ಕಸದ ಪೇಟೆಯಾಗಿರುವ ಸೋಮವಾರಪೇಟೆ

 

 ತೆರೆದು ನೋಡುವವರು ಯಾರು ಟೆಂಡರ್ ಲಕೋಟೆ ?

 

ಕಳೆದ ಅನೇಕ ದಶಕಗಳಿಂದ ಇನ್ನಿಲ್ಲದಂತೆ ಕಾಡುತ್ತಿರುವ ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಈವರೆಗೆ ಪರಿಹಾರ ಕಂಡು ಕೊಳ್ಳುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ. ಆಡಳಿತಗಾರರು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಸವಿಲೇವಾರಿ ಸಮಸ್ಯೆ ಬೆಂಬಿಡದ ಭೂತದಂತೆ ಕಾಡುತ್ತಿದ್ದು, ಸ್ವಚ್ಛ ಸುಂದರ ಎಂದು ಕರೆದುಕೊಳ್ಳುವ ಸೋಮವಾರಪೇಟೆ ಕಸದ ಪೇಟೆಯಾಗಿ ಪರಿವರ್ತನೆ ಯಾಗಿದೆ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸಿಕ್ಕಸಿಕ್ಕ ಕಡೆಗಳಲ್ಲಿ ಗುಂಡಿ ತೆಗೆದು ಹೂಳಲಾಗುತ್ತಿದೆ. ಪಟ್ಟಣದ ಮಾರುಕಟ್ಟೆ, ಕುಡಿಯುವ ನೀರಿನ ಶುದ್ಧೀಕರಣ ಘಟಕ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಯಂತ್ರಗಳ ಮೂಲಕ ಗುಂಡಿ ತೆಗೆದು ತ್ಯಾಜ್ಯವನ್ನು ಹಾಕಿ ಮುಚ್ಚಲಾಗುತ್ತಿದೆ. ಪಂಚಾಯಿತಿ ಸಂಗ್ರಹಿಸುವ ತ್ಯಾಜ್ಯದಲ್ಲಿ ಚರಂಡಿ, ಹೊಟೇಲ್, ಮೆಡಿಕಲ್ ಕ್ಲಿನಿಕ್‌ಗಳು, ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಲ್ಯಾಬ್ ಸೇರಿದಂತೆ ಹಲವೆಡೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಎರಡು ಮೂರು ದಿನಗಳು ಸಂಗ್ರಹಿಸಿದ ತ್ಯಾಜ್ಯವನ್ನು ಶುದ್ಧ ಕುಡಿಯುವ ನೀರಿನ ಘಟಕದ ಬಳಿಯಲ್ಲಿ ಗುಂಡಿಮಾಡಿ, ಅದರಲ್ಲಿ ತ್ಯಾಜ್ಯವನ್ನು ಸುರಿದು ಮೇಲೆ ಮಣ್ಣು ಹಾಕಲಾಗುತ್ತಿದೆ. ಈ ಸ್ಥಳಕ್ಕೂ, ಶುದ್ಧ ನೀರು ಸರಬರಾಜಿನ ನೀರಿನ ತೊಟ್ಟಿಗಳಿಗೂ ಕೆಲವೇ ಅಡಿಗಳ ಅಂತರವಿದೆ. ತ್ಯಾಜ್ಯದಲ್ಲಿ ನೀರಿನ ಸಂಗ್ರಹವಿರುವುದು ಮತ್ತು ಮಳೆಯ ಶೀತದಿಂದ ಭೂಮಿಯ ಒಳಭಾಗ ದಲ್ಲಿಯೇ ತ್ಯಾಜ್ಯ ಕೊಳೆತು ಅದರ ನೀರು ಹರಿಯಲು ಪ್ರಾರಂಭಿಸಲಿದೆ. 

 ಮೊದಲೇ ಎಲ್ಲ ರಸ್ತೆಗಳಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ಹೆಚ್ಚಿನ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿವೆ. ಮಳೆಯೂ ಇಲ್ಲದಿರುವುದರಿಂದ ತ್ಯಾಜ್ಯಗಳು ಚರಂಡಿಯಲ್ಲಿ ತುಂಬಿ ಕೊಳಚೆ ನೀರು ಸರಾಗವಾಗಿ ಹರಿಯದ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿ 8 ವರ್ಷಗಳು ಕಳೆಯುತ್ತಾ ಬಂದರೂ, ಎಲ್ಲೆಡೆ ಬಳಸಲಾಗುತ್ತಿದೆ. ಹೊರ ಜಿಲ್ಲೆಯಿಂದ ಹಣ್ಣು ಮತ್ತು ತರಕಾರಿ ಮಾರುವವರು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ತಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದನ್ನು ಕಟ್ಟು ನಿಟ್ಟಾಗಿ ತಡೆಗಟ್ಟುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಪರಿಣಾಮ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದೆ. ಇಚ್ಛಾಶಕ್ತಿಯ ಕೊರತೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಯೋಜನೆ ಕಳೆದ 13 ವರ್ಷಗಳ ಹಿಂದೆಯೇ ಬಂದಿದ್ದರೂ ಈವರೆಗೆ ಪ್ರಗತಿ ಕಂಡಿಲ್ಲ. ಹೈಟೆಕ್ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಮೀಪದ ಸಿದ್ದಲಿಂಗಪುರದಲ್ಲಿ ಸ್ಥಳ ಖರೀದಿಸಿ, ಸುತ್ತಲೂ ಆವರಣಗೋಡೆಯನ್ನು ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಸಂಪೂರ್ಣ ವ್ಯವಸ್ಥೆ ಮಾಡಿಕೊಂಡು ತ್ಯಾಜ್ಯ ವಿಲೇವಾರಿಗೆ ಪಂಚಾಯಿತಿ ಈವರೆಗೆ ಮುಂದಾಗಿಲ್ಲ. 

