ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಫೀ.ಮಾ. ಕಾರ್ಯಪ್ಪ ಪ್ರತಿಮೆ

ರೂ. 12 ಲಕ್ಷ ವೆಚ್ಚದ ಯೋಜನೆಗೆ ಅವಕಾಶ

 

 

 

      

ಸಾರ್ವಜನಿಕರಲ್ಲಿ ಮನವಿ

 

ಇಂಡಿಯನ್ ಮಿಲಿಟರಿ ಅಕಾಡೆಮಿಯಂತಹ ಪ್ರತಿಷ್ಠಿತ ಆವರಣದಲ್ಲಿ ನಮ್ಮ ಸೇನಾನಿ ಫೀ.ಮಾ.ಕಾರ್ಯಪ್ಪ ಪ್ರತಿಮೆ ನಿರ್ಮಾಣದ ಅವಕಾಶ ದೊರೆತಿರುವುದು ಕೊಡಗಿಗೆ ಹಿರಿಮೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆ, ಸಮಾಜಗಳು ತಮ್ಮಿಂದಾಗುವ ಆರ್ಥಿಕ ಸಹಾಯ ನೀಡಲು ಕೋರಲಾಗಿದೆ. ಇದಕ್ಕಾಗಿ ಶಕ್ತಿ ಪತ್ರಿಕೆಯ ಸಹಕಾರದೊಂದಿಗೆ ಜಂಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ನೆರವು ನೀಡುವವರು ಈ ಖಾತೆಗೆ ಹಣ ಸಂದಾಯ ಮಾಡಲು ಕೋರಿದೆ. ರೂ. 500 ಮೇಲ್ಪಟ್ಟು ಹಣ ನೀಡಿದವರ ವಿವರವನ್ನು ಸಾರ್ವಜನಿಕವಾಗಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಹಣ ಸಂದಾಯ ಮಾಡಿದ ಬಳಿಕ ಹೆಸರು, ಊರು ಹಾಗೂ ಟ್ರಾನ್ಸಾಕ್ಷನ್ ಐ.ಡಿ ಸಹಿತ ಸ್ಕ್ರೀನ್‌ಶಾಟ್ಅನ್ನು ವಾಟ್ಸ್ಯಾಪ್  ಮೂಲಕ 9036149252 ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ.

- ಸಂ

ಹಣ ಕಳುಹಿಸಬೇಕಾದ ಖಾತೆಯ ವಿವರ

ಖಾತೆ ಹೆಸರು : CARIAPPA PRATIME NIDHI SANGRAHA SAMITHI

ಖಾತೆ ಸಂಖ್ಯೆ : 000721010000008

IFSC Code : UBIN0900079

 

ದೇಶದ ರಕ್ಷಣಾಪಡೆಯಲ್ಲಿ ವಿಶೇಷವಾಗಿ ಕೊಡಗು ಗುರುತಿಸಲ್ಪಡುವಲ್ಲಿ ಕಾರಣೀಭೂತರಾಗಿರುವ ದೇಶದ ರಕ್ಷಣಾ ಪಡೆಗಳ ಪಿತಾಮಹ ಖ್ಯಾತಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಯನ್ನು ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಸ್ಥಾಪಿಸುವ ಅವಕಾಶ ಲಭ್ಯವಾಗಿದೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಂತಹ ಪ್ರತಿಷ್ಠಿತವಾದ ಸ್ಥಳದಲ್ಲಿ ಶಾಶ್ವತವಾಗಿ ಐತಿಹ್ಯ ಹೊಂದಲಿರುವಂತಹ ರೀತಿಯಲ್ಲಿ ಸೇನಾನಿಯ ಪ್ರತಿಮೆ ನಿರ್ಮಾಣದ ಅವಕಾಶ ದಕ್ಷಿಣ ಭಾರತ ಕರ್ನಾಟಕ ರಾಜ್ಯದೊಂದಿಗೆ ವಿಶೇಷವಾಗಿ ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೊಂದು ಹಿರಿಮೆಯಾಗಲಿದೆ. ಈಗಾಗಲೇ ನವದೆಹಲಿಯಲ್ಲಿರುವ ಮಿಲಿಟರಿ ಪೆರೇಡ್ ಗ್ರೌಂಡ್‌ನಲ್ಲಿ ಫೀ.ಮಾ. ಕಾರ್ಯಪ್ಪ ಅವರ 8 ಅಡಿ ಎತ್ತರದ ಕಂಚಿನ ಪ್ರತಿಮೆಯೊಂದಿಗೆ ಈ ಮೈದಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಆರ್ಮಿ ಪೆರೇಡ್ ಗ್ರೌಂಡ್ ಎಂಬ ಹೆಸರನ್ನಿಡಲಾಗಿದೆ. ಈ ಹಿಂದಿನ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಮತ್ತು ಜನರಲ್ ದಿವಂಗತ ಬಿಪಿನ್‌ರಾವತ್ ಅವರುಗಳ ಸಹಕಾರದೊಂದಿಗೆ ಈ ಅವಕಾಶ ಲಭ್ಯವಾಗಿದೆ. ಜಿಲ್ಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಪ್ರಯತ್ನದ ಫಲವಾಗಿ ಇದು ಈಡೇರಿರುವದು ಸ್ಮರಣೀಯ. ಇದೀಗ ದೇಶದ ಏಕೈಕ ಮಿಲಿಟರಿ ಅಕಾಡೆಮಿಯಾಗಿರುವ (OTA ಚೆನ್ನೈಹೊರತಾಗಿ - ಶಾರ್ಟ್ ಕಮಿಷನ್) ಡೆಹ್ರಾಡೂನ್‌ನಲ್ಲಿ ಪ್ರತಿಮೆ ನಿರ್ಮಾಣದ ಚಿಂತನೆ ನಡೆದಿದೆ.

