ಕೆಳ ದರ್ಜೆಗೆ ಇಳಿದ ಕಾವೇರಿ ನದಿ ನೀರು

 

ಆತಂಕ ಮೂಡಿಸಿದ ವರದಿ  - ದಿನೇ ದಿನೇ ಕಲುಷಿತಗೊಳ್ಳುತ್ತಿರುವ ಜಲಮೂಲ

 

 

ಕಾವೇರಿ ನೀರಿನ ಗುಣಮಟ್ಟ ಬಹುತೇಕ ಕ್ಷೀಣಗೊಂಡಿರುವ ನಡುವೆ ನದಿ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವ ಆತಂಕಕಾರಿ ವರದಿ ಹೊರಬಿದ್ದಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಹೊರ ಬಿದ್ದಿದ್ದು, ಮಂಡಳಿಯ ಸಮೀಕ್ಷಾ ವರದಿಯ ಪ್ರಕಾರ ಕಾವೇರಿ ಮೂಲದಿಂದಲೇ ನೀರಿನ ಗುಣಮಟ್ಟ ಕ್ಷೀಣಗೊಳ್ಳುತ್ತಾ ಕೆಳದರ್ಜೆಗೆ ತಲುಪಿದೆ. ಮಂಡಳಿಯಿಂದ ಕುಶಾಲನಗರ ಪುರಸಭೆ ಸೇರಿದಂತೆ ವೀರಾಜಪೇಟೆ, ಸೋಮವಾರಪೇಟೆ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ನದಿ ತಟದ ಗ್ರಾಮ ಪಂಚಾಯಿತಿ ಕಚೇರಿಯಿಂದ ನಾಗರಿಕರಿಗೆ, ವಾಣಿಜ್ಯ ಕಟ್ಟಡದ ಮಾಲೀಕರಿಗೆ ಕಲುಷಿತ ನೀರನ್ನು ನೇರವಾಗಿ ನದಿಗೆ ಹರಿಸದಂತೆ ಎಚ್ಚರಿಕೆ ನೋಟೀಸ್ ನೀಡಲಾಗಿದೆ.  ಜಿಲ್ಲೆಯ ಗ್ರಾಮ ಪಟ್ಟಣಗಳ ಮೂಲಕ ಹರಿಯುತ್ತಿರುವ ಕಾವೇರಿಯ ನೀರಿನ ಗುಣಮಟ್ಟ ನದಿ ಮೂಲದಿಂದಲೇ ‘ಬಿ’ ಗ್ರೇಡ್‌ಗೆ ಇಳಿದಿದ್ದು, ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಗುಣಮಟ್ಟ ‘ಸಿ’ ದರ್ಜೆಗೆ ಇಳಿದು ನದಿ ನೀರು ಮಾನವ ಬಳಕೆಗೆ ಯೋಗ್ಯ ಇಲ್ಲದಂತಾಗಿದೆ. ಕರ್ನಾಟಕ ಮಾಲಿನ್ಯ ನಿಯಂ ತ್ರಣ ಮಂಡಳಿ ಪ್ರತಿ ತಿಂಗಳು ಜಿಲ್ಲೆಯ ಕೆಲವು ಆಯ್ದ ಭಾಗಗಳಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದು ನಾಪೋಕ್ಲು ವ್ಯಾಪ್ತಿಯಲ್ಲಿ ‘ಬಿ’ ದರ್ಜೆಗೆ ಇಳಿದಿದ್ದರೆ, ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ  ‘ಸಿ’ ದರ್ಜೆಗೆ ಇಳಿದಿರುವುದು ಕಂಡು ಬಂದಿದೆ. ನದಿಯಲ್ಲಿ ಹರಿಯುವ ನೀರಿನ ಗುಣಮಟ್ಟ ಇದಾಗಿದೆ. ಆದರೆ ಕೆಲವೆಡೆ ನಿಂತ ನೀರಿನ ಗುಣಮಟ್ಟ ಇದಕ್ಕಿಂತಲೂ ಕೆಳ ದರ್ಜೆಗೆ ಇಳಿದಿರುವ ಸಾಧ್ಯತೆ ಅಧಿಕವಾಗಿದೆ.

ನಿಯಮಾನುಸಾರ ‘ಎ’ ದರ್ಜೆ ಅಂದರೆ ನೇರವಾಗಿ ನೀರನ್ನು ಬಳಸಬಹುದು. ‘ಬಿ’ ದರ್ಜೆ ಆಗಿದ್ದಲ್ಲಿ ಅದನ್ನು ನೇರವಾಗಿ ಬಳಸುವಂತಿಲ್ಲ.  ಗುಣಮಟ್ಟ ‘ಸಿ’ ದರ್ಜೆಗೆ ಇಳಿದಲ್ಲಿ ನೀರನ್ನು ಯಾವುದೇ ಹಂತದಲ್ಲಿ ಮನುಷ್ಯರು ಬಳಸುವಂತಿಲ್ಲ, ಪ್ರಾಣಿಗಳಿಗೆ ಮಾತ್ರ ಬಳಸಬಹುದು. ‘ಡಿ’ ದರ್ಜೆ ಕೇವಲ ಕೈಗಾರಿಕೆಗಳಿಗೆ ಮಾತ್ರ ಬಳಸಬಹುದು ಎನ್ನುವುದು ನಿಯಮ. ಜಿಲ್ಲೆಯಲ್ಲಿ ತಲಕಾವೇರಿಯಿಂದ ಕುಶಾಲನಗರ  ಸಮೀಪದ ಶಿರಂಗಾಲ ಗಡಿಭಾಗದ ತನಕ 23 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ನದಿ ತಟದಲ್ಲಿ ಇದ್ದು ಈ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಲುಷಿತ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿಯ ಒಡಲು ಸೇರುತ್ತಿವೆ . ಉಪನದಿಯಾದ ಹಾರಂಗಿ, ಲಕ್ಷ್ಮಣತೀರ್ಥ ನದಿಗಳು ಕೂಡ ನೇರವಾಗಿ ಕಲುಷಿತಗೊಂಡು ಕಾವೇರಿ ಒಡಲು ಸೇರುತ್ತಿವೆ .

