2 ಲೀಟರ್‌ಗಿಂತ ಕಡಿಮೆ ನೀರಿನ ಬಾಟಲಿಗಳನ್ನು ನಿಷೇಧಿಸಲು ನಗರಸಭೆ ಪ್ರಾಯೋಗಿಕ ಕಾರ್ಯಾಚರಣೆ

 

ಮಡಿಕೇರಿ ನಗರಸಭೆ ಮಡಿಕೇರಿ ನಗರದಲ್ಲಿ 2 ಲೀಟರ್‌ಗಿಂತ ಕಡಿಮೆ ನೀರಿನ ಬಾಟಲಿಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲು ಸಿದ್ಧತೆಯೊಂದಿಗೆ ಪ್ರಾಯೋಗಿಕ ಕಾರ್ಯಾಚರಣೆೆ ನಡೆಸುತ್ತಿದೆ ಎಂದು ನಗರಸಭಾ ಆಯುಕ್ತ ಹೆಚ್.ಆರ್. ರಮೇಶ್ ತಿಳಿಸಿದ್ದಾರೆ.

ಕುಡಿಯುವ ನೀರು ನಗರದ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಸುಲಭವಾಗಿ ಹಾಗೂ ಉಚಿತವಾಗಿ ಮತ್ತು ಶುದ್ಧ ನೀರಿನ ಲಭ್ಯತೆಗಾಗಿ ನಗರ ಸಭೆ ಪರ್ಯಾಯ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ನಾಗರಿಕರು ಮತ್ತು ಪ್ರವಾಸಿಗರಿಗೆ ಉಚಿತ ಫಿಲ್ಟರ್ ನೀರನ್ನು ಒದಗಿಸುವ 18 ನೀರಿನ ಫಿಲ್ಟರ್‌ಗಳನ್ನು ಸ್ಥಾಪಿಸಲಿದೆ. ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣ, ಹೊಸ ಖಾಸಗಿ ಬಸ್ ನಿಲ್ದಾಣ ಮತ್ತು ನಗರಸಭಾ ಕಚೇರಿ ಬಳಿ ಈಗಾಗಲೇ 3 ಉಚಿತ ನೀರಿನ ಫಿಲ್ಟರ್‌ಗಳನ್ನು ಸ್ಥಾಪಿಸಿದೆ. ಇದನ್ನು ನಾಗರಿಕರು ಸ್ವಾಗತಿಸಿದ್ದಾರೆ ಮತ್ತು ನಾಗರಿಕರು ಸ್ಥಳದಲ್ಲೇ ನೀರು ಕುಡಿಯುವುದರಿಂದ ಮತ್ತು ಅನೇಕ ನಾಗರಿಕರು ಮತ್ತು ಪ್ರವಾಸಿಗರು ತಮ್ಮ ಬಾಟಲಿಗಳಿಗೆ ನೀರನ್ನು ತುಂಬಿಸಿಕೊಳ್ಳುವುದರಿಂದ ಇದು ಹೆಚ್ಚು ಉಪಯುಕ್ತವಾಗುತ್ತಿದೆ ಎಂದು ಆಯುಕ್ತ ರಮೇಶ್ ವಿವರಿಸಿದರು. ಮಡಿಕೇರಿ ನಗರದಲ್ಲಿ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ನಗರದಲ್ಲಿ ಒಟ್ಟಾರೆಯಾಗಿ 18 ಉಚಿತ ನೀರಿನ ಫಿಲ್ಟರ್‌ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ನಗರಸಭೆ ನೀರಿನ ಫಿಲ್ಟರ್‌ಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ ಎಂದು ರಮೇಶ್ ಖಚಿತಪಡಿಸಿದ್ದಾರೆ.

ಉಚಿತ ನೀರಿನ ಫಿಲ್ಟರ್‌ಗಳ ಜೊತೆಗೆ ರೂ.೫ರ ಕಾಯಿನ್ ಹಾಕುವ ಮೂಲಕ 20ಲೀಟರ್ ನೀರನ್ನು ಒದಗಿಸುವ ಕುಡಿಯುವ ನೀರಿನ ಘಟಕಗಳನ್ನು ಕೂಡ ಸ್ಥಾಪಿಸಲಾಗುವುದು. ರಾಜಾಸೀಟು, ಡಿಎಆರ್ ಕ್ವಾರ್ಟರ್ಸ್ ಮತ್ತು ಸುದರ್ಶನ್ ವೃತ್ತದಲ್ಲಿ ಈಗಾಗಲೇ ಮೂರು ನೀರಿನ ಕಾಯಿನ್ ಘಟಕಗಳು  ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಅಶೋಕಪುರ, ಉಕ್ಕುಡ ಮತ್ತು ಮಲ್ಲಿಕಾರ್ಜುನ ನಗರದಲ್ಲಿ ಇನ್ನೂ 3 ಕಡೆಗಳಲ್ಲಿ ಕಾಯಿನ್ ಬಳಕೆಯ ನೀರಿನ ಘಟಕಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.

