ರೂ.3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಯಿದ್ದರೂ ಖಾಯಂ ವಾಹನವಿಲ್ಲ!
ಸೋಮವಾರಪೇಟೆಯಲ್ಲಿ ರೂ.3 ಕೋಟಿ ವೆಚ್ಚದಲ್ಲಿ ನೂತನವಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಯನ್ನು ನಿರ್ಮಿಸಿದ್ದರೂ, ಅಗ್ನಿ ಅವಘಡಗಳು ಸಂಭವಿಸಿದರೆ ತಕ್ಷಣಕ್ಕೆ ಸ್ಪಂದಿಸಲು ಖಾಯಂ ವಾಹನವೇ ಇಲ್ಲದಂತಾಗಿದೆ. ಪ್ರಸಕ್ತ ವರ್ಷ ವಾಡಿಕೆಗೂ ಮೊದಲೇ ಬಿಸಿಲ ಬೇಗೆ ಕಂಡುಬರುತ್ತಿದ್ದು, ವಾತಾವರಣದಲ್ಲಿ ಏರುಪೇರಾಗುತ್ತಿದೆ. ಎಲ್ಲೆಡೆ ಮರಗಿಡಗಳು ಒಣಗಲು ಆರಂಭವಾಗಿದ್ದು, ನೀರಾವರಿ ಸೌಕರ್ಯ ಇರುವವರು ತೋಟಗಳಿಗೆ ಬೋರ್‌ವೆಲ್‌ನಿಂದ ನೀರು ಹಾಯಿಸುವ ಮೂಲಕ ಗಿಡಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದಾರೆ. ಈ ನಡುವೆ ಅರಣ್ಯದಲ್ಲಿರುವ ಮರಗಳ ಎಲೆಗಳು ಒಣಗಿ ಉದುರಲಾರಂಭಿಸಿದ್ದು, ಅಗ್ನಿ ಅವಘಡಗಳಿಂದ ಅರಣ್ಯವನ್ನು ರಕ್ಷಿಸಲು ಅರಣ್ಯ ಇಲಾಖಾ ಸಿಬ್ಬಂದಿಗಳು ‘ಫೈರ್ ರೂಟ್’ಗಳನ್ನು ನಿರ್ಮಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಒಣಗಿರುವ ಎಲೆಗಳಿಗೆ ಬೆಂಕಿ ಹಾಕಿ, ರಸ್ತೆಯ ಎರಡೂ ಬದಿಯ ಪ್ರದೇಶವನ್ನು ಆಕಸ್ಮಿಕ ಬೆಂಕಿಯಿAದ ರಕ್ಷಿಸಲಾಗುತ್ತಿದೆ. ಈ ನಡುವೆ ತುರ್ತು ಸಂದರ್ಭದಲ್ಲಿ ಸೇವೆಗೆ ಸಿದ್ಧವಿರಬೇಕಾದ ಅಗ್ನಿಶಾಮಕ ದಳದ ವಾಹನಗಳು ಬೇರೆ ಬೇರೆ ಪ್ರದೇಶಗಳಿಗೆ ತೆರಳುತ್ತಿದ್ದು, ಸೋಮವಾರಪೇಟೆಗೆ ಖಾಯಂ ವಾಹನವೇ ಇಲ್ಲವಾಗಿದೆ.
ಜನವರಿ 9 ರಂದು ಸೋಮವಾರಪೇಟೆಯಿಂದ ಬೆಂಗಳೂರಿಗೆ ತೆರಳಿದ ಅಗ್ನಿಶಾಮಕ ಠಾಣೆಯ ಬೆಂಕಿ ನಂದಿಸುವ ವಾಹನ, ಬೆಂಗಳೂರಿನಲ್ಲೇ ದುರಸ್ತಿಗೀಡಾಗಿದ್ದು, ರಿಪೇರಿಗೊಂಡ ನಂತರ ಸೋಮವಾರಪೇಟೆಗೆ ಆಗಮಿಸಿ, ಇದೀಗ ಅರಸೀಕೆರೆಗೆ ತೆರಳಿದೆ.
