ಸಾಂಪ್ರದಾಯಿಕ ಘನ ಯೂರಿಯಾಗಿಂತ ದ್ರವ ರೂಪದ ನ್ಯಾನೋ ಯೂರಿಯಾ ಪರಿಣಾಮಕಾರಿ
ವಿನೂತನ ತಂತ್ರಜ್ಞಾನದ ಬಳಕೆಗೆ ಕೇಂದ್ರ ಕಾಫಿ ಸಂಶೋಧನಾ ಕೇಂದ್ರ, ಕೆ.ವಿ.ಕೆ ಸಲಹೆ
ಭತ್ತ ಕೃಷಿ, ಕಾಫಿ ಬೆಳೆಗೆ ಅತ್ಯಮೂಲ್ಯವಾಗಿರುವ ಯೂರಿಯಾ ರಸಗೊಬ್ಬರವನ್ನು ದ್ರವ ರೂಪದಲ್ಲಿ ಆವಿಷ್ಕರಿಸಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (IFFCO) ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ 11 ಸಾವಿರ ರೈತರ ತಾಕುಗಳಲ್ಲಿ 94 ವಿವಿಧ ಬೆಳೆಗಳ ಮೇಲೆ ಪ್ರಯೋಗಗಳನ್ನು ಮಾಡಿ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗಿದೆ. 2021ರ ಜೂನ್‌ನಲ್ಲಿಯೇ ಈ ಪರಿಣಾಮಕಾರಿ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, IFFCOಇ-ಕಾಮರ್ಸ್ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರುಕಟ್ಟೆ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ಲಭ್ಯವಿದೆ.
ಕೇಂದ್ರ ಕಾಫಿ ಸಂಶೋಧನಾ ಕೇಂದ್ರವು ಈ ನೂತನ ದ್ರವ ರೂಪದ ಯೂರಿಯಾ(ನ್ಯಾನೋ ಯೂರಿಯಾ)ವನ್ನು ಕಾಫಿ ಬೆಳೆಯ ಮೇಲೂ ಪ್ರಯೋಗಿಸಿ ಯಶಸ್ವಿ ಕಂಡಿದ್ದು, ಬಳಕೆಗೆ ಸೂಚನೆ ನೀಡಿದೆ. 1 ಲೀಟರ್ ನೀರಿನಲ್ಲಿ 2 ಮಿಲಿ ಲೀಟರ್ ನ್ಯಾನೋ ಯೂರಿಯಾ ಬಳಸಿ ಕಾಫಿ ಎಲೆಗಳ ಮೇಲೆ ಸಿಂಪಡಿಸಿದರೆ ಉತ್ತಮ ಎಂದು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಸೂಚಿಸಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಕೂಡ ನ್ಯಾನೋ ಯೂರಿಯಾ ಬಳಕೆಗೆ ರೈತರಲ್ಲಿ ಪ್ರೋತ್ಸಾಹಿಸಿದ್ದು ಈ ಕುರಿತು ಮಾಹಿತಿ ನೀಡಿದೆ.
ಏನಿದು ನ್ಯಾನೋ ಯೂರಿಯಾ ದ್ರಾವಣ?
ನ್ಯಾನೋ ಯೂರಿಯಾದ 500 ಮಿಲಿಲೀಟರ್ ಬಾಟಲಿಯು 40,000 ಪಿ.ಪಿ.ಎಂ(parts per million) ಸಾರಜನಕ (Nitrogen) ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಯೂರಿಯಾದ ಒಂದು ಚೀಲದಿಂದ ಒದಗಿಸುವ ಸಾರಜನಕ ಪೋಷಕಾಂಶಕ್ಕೆ ಸಮವಾಗಿರುತ್ತದೆ. ಈ ಗೊಬ್ಬರವನ್ನು ಗಿಡಗಳ ಮೇಲ್ಭಾಗದಲ್ಲಿ ಸಿಂಪಡಿಸಿದರೆ ಬೇರು ಮಟ್ಟದವರೆಗೆ ತಲುಪಿ ಪರಿಣಾಮ ಬೀರುತ್ತದೆ.
ನ್ಯಾನೋ ಯೂರಿಯಾ ಒಂದು ವಿಶಿಷ್ಟ ಸಾರಜನಕವನ್ನು ಒದಗಿಸುವ ಗೊಬ್ಬರ. ಸಾರಜನಕವು ಸಸ್ಯದ ಪತ್ರ ಹರಿತ್ತಿನ, ಪ್ರೋಟೋ ಪ್ಲಾಸಂ, ಪ್ರೋಟಿನ್ ಹಾಗೂ ನ್ಯೂಕ್ಲಿಕ್ ಆಮ್ಲದ ಒಂದು ಭಾಗವಾಗಿದೆ. ಇದು ಗಿಡದ ಹಸಿರು ಬಣ್ಣಕ್ಕೆ, ಒಳ್ಳೆಯ ಬೆಳವಣಿಗೆಗೆ ಹಾಗೂ ಸಸ್ಯದ ಅಭಿವೃದ್ಧಿಗೆ ಕಾರಣವಾಗುತ್ತದೆ. ಭಾರತದ ಬಹುತೇಕ ಕಡೆಗಳಲ್ಲಿ ದೊರಕುವ ಮಣ್ಣುಗಳಲ್ಲಿ ಸಾರಜನಕದ ಕೊರತೆ ಇದೆ. ನ್ಯಾನೋ ಯೂರಿಯಾ ಬಳಕೆಯಿಂದ ಈ ಕೊರತೆ ನೀಗಿಸಬಹುದಾಗಿದೆ.
