ಕುಶಾಲನಗರ ಗ್ರಾಮಾಂತರ ಪ್ರದೇಶಗಳ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ

ಚಿಕಿತ್ಸೆ ಕೊಡಿಸಲು ಪರದಾಟ  - ಹೈನೋದ್ಯಮ ನಂಬಿದವರಿಗೆ ಸಮಸ್ಯೆ

 

ಜಿಲ್ಲೆಯ ಹೈನುಗಾರಿಕೆಯ ತವರೂರು ಎಂದು ಕರೆಸಿಕೊಳ್ಳುವ ಕುಶಾಲನಗರ ಗ್ರಾಮಾಂತರ ಪ್ರದೇಶಗಳು ವಿವಿಧ ತಳಿಗಳ ಜಾನುವಾರುಗಳನ್ನು ಸಾಕುವುದರಲ್ಲಿ ಮನ್ನಣೆ ಪಡೆದುಕೊಂಡಿವೆ. ಹೈನೋದ್ಯಮದ ಮೂಲಕ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಅರೆಮಲೆನಾಡು ಪ್ರದೇಶವಾದ ಈ ಭಾಗಗಳು ಹೈನುಗಾರಿಕೆಗೆ ಸೂಕ್ತವೂ ಕೂಡ. ಆದರೆ, ಪಶುವೈದ್ಯರಿಲ್ಲದೆ ದೂರದ ಊರಿಗೆ ಜಾನುವಾರುಗಳನ್ನು ಕೊಂಡೊಯ್ದು ಚಿಕಿತ್ಸೆ ಕೊಡಿಸುವಂತಹ ಪರಿಸ್ಥಿತಿ ಇಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ವೈದ್ಯರ ಕೊರತೆಯೇ ಕಾರಣವಾಗಿದೆ. 

ಆಸ್ಪತ್ರೆ ಇದ್ದರೂ ವೈದ್ಯರಿಲ್ಲದ ಸ್ಥಿತಿಯಿಂದ ಪಶುಪಾಲಕರು ಕಂಗಾಲಾಗಿದ್ದಾರೆ. ಹಲವು ವರ್ಷಗಳ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದುಕೊಂಡಿದೆ. ಹುದುಗೂರು, ಹೆಬ್ಬಾಲೆ, ಶಿರಂಗಾಲ, ತೊರೆನೂರಿನಲ್ಲಿ ಪಶುವೈದ್ಯಕೀಯ ಉಪಕೇಂದ್ರಗಳಿವೆ. ಆದರೆ, ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.

ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆಮಲೆನಾಡು ಪ್ರದೇಶಗಳಾದ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಕೂಡಿಗೆ, ಕೂಡುಮಂಗಳೂರು  ಸೀಗೆಹೊಸೂರು, ಅಳುವಾರ, ಹುದುಗೂರು, ಮದಲಾಪುರ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ೫೦ ಕ್ಕೂ ಹೆಚ್ಚು  ಉಪಗ್ರಾಮಗಳಿದ್ದು  ಈ ಉಪ ಗ್ರಾಮಗಳಲ್ಲಿ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಇದರಲ್ಲಿಯೂ ಹೈಬ್ರೀಡ್ ತಳಿಯ ಹಸುಗಳನ್ನು ಅನೇಕರು ಸಾಕುತ್ತಿದ್ದಾರೆ.  ಕಳೆದ 20 ವರ್ಷಗಳ ಹಿಂದೆ  ಪ್ರಾರಂಭಗೊಂಡಿರುವ ಪಶು ಆರೋಗ್ಯ ಕೇಂದ್ರಗಳಿಗೆ  ಕಳೆದ 6 ವರ್ಷಗಳಿಂದ ಪಶು ವೈದ್ಯರು ಇಲ್ಲದೆ  ತಾಲೂಕು ವ್ಯಾಪ್ತಿಯ ರೈತರು ಹಸುಗಳ ಚಿಕಿತ್ಸೆಗಾಗಿ  ಪರದಾಡುವಂತಾಗಿದೆ. 