ಸೋಮವಾರಪೇಟೆಗೆ ನಿಯೋಜನೆ ಗೊಂಡಿದ್ದ ವಾಹನದ ‘ಎಫ್.ಸಿ.’ ಅವಧಿ ಈಗಾಗಲೇ ಮುಗಿದಿದ್ದು, ‘ಸ್ಕ್ರ್ಯಾಪ್' ಗೆ ಎದುರು ನೋಡುತ್ತಿದೆ. ಕಳೆದೆರಡು ತಿಂಗಳ ಹಿಂದೆಯೇ ಎಫ್.ಸಿ. ಅವಧಿ ಮುಗಿದಿರುವುದರಿಂದ ಆ ವಾಹನವನ್ನು ರಸ್ತೆಗೆ ಇಳಿಸಲು ಸಾಧ್ಯವಿಲ್ಲ. ಈ ಹಿಂದೆ ಇದ್ದ ವಾಹನವು ಅರಸೀಕೆರೆಗೆ ಸೇರಿದ್ದರಿಂದ ಇದೀಗ ಆ ವಾಹನವನ್ನು ಅರಸೀಕೆರೆಗೆ ವಾಪಸ್ ಕಳುಹಿಸಲಾಗಿದೆ.
ಸದ್ಯ ಮಡಿಕೇರಿ ಅಗ್ನಿಶಾಮಕ ಠಾಣೆಯ ವಾಹನವನ್ನು ಕ್ಯೂ.ಆರ್.ವಿ. (ಕ್ವಿಕ್ ರೆಸ್ಪಾನ್ಸ್ ವೆಹಿಕಲ್) ಆಗಿ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 4 ಅಗ್ನಿಶಾಮಕ ಠಾಣೆಗಳಿದ್ದು, ಎಲ್ಲಾ ಠಾಣೆಗಳಲ್ಲಿಯೂ ತಲಾ ಒಂದು ವಾಹನ ಮಾತ್ರ ಚಾಲೂ ಸ್ಥಿತಿಯಲ್ಲಿದೆ. ಸೋಮವಾರಪೇಟೆಯಲ್ಲಿ ಇದ್ದ ಎರಡು ವಾಹನಗಳ ಪೈಕಿ ಕಳೆದ 2 ತಿಂಗಳ ಹಿಂದಷ್ಟೇ ಒಂದು ವಾಹನದ ಎಫ್.ಸಿ. ಅವಧಿ ಮುಗಿದಿದ್ದು, ಅದು ರಸ್ತೆಗಿಳಿಯುವಂತಿಲ್ಲ. ಇನ್ನೊಂದು ವಾಹನ ಬೆಂಗಳೂರಿನ ಏರ್ ಶೋಗೆ ತೆರಳಿ, ನಂತರ ಅರಸೀಕೆರೆಗೆ ಹೋಗಿದೆ. ಈವರೆಗೆ ಖಾಸಗಿ ಕಟ್ಟಡದಲ್ಲಿ ಬಾಡಿಗೆಗಿದ್ದ ಅಗ್ನಿಶಾಮಕ ಠಾಣೆಯು ಕಳೆದ ತಿಂಗಳಷ್ಟೇ ಇಲ್ಲಿನ ಆರ್‌ಎಂಸಿ ಆವರಣದಲ್ಲಿ ಸ್ವಂತ ನಿವೇಶನ ಹಾಗೂ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ಕೆ-ಸೇಫ್-2 ಯೋಜನೆಯಡಿ ೩ಬೇ ಅಗ್ನಿಶಾಮಕ ಠಾಣೆ ನಿರ್ಮಾಣಗೊಂಡಿದೆ. ಒಟ್ಟು 3 ಕೋಟಿ ವೆಚ್ಚದ ಅನುದಾನದಡಿ ನೆಲ ಅಂತಸ್ತು, ಒಳಾಂಗಣ, ಗ್ಯಾರೇಜ್, ವಿಕಲಚೇತನರ ಶೌಚಾಲಯ, ಕಚೇರಿ ಕೊಠಡಿ, ಅಧಿಕಾರಿಗಳ ಕೊಠಡಿ, ದಾಖಲೆ/ಉಗ್ರಾಣ ಕೊಠಡಿ, ತರಗತಿ ಕೊಠಡಿ, ವಿಶ್ರಾಂತಿ ಕೊಠಡಿ ಸೇರಿದಂತೆ ೩ ವಾಹನಗಳ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅಗ್ನಿಶಾಮಕ ಠಾಣೆಯನ್ನು ಲೋಕಾರ್ಪಣೆಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ 23 