ಪಾಳುಬಿದ್ದಿರುವ ಕೆ.ಎಸ್.ಎಸ್.ಐ.ಡಿ.ಸಿ ಕಟ್ಟಡ

ಶಾಸಕರೇ.. ಜಿಲ್ಲಾಧಿಕಾರಿಗಳೇ ಗಮನಿಸಿ- ಇಲ್ಲೊಂದು ದೊಡ್ಡ ಕಟ್ಟಡ ಪಾಳು ಬಿದ್ದಿದೆ.. ಇದನ್ನು ಸ್ವಾಧೀನಪಡಿಸಿಕೊಳ್ಳಿ....

 ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದ ಹೃದಯಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಬೃಹತ್ ಕಟ್ಟಡವೊಂದು ಭೂತ ಬಂಗಲೆಯಂತೆ ನಿಂತಿದೆ. ಈ ಕಟ್ಟಡ ಯಾತಕ್ಕಾಗಿ ಬಳಕೆಯಾಗಲಿದೆ? ಇಲ್ಲೇನು ಚಟುವಟಿಕೆಗಳು ಆರಂಭಗೊಳ್ಳಲಿದೆ ಎಂಬುದು ಸುಮಾರು 15 ವರ್ಷಗಳಿಂದಲೂ ರಹಸ್ಯವಾಗಿಯೇ ಉಳಿದಿದೆ. ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯ ಹಿಂಬದಿಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮಕ್ಕೆ ಸೇರಿರುವ ಜಾಗ (ಕೆ.ಎಸ್.ಎಸ್.ಐ.ಡಿ.ಸಿ)ದಲ್ಲಿ ಈ ಬೃಹತ್ ಕಟ್ಟಡವಿದೆ. ಇದು ನಿರ್ಮಾಣಗೊಂಡು ಸುಮಾರು 15 ವರ್ಷಗಳೇ ಕಳೆದಿವೆ ಎಂಬುದು ನಗರದ ಜನತೆಗೆ ತಿಳಿದಿದೆ. ಆದರೆ ಯಾತಕ್ಕಾಗಿ ಈ ಕಟ್ಟಡ ನಿರ್ಮಿಸಲಾಗಿದೆ ಎಂಬುದು ಮಾತ್ರ ಯಾರಿಗೂ ಅರಿವಿಲ್ಲ. ವಾಣಿಜ್ಯ ಸಂಕೀರ್ಣದ ಮಾದರಿಯಲ್ಲಿ ಹಲವು ಕೊಠಡಿಗಳನ್ನು ಒಳಗೊಂಡಂತೆ ಈ ಕಟ್ಟಡವಿದ್ದು, ಎಲ್ಲಾ ಕೊಠಡಿಗಳಿಗೂ ಶಟರ್ ಅಳವಡಿಸಲ್ಪಟ್ಟಿದೆ. ಕೆ.ಎಸ್.ಎಸ್.ಐ.ಡಿ.ಸಿಗೆ ಸಂಬಂಧಿಸಿದ ಚಟುವಟಿಕೆಗಳು ಆರಂಭಗೊಳ್ಳಬಹುದೇನೋ ಎಂಬ ಊಹೆಗಳಿತ್ತಾದರೂ ಇದರ ಯಾವುದೇ ಲಕ್ಷಣಗಳು ಈತನಕ ಕಂಡು ಬಂದಿಲ್ಲ. ವಿಶಾಲ ಜಾಗದಲ್ಲಿ ಸುಮಾರು ಮೂರು ಅಂತಸ್ತುಗಳಿರುವ ಕಟ್ಟಡ ನಿರ್ಮಾಣಕ್ಕೆ ಈತನಕ ಹಲವು ಕೋಟಿಗಳು ವ್ಯಯವಾಗಿದೆ.