ಶೇಕಡ 80ರಷ್ಟು ಉಪಯೋಗಕಾರಿ
ರೈತರು ಸಾಂಪ್ರದಾಯಿಕ ಗೊಬ್ಬರವನ್ನು ಸಾಮಾನ್ಯಾಗಿ 2-3 ಪಾಲು ಮಾಡಿ, ಭೂಮಿ ಸಿದ್ಧಪಡಿಸುವ ಹಂತದಲ್ಲಿ ಮತ್ತು ಒಂದು ತಿಂಗಳ ನಂತರ ಮೇಲ್ಗೊಬ್ಬರವಾಗಿ ಒದಗಿಸುತ್ತಾರೆ. ಆದರೆ ಬೆಳೆಯು ಈ ಗೊಬ್ಬರವನ್ನು ಕೇವಲ ಶೇ.30-50 ರಷ್ಟು ಮಾತ್ರ ಬಳಸಿಕೊಳುತ್ತದೆ. ಉಳಿದ ಗೊಬ್ಬರ ಅಮೋನಿಯಾ ಅಥವಾ ನೈಟ್ರಸ್ ಆಕ್ಸೆöÊಡ್ ಅಥವಾ ನೈಟ್ರೇಟ್ ರೂಪದಲ್ಲಿ ನಷ್ಟವಾಗುತ್ತದೆ. ಇದರಿಂದ ಮಣ್ಣು, ನೀರು ಮತ್ತು ವಾಯುವಿನ ಮಾಲಿನ್ಯವಾಗುತ್ತದೆ. ಆದರೆ ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸಿದಲ್ಲಿ ಶೇಕಡ ೮೦ ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಜೊತೆಗೆ ಬೇರು ಬೆಳವಣಿಗೆಯಾಗುತ್ತವೆ. ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.
ಗುಣಲಕ್ಷಣಗಳು
ನ್ಯಾನೋ ಯೂರಿಯಾ ನೀರಿನಲ್ಲಿ ಸಮವಾಗಿ ಹರಡಿದ ಶೇಕಡ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ. ನ್ಯಾನೋ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕ ಸಸ್ಯದೊಳಗೆ ಹೈಡ್ರೋಲಿಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.
ಬಳಸುವ ವಿಧಾನ
ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳ ಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4ಮಿ.ಲೀ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಗಳಿಗಾಗಿ ಎರಡು ಬಾರಿ ಸಿಂಪಡಣೆ ಮಾಡಬೇಕು.
ಮೊದಲ ಸಿಂಪಡಣೆ: ಮೊಳಕೆ ಹೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25ದಿನಗಳ ನಂತರ.
ಎರಡನೆ ಸಿಂಪಡಣೆ: ಹೂ ಬರುವ ಮುಂಚಿತವಾಗಿ ಅಥವಾ 20-25 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಬೆಳೆ ಮತ್ತು ಅದರ ಸಾರಜನಕದ ಅಗತ್ಯವನ್ನು ಅವಲಂಬಿಸಿ ಸಿಂಪಡಿಸುವ ಸಂಖ್ಯೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
ಕಾರ್ಯ ವಿಧಾನ
ಎಲೆಗಳ ಮೇಲೆ ಸಿಂಪಡಿಸಿದಾಗ, ನ್ಯಾನೋ ಯೂರಿಯಾ ಸುಲಭವಾಗಿ ಸ್ಟೊಮ್ಯಾಟೋ ಮತ್ತು ಇತರ ರಂಧ್ರಗಳ ಮೂಲಕ ಪ್ರವೇಶಿಸಿ ಸಸ್ಯಕೋಶಗಳಲ್ಲಿ ಸೇರಿಕೊಳ್ಳುತ್ತದೆ. ತದನಂತರ, ಆಹಾರ ಸಾಗಿಸುವ ನಾಳವಾದ ಫ್ಲೋಯಂ ಮುಖಾಂತರ ಎಲೆಯಿಂದ ಕಾಯಿ, ಕಾಳುಗಳು ಮತ್ತು ಹೂಗಳಿಗೆ ತಲುಪುತ್ತದೆ.