ನದಿ ತಟದ ಗ್ರಾಮ ಪಟ್ಟಣಗಳಲ್ಲಿ ಇರುವ ವಾಣಿಜ್ಯ ಕಟ್ಟಡಗಳು, ಮಳಿಗೆಗಳಿಂದ ಮತ್ತು ಇತರೆ ಉದ್ಯಮಗಳಿಂದ ಚರಂಡಿ ಮೂಲಕ ಈ ಕಲುಷಿತ ತ್ಯಾಜ್ಯಗಳು ನದಿಯ ಒಡಲು ಸೇರುತ್ತಿವೆ . ಈ ಬಗ್ಗೆ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಕಳೆದ 15 ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದು ಯಾವುದೇ ಶಾಶ್ವತ ಯೋಜನೆಗಳು ರೂಪುಗೊಂಡು ಅನುಷ್ಠಾನಗೊಳ್ಳದೆ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಡಿಕೇರಿ ಮತ್ತು ಕುಶಾಲನಗರ ಪಟ್ಟಣಗಳಲ್ಲಿ ಒಳಚರಂಡಿ ಯೋಜನೆ ದಶಕ ಕಳೆದರೂ ಇನ್ನೂ ಪೂರ್ಣಗೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣ. ಇದುವರೆಗೆ ರಾಜ್ಯದ ಎಂಟು ಮುಖ್ಯಮಂತ್ರಿಗಳಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ಮನವಿ ಪತ್ರ ಸಲ್ಲಿಕೆಯಾಗಿದ್ದರೂ ಉತ್ತರಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ. ಕಾವೇರಿ ಸಂರಕ್ಷಣೆಯ ಬಗ್ಗೆ ಹಿಂದಿನ ಸರ್ಕಾರಗಳು ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಹಲವು ಬಾರಿ ಪ್ರಸ್ತಾವನೆ ಕೇಳಿ ಬಂದಿದ್ದರೂ ಯಾವುದೇ ರೀತಿಯ ಯೋಜನೆಗಳು ರೂಪುಗೊಂಡಿಲ್ಲ. ನದಿ ತಟದಲ್ಲಿರುವ ಬಫರ್ ಝೋನ್ ಪ್ರದೇಶ ಹಲವು ರೀತಿಯಲ್ಲಿ ಒತ್ತುವರಿಯಾಗಿದ್ದು, ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿದ್ದು, ಅದರಿಂದ ಹೊರ ಚೆಲ್ಲುವ ಎಲ್ಲಾ ರಾಸಾಯನಿಕಗಳು ಮತ್ತು ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಯಬಿಡಲಾಗುತ್ತಿದೆ. ಅವೈಜ್ಞಾನಿಕ ಪ್ರವಾಸೋದ್ಯಮ ಇದರಲ್ಲಿ ತನ್ನ ಪಾಲುದಾರಿಕೆ ಅಧಿಕಗೊಳಿಸಿದೆ. ಸ್ಥಳೀಯ ಆಡಳಿತಗಳು ಇದನ್ನು ತಪ್ಪಿಸುವಲ್ಲಿ ಸಂಪೂರ್ಣ ವಿಫಲಗೊಂಡಿವೆ. ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಸಂದರ್ಭ ಆಡಳಿತದಿಂದ ನೀಡಲಾಗುವ ಷರತ್ತುಗಳ ಉಲ್ಲಂಘನೆ ಈ ಎಲ್ಲಾ ಆವಾಂತರಗಳಿಗೆ ಪ್ರಮುಖ ಕಾರಣವಾಗಿದೆ. ಕುಶಾಲನಗರ ಪಟ್ಟಣ ಸೇರಿದಂತೆ ಕಾವೇರಿ ನದಿ ಬದಿಯ ಕಟ್ಟಡಗಳ ಬಹುತೇಕ ವಾಣಿಜ್ಯ ಕಟ್ಟಡಗಳಿಂದ ಶೌಚ ತ್ಯಾಜ್ಯಗಳು ಕೂಡ ನದಿಗೆ ಹರಿ ಬಿಡಲಾಗುತ್ತಿರುವುದು ಇನ್ನೂ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಾರಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಂಡಿದ್ದು ಇದರ ಜೊತೆಗೆ ಸೇರುವ ಕಲುಷಿತ ತ್ಯಾಜ್ಯಗಳಿಂದ ನೀರು ಸಂಪೂರ್ಣ ಗುಣಮಟ್ಟ ಕಳೆದುಕೊಂಡ ಕಾರಣ ನದಿ ನೀರನ್ನು ನೇರವಾಗಿ ಬಳಸಿದಲ್ಲಿ ಸಾಂಕ್ರಾಮಿಕ ರೋಗಗಳು ಎದುರಾಗುವ ಸಾಧ್ಯತೆಗಳು ಅಧಿಕವಾಗಿವೆ ಎನ್ನುತ್ತಾರೆ ಕಾವೇರಿ ರಿವರ್ ಸೇವಾ ಟ್ರಸ್ಟ್ನ ಪ್ರಮುಖ ಮಂಡೆಪಂಡ ಬೋಸ್ ಮೊಣ್ಣಪ್ಪ.

