ರಾಜಾಸೀಟ್‌ನಲ್ಲಿ ರೋಮಾಂಚನಕಾರಿ ಸಾಹಸ ಕ್ರೀಡೆಗಳ ಆಕರ್ಷಣೆ

42 ಅಡಿ ಚಿಮ್ಮುವ ‘ರಾಕೆಟ್ ಇಜೆಕ್ಟರ್’ - ಕೆಲಸಗಳು ಬಹುತೇಕ ಪೂರ್ಣ 

 

ರಾಕೆಟ್ ಇಜೆಕ್ಟರ್

ಸುತ್ತ ಹಸಿರ ಸೊಬಗು, ಕಣ್ಣಿಗೆ ಹಿತ ನೀಡುವ ಪುಷ್ಪ್ಪರಾಶಿ, ಸ್ವಚ್ಛಂದ ಗಾಳಿ, ಮತ್ತಷ್ಟು ಕಾಲ ಕಳೆಯಬೇಕೆಂಬ ವಾತಾವರಣ ಹೊಂದಿರುವ ರಾಜಾಸೀಟ್‌ನ ವ್ಯಾಪ್ತಿ ಈಗಾಗಲೇ ಹೆಚ್ಚಾಗಿದೆ. ‘ಗ್ರೇಟರ್ ರಾಜಾಸೀಟ್’ ಪ್ರವಾಸಿ ತಾಣದ ಅಂದಕ್ಕೆ ಮತ್ತಷ್ಟು ಸಿಂಗಾರ ಒದಗಿಸಿದೆ. ಇದರೊಂದಿಗೆ ಇದೀಗ ಸಾಹಸ ಕ್ರೀಡೆಗಳು (ಅಡ್ವೆಂಚರ್ ಸ್ಪೋರ್ಟ್ಸ್) ಆಕರ್ಷಣೆಯನ್ನು ಹೆಚ್ಚಿಸಿವೆ. ಶೀಘ್ರದಲ್ಲಿಯೇ ಇದು ಬಳಕೆಗೆ ಲಭ್ಯವಾಗಲಿದೆ. 

ಮೊದಲು ಅರ್ಧ ಎಕರೆಯಲ್ಲಿದ್ದ ರಾಜಾಸೀಟ್ ಅನ್ನು ಮತ್ತಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ‘ಗ್ರೇಟರ್ ರಾಜಾಸೀಟ್’ ಯೋಜನೆ ತಯಾರಿಸಿ ತಾಣದ ವ್ಯಾಪ್ತಿಯನ್ನು ೪.೫೦ ಎಕರೆಗೆ ಹೆಚ್ಚಿಸಲಾಗಿದೆ. ಮೂರು ವ್ಯೂ ಪಾಯಿಂಟ್, ವಿಸ್ತಾರ ವಾಕಿಂಗ್ ಪಾಥ್, ಸೇರಿದಂತೆ ಕಣ್ಮನ ಸೆಳೆಯುವ ಗಿಡಗಳನ್ನು ಇಲ್ಲಿ ನೆಡಲಾಗಿದೆ. ವಾಯುವಿಹಾರಕ್ಕೆ ಸೂಕ್ತವಾಗಿರುವ ಈ ಪ್ರದೇಶವನ್ನು ತೋಟಗಾರಿಕೆ ಇಲಾಖೆ ಹಂತಹAತವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಗ್ರೇಟರ್ ರಾಜಾಸೀಟ್ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಂಡಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿದ ಸಂದರ್ಭ ಅಧಿಕೃತವಾಗಿ ಉದ್ಘಾಟನೆಗೊಳಿಸಲಿದ್ದಾರೆ. 

 

 

 

ರೋಮಾಂಚನಕಾರಿ ಕ್ರೀಡೆಗಳು

ಜಿಲ್ಲೆಯ ಯಾವುದೇ ಪ್ರವಾಸಿ ತಾಣಗಳಲ್ಲಿ ಇಲ್ಲದ ರೋಮಾಂಚನಕಾರಿ ಸಾಹಸ ಕ್ರೀಡೆಗಳನ್ನು ರಾಜಾಸೀಟ್‌ನಲ್ಲಿ ಪರಿಚಯಿಸಲಾಗಿದೆ. ಖಾಸಗಿ ಸಹಭಾಗಿತ್ವ (ಪ್ರೈವೇಟ್, ಪಬ್ಲಿಕ್ ಪಾರ್ಟಿಸಿಪೇಷನ್) ಯೋಜನೆ ಮೂಲಕ ಗುತ್ತಿಗೆ ಆಹ್ವಾನಿಸಿ ನಿರ್ಮಿಸಲಾಗಿದೆ.  

ಬೆಂಗಳೂರು ಮೂಲದ ಕಂಪೆನಿಯೊಂದು ಇದರ ಗುತ್ತಿಗೆ ಪಡೆದುಕೊಂಡಿದ್ದು, ಸಂಸ್ಥೆಯೇ ಹಣ ಹೂಡಿ ಯೋಜನೆ ಅನುಷ್ಠಾನ ಮಾಡಿದೆ. ಜಾಗವನ್ನು ತೋಟಗಾರಿಕೆ ಇಲಾಖೆ ಒದಗಿಸಿದೆ. ಪುಟಾಣಿ ರೈಲು ಹಾದು ಹೋಗುತ್ತಿದ್ದ ಜಾಗದ ಬದಿಯಲ್ಲಿದ್ದ ಪ್ರದೇಶವನ್ನು ಶುಚಿಗೊಳಿಸಿ ಅಲ್ಲಿ 42 ಮೀಟರ್ ಮೇಲೆ ಚಿಮ್ಮುವ ರಾಕೆಟ್ ಇಜೆಕ್ಟರ್, ಹೈರೋಪ್, ಎಕ್ಸ್ವಾಕ್, ಟ್ರಾಂಪೊಲಿನ್, ಲ್ಯಾಡರ್‌ವಾಕ್, ಸೀಸಾವಾಕ್, ಟಯರ್ ವಾಲ್, ನೆಟ್  ಕ್ಲೈಂಬಿಂಗ್ ಅಂತಹ ಸಾಹಸ ಕ್ರೀಡಾ ಚಟುವಟಿಕೆ ಮಾಡವ ತಾಣವನ್ನು  ನಿರ್ಮಿಸಲಾಗಿದೆ. ಇದರೊಂದಿಗೆ 200 ಮೀಟರ್ ಉದ್ದದ ‘ಜಿಪ್ ಲೈನ್’ ಮಾಡಲಾಗಿದ್ದು, ಈ ಮೂಲಕ ಎತ್ತರದಿಂದ ಪರಿಸರದ ವಿಹಂಗಮ ನೋಟ ಸವಿಯಬಹುದಾಗಿದೆ. ‘ರಾಕೆಟ್ ಇಜೆಕ್ಟರ್’ ಹೊಸ ಅನುಭವವನ್ನು ನೀಡಲಿದೆ.

ಸುಮಾರು 42 ಮೀಟರ್ ಒಮ್ಮೆಲೆ ಚಿಮ್ಮುವ ಈ ಸಾಹಸ ಕ್ರೀಡೆ ಮೈನಡುಗಿಸುತ್ತದೆ. ಜೊತೆಗೆ ಎಲ್ಲಾ ರೀತಿಯ ಸುರಕ್ಷಾ ಕ್ರಮವನ್ನು ಒದಗಿಸಲಾಗುತ್ತದೆ.  ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವಷ್ಟು ಕ್ರೀಡೆಗಳನ್ನು ಇಲ್ಲಿ ಸೇರಿಸಲಾಗಿದೆ. 

ಮಾಸಿಕ 3 ಲಕ್ಷ ಆದಾಯ 

ಖಾಸಗಿ ಸಹಭಾಗಿತ್ವದಡಿ ಈ ಯೋಜನೆ ರೂಪಿಸಿದ ಹಿನ್ನೆಲೆ ಮಾಸಿಕ ರೂ. 3 ಲಕ್ಷ ಆದಾಯ ತೋಟಗಾರಿಕೆ ಇಲಾಖೆಗೆ ಲಭಿಸಲಿದೆ. ಟೆಂಡರ್‌ನಲ್ಲಿ ಅತೀ ಹೆಚ್ಚಿನ ಮೊತ್ತಕ್ಕೆ ಬೆಂಗಳೂರಿನ ಕಂಪೆನಿ ಸಹಭಾಗಿತ್ವ ವಹಿಸಿಕೊಂಡಿರುವುದರಿಂದ ಪ್ರತಿ ತಿಂಗಳು ನಿಗದಿತ ಮೊತ್ತ ನೀಡಬೇಕಾಗಿದೆ. 

ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆ ನಡೆಸಿ ಶುಲ್ಕದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಸದ್ಯಕ್ಕೆ ಬಹುತೇಕ ಎಲ್ಲಾ ಕೆಲಸ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ. ನುರಿತ ಸಿಬ್ಬಂದಿಗಳು ಕ್ರೀಡೆಯ ಬಗ್ಗೆ ಮನವರಿಕೆ ಮಾಡಿ ಆಡಿಸಲಿದ್ದಾರೆ. ಇದಕ್ಕಾಗಿ ಕೇರಳ ಹಾಗೂ ಉತ್ತರ ಭಾರತದ ನಿಪುಣರು ಆಗಮಿಸಿದ್ದಾರೆ. 

ಪುಟಾಣಿ ರೈಲಿಗೆ ಪ್ರಸ್ತಾವನೆ

ಒಂದು ಕಾಲದಲ್ಲಿ ಪ್ರವಾಸಿಗರ ಮೆಚ್ಚುಗೆ ಪಡೆದಿದ್ದ ಪುಟಾಣಿ ರೈಲು ಕಾಲಕ್ರಮೇಣ ದುರಸ್ತಿಗೊಂಡು ಕಾಡು ಸೇರಿದೆ. ಅದನ್ನು ಮತ್ತೇ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಮೂಲಕ ತೋಟಗಾರಿಕೆ ಇಲಾಖೆ ಸರಕಾರಕ್ಕೆ ರೂ. 1.30 ಕೋಟಿಯ ಪ್ರಸ್ತಾವನೆಯನ್ನು ಸಲ್ಲಿಸಿದೆ. ಪುಟಾಣಿ ರೈಲು ಆರಂಭಗೊAಡರೆ ರಾಜಾಸೀಟ್ ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡಲಿದೆ. 

 

‘ಜಿಪ್‌ಲೈನ್’ ವಿಶೇಷ ಆಕರ್ಷಣೆ

ಸಾಹಸ ಕ್ರೀಡೆಗಳೊಂದಿಗೆ ಪರಿಸರದ ಸೊಬಗನ್ನು ಕಣ್ತುಂಬಿಕೊಳ್ಳಲು ೨೦೦ ಮೀಟರ್ ಉದ್ದದ ಜಿಪ್‌ಲೈನ್ ನಿರ್ಮಿಸಲಾಗುತ್ತದೆ. ಗ್ರೇಟರ್ ರಾಜಾಸೀಟ್ ತನಕ ಸಾಗಿ ವಾಪಾಸ್ ಬರಲಿರುವ ಈ ‘ಜಿಪ್‌ಲೈನ್’ನಲ್ಲಿ ಒಮ್ಮೆ ಇಬ್ಬರು ತೆರಳಲು ಅವಕಾಶವಿದೆ. ಈ ಮೂಲಕ ಪ್ರಕೃತಿ ಸೌಂದರ್ಯದ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ವಿದೇಶದಿಂದ ಆಮದು ಮಾಡಿಕೊಂಡ ಉಪಕರಣದೊಂದಿಗೆ ಸುರಕ್ಷಾ ಕ್ರಮಗಳನ್ನು ಕೈಗೊಂಡು ಇದನ್ನು ನಿರ್ಮಿಸಲಾಗುತ್ತದೆ. ಗುರುತ್ವಾಕರ್ಷಣೆಯ (gravity) ಮೂಲಕ ಸಾಗುವ ‘ಜಿಪ್‌ಲೈನ್’ ಪ್ರವಾಸಿಗರನ್ನು ಆಕರ್ಷಿಸಲಿದೆ.