ ಖಾತೆಗೆ ಆಗಿಲ್ಲ. ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಾಸಿಕ 2,000 ಖಾತೆಗೆ ಜಮೆ ಆಗಿದೆ. ಆದರೆ ಜನವರಿ ತಿಂಗಳಲ್ಲಿ 5,267 ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಇದೀಗ ಕೊಡಗು ಜಿಲ್ಲೆಯ ಐದು ತಾಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಮಿತಿ ರಚಿಸಿದ್ದು, ನಾಮಕಾವಸ್ಥೆಗೆ ಮಾತ್ರ ಸಮಿತಿ ಸೀಮಿತಗೊಳ್ಳದೆ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಾರದ ಹಣದ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಗಮನಹರಿಸಬೇಕಾಗಿದೆ.

 

ಈ-ಕೆವೈಸಿ ಮಾಡದ ಫಲಾನುಭವಿಗಳು

 

ಜನವರಿ ತಿಂಗಳಲ್ಲಿ 1 ಲಕ್ಷದ 7 ಸಾವಿರದ 141 ಮಂದಿ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. 5,624 ಫಲಾನುಭವಿಗಳಿಗೆ ಜನವರಿ ತಿಂಗಳ ಹಣ ಇದುವರೆಗೆ ಜಮೆ ಆಗಿಲ್ಲ. ಆದರೆ ಆಗಸ್ಟ್ ತಿಂಗಳಿನಿAದ ಇದುವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ ಕೂಡ ಎನ್.ಪಿ.ಸಿ.ಐ, ಈ.ಕೆ.ವೈಸಿ, ಮಾಡಿಸಲು ಬಾಕಿ ಉಳಿದಿರುವ 1,237 ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಇದುವರೆಗೆ ಗೃಹಲಕ್ಷ್ಮಿ ಭಾಗ್ಯ ಲಭಿಸಿಲ್ಲ.

ಮಡಿಕೇರಿ ತಾಲೂಕಿನಲ್ಲಿ 621, ಸೋಮವಾರಪೇಟೆ ತಾಲೂಕಿನಲ್ಲಿ 197, ಕುಶಾಲನಗರ ತಾಲೂಕಿನಲ್ಲಿ 173, ವಿರಾಜಪೇಟೆ 132 ಹಾಗೂ ಪೊನ್ನಂಪೇಟೆ ತಾಲೂಕಿನ 114 ಅರ್ಹ ಫಲಾನುಭವಿಗಳಿಗೆ ಇದುವರೆಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಆಗಿಲ್ಲ.

ಈ-ಕೆವೈಸಿ ಮಾಡಿಸಿದರು ಕೂಡ ಕೆಲವು ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ. ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕೆಂದು ಗೋಚರಿಸುತ್ತಿದೆ. ಕೆಲವು ಫಲಾನುಭವಿಗಳು ಎರಡು-ಮೂರು ಕಂತಿನ ಗೃಹಲಕ್ಷ್ಮಿ ಹಣವನ್ನು ಪಡೆದಿದ್ದರೂ ಮುಂದಿನ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕೆಂದು ತೋರಿಸುತ್ತಿದೆ. ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆದ ಕೂಡಲೇ ಫಲಾನುಭವಿಗಳು ಖಾತೆಯಿಂದ ಹಣ ತೆಗೆಯಲು ಬ್ಯಾಂಕ್‌ಗೆ ತೆರಳುವಾಗ ಆಧಾರ್ ಜೋಡಣೆ ಆಗಿಲ್ಲ ಎಂಬ ಕಾರಣಗಳಿಂದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಲು, ಬ್ಯಾಂಕ್‌ನಲ್ಲಿ ಕ್ರಮಹಿಸಲಾಗಿದೆ. ಫಲಾನುಭವಿಗಳ ಸಮಸ್ಯೆಗಳನ್ನು ಸರಿಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮವಹಿಸಲಾಗುತ್ತಿದೆ. ಈಗಾಗಲೇ ಒಂದು ಲಕ್ಷದ ಏಳು ಸಾವಿರದ 147 ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜನವರಿ ತಿಂಗಳ ಹಣ ಜಮೆ ಆಗಿದೆ. ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಮಾರ್ಚ್ 20 ರೊಳಗೆ ಜಮೆ ಆಗುವ ಸಾಧ್ಯತೆಗಳಿವೆ.

ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳಾಗಿರುವ ಮಡಿಕೇರಿ ತಾಲೂಕಿನ 1,634, ಸೋಮವಾರಪೇಟೆ 1,055, ಕುಶಾಲನಗರ 1,305, ವೀರಾಜಪೇಟೆ 837 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 763 ಮಂದಿಗೆ ಜನವರಿ ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಪ್ರಧಾನ ಕಚೇರಿಯಲ್ಲಿ ಪಾವತಿ ಪ್ರಕ್ರಿಯೆಯಲ್ಲಿದೆ ಎಂದು ತೋರಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಜನವರಿ ಅಂತ್ಯಕ್ಕೆ ಅರ್ಜಿ ಸಲ್ಲಿಸಿದವರ ಸಂಖ್ಯೆ, ಮಡಿಕೇರಿ ತಾಲೂಕಿನಲ್ಲಿ  30,093 ಇದರಲ್ಲಿ 28,459 ಫಲಾನುಭವಿಗಳಿಗೆ ಮಂಜೂರಾತಿಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 24,097 ಮಂದಿಯಲ್ಲಿ 25,042 ಫಲಾನುಭವಿಗಳಿಗೆ ಮಂಜೂರಾತಿಯಾಗಿದೆ. ಕುಶಾಲನಗರ ತಾಲೂಕಿನಲ್ಲಿ 21,714 ಫಲಾನುಭವಿಗಳಲ್ಲಿ 20,409 ಮಂದಿಗೆ ಮಂಜೂರಾತಿಯಾಗಿದೆ. ವೀರಾಜಪೇಟೆ ತಾಲೂಕಿನ 20,349 ಫಲಾನುಭವಿಗಳ ಪೈಕಿಯಲ್ಲಿ 19,512 ಮಂದಿಗೆ ಮಂಜೂರಾತಿಯಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 17,755 ಮಂದಿಯಲ್ಲಿ 17,962 ಫಲಾನುಭವಿಗಳಿಗೆ ಜನವರಿ ಅಂತ್ಯಕ್ಕೆ ಮಂಜೂರಾತಿಯಾಗಿದೆ. ಜನವರಿ ತಿಂಗಳ ಅಂತ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಶೇ.9 ಸಾಧನೆ ಮಾಡಲಾಗಿದೆ.