ಪ್ರತಿ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಾದರೂ ನಂತರದ ದಿನಗಳಲ್ಲಿ ಮತ್ತೆ ಮೂಲೆಗುಂಪಾಗುತ್ತಿದೆ. ಹಠಹಿಡಿದು ಕೆಲಸ ಮಾಡುವ-ಕೆಲಸ ಮಾಡಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೊರತೆ ಸೋಮವಾರ ಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಎದ್ದು ಕಾಣುತ್ತಿದೆ. ಸಿದ್ಧಲಿಂಗಪುರದಲ್ಲಿ ಜಾಗ ಗುರುತು ಮಾಡಿದ ನಂತರ ಒಂದಿಷ್ಟು ಅಸಮಾಧಾನಗಳು ಬಂದಿದ್ದು, ಅವುಗಳನ್ನು ಸರಿಪಡಿಸಿ ವೈಜ್ಞಾನಿಕ ಕಸವಿಲೇವಾರಿ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದೀಗ ಘಟಕದಲ್ಲಿ ಶೆಡ್, ಯಂತ್ರೋಪಕರಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ೮೨ ಲಕ್ಷ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಕೆಲಸ ಆರಂಭಿಸುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ  ತಿಳಿಸಿದ್ದಾರೆ. ಪ್ರಸ್ತುತ ಪಟ್ಟಣ ಪಂಚಾಯಿತಿ ಯಲ್ಲಿ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ತಾಲೂಕು ತಹಶೀಲ್ದಾರ್ ಅವರು ಆಡಳಿತಾಧಿ ಕಾರಿಯಾಗಿದ್ದಾರೆ. ನೂತನವಾಗಿ ಆಗಮಿಸಿರುವ ತಹಶೀಲ್ದಾರ್ ನವೀನ್‌ಕುಮಾರ್ ಅವರು ಈ ಬಗ್ಗೆ ಆದ್ಯತೆಯ ಮೇರೆ ಗಮನ ಹರಿಸಬೇಕಿದೆ.  

 

ಚಿಕ್ಕಪಟ್ಟಣದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಮಾರುಕಟ್ಟೆ ಆವರಣಕ್ಕೆ ತ್ಯಾಜ್ಯ ತಂದು ರಾಶಿ ಹಾಕಿ ಬೆಂಕಿ ಹಾಕುತ್ತಿದ್ದಾರೆ.
ಚಿಕ್ಕಪಟ್ಟಣದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಮಾರುಕಟ್ಟೆ ಆವರಣಕ್ಕೆ ತ್ಯಾಜ್ಯ ತಂದು ರಾಶಿ ಹಾಕಿ ಬೆಂಕಿ ಹಾಕುತ್ತಿದ್ದಾರೆ.

 

ಜನವಸತಿ ಪ್ರದೇಶದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕ ಬಾರದು ಎಂಬ ಆದೇಶವಿದ್ದರೂ ಸಹ ಅದರ ಪಾಲನೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಪಂಚಾಯಿತಿ ವತಿಯಿಂದ ಸಿದ್ಧಲಿಂಗಪುರದಲ್ಲಿ ಜಾಗ ಖರೀದಿಸಿದ್ದು, ತ್ಯಾಜ್ಯ ವಿಲೇವಾರಿ ಕಾಮಗಾರಿ ಆಮೆಗತಿಯನ್ನೂ ನಾಚಿಸುವಂತೆ ನಡೆಯುತ್ತಿದೆ. ಸಿದ್ಧಲಿಂಗಪುರದಲ್ಲಿ ನಿರ್ಮಾಣ ವಾಗುತ್ತಿರುವ ಹೈಟೆಕ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ 2015ರಲ್ಲಿಯೇ ಷೆಡ್ ನಿರ್ಮಾಣ ಮಾಡಲು ರೂ. 34 ಲಕ್ಷಕ್ಕೆ ಡಿಪಿಆರ್ ಆಗಿತ್ತು. ನಿಗದಿತ ಸಮಯದಲ್ಲಿ ಕೆಲಸ ಆರಂಭಗೊಳ್ಳದ ಹಿನ್ನೆಲೆ ಯೋಜನಾ ವೆಚ್ಚ ದುಪ್ಪಟ್ಟಾಗಿದೆ.  ಪ್ರಸ್ತುತ 82 ಲಕ್ಷ ವೆಚ್ಚದ ಯೋಜನೆಗೆ ಜಿಲ್ಲಾಧಿಕಾರಿಗಳ ಮೂಲಕ ಡಿಎಂಎAಗೆ ಡಿಪಿಆರ್ ಕಳುಹಿಸಲಾಗಿದೆ.  ಹೈಟೆಕ್ ನೂತನ ಶೆಡ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನಾದರೂ ಹಲವು ದಶಕಗಳ ಸಮಸ್ಯೆಯಿಂದ ಪಟ್ಟಣ ಮುಕ್ತಿ ಕಾಣಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.