ಈ ಬಾರಿ ಬಜೆಟ್ ಅಧಿವೇಶನದಲ್ಲಿ ಗಮನ ಸೆಳೆಯುವ ಮೂಲಕ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಪ್ರಸ್ತಾಪಿಸಲು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂಥರ್ ಗೌಡ ಅವರಿಗೆ ಮನವಿ ಮಾಡಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು 'ಶಕ್ತಿ'ಗೆ ತಿಳಿಸಿದ್ದಾರೆ. ಕನ್ನಡ ನಾಡಿನ ಜನತೆಯ ಪಾಲಿನ ಜೀವನದಿ ತಮಿಳುನಾಡಿನ ಪಾಲಿಗೆ ಭಾಗ್ಯಲಕ್ಷ್ಮಿ ಎನಿಸಿಕೊಂಡಿರುವ ಕಾವೇರಿ ಇದೀಗ ತೀವ್ರ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವುದು ಬೆಳವಣಿಗೆಯಾಗಿದೆ. ಜಲಮೂಲಗಳು ಹಾಗೂ ನದಿ ಸಂರಕ್ಷಣೆಗಾಗಿ ಸರ್ಕಾರದ ಮೂಲಕ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳಬೇಕಾಗಿದೆ. ಆ ಮೂಲಕ ಅನುಷ್ಠಾನಗೊಳಿಸಿದಲ್ಲಿ ಸ್ವಚ್ಛ ಕಾವೇರಿಯನ್ನು ಕಾಣಲು ಸಾಧ್ಯ ಎನ್ನುವುದು ಸ್ಥಳೀಯ ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ. ಗ್ರಾಮ ಹಾಗೂ ಪಟ್ಟಣ ವ್ಯಾಪ್ತಿಯ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಗೆ ಸೇರದಂತೆ ಮಾಡಲು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಆಗಬೇಕಾಗಿದೆ. ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಕ್ರಿಯಾ ಯೋಜನೆ ರೂಪುಗೊಳ್ಳಬೇಕು. ನದಿ ತಟದ ಸರ್ವೆ ಕಾರ್ಯ ನಡೆದು ಒತ್ತುವರಿ ತೆರವು ಮಾಡುವ ಮೂಲಕ ತಟವನ್ನು ಸಂರಕ್ಷಣೆ ಮಾಡಬೇಕಾಗಿದೆ. ಒಟ್ಟಾರೆ ಕಾವೇರಿಯ ಮೂಲ ಸ್ವರೂಪ ಬದಲಾಗದಂತೆ ನೋಡಿಕೊಂಡು ಸ್ವಚ್ಛವಾಗಿ ಕಾವೇರಿ ನೀರು ಹರಿಯುವಂತೆ ಆಗಬೇಕು ಎನ್ನುವುದು ಕಾವೇರಿ ಸ್ವಚ್ಛತಾ ಅಭಿಯಾನದ ಪ್ರಮುಖರ ಅಭಿಪ್ರಾಯವಾಗಿದೆ. ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭ ಮಾತ್ರ ಕಾಳಜಿ ವಹಿಸುವ ಕೊಡಗು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕಾವೇರಿ ನದಿ ಸಂರಕ್ಷಣೆ ಬಗ್ಗೆ ತಲೆಕಡಿಸಿಕೊಳ್ಳದಿರುವುದು ಈ ಆವಾಂತರಗಳಿಗೆ ಪ್ರಮುಖ ಕಾರಣ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕೂಡ ನಿರ್ಲಕ್ಷ್ಯತಾಳಿದೆ ಎನ್ನುತ್ತಾರೆ ಇಲ್ಲಿನ ಪರಿಸರ ಪ್ರೇಮಿಗಳು. ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಯೋಜನೆ ರೂಪಿಸಬೇಕು. ಆ ಮೂಲಕ ಕೊಡಗು ಜಿಲ್ಲೆಗೆ ಬರುವ ಪ್ಲಾಸ್ಟಿಕ್ ಬಾಟಲ್ ಗಳ ಹಾವಳಿ ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು.

ಕೊಡಗು ಜಿಲ್ಲೆಯ ಪ್ರಕೃತಿ ಹಾಗೂ ಜಲಮೂಲಗಳು ನಾಶವಾಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಕಾವೇರಿ ನದಿ ತಟಗಳಲ್ಲಿರುವ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಜಲ ಮೂಲಗಳು ನದಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರ ಕಾನೂನು ರೂಪಿಸಿ ಅನುಷ್ಠಾನಗೊಳಿಸಬೇಕು. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸಮರ್ಪಕ ಯೋಜನೆ ರೂಪಿಸಬೇಕು. ಕಾವೇರಿ ನದಿ ತಟಗಳನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವ ಮೂಲಕ ನದಿ ಸಂರಕ್ಷಣೆಗೆ ಸರ್ಕಾರ ಕಾಯ್ದೆ ರೂಪಿಸಿ ಜಾರಿ ಮಾಡಿದಲ್ಲಿ ಮಾತ್ರ ನದಿ ಸಂರಕ್ಷಣೆ ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ. ನದಿ ಜಲಮೂಲಗಳ ಸಂರಕ್ಷಣೆಗೆ ಅಗತ್ಯವಾದ ಅನುದಾನ ಸರ್ಕಾರ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಬೇಕು.ಶೀಘ್ರವಾಗಿ ಕುಶಾಲನಗರ, ಮಡಿಕೇರಿ ಮತ್ತಿತರ ಕಡೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿ ಪೂರ್ಣಗೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಲಿದೆ.