ನೀರಿನಲ್ಲಿ ತೇಲಿ ಬರುವ ಒಣಕಸ ತಡೆಯಲು ವಿಶೇಷ ಪ್ರಯತ್ನ

ಕೀರೆಹೊಳೆಯಲ್ಲಿ 'ಟ್ರ್ಯಾಷ್ ಬೂಮ್' ಅಳವಡಿಕೆ

 ಕ್ಲೀನ್ ಕೂರ್ಗ್ ಸಂಸ್ಥೆ ವಿಶೇಷ ಪ್ರಯತ್ನ

ಮನೆಯಲ್ಲಿರುವ ಪ್ಲಾಸ್ಟಿಕ್ ಉತ್ಪನ್ನಗಳು ಸೇರಿದಂತೆ ಇನ್ನಿತರ ಒಣ ಕಸಗಳನ್ನು  ಎಲ್ಲೆಂದರಲ್ಲಿ ಎಸೆಯುವ ಮೂಲಕ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು ಚರಂಡಿ ಇನ್ನಿತರ ಮಾರ್ಗಗಳಿಂದ ತೋಡಿನ ಮೂಲಕ ಹರಿದು ಹೊಳೆಗೆ ಸೇರುತ್ತಿದ್ದು, ಹೊಳೆಯ ನೀರನ್ನು ಕಲುಷಿತಗೊಳಿಸುವ ಕೆಲಸ ಮಾನವನಿಂದ ನಿರಂತರವಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸಿದರೂ, ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದು ಇನ್ನೂ ಕೂಡ ನಿಂತಿಲ್ಲ.

ಎಲ್ಲೆಂದರಲ್ಲಿ ಬಿಸಾಡುತ್ತಿದ್ದ ಒಣ ಪ್ಲಾಸ್ಟಿಕ್ ವಸ್ತುಗಳು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ, ನೀರು ಹರಿಯುವ ಹೊಳೆಯ ಎರಡು ಬದಿಗಳ ರೈತರ ಭತ್ತದ ಗದ್ದೆಗಳಲ್ಲಿ ಸಂಗ್ರಹವಾಗುತ್ತಿವೆ. ಇದರಿಂದ ರೈತರ ಭೂಮಿಗಳು ಪ್ಲಾಸ್ಟಿಕ್ ಬಾಟಲಿಗಳಿಂದ, ಪ್ಲಾಸ್ಟಿಕ್ ವಸ್ತುಗಳಿಂದ ತುಂಬಿ ಹೋಗುತ್ತಿವೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಹರಿಯುವ ಕಾವೇರಿ ನೀರು, ಲಕ್ಷ್ಮಣತೀರ್ಥ ಇತ್ಯಾದಿ ನದಿಗಳು ಸೇರಿದಂತೆ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಇತಿಹಾಸ ಪ್ರಸಿದ್ಧ ಕೀರೆ ಹೊಳೆಯಲ್ಲಿ ಈ ಸಮಸ್ಯೆ ನಿರಂತರವಾಗಿದೆ.

ಪ್ರತಿ ವರ್ಷ ಕೀರೆ ಹೊಳೆ ಹೂಳೆತ್ತುವ ಕಾರ್ಯ ನಡೆಸಿದ ವೇಳೆ ಇಂತಹ ಪ್ಲಾಸ್ಟಿಕ್ ಬಾಟಲಿಗಳು ಟನ್‌ಗಟ್ಟಲೆ ದೊರೆಯುತ್ತಿದ್ದವು. ಮಳೆಯ ರಭಸ ಆರಂಭವಾಗುತ್ತಿದ್ದಂತೆಯೇ ಹೊಳೆಯ ಬದಿಯಲ್ಲಿರುವ ಬಾಟಲಿಗಳು ಸೇರಿದಂತೆ ಇನ್ನಿತರ ಒಣ ಕಸ ಹೊಳೆಯಲ್ಲಿ ಹರಿಯುತ್ತ ಮುಂದೆ ಸಾಗುತ್ತಿತ್ತು. ಇದನ್ನು ನಿಯಂತ್ರಿಸುವುದು ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಸಾಧ್ಯವಾಗುತ್ತಿರಲಿಲ್ಲ.

ಇದೀಗ ಪ್ಲಾಸ್ಟಿಕ್ ತ್ಯಾಜ್ಯ ಸೇರ್ಪಡೆ ತಡೆಗೆ ಯೋಜನೆ ರೂಪಿಸಿದೆ. ಕಳೆದ ಹಲವಾರು ವರ್ಷಗಳಿಂದ ಕೊಡಗಿನ ಕ್ಲೀನ್ ಕೂರ್ಗ್ ಸಂಸ್ಥೆಯು ತ್ಯಾಜ್ಯ ನಿರ್ಮೂಲನೆಗಾಗಿ, ಹೊಳೆಯ ಶುದ್ಧೀಕರಣಕ್ಕಾಗಿ ಮಾನವನ ಆರೋಗ್ಯದ ಹಿತದೃಷ್ಠಿಯಿಂದ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೊಸ ಪ್ರಯೋಗಗಳನ್ನು ನಡೆಸುತ್ತ ಬಂದಿದೆ. ಪ್ರತಿಷ್ಠಿತ ಕಂಪೆನಿಗಳೊಂದಿಗೆ ಒಡನಾಟದಲ್ಲಿರುವ ಕ್ಲೀನ್ ಕೂರ್ಗ್ ಸ್ನೇಹಿತರು ಈ ನಿಟ್ಟಿನಲ್ಲಿ ಯಶಸ್ಸಿನತ್ತ ಸಾಗುತ್ತಿದ್ದಾರೆ. ಇದೀಗ ತಾವೇ ತಯಾರಿಸಿದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಯೋಜನೆಗೆ ಹಲವು ಮಂದಿ ಪ್ರಾಯೋಜಕತ್ವವನ್ನು ನೀಡುತ್ತಾ ಬರುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಕ್ಲೀನ್ ಕೂರ್ಗ್ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಇವರ ಪರಿಕಲ್ಪನೆಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದಾರೆ.

