ತ್ಯಾಜ್ಯಗಳ ತಾಣವಾಗಿರುವ ಕುಶಾಲನಗರ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ

 

ಅರಣ್ಯ ಇಲಾಖಾ ಸಿಬ್ಬಂದಿಯಿಂದ ತ್ಯಾಜ್ಯ ತೆರವು

ವಾರಾಂತ್ಯ ಬಂತೆಂದರೆ ಸಾಕು, ಕುಶಾಲನಗರ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಡುವೆ ಅರಣ್ಯದಂಚಿನಲ್ಲಿ ತ್ಯಾಜ್ಯಗಳ ರಾಶಿ ಬೀಳಲು ಪ್ರಾರಂಭವಾಗುತ್ತದೆ. ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲ್‌ಗಳು, ಮತ್ತಿತರ ತ್ಯಾಜ್ಯಗಳನ್ನು ಕಂಡ ಕಂಡಲ್ಲಿ ಎಸೆಯುತ್ತಿರುವುದು ಈ ಸ್ಥಿತಿಗೆ ಕಾರಣವಾಗಿದೆ.

ತಮ್ಮ ವಾಹನಗಳಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಆಗಮಿಸುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ 275 ರ ಆನೆಕಾಡು, ಅತ್ತೂರು ಮೀಸಲು ಅರಣ್ಯದ ನಡುವೆ ತಮ್ಮ ದೇಹಬಾಧೆಗಳನ್ನು ತೀರಿಸಿ ಕೊಳ್ಳಲು ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯ ದೃಶ್ಯವಾಗಿದೆ. ಈ ಸಂದರ್ಭ ಕೆಲವು ಪಡ್ಡೆ ಹುಡುಗರು ಮದ್ಯದ ಬಾಟಲಿಗಳನ್ನು ಎಸೆಯುವುದು, ತಿಂಡಿ ತಿನಿಸುಗಳನ್ನು ತಿಂದ ತ್ಯಾಜ್ಯಗಳನ್ನು ಅಲ್ಲೆ ಬಿಟ್ಟು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇದೇ ರೀತಿ ಮಡಿಕೇರಿ ಉದ್ದಕ್ಕೂ ತ್ಯಾಜ್ಯಗಳನ್ನು ಬಿಸಾಡುತ್ತಿರುವುದು ಇದರಿಂದ ರಸ್ತೆಯ ೨ ಬದಿಗಳು ಪ್ಲಾಸ್ಟಿಕ್‌ಮಯವಾಗುತ್ತಿವೆ. ಅರಣ್ಯ ಇಲಾಖೆ ಮತ್ತು ಸಂಬAಧಿಸಿದ ಗ್ರಾಮ ಪಂಚಾಯಿತಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಫಲಕಗಳನ್ನು ಅಳವಡಿಸಿ ಎಚ್ಚರಿಕೆ ನೀಡಿದರೂ ಯಾವುದೇ ರೀತಿಯ ಪ್ರಯೋಜನ ಕಂಡುಬರುತ್ತಿಲ್ಲ.

ಈ ತ್ಯಾಜ್ಯಗಳಿಂದ ಕಾಡಂಚಿನ ವನ್ಯಜೀವಿಗಳಿಗೆ ಹಾನಿ ಉಂಟಾಗುತ್ತಿ ರುವುದು ಕೂಡ ಬೆಳವಣಿಗೆಯಾಗಿದ್ದು, ಇದನ್ನು ತಪ್ಪಿಸಲು ಅರಣ್ಯ ಅಧಿಕಾರಿ ಸಿಬ್ಬಂದಿಗಳು ತಿಂಗಳಿಗೊಮ್ಮೆ ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಸರ್ಕಾರ ದಿಂದ ಉಚಿತವಾಗಿ ನೀಡಲಾಗುವ ಔಷಧಿ ಮತ್ತಿತರ ಅವಧಿ ಮೀರಿದ ವಸ್ತುಗಳನ್ನು ರಸ್ತೆ ಬದಿಗಳಲ್ಲಿ ಎಸೆದು ಹೋಗುತ್ತಿರುವ ಬಗ್ಗೆ ತನಿಖೆ ನಡೆಸಿದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಅರಣ್ಯ ಇಲಾಖೆ ಅಧಿಕಾರಿ ಕೆ.ವಿ ಶಿವರಾಂ ಪ್ರತಿಕ್ರಿಯೆ ವ್ಯಕ್ತಪಡಿಸಿ ದ್ದಾರೆ. ಬೇಸಿಗೆಯಲ್ಲಿ ಯಾವುದೇ ರೀತಿಯ ಕಾಡ್ಗಿಚ್ಚು ಹಬ್ಬದಂತೆ ರಸ್ತೆಯ ಎರಡು ಬದಿಗಳಲ್ಲಿ ಬಫರ್‌ಜೋನ್ ನಿರ್ಮಿಸಿದರೂ ಅಲ್ಲಲ್ಲಿ ತ್ಯಾಜ್ಯಗಳನ್ನು ಹಾಕುವ ಮೂಲಕ ಅರಣ್ಯಕ್ಕೆ ಬೆಂಕಿ ತಗಲುವ ಆತಂಕಎದುರಾಗಲಿದೆ ಎನ್ನುತ್ತಾರೆ ಅವರು.