 

                                            IMA DEHRADUN              

 

ಅವಕಾಶ ಹೇಗೆ?

ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಮೂಲಕ ಪಾಸಿಂಗ್ ಔಟ್ ಆದ 50ನೇ ಬ್ಯಾಚ್‌ನ 50ನೇ ವರ್ಷದ ಸಂಭ್ರಮಾಚರಣೆ ಈ ವರ್ಷದ ಡಿಸೆಂಬರ್‌ನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ 50ನೇ ಕೋರ್ಸ್ನವರು ಫೀ. ಮಾ. ಕಾರ್ಯಪ್ಪ ಅವರ ಪ್ರತಿಮೆ ಅಳವಡಿಕೆಯ ಕೊಡುಗೆ ನೀಡಲು ಮುಂದಾಗಿದ್ದಾರೆ. 49ನೇ ಕೋರ್ಸ್ನವರು ಕಳೆದ ವರ್ಷ ತಮ್ಮ ಪಾಸಿಂಗ್ ಔಟ್‌ನ ನೆನಪಾಗಿ ದೇಶದ ಮತ್ತೋರ್ವ ಫೀಲ್ಡ್ ಮಾರ್ಷಲ್ ಬಿರುದು ಪಡೆದಿರುವ ಜನರಲ್ ಮಾಣಿಕ್ ಷಾ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಇದರಂತೆ 50ನೇ ಕೋರ್ಸ್ನವರು ಪಾಸಿಂಗ್ ಜಾಟ್ ಆಗಿ 50ನೇ ವರ್ಷದ ನೆನಪಿಗಾಗಿ ದೇಶದ ಇನ್ನೋರ್ವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ಸ್ಥಾಪಿಸಲು ಚಿಂತನೆ ಮಾಡಿದ್ದಾರೆ. 50ನೇ ಬ್ಯಾಚ್‌ನ ಮೂಲಕ ಪಾಸಿಂಗ್ ಔಟ್ ಆದ ಅಧಿಕಾರಿಗಳ ಪೈಕಿ ಕೊಡಗಿನವರಾದ ನಿವೃತ್ತ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ ಅವರು ಒಬ್ಬರಾಗಿದ್ದಾರೆ. ಈ ಹಿಂದೆ ಇವರು ಅಧಿಕಾರಿಯಾಗಿ 50 ವರ್ಷ ಸಂದಿದೆ. ಇದೀಗ 50ನೇ ಬ್ಯಾಚ್‌ನವರು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವರ ಮೂಲಕ ಅವರ ಬ್ಯಾಚ್‌ನವರು ಈ ಪ್ರಯತ್ನಕ್ಕೆ ಚಿಂತನೆ ಮಾಡಿದ್ದು ಕರ್ನಲ್ ಸಿ.ಪಿ. ಮುತ್ತಣ್ಣ ಅವರ ಮೂಲಕ ಹಣ ಕ್ರೋಢೀಕರಣದ ಪ್ರಯತ್ನ ನಡೆಸಿದ್ದಾರೆ. ಮುತ್ತಣ್ಣ ಅವರು ಇದರಂತೆ ಜಿಲ್ಲೆಯಲ್ಲಿ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನವರನ್ನು ಸಂಪರ್ಕಿಸಿದ್ದಾರೆ. ಇವರ ಸಹಕಾರದೊಂದಿಗೆ ಅಗತ್ಯ ಹಣ ಸಂಗ್ರಹಿಸಿ ಡೆಹ್ರಾಡೂನ್‌ನಲ್ಲಿ ಪ್ರತಿಮೆ ನಿರ್ಮಾಣದ ಪ್ರಯತ್ನಕ್ಕೆ ಮುಂದಾಗಲಾಗಿದೆ. ಅಂದಾಜು ರೂ. 