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಮೂರು ವಾಹನಗಳ ನಿಲುಗಡೆಯ ವ್ಯವಸ್ಥೆಯೊಂದಿಗೆ ಆಧುನಿಕ ಸ್ಪರ್ಶ ಪಡೆದಿರುವ ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಖಾಯಂ ವಾಹನವೇ ಇಲ್ಲದಿರುವುದು ವಿಪರ್ಯಾಸ! ರೂ. 3 ಕೋಟಿ ಖರ್ಚು ಮಾಡಿ ದೊಡ್ಡ ಕಟ್ಟಡ ಕಟ್ಟಿದ್ದರೂ ತುರ್ತು ಸಮಯದಲ್ಲಿ ಬೆಂಕಿ ನಂದಿಸಲು ವಾಹನವೇ ಇಲ್ಲವೆಂದಾದರೆ, ಯೋಜನೆಯು ಅರ್ಥಹೀನವಾದೀತು ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದು, ಸೋಮವಾರಪೇಟೆಗೆ ತುರ್ತಾಗಿ ಕನಿಷ್ಟ ಎರಡು ವಾಹನಗಳನ್ನಾದರೂ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಬಿರು ಬೇಸಿಗೆಯ ವಾತಾವರಣ ಕಂಡುಬರುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೆಚ್ಚು ಅರಣ್ಯ, ಬೆಟ್ಟಗುಡ್ಡ ಪ್ರದೇಶವನ್ನು ಹೊಂದಿರುವ ಸೋಮವಾರಪೇಟೆ ಭಾಗದಲ್ಲಿ, ಅಗ್ನಿ ಅವಘಡಗಳು ಪ್ರತೀ ವರ್ಷ ಕಂಡುಬರುತ್ತಲೇ ಇವೆ. ನಿಡ್ತ ಮೀಸಲು ಅರಣ್ಯ, ಯಡವನಾಡು ಮೀಸಲು ಅರಣ್ಯ, ಬಾಣಾವರ ಮೀಸಲು ಅರಣ್ಯ, ಕಾಜೂರು, ಕೋಟೆ ಬೆಟ್ಟ, ಮಾದಾಪುರ ಬೆಟ್ಟಗಳನ್ನು ಕಾಡ್ಗಿಚ್ಚಿನಿಂದ ರಕ್ಷಿಸಲು ಅರಣ್ಯ ಇಲಾಖೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ರಸ್ತೆಗಳು ಹಾದುಹೋಗಿರುವ ಅರಣ್ಯ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಫೈರ್ ರೂಟ್‌ಗಳನ್ನು ನಿರ್ಮಿಸಿ, ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಗ್ನಿ ಶಾಮಕ ಇಲಾಖೆ ಸದಾ ‘ಅಲರ್ಟ್’ ಆಗಿರಬೇಕಿದೆ. ಆದರೆ ೩ ಕೋಟಿ ವೆಚ್ಚದ ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಖಾಯಂ ವಾಹನವೇ ಇಲ್ಲ ಎಂಬುದು ಸೋಜಿಗ! ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ತುರ್ತು ಗಮನ ಹರಿಸಬೇಕಿದೆ.