ಸ್ವಚ್ಛತೆ ಮಾಡುವ ಸಂದರ್ಭ ಲೋಡ್‌ಗಟ್ಟಲೆ ತ್ಯಾಜ್ಯಗಳು ಲಭ್ಯವಾಗುತ್ತಿದೆ ಎನ್ನುವುದು ಆನೆಕಾಡು ಮತ್ತು ಅತ್ತೂರು ಮೀಸಲು ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿಗಳಾದ ಅನಿಲ್ ಡಿಸೋಜ ಮತ್ತು ದೇವಯ್ಯ ಅವರುಗಳ ಅಳಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಕೆಲವು ವ್ಯಾಪಾರಿಗಳು ಕೋಳಿ ಮತ್ತಿತರ ಪ್ರಾಣಿಗಳ ಮಾಂಸಗಳ ತ್ಯಾಜ್ಯಗಳನ್ನು ಅರಣ್ಯದಂಚಿನಲ್ಲಿ ಹಾಕುತ್ತಿದ್ದು, ಅವರುಗಳನ್ನು ಪತ್ತೆಹಚ್ಚಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕುಶಾಲನಗರ- ಮಡಿಕೇರಿ ನಡುವೆ ಸರ್ಕಾರ ಅಥವಾ ಖಾಸಗಿ ಉಸ್ತುವಾರಿಯಲ್ಲಿ ಮೂಲಭೂತ ಸೌಕರ್ಯಗಳಾದ ಹೋಟೆಲ್, ಕೊಠಡಿ, ಸಾರ್ವಜನಿಕ ಶೌಚಾಲಯಗಳನ್ನು ಒಳಗೊಂಡ ಪ್ರವಾಸಿ ವಿಶ್ರಾಂತಿಧಾಮಗಳನ್ನು ಕಲ್ಪಿಸಿದಲ್ಲಿ ಪ್ರವಾಸೋದ್ಯಮದ ಚೇತರಿಕೆಯೊಂದಿಗೆ ಸ್ವಚ್ಛ ಕೊಡಗು ನಿರ್ಮಾಣ ಕೂಡ ಸಾಧ್ಯ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಪ್ರವಾಸಿಗರನ್ನು ಹೊತ್ತೊಯ್ಯುವ ಚಾಲಕರುಗಳಿಗೆ ಈ ಬಗ್ಗೆ ಪ್ರವಾಸೊದ್ಯಮ ಇಲಾಖೆ ಮೂಲಕ ಅರಿವು ಜಾಗೃತಿ ಮಾಹಿತಿ ಒದಗಿಸುವ ಕಾರ್ಯಾಗಾರಗಳು ಕೂಡ ನಡೆಯಬೇಕಿದೆ. ಈ ಮೂಲಕ ಚಾಲಕರು ಪ್ರವಾಸಿಗರೊಂದಿಗೆ ಸ್ವಚ್ಛ ಕೊಡಗಿನ ರಾಯಭಾರಿಗಳಂತೆ ಕೆಲಸ ನಿರ್ವಹಿಸಲು ಸೂಚಿಸಿದಂತಾಗುತ್ತದೆ. ಈ ಬಗ್ಗೆ ಕೊಡಗು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಸ್ವಚ್ಛ ಕೊಡಗು ನಿರ್ಮಾಣಕ್ಕೆ ಕ್ರೀಯಾ ಯೋಜನೆ ರೂಪಿಸಬೇಕಾಗಿದೆ.