 ಕೀರೆ ಹೊಳೆಯಲ್ಲಿ ಪ್ಲಾಸ್ಟಿಕ್ ಪೈಪ್ ಹಾಗೂ ಕಬ್ಬಿಣದ ಮೆಷ್‌ಗಳ ಬಳಕೆಯಿಂದ ತಯಾರಿಸಿದ ಉಪಕರಣವಾದ ‘ಟ್ರ್ಯಾಷ್ ಬೂಮ್’ ನದಿಯಲ್ಲಿ ಅಡ್ಡಲಾಗಿ ಇರಿಸಿ ಅಳವಡಿಸಲಾಗಿದೆ. ಹಗುರವಾದ ಪೈಪ್ ನೀರಿನ ಮೇಲೆ ತೇಲುವುದರಿಂದ ಮತ್ತು ಪೈಪ್‌ನ ಕೆಳಭಾಗದಲ್ಲಿ ಮೆಷ್ ಅಳವಡಿಸಿರುವುದರಿಂದ ನೀರಿನೊಂದಿಗೆ ತೇಲಿ ಬರುವ ಪ್ಲಾಸ್ಟಿಕ್ ಉತ್ಪನ್ನಗಳಾದ ಬಾಟಲಿ ಸೇರಿದಂತೆ ಇನ್ನಿತರ ವಸ್ತುಗಳು ಮುಂದೆ ಚಲಿಸಲಾಗದೆ ಮೆಷ್‌ನ ಬಳಿ ಸಂಗ್ರಹವಾಗುತ್ತಿವೆ. ನೀರು ಮಾತ್ರ ಸಲೀಸಾಗಿ ಹರಿಯುತ್ತದೆ. ಒಂದೆ ಕಡೆ ಸಂಗ್ರಹವಾಗುವ ತ್ಯಾಜ್ಯವನ್ನು ಪಂಚಾಯಿತಿಯ ಸಿಬ್ಬಂದಿಗಳು ತೆರವುಗೊಳಿಸಿ ನದಿಯ ಶುದ್ಧೀಕರಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಕೀರೆಹೊಳೆಯ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಗ್ರಾಮ ಪಂಚಾಯಿತಿಯು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಕೀರೆಹೊಳೆ ಸೇರುವ ನದಿಯಲ್ಲಿ ಇದನ್ನು ಅಡ್ಡಲಾಗಿ ಅಳವಡಿಸಿದೆ. ನೀರಿನ ಮೂಲಕ ಹರಿದು ಬರುವ ಒಣತ್ಯಾಜ್ಯ ತೇಲುತ್ತ ‘ಟ್ರಾö್ಯಷ್ ಬೂಮ್’ ಬಳಿ ಬಂದು ಶೇಖರಣೆಯಾಗುತ್ತಿದೆ. ಶುದ್ದ ನೀರು ಮಾತ್ರ ಹೊಳೆಯಲ್ಲಿ ಹರಿದು ಹೋಗುವ ರೀತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಕೀರೆಹೊಳೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ‘ಟ್ರ್ಯಾಷ್ ಬೂಮ್’ ಅಳವಡಿಸಲಾಗಿದೆ. ಇಲ್ಲಿ ಬಂದು ಸಂಗ್ರಹವಾಗುವ ವಸ್ತುಗಳನ್ನು ತೆರವುಗೊಳಿಸಿ ಇಲ್ಲಿರುವ ಕಸವನ್ನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಂಗ್ರಹಣೆ ಮಾಡಲಾಗುತ್ತಿದೆ. ಇದರಿಂದ ಹೊಳೆಯ ಎರಡು ಬದಿಗಳಲ್ಲಿ ಇರುವ ಭತ್ತದ ಗದ್ದೆಗಳಿಗೆ ಯಾವುದೇ ಒಣತ್ಯಾಜ್ಯ ಹೋಗದಂತೆ ಎಚ್ಚರವಹಿಸುವ ಕೆಲಸವನ್ನು ಗೋಣಿಕೊಪ್ಪಲುವಿನ ಕೀರೆಹೊಳೆಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಕ್ಲೀನ್ ಕೂರ್ಗ್ ಸಂಸ್ಥೆಯ ಕೊಕ್ಕಂಡ ಪವನ್, ಪಟ್ಟಡ ಸವಿತಾ ಚಂಗಪ್ಪ, ಅಪೂರ್ಣ ಕುಮಾರ್, ನಿತಿ ಮಹೇಶ್ ಅವರುಗಳು ನದಿಗಳ ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.