 

ಶೌಚಾಲಯ - ಸಾವಿನ ಮನೆ

 

ಬೃಹತ್ ಕಟ್ಟಡ ಇದೀಗ ಹಲವರಿಗೆ ಶೌಚಾಲಯವಾಗಿ ಮಾರ್ಪಟ್ಟಿದೆ. ಬಿಕ್ಷುಕರು ಹಲವು ಮಂದಿ ಈ ಹಿಂದೆ ಇಲ್ಲೇ ಆಶ್ರಯ ಪಡೆಯುತ್ತಿದ್ದು, ಓರ್ವ ವ್ಯಕ್ತಿ ಇದರೊಳಗೇ ಸತ್ತು ಹಲವು ದಿನಗಳ ಬಳಿಕ ದೇಹ ಕೊಳೆತು ವಾಸನೆ ಬಂದ ಮೇಲಷ್ಟೇ ಪ್ರಕರಣ ಹೊರಬಂದಿದೆ. ಇನ್ನು ಹಲವು ಮಂದಿ ಈ ಕಟ್ಟಡಕ್ಕೆ ಸೇರಿದ ಖಾಲಿ ಜಾಗದಲ್ಲೇ ಉದ್ಯಮ ವಿಸ್ತರಿಸಿದ್ದು, ಹಲವರು ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲು ಬಳಸುತ್ತಿದ್ದಾರೆ. 

 

ಚಿಂತನೆ ಏನಿತ್ತು?

 

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು 25 ವರ್ಷಗಳ ಹಿಂದೆ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್  ಎಕ್ವಿಪ್ಮೆಂಟ್ ಗಳ ಜೋಡಣಾ ಘಟಕ ಮಾಡಿ ಆ ಮೂಲಕ ನೆರವು ಕಲ್ಪಿಸುವ ಚಿಂತನೆಯೊAದಿಗೆ ಈ ಯೋಜನೆ ರೂಪಿತವಾಗಿತ್ತು. ನಿಗಮದಲ್ಲಿ ಜಿಲ್ಲೆಯವರಾದ ಟಿ.ಪಿ. ರಮೇಶ್ ಅವರು ಅಧ್ಯಕ್ಷರಾಗಿದ್ದ ಸಂದರ್ಭ ಇದರ ಚರ್ಚೆ ನಡೆದಿತ್ತಾದರೂ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿದ ಬಳಿಕ ಇದು ಕಾರ್ಯಾರಂಭವಾಗಿತ್ತು. ಕಟ್ಟಡ ನಿರ್ಮಾಣ ಯೋಜನೆಯ ಗುತ್ತಿಗೆ ಪಡೆದು ಗುತ್ತಿಗೆದಾರರು ಇದನ್ನು ಪರಿಪೂರ್ಣಗೊಳಿಸಲಿಲ್ಲ ಎನ್ನಲಾಗಿದೆ. ಜಿಲ್ಲೆಯ ಕೆಡಿಪಿ ಸಭೆಗಳಲ್ಲೂ ಈ ವಿಚಾರ ಪ್ರಸ್ತಾಪಗೊಂಡು ಒಂದೆರೆಡು ಬಾರಿ ಕೆ.ಎಸ್.ಎಸ್.ಐ.ಡಿ.ಸಿ ಯ ಅಧಿಕಾರಿಗಳನ್ನೂ ಈ ಸಭೆಗೆ ಕರೆಸಿ ಚರ್ಚಿಸಲಾಗಿತ್ತು. ಏನೇ ಆದರೂ ಅರ್ಧದಲ್ಲಿ ಸ್ಥಗಿತಗೊಂಡ ಈ ಕೆಲಸ ಮತ್ತೆ ತಲೆ ಎತ್ತದೆ ಇದೀಗ 15ಕ್ಕೂ ಅಧಿಕ ವರ್ಷಗಳಾಗಿದ್ದು ಕಟ್ಟಡ ಭೂತಬಂಗಲೆಯಂತಿದೆ. 

 

ಮಾರಾಟ ಪ್ರಯತ್ನ

 

ಇದರ ನಡುವೆ ಈ ಕಟ್ಟಡವನ್ನು ಹೇಗಿದಿಯೋ ಅದೇ ಸ್ಥಿತಿಯಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ. ಸರಕಾರದ ಇಲಾಖೆಗೆ ಮಾರಾಟ ಮಾಡುವುದೋ ಅಥವಾ ಖಾಸಗಿಯವರಿಗೆ ಬಿಡುವುದೋ ಎಂಬ ಜಿಜ್ಞಾಸೆಯ ನಡುವೆ ಮತ್ತೆ ಹಲವು ವರ್ಷಗಳು ಉರುಳಿವೆ. ಯಾರು ಮುಂದೆ ಬಾರದ್ದರಿಂದ ಈ ಪ್ರಯತ್ನವೂ ನೆನೆಗುದಿಗೆ ಬಿದ್ದಿದೆ.  ಇದೀಗ ಮತ್ತೆ ಮಾರಾಟದ ಪ್ರಯತ್ನ ಮುಂದುವರಿಯುತ್ತಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಂಡುಕೊಳ್ಳಲು ಮುಂದಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದು ಒಂದು ಸುದ್ದಿ. ಇದರ ನಡುವೆ ಖಾಸಗಿ ವ್ಯಕ್ತಿಯೋರ್ವರು ತಾವು ಕೊಂಡುಕೊಳ್ಳಲು ಸಿದ್ಧವಿರುವುದಾಗಿ ಮುಂದೆ ಬಂದಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. 