ಸೂಚನೆ
ಸಿಂಪಡಣೆಗೂ ಮುನ್ನ ನ್ಯಾನೋ ಯೂರಿಯಾ ಬಾಟಲ್‌ನಗನ್ನು ಚೆನ್ನಾಗಿ ಅಲ್ಲಾಡಿಸಬೇಕು. ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪಡಣೆ ಮಾಡಬೇಕು. ಸಿಂಪಡಣೆ ಮಾಡಿದ 12 ಗಂಟೆಯ ಒಳಗಾಗಿ ಮಳೆಯಾದಲ್ಲಿ ಪುನಃ ಸಿಂಪಡಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಜೈವಿಕ ಸಸ್ಯ ಪ್ರಚೋದಕಗಳ ಜೊತೆಗೆ ಸಂಪೂರ್ಣ ನೀರಿನಲ್ಲಿ ಕರಗುವ ಗೊಬ್ಬರ ಮತ್ತು ಕೃಷಿ ರಸಾಯನಗಳೊಂದಿಗೆ ಮಿಶ್ರಣ ಮಾಡಿ ಬಳಸಬಹುದು.
ಸಾಗಾಟದ ಖರ್ಚಿಲ್ಲ
500 ಮಿಲಿ (ಅರ್ಧ ಲೀಟರ್) ಬಾಟಲಿಗೆ ರೂ.240 ರಂತೆ ನಿಗಧಿಪಡಿಸಲಾಗಿದ್ದು, ಇದು ಒಂದು ಬ್ಯಾಗ್ ಯೂರಿಯಾದಷ್ಟು ಸಾಮರ್ಥ್ಯ ಹೊಂದಿದ್ದು, ಸಾಂಪ್ರದಾಯಿಕ ಯೂರಿಯಾಗೆ ಅಗತ್ಯವಿರುವ ಸಾಗಾಟ ವಾಹನಗಳು, ಅದರಿಂದ ಸೃಷ್ಟಿಯಾಗುವ ಖರ್ಚು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ.
500 ಮಿಲಿ ಲೀಟರ್ ನ್ಯಾನೋ ಯೂರಿಯಾ 1 ಚೀಲ ಘನ ಯೂರಿಯಾ ರಸಗೊಬ್ಬರ ಬಳಸಿದಷ್ಟು ಸಮವಾಗಿರುತ್ತದೆ. ಘನ ರಸಗೊಬ್ಬರವು ಚೀಲಕ್ಕೆ ರೂ.266 ಇದ್ದು, ಸಬ್ಸಿಡಿ ಆಧಾರದಲ್ಲಿ ರೈತರಿಗೆ ದೊರಕುತ್ತದೆ. ನ್ಯಾನೋ ಯೂರಿಯಾಗೆ ಸರಕಾರದಿಂದ ಸಬ್ಸಿಡಿ ದೊರಕದಿದ್ದರೂ 500 ಮಿಲಿ ಲೀಟರ್ ನ್ಯಾನೋ ಯೂರಿಯಾವು ರೂ.240 ಕ್ಕೆ ಅಗ್ಗವಾಗಿ ದೊರಕುತ್ತದೆ. ಅತ್ಯಂತ ಪರಿಣಾಮಕಾರಿಯಾಗಿರುವ ಈ ನೂತನ ಗೊಬ್ಬರವನ್ನು ತರಕಾರಿ, ಕೃಷಿ ಬೆಳೆಗಳಿಗೆ, ಕಾಫಿ, ಕರಿಮೆಣಸಿನ ಮೇಲೂ ಬಳಕೆಮಾಡಬಹುದಾಗಿದೆ. -ಶಬಾನ ಶೇಖ್, ಕೃಷಿ ಇಲಾಖೆ, ಜಿಲ್ಲಾ ಜಂಟಿ ನಿರ್ದೇಶಕಿ |
ನ್ಯಾನೋ ಯೂರಿಯಾವನ್ನು ಗಿಡಗಳು ಅತ್ಯಂತ ವೇಗವಾಗಿ ಹೀರಿಕೊಳ್ಳುವುದರಿಂದ ತಕ್ಷಣವೇ ಅದರ ಪರಣಾಮವನ್ನು ಗಿಡಗಳ ಮೇಲೆ ಬೀರುತ್ತದೆ. ಸಾಂಪ್ರದಾಯಿಕ ಯೂರಿಯಾದಿಂದ ಮಣ್ಣಿನ ಗುಣಲಕ್ಷಣಗಳು ಕಾಲ-ಕ್ರಮೇಣ ಕುಗ್ಗುತ್ತವೆ. ಆದರೆ ನ್ಯಾನೋ ಯೂರಿಯಾದಿಂದ ಈ ರೀತಿ ಆಗುವುದಿಲ್ಲ . ಫಸಲಿಗೆ ಕೀಟ ಭಾದೆ, ರೋಗದ ಯಾವುದೇ ತೊಂದರೆಗಳು ಬರುವುದಿಲ್ಲ. ನ್ಯಾನೋ ಯೂರಿಯಾ ಬಳಕೆ ಹೆಚ್ಚಾದೊಡನೆ, ಘನ ರೂಪದ ಸಾಂಪ್ರದಾಯಿಕ ಯೂರಿಯಾ ಬಳಕೆ, ಸರಬರಾಜು ಕೂಡ ಕಾಲ-ಕ್ರಮೇಣ ನಿಲ್ಲಬಹುದು -ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಕೆ.ವಿ.ಕೆ, ಗೋಣಿಕೊಪ್ಪಲು |