12 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕಾರ್ಯಪ್ಪ ಅವರ 7 ಅಡಿ ಎತ್ತರದ ಕಂಚಿನ ಪ್ರತಿಮೆ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಪ್ರತಿಮೆಯೊಂದಿಗೆ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಶಾಶ್ವತವಾಗಿ ರೂಪುಗೊಳ್ಳಲಿದ್ದು ಇದು ಕೊಡಗಿಗೂ ಹೆಮ್ಮೆಯ ವಿಚಾರವಾಗಲಿದೆ. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕರ್ನಲ್ ಸಿ.ಪಿ. ಮುತ್ತಣ್ಣ ಹಾಗೂ ಎಫ್.ಎಂ.ಸಿ.ಜಿ.ಟಿ. ಫೋರಂನ ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರುಗಳು ಇದು ಒಂದು ಉತ್ತಮ ಅವಕಾಶವಾಗಿದೆ. ಕೊಡಗಿನವರಿಗೆ ಭವಿಷ್ಯದಲ್ಲೂ ಇದೊಂದು ಪ್ರೇರಣಾತ್ಮಕವಾದ ರೀತಿಯಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿನ ಪ್ರವೇಶ ದ್ವಾರದಲ್ಲಿ ಇತಿಹಾಸ ಹೊಂದಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಭಿಮಾನಿಗಳ ಆರ್ಥಿಕ ಸಹಕಾರ ಬಯಸುವದಾಗಿ ವಿನಂತಿಸಿದ್ದಾರೆ. ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಖ್ಯಾತಿಯ ಫೀ.ಮಾ. ಕಾರ್ಯಪ್ಪ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಗೌರವವಿದೆ. ಇವರು ಅಧಿಕಾರ ಸ್ವೀಕರಿಸಿದ ದಿನವಾದ ಜನವರಿ 14 ಆರ್ಮಿ ಡೇ ಎಂದು ಆಚರಿಸಲ್ಪಡುತ್ತಿರುವುದು ಕೂಡ ಕೊಡಗಿಗೆ, ಕೊಡಗಿನಿಂದ ಸೇನೆಗೆ ಸೇರ್ಪಡೆಗೊಳ್ಳುವವರಿಗೆ ಒಂದು ಪ್ರೌಢಿಮೆಯಾಗಿದೆ. ನವದೆಹಲಿಯ ಆರ್ಮಿ ಪೆರೇಡ್ ಮೈದಾನ ಸೇರಿದಂತೆ ದೇಶದ ಹಲವೆಡೆ ಕಾರ್ಯಪ್ಪ ಅವರ ಪ್ರತಿಮೆ, ಅವರ ಹೆಸರಿನ ರಸ್ತೆಗಳಿದ್ದು, ಇದೀಗ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿಯೂ ಇವರ ಖ್ಯಾತಿ - ಹಿರಿಮೆ ಚಿರಸ್ಥಾಯಿಯಾಗಲಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಸದ್ಯದಲ್ಲಿ ಚಾಲನೆ ದೊರೆಯಲಿದ್ದು, ಇದೀಗ ಸಾರ್ವಜನಿಕರಿಂದ ಅನುದಾನ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಕರ್ನಾಟಕ ಸರಕಾರದಿಂದಲೂ ಅಗತ್ಯ ಸಹಕಾರ ಸಿಗಲಿ ಎಂಬುದು ಆಶಯವಾಗಿದೆ.