ಅತ್ಯಾಡಿ ನಿವಾಸಿಗಳಿಗೆ ಮರದ ಪಾಲವೇ ಆಸರೆ..!

ಸುತ್ತಲೂ ದಟ್ಟಾರಣ್ಯ,ಹಚ್ಚ ಹಸಿರಿನಿಂದ ಕೂಡಿದ ಗ್ರಾಮ.ಈ ಗ್ರಾಮಕ್ಕೆ ತಲುಪಬೇಕೆಂದರೆ ಕೊಡಗು-ದಕ್ಷಿಣ ಕೊಡಗು  ಗಡಿಯಲ್ಲಿರುವ ಕಲ್ಲುಗುಂಡಿಯಿಂದ 9 ಕಿ. ಮೀ. 4 ವ್ಹೀಲ್ ಡ್ರೈವ್ ಜೀಪ್‌ನಿಂದ ಮಾತ್ರ ಸಾಧ್ಯ.ಕಲ್ಲು, ಗುಂಡಿಗಳು, ಕೆಸರುಮಯವಾದ  ಕಿರಿದಾದ ರಸ್ತೆಯಲ್ಲಿ ಗ್ರಾಮಕ್ಕೆ ತಲುಪಿದರೆ, ಮನೆ ತಲುಪುವಷ್ಟರಲ್ಲಿ ಜೀವ ಕೈಗೆ ಬಂದಿರುತ್ತದೆ. ಉಕ್ಕಿ ಹರಿಯುತ್ತಿರುವ ಉಂಬಳೆ ಹೊಳೆಯನ್ನು ಅಡಿಕೆ ಮರದಲ್ಲಿ ನಿರ್ಮಿಸಿರುವ ಪಾಲದಲ್ಲಿ ಅಪಾಯಕಾರಿ ನಡಿಗೆ ಮೂಲಕ ದಾಟಿ ಮನೆ ತಲುಪಬೇಕು.ಕೊಂಚ ಕಾಲು ಜಾರಿದರೂ ಕೂಡ ಈ ಗ್ರಾಮಸ್ಥರಿಗೆ ಅಪಾಯ ಗ್ಯಾರಂಟಿ. ಕಳೆದ ಐದು ದಶಕಗಳಿಂದ  ಈ ರೀತಿಯ ಕರುಣಾಜನಕ ಬದುಕು ಸಾಗಿಸುತ್ತಿರುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಡಿ ಭಾಗವಾದ ಎಂ.ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಉಂಬಳೆ ಗ್ರಾಮಸ್ಥರು.

 ಪ್ರತೀ ವರ್ಷ ಮಳೆಗಾಲದಲ್ಲಿ ಅತ್ಯಾಡಿ ಉಂಬಳೆ ಗ್ರಾಮವು ದ್ವೀಪದಂತಾಗುತ್ತದೆ. ಮಳೆಗಾಲದ ಮೂರು ತಿಂಗಳು ಅತ್ಯಾಡಿ ಗ್ರಾಮಸ್ಥರಿಗೆ ಹೊರಗಿನ ಪ್ರಪಂಚವೇ ಕಣ್ಮರೆಯಾಗುತ್ತದೆ. ಕಾರಣವೇನೆಂದರೆ ಈ ಗ್ರಾಮದ ಜನರಿಗೆ ಹೊಳೆ ದಾಟಲು ಸೇತುವೆ ಇಲ್ಲದಿರುವುದು. ಬೇಸಿಗೆಯಲ್ಲಿ ಉಂಬಳೆ ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ  ಹೊಳೆಯನ್ನು ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಉಂಬಳೆ ಹೊಳೆಯು ಉಕ್ಕಿ ಹರಿಯುತ್ತದೆ. ಈ ವೇಳೆ  ಗ್ರಾಮಸ್ಥರಿಗೆ ಮನೆ ಸೇರಲು ಅಡಿಕೆಯಲ್ಲಿ ನಿರ್ಮಿಸಿರುವ ಪಾಲವೇ ಆಸರೆ. ಳೆಗಾಲದಲ್ಲಿ ಅಡಿಕೆ ಮರದ ಪಾಲದ ಮಟ್ಟಕ್ಕೆ ನೀರು ಹರಿಯುತ್ತದೆ.  ಮಳೆಗಾಲದಲ್ಲಿ ಅಡಿಕೆ ಮರದ ಪಾಲವನ್ನು ದಾಟಲು ಹರಸಾಹಸ ಪಡಬೇಕು. ಕಳೆದ ಮೂವತ್ತು ವರ್ಷಗಳಿಂದ ಶಾಶ್ವತವಾದ ಸೇತುವೆಗಾಗಿ ಮನವಿ ಸಲ್ಲಿಸಿದರೂ ಕೂಡ ಆಡಳಿತ ವರ್ಗದವರು ಅತ್ಯಾಡಿ ಗ್ರಾಮಸ್ಥರ ಸಹಾಯಕ್ಕೆ ಮುಂದಾಗಿಲ್ಲ.