2 ಲೀಟರ್‌ಗಿಂತ ಕಡಿಮೆ ಪ್ರಮಾಣದ ನೀರಿನ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಆಯುಕ್ತ ರಮೇಶ್ ಹೀಗೆ ವಿವರಿಸಿದರು.

“ ನಗರ ಸಭೆಯಿಂದ  ಎಲ್ಲಾ ಹೋಂಸ್ಟೇಗಳು, ರೆಸಾರ್ಟ್ಗಳು, ಕಲ್ಯಾಣ ಮಂಟಪಗಳಲ್ಲ್ಲಿ ನೀರಿನ ಫಿಲ್ಟರ್‌ಗಳನ್ನು ಸ್ಥಾಪಿಸಲು ಪತ್ರಗಳನ್ನು ಕಳುಹಿಸಲಾಗಿದೆ.  ಈ ಕೇಂದ್ರಗಳಲ್ಲಿ ಕೇವಲ ಗ್ರಾಹಕರಿಗೆ ಮಾತ್ರ ನೀರಿನ ಸೌಲಭ್ಯ ಕಲ್ಪಿಸುವುದಲ್ಲದೆ, ಎಲ್ಲಾ ಸಾರ್ವಜನಿಕರಿಗೂ ಈ ಕೇಂದ್ರಗಳಲ್ಲಿ ಉಚಿತ ಫಿಲ್ಟರ್ ನೀರು ಸುಲಭದಲ್ಲಿ ಲಭ್ಯವಿರುವಂತೆ ಈ ಕೇಂದ್ರಗಳು ಸೌಲಭ್ಯ ಕಲ್ಪಿಸಿರಬೇಕು. 

ಭವಿಷ್ಯದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ 2 ಲೀಟರ್‌ಗಿಂತ ಕಡಿಮೆ ನೀರಿನ ಬಾಟಲಿಗಳನ್ನು ಪೂರೈಸದಂತೆ ನಗರಸಭೆ ಎಲ್ಲಾ ಮದುವೆ ಸಭಾಂಗಣಗಳ ಮಾಲೀಕರಿಗೆ ಎಚ್ಚರಿಕೆ ನೀಡಿದೆ. 2 ಲೀಟರ್‌ಗಿಂತ ಕಡಿಮೆ ನೀರಿನ ಬಾಟಲಿಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಾವು ಎಲ್ಲಾ ವ್ಯಾಪಾರ ಸಂಸ್ಥೆಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ ಸ್ಟಿಕ್ಕರ್‌ಗಳನ್ನು ಲಗತ್ತಿಸಿದ್ದೇವೆ. ಈಗಾಗಲೇ ಸಾರ್ವಜನಿಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಕ್ರಮದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆಯುವುದು ಕಡಿಮೆಯಾಗುತ್ತಿದೆ. 

ಇಲ್ಲದಿದ್ದರೆ ಶುಚಿಗೊಳಿಸುವ ಸಿಬ್ಬಂದಿಗೆ ಬಾಟಲಿಗಳನ್ನು ಹೆಕ್ಕುವುದು ಅತ್ಯಂತ ಪರಿಶ್ರಮದ ಕೆಲಸವಾಗುತ್ತಿತ್ತು. ವಿಶೇಷವಾಗಿ ಪ್ರತಿ ಸೋಮವಾರ ದಂದು ನಗರದ ಪ್ರವಾಸೀ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಟಲಿಗಳನ್ನು (ಮೊದಲ ಪುಟದಿಂದ) ಹೆಕ್ಕಿ ನೈರ್ಮಲ್ಯ ಕಾಪಾಡುವ ಕೆಲಸ ಶ್ರಮದಾಯಕವಾಗುತ್ತಿತ್ತು. ಏಕೆಂದರೆ ಪ್ರವಾಸಿಗರು ಶನಿವಾರ, ಭಾನುವಾರಗಳ ವಾರಾಂತ್ಯದಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಿದ್ದು ಅವುಗಳನ್ನು ಹೆಕ್ಕುವ ಅನಿವಾರ್ಯತೆಯಿತ್ತು. ಈಗ ಈ ರೀತಿ ಎಸೆಯುವ ಪ್ರಮಾಣ ಕ್ಷೀಣಗೊಳ್ಳುತ್ತ್ತಿದ್ದು ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ಪ್ರಯತ್ನ ಈಗ ನಡೆದಿದೆ, ಮುಂದೆ  ನಗರದಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್  ಬಾಟಲಿಗಳ ಬಳಕೆಯನ್ನು ನಾವು ಅಧಿಕೃತವಾಗಿ ನಿಷೇಧಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಆದಷ್ಟು ಮಟ್ಟಿಗೆ  ನಾವು ಪರಸ್ಪರ ಸಹಕಾರ ವಿಧಾನದಲ್ಲಿ ಜಾಗೃತಿ ಮೂಲಕ ಇದನ್ನು ಈಗ ನಿಯಂತ್ರಿಸುವ ಪ್ರಯತ್ನ ನಡೆದಿದೆ” ಎಂದು ರಮೇಶ್ ಮಾಹಿತಿಯಿತ್ತರು.