 

ಅನುಕೂಲ ಕಲ್ಪಿಸಲಾಗದೇ?

 

ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಗೆ ಅವಕಾಶ ಕಡಿಮೆಯಿದೆ. ಆದರೆ ಈ ಸ್ಥಳವನ್ನು ಬಳಸಿ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ಕೆಲವೊಂದು ಹೊಸ ರೀತಿಯ ಕ್ರಿಯಾಶೀಲ ಪ್ರಯತ್ನ ನಡೆಸಲು ಸಾಧ್ಯವಿಲ್ಲವೇ ಎಂಬುದು ಹಲವರ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಸಮಗ್ರವಾಗಿ ಅವಲೋಕನ ನಡೆಸಿ ಪ್ರಗತಿಯ ಚಿಂತನೆಯೊಂದಿಗೆ ಹೊಸ ಯೋಜನೆ ಜಾರಿಗೆ ತರಲು ಮುಂದಾದಲ್ಲಿ ಒಂದಷ್ಟು ಉಪಯೋಗವಾಗಬಹುದು ಎಂಬುದು ಒಂದು ಸಲಹೆಯಾಗಿದೆ.  ನಿಗಮದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರ ನಿಲುವು ಇದಾಗಿದೆ. ಮಾರಾಟದ ಬದಲಾಗಿ ಸಣ್ಣ ಕೈಗಾರಿಕಾ ಚಟುವಟಿಕೆಗೆ ಉತ್ತೇಜನ ನೀಡಲು ಸಾಧ್ಯವಾಗದೇ ಎಂಬದು ಪ್ರಶ್ನೆಯಾಗಿದ್ದು ಹೊಸ ಚಿಂತನೆಗೆ ಈಗಿನ ಶಾಸಕರು, ಜಿಲ್ಲಾಡಳಿತ ಮುಂದಾಗುವರೇ ಕಾದು ನೋಡಬೇಕಿದೆ. 

 

ಜಿಲ್ಲಾಧಿಕಾರಿಗಳು ಸ್ವಾಧೀನಕ್ಕೆ ಪಡೆಯಲಿ

 

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅದೆಷ್ಟೋ ಸರಕಾರಿ ಕಚೇರಿಗಳು ಸ್ವಂತ ಕಟ್ಟಡವಿಲ್ಲದೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಕಟ್ಟಡಗಳನ್ನು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿಗಳು ಜಿಲ್ಲಾ ಜನಪ್ರತಿನಿಧಿಗಳ ನೆರವು ಪಡೆದು ಸಂಬಂಧಿತ ಇಲಾಖೆಯೊಂದಿಗೆ ವ್ಯವಹರಿಸಬಹುದಾಗಿದೆ. ಸರ್ಕಾರದೊಂದಿಗೆ ವ್ಯವಹರಿಸಿ ಈ ಕಟ್ಟಡವನ್ನು ಖರೀದಿಸಲು ಅನುದಾನ ಪಡೆದು ವಿವಿಧ ಇಲಾಖೆಗಳಿಗೆ ಕಟ್ಟಡ ನೀಡಬಹುದಾಗಿದೆ. ಇಲ್ಲವೇ ಖಾಸಗಿ ಕಟ್ಟಡಗಳಿಗೆ ನೀಡುವ ಬಾಡಿಗೆಯನ್ನು ಈ ಕಟ್ಟಡದ ಮಾಲೀಕತ್ವದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ನೀಡಬಹುದಾಗಿದೆ. ಈ ವಿಷಯದ ಕುರಿತು ಶಾಸಕ ಮಂಥರ್‌ಗೌಡ ಅವರು ಕೂಡ ಗಮನಹರಿಸಬೇಕಿದೆ.