ಅಪಾಯಕಾರಿ ನಡಿಗೆಗೆ ಇಲ್ಲವೇ ಮುಕ್ತಿ?

ಅತ್ಯಾಡಿ ಗ್ರಾಮದಲ್ಲಿ 9 ಕುಟುಂಬಗಳಲ್ಲಿ  ವಿದ್ಯಾರ್ಥಿಗಳು ಸೇರಿ 35ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.ಇವರೆಲ್ಲರಿಗೂ ತಮ್ಮ ಮನೆ ಸೇರಬೇಕೆಂದರೆ ಉಂಬಳೆ ಹೊಳೆ ದಾಟಬೇಕು. ಉಂಬಳೆ ಹೊಳೆ ದಾಟಲು ಅಡಿಕೆ ಮರದ ಪಾಲವೇ ಅತ್ಯಾಡಿ ಗ್ರಾಮಸ್ಥರಿಗೆ ಆಸರೆ. ಆದರೆ ಪ್ರತೀ ವರ್ಷ ಅಡಿಕೆ ಮರದಲ್ಲಿ ನಿರ್ಮಿಸಿರುವ ಪಾಲವು ಮುರಿದು ಬೀಳುತ್ತದೆ. ಪಾಲದ ಎರಡು ಬದಿಗಳಲ್ಲಿ ಕೂಡ ಯಾವುದೇ ಸುರಕ್ಷತೆ ಇಲ್ಲ.ಪಾಲದಲ್ಲಿ ತಮ್ಮ ಕೈ ಬಿಟ್ಟು,ಜೀವ ಕೈಯಲ್ಲಿ ಹಿಡಿದು ಅಪಾಯಕಾರಿ ನಡಿಗೆ ಮೂಲಕ ಮನೆ ಸೇರಬೇಕು.

ಕಳೆದ ಒಂದು ವಾರ ಹಿಂದೆಯಷ್ಟೇ ಅತ್ಯಾಡಿ ಗ್ರಾಮಸ್ಥರು ಅಡಿಕೆ ಮರದಲ್ಲಿ ಹೊಸ ಪಾಲವನ್ನು ನಿರ್ಮಿಸಿದ್ದಾರೆ. ಪ್ರತೀ ವರ್ಷ ಅಡಿಕೆ ಪಾಲ ಕೈ ಕೊಡುತ್ತದೆ. ಅಡಿಕೆ ಪಾಲ ನಿರ್ಮಿಸಲು ೫ ರಿಂದ ಏಳು ಸಾವಿರ ರೂ ಖರ್ಚಾಗುತ್ತದೆ. ಆದರೆ ಚೆಂಬು ಗ್ರಾಮ ಪಂಚಾಯತಿ ಅಡಿಕೆ ಪಾಲವನ್ನು ನಿರ್ಮಿಸಲು ಕೇವಲ ಒಂದು ಸಾವಿರ ರೂ. ನೀಡಿ ಕೈ ತೊಳೆದುಕೊಳ್ಳುತ್ತದೆ. ಉಳಿದ ಹಣವನ್ನು ಗ್ರಾಮಸ್ಥರೇ ಹಾಕಿ ತಾತ್ಕಾಲಿಕವಾಗಿ (ಮೊದಲ ಪುಟದಿಂದ) ಪ್ರತೀ ವರ್ಷ ಪಾಲವನ್ನು ನಿರ್ಮಿಸುತ್ತಿದ್ದಾರೆ. ಮಳೆಗಾಲದಲ್ಲಿ ದ್ವೀಪದಂತಾಗುವ ಗ್ರಾಮಕ್ಕೆ ಹೊರಗಿನ ಸಂಪರ್ಕ ಕಡಿತಗೊಳ್ಳುತ್ತದೆ. ಅಡಿಕೆ ಪಾಲದ ಮಟ್ಟಕ್ಕೆ  ಉಂಬಳೆ ಹೊಳೆ ಹರಿಯುತ್ತಿರುವ ಸಂದರ್ಭದಲ್ಲಿ ಅಡಿಕೆ ಪಾಲದಲ್ಲಿ ದಾಟಲು ಗ್ರಾಮಸ್ಥರು ಮುಂದಾಗುವುದಿಲ್ಲ. ಮಳೆಗಾಲದಲ್ಲಿ ಮನೆಗೆ ಬೇಕಾದ ಮೂರು ತಿಂಗಳ ದಿನಸಿ ವಸ್ತುಗಳನ್ನು ಮೊದಲೇ  ಶೇಖರಣೆ ಮಾಡಿ ಇಟ್ಟಿರುತ್ತಾರೆ. ಅಡಿಕೆ ಪಾಲದಲ್ಲಿ ಅಪಾಯಕಾರಿ ನಡಿಗೆಗೆ ಮೂರು ದಶಕಗಳಿಂದ ಇದುವರೆಗೆ ಮುಕ್ತಿಯೇ ಸಿಕ್ಕಿಲ್ಲ.

ಪಾಲದಲ್ಲಿ ಬೆನ್ನ ಹಿಂದೆ ಹೊತ್ತುಕೊಂಡು ಆಸ್ಪತ್ರೆ ಸೇರಿದ್ದರು!

ಅತ್ಯಾಡಿ ಗ್ರಾಮದಲ್ಲಿ ಒಬ್ಬ ವಿಶೇಷ ಚೇತನನಿದ್ದಾನೆ. ತಿಂಗಳುಗಳ ಹಿಂದೆ ನಿತ್ಯಾನಂದ ಅತ್ಯಾಡಿ ಎಂಬ ವಿಶೇಷಚೇತನರಿಗೆ ಆರೋಗ್ಯದಲ್ಲಿ ಏರುಪೇರಾದಾಗ ಹೊಳೆ ದಾಟಲು ಸಾಧ್ಯವಾಗದೆ ಅಡಿಕೆ ಪಾಲದಲ್ಲಿ ಬೆನ್ನ ಹಿಂದೆ ಹೊತ್ತುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ ಘಟನೆ ಕೂಡ  ನಡೆದಿದೆ. ಗ್ರಾಮದಲ್ಲಿ ಏಳಕ್ಕೂ ಹೆಚ್ಚು ಮಂದಿ ವಯೋವೃದ್ಧರಿದ್ದಾರೆ. ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ವಯಸ್ಸಾದವರಿಗೆ  ಹೊಳೆ ದಾಟಲು ಕಷ್ಟಸಾಧ್ಯ.ಅವರನ್ನು ಬೆನ್ನ ಹಿಂದೆ ಹೊತ್ತುಕೊಂಡು ಅಡಿಕೆ ಮರದ ಪಾಲವನ್ನು ದಾಟಬೇಕು. ಅಡಿಕೆ ಪಾಲದಲ್ಲಿ ನಡೆಯುವಾಗ ಕೊಂಚ ಆಯತಪ್ಪಿದರು ಕೂಡ ನದಿಯಲ್ಲಿರುತ್ತಾರೆ. ಆರೋಗ್ಯದಲ್ಲಿ ಏರುಪೇರಾದರೆ  ಒಂಭತ್ತು ಕಿ.ಮೀ. ದೂರದ ಕಲ್ಲುಗುಂಡಿ ಪಟ್ಟಣಕ್ಕೆ ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ಜೀಪಿನಲ್ಲೇ ಬರಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಕ್ಕೆ ಆ್ಯಂಬ್ಯುಲೆನ್ಸ್ ಕೂಡ ಬರಲು ಸಾಧ್ಯವೇ ಇಲ್ಲ. ಕಲ್ಲುಗುಂಡಿಯಿಂದ ಅತ್ಯಾಡಿ ಗ್ರಾಮಕ್ಕೆ ತಲುಪಲು ಜೀಪ್‌ನಲ್ಲಿ ಕನಿಷ್ಟ ಒಂದು ಗಂಟೆ ಪ್ರಯಾಣ ಅಗತ್ಯವಿದೆ. ಬೇರೆ ಯಾವುದೇ ವಾಹನಕ್ಕೆ ಗ್ರಾಮಕ್ಕೆ ಬರಲು ಕಷ್ಟ ಸಾಧ್ಯ. ಕಲ್ಲುಗುಂಡಿಯಿಂದ ಅತ್ಯಾಡಿ ಗ್ರಾಮಕ್ಕೆ 700 ರೂ ಬಾಡಿಗೆ ನೀಡಿ ಬರಬೇಕಾದ ಅನಿವಾರ್ಯತೆ ಇದೆ.

ಮನೆ ಸೇರಲು ಸೇತುವೆ ಇಲ್ಲ, ವಿದ್ಯಾರ್ಥಿಗಳಿಗೆ ಹಾಸ್ಟಲ್ ಆಸರೆ

ಅತ್ಯಾಡಿ ಗ್ರಾಮದ ವಿದ್ಯಾರ್ಥಿಗಳಿಗೆ ತಮ್ಮ ತಂದೆ-ತಾಯಿಯರೊಂದಿಗೆ ಜೀವನ ನಡೆಸುವ ಭಾಗ್ಯವೇ ಇಲ್ಲದಂತಾಗಿದೆ. ಕಾರಣವೇನೆಂದರೆ ಅತ್ಯಾಡಿ ಗ್ರಾಮದಿಂದ ಶಾಲಾ-ಕಾಲೇಜು ತಲುಪಲು ಕಲ್ಲುಗುಂಡಿ ಅಥವಾ ಸುಳ್ಯಕ್ಕೆ ತೆರಳಬೇಕು. ಮಳೆಗಾಲದಲ್ಲಿ ದ್ವೀಪದಂತಾಗುವ ಗ್ರಾಮ ಹೊರ ಪ್ರಪಂಚದ ಸಂಪರ್ಕವನ್ನು ಕಳೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ತಮ್ಮ ಸಂಬಂಧಿಕರ ಮನೆಯಲ್ಲಿಯೇ ತಂಗಿ ಶಿಕ್ಷಣ ಪಡೆಯುವಂತಹ ಪರಿಸ್ಥಿತಿ ಇದೆ. ಅತ್ಯಾಡಿ ಗ್ರಾಮದ ಎರಡನೇ ತರಗತಿ ವಿದ್ಯಾರ್ಥಿ ಕೂಡ ತಮ್ಮ ಅಜ್ಜಿ ಮನೆಯಲ್ಲಿಯೇ ನಿಂತು ಶಾಲೆಗೆ ತೆರಳುತ್ತಿದ್ದಾರೆ.ಶಾಲಾ-ಕಾಲೇಜು ರಜಾ ದಿನಗಳಲ್ಲಿ ಕೂಡ ವಿದ್ಯಾರ್ಥಿಗಳು ಮನೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರಣವೇನೆಂದರೆ ಅತ್ಯಾಡಿ ಗ್ರಾಮದಲ್ಲಿ ನೆಟ್ವರ್ಕ್ ಇಲ್ಲವೇ ಇಲ್ಲ. ತುರ್ತು ಸಂದರ್ಭದಲ್ಲಿ ಕೂಡ ಕರೆ ಮಾಡಲು ಕೂಡ ನೆಟ್ವರ್ಕ್ ಸಿಗುವುದಿಲ್ಲ. ನೆಟ್ವರ್ಕ್ ಸಿಗಬೇಕೆಂದರೆ ತೋಟದ ಅಡಿಕೆ ಮರವನ್ನೇರಬೇಕು.

ತೋಟದ ಕೆಲಸಗಳಿಗೆ ಬಾರದ ಕಾರ್ಮಿಕರು

ಅತ್ಯಾಡಿ ಗ್ರಾಮದಲ್ಲಿ ಒಂದೆರೆಡು ಎಕರೆ ಅಡಿಕೆ ತೋಟವನ್ನು ಬೆಳೆಸಿ ಗ್ರಾಮಸ್ಥರು ಜೀವನ ನಡೆಸುವವರಿ ದ್ದಾರೆ. ಆದರೆ ಅಡಿಕೆ ಹಾಗೂ ಕರಿಮೆಣಸು ಕೊಯ್ಲಿನ ಅವಧಿಯಲ್ಲಿ ದುಬಾರಿ ಸಂಬಳ ನೀಡಿದರೂ ಕೂಡ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ. ಅಡಿಕೆ ಮತ್ತು ಕಾಳುಮೆಣಸನ್ನು ತಾವೇ ಕೊಯ್ಲು ಮಾಡುವಂತಹ ಪರಿಸ್ಥಿತಿ ಅತ್ಯಾಡಿ ಗ್ರಾಮಸ್ಥರದ್ದು. ಅದಲ್ಲದೇ ತೋಟಕ್ಕೆ ದಿನನಿತ್ಯ ಕಾಡಾನೆಗಳು ಲಗ್ಗೆಯಿಡುತಿವೆ. ಕಾಡಿನಿಂದ ಮನೆಯ ಭಾಗಕ್ಕೆ ಕಾಡಾನೆಗಳು ಲಗ್ಗೆಯಿಡದಂತೆ ಗ್ರಾಮಸ್ಥರು ಜಲವಿದ್ಯುತ್ ತಂತಿ ಬೇಲಿ ನಿರ್ಮಿಸಿ ಸ್ವಯಂ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅದಲ್ಲದೇ ವಿದ್ಯುತ್ ಸಮಸ್ಯೆಗೆ ಜಲವಿದ್ಯುತ್ ಕಿರುಘಟಕ, ಕುಡಿಯುವ ನೀರಿಗಾಗಿ ಹೊಳೆ ಯಿಂದ ಪೈಪ್‌ಲೈನ್ ಹಾಕಿ ಸಮಸ್ಯೆಗೆ ತಾವೇ ಪರಿಹಾರ ಕಂಡು ಕೊಂಡಿದ್ದಾರೆ.  ಮಳೆಗಾಲದಲ್ಲಿ ದ್ವೀಪದಂದಾಗುವ ಅತ್ಯಾಡಿ ಗ್ರಾಮಕ್ಕೆ ಶಾಶ್ವತವಾದ ಸೇತುವೆ ಅನಿವಾರ್ಯ ವಾಗಿದೆ. ಅಡಿಕೆ ಪಾಲದಲ್ಲಿ ಅಪಾಯಕಾರಿ ನಡಿಗೆ ಮೂಲಕ  ಅನಾಹುತ ಸಂಭವಿಸುವ ಮೊದಲು ಆಡಳಿತ ವರ್ಗ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕರು ಎಚ್ಚೆತ್ತುಕೊಂಡು ಪರಿಹಾರ ನೀಡಬೇಕಾಗಿದೆ.