8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಕ್ಕೂ ಹೆಚ್ಚು ಉಪಗ್ರಾಮಗಳಲ್ಲಿ  ನೂರಾರು ರೈತರು  ಲಕ್ಷಾಂತರ ರೂ ಬೆಲೆಬಾಳುವ ಹೈಬ್ರೀಡ್ ತಳಿಯ ಹಸುಗಳನ್ನು  ಸಾಕುತ್ತಿದ್ದಾರೆ. ದಿನಂಪ್ರತಿ 40 ಲೀಟರ್‌ಗೂ ಹೆಚ್ಚು ಹಾಲನ್ನು   ಹಸುಗಳ ಮೂಲಕ ಓರ್ವ  ಉತ್ಪಾದಿಸುತ್ತಾರೆ. ಆದರೆ, ವೈದ್ಯರ ಸಮಸ್ಯೆಯಿಂದ ಹಸುಗರ್ಭಧಾರಣೆ ಸಂದರ್ಭದಲ್ಲಿ ಸಮರ್ಪಕವಾದ ಚಿಕಿತ್ಸೆ ಸಿಗದೆ  ಸಾವನ್ನಪ್ಪಿದ  ಘಟನೆಗಳು ನಡೆದಿವೆ. ಜೊತೆಗೆ ಕುರಿ, ಮೇಕೆ, ಕೋಳಿ ಸೇರಿದಂತೆ ಮನೆಯಲ್ಲಿ ಸಾಕುವ ಪ್ರಾಣಿಗಳಿಗೂ ಚಿಕಿತ್ಸೆ ಕೊಡಿಸಲು ಸಮಸ್ಯೆ ಸೃಷ್ಟಿಯಾಗಿದೆ. 

 ಇದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ವೈದ್ಯರ ನೇಮಕಕ್ಕೆ  ಜಿಲ್ಲಾಡಳಿತ, ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಯನ್ನು ಸಲ್ಲಿಸಿದರೂ ಇದುವರೆಗೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಈ ವ್ಯಾಪ್ತಿಯ ಅನೇಕ ರೈತರು  ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದರೊಂದಿಗೆ ಪಶುಸಂಗೋಪನಾ ಸಚಿವ ಪ್ರಭುಚೌಹಣ್ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ವೈದ್ಯರ ನೇಮಕಾತಿ ಸಂಬಂಧ ಭರವಸೆ ನೀಡಿದರು, ಆದರೂ ಇದು ಈಡೇರದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. 

ಒಬ್ಬ ಪಶುಪರಿವೀಕ್ಷಕ  ತಾಲೂಕಿನ ಎರಡು ಪಶು ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಿವೀಕ್ಷಕ ಒಂದು ಗ್ರಾಮಕ್ಕೆ ತೆರಳಿ ಬರುವ ತನಕ ಚಿಕಿತ್ಸೆಗಾಗಿ ಕಾಯಬೇಕಾಗಿದೆ. ಸಹಕಾರ ಸಂಘಗಳು ಹೈನುಗಾರಿಕೆಯಲ್ಲಿ ರೈತರು ತೊಡಗಿಸಿಕೊಳ್ಳಲು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಆದರೆ, ಸಾಲ ಪಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಹಸುಗಳನ್ನು ಹೊರ ರಾಜ್ಯದಿಂದ  ತಂದು  ಸಾಕಿದರೂ ಸಹ ಉತ್ತಮ ಚಿಕಿತ್ಸೆಗಾಗಿ ಪರದಾಟದಿಂದ ಹೈನೋದ್ಯಮಕ್ಕೆ ಹಿನ್ನಡೆಯಾಗುವ ಸ್ಥಿತಿ ಮುಂದಿನ ದಿನಗಳಲ್ಲಿ ಸೃಷ್ಟಿಯಾಗಬಹುದು. 

ಕಾಲು - ಬಾಯಿ ಜ್ವರದ ಜೊತೆಗೆ ಹೊಸ ರೋಗಗಳು ಕಾಣಿಸಿಕೊಂಡು ಅನೇಕ ಜಾನುವಾರುಗಳು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಸಂಬಂಧಿಸಿದ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೇ.75 ರಷ್ಟು ಹುದ್ದೆಗಳು ಖಾಲಿ

ಜಿಲ್ಲಾ ಪಶುಸಂಗೋಪನಾ ಇಲಾಖೆಯಲ್ಲಿ ಒಟ್ಟು 306 ಹುದ್ದೆಗಳಿದ್ದು, ಕೇವಲ 76 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಶೇ.75 ರಷ್ಟು ಹುದ್ದೆಗಳು ಖಾಲಿಯಿವೆ. 50 ಪಶುವೈದ್ಯರ ಹುದ್ದೆಗಳ ಪೈಕಿ 18, 78 ಪಶುವೈದ್ಯಕೀಯ ಪರಿವೀಕ್ಷಕರ ಹುದ್ದೆಗಳ ಪೈಕಿ 29, 43 ಪಶುವೈದ್ಯಕೀಯ ಸಹಾಯಕರ ಹುದ್ದೆಗಳು ಪೈಕಿ ಕೇವಲ ಎರಡೇ ಎರಡು ಹುದ್ದೆಗಳು ಭರ್ತಿಯಾಗಿರುವುದಾಗಿ   ಇಲಾಖೆಯ ಉಪನಿರ್ಶದೇಶಕ ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ.