ಉತ್ತರ ಕೊಡಗಿನಲ್ಲಿ ಕೃಷಿಗೆ ಕಂಟಕವಾಗಿರುವ ಆಫ್ರಿಕನ್ ದೈತ್ಯ ಶಂಕು ಹುಳು

 

8 ವರ್ಷಗಳಿಂದ ಬಾರದ ನಿಯಂತ್ರಣ-ಮುಂದುವರೆದ ಕೃಷಿಕರ ಗೋಳು 

                                 

ಕಳೆದ 2015ರಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆ ಹೋಬಳಿಗೆ ಹೊರ ಜಿಲ್ಲೆಯಿಂದ ಗೊಬ್ಬರ ಲಾರಿಯ ಮೂಲಕ ಬಂದ ಕೆಲವು ಶಂಕುಹುಳಗಳು ಇದೀಗ ಅಸಂಖ್ಯಾತವಾಗಿ ಬೆಳೆದುಬಿಟ್ಟಿದ್ದು, ಕಳೆದ ೮ ವರ್ಷಗಳಿಂದಲೂ ಈ ಭಾಗದ ಕೃಷಿಕರ ನೆಮ್ಮದಿ ಕಸಿಯುತ್ತಿವೆ.

ಉತ್ತರ ಕೊಡಗಿನ  ಹಲವು ಗ್ರಾಮಗಳಲ್ಲಿ ಕೃಷಿಗೆ ಕಂಟಕವಾಗಿರುವ ಈ ಶಂಕುಹುಳುಗಳನ್ನು ನಾಶ ಗೊಳಿಸುವಲ್ಲಿ ಈವರೆಗೆ ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲ ಗೊಂಡಿದ್ದು, ಮಳೆ ಆರಂಭವಾಗುತ್ತಲೇ ಭೂಮಿಯಿಂದ ಮೇಲೆ ಬರುವ, ಕೃಷಿ ವಿರೋಧಿ ಹುಳು ಎಂದೇ ಪರಿಗಣಿಸಲ್ಪಟ್ಟಿರುವ ಈ ಶಂಕುಗಳನ್ನು ನಿರ್ನಾಮ ಮಾಡದಿದ್ದರೆ,  ಮುಂದಿನ ಕೆಲವೇ ವರ್ಷಗಳಲ್ಲಿ ಈ ಭಾಗದ ಕೃಷಿಯನ್ನು ಆಪೋಷನ ಮಾಡುವ ಆತಂಕವೂ ಸೃಷ್ಟಿಯಾಗಿದೆ. 

ಕೊಡಗಿನ ಕೃಷಿ ಇತಿಹಾಸ ದಲ್ಲಿಯೇ ದೈತ್ಯ ಸಮಸ್ಯೆಯಾಗಿ ಮಾರ್ಪಟ್ಟಿರುವ ಆಫ್ರಿಕನ್ ಶಂಕು ಹುಳುವಿನ ಬಾಧೆಯಿಂದಾಗಿ ಉತ್ತರ ಕೊಡಗಿನ ಕೃಷಿಕರ ಬದುಕು ತಲ್ಲಣಗೊಳ್ಳುತ್ತಿದೆ.  ಕಳೆದ 2015ರಲ್ಲಿ ಪ್ರಥಮವಾಗಿ ಕಂಡುಬಂದ ಈ ಸಮಸ್ಯೆಗೆ ಇಂದಿಗೂ ಶಾಶ್ವತ ಪರಿಹಾರ ಲಭಿಸದ ಹಿನ್ನೆಲೆ ಕೃಷಿಕರು ನೆಮ್ಮದಿ ಕಳೆದುಕೊಂಡಿದ್ದಾರೆ.

ಯಾವದೇ ಕೃಷಿ ಇದ್ದರೂ ದಿನಮಾತ್ರದಲ್ಲಿ ಬಲಿ ತೆಗೆದುಕೊಳ್ಳುವ ಈ ಶಂಕುಹುಳುಗಳು, ಬೆಳೆದು ನಿಂತ ಕೃಷಿ ಫಸಲು, ಹಸಿರೆಲೆಗಳ ಮೇಲೆ ಧಾಳಿಯಿಟ್ಟು  ಸರ್ವನಾಶ ಮಾಡುತ್ತಿವೆ. ಸಾಮೂಹಿಕವಾಗಿ ಪರಿಹಾರ ಕಾರ್ಯ ಕೈಗೊಳ್ಳದ ಹೊರತು ಇದರಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬAತ ಸ್ಥಿತಿ ನಿರ್ಮಾಣವಾಗಿದೆ.

ಬೆಳೆಗಾರರು ಒಗ್ಗೂಡಿ ಕಡಿವಾಣ ಹಾಕದಿದ್ದರೆ ಮುಂದಿನ ಕೆಲ ವರ್ಷಗಳಲ್ಲಿ ಕೊಡಗಿನ ಇತರೆಡೆಗೂ ಈ ಹುಳುಗಳು ವ್ಯಾಪಿಸಿ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅದಕ್ಕೂ ಮುನ್ನವೇ ಕೃಷಿಕರು ಎಚ್ಚೆತ್ತು ಕೊಳ್ಳಬೇಕಿದೆ. ಕಾಫಿ ಮಂಡಳಿ ಯೊಂದಿಗೆ ಇತರ ಇಲಾಖೆಗಳೂ ಕೈಜೋಡಿಸಿ ಆಫ್ರಿಕನ್ ದೈತ್ಯ ಶಂಕು ಹುಳಗಳಿಂದ ಕೃಷಿ ಬೆಳೆಗಳು ಹಾಗೂ ಕೃಷಿಕರ ಬದುಕನ್ನು ರಕ್ಷಿಸಬೇಕಿದೆ.

ಏನಿದು ದೈತ್ಯ ಹುಳು:  ಆಫ್ರಿಕನ್ ದೈತ್ಯ ಶಂಕು ಹುಳುಗಳು ಸದ್ಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ, ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ, ಕೆರೆಹಳ್ಳಿ, ಶಿರಂಗಾಲ ಸುತ್ತಮುತ್ತಲ ಸುಮಾರು 250ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಕಂಡು ಬರುತ್ತಿವೆ. ಯಾವುದೇ ಕೃಷಿಯ ಹಸಿರೆಲೆಗಳು ಒಂದೆರಡು ದಿನ ಗಳಲ್ಲಿಯೇ ಇವುಗಳ ಆಹಾರವಾಗುತ್ತಿವೆ.

 

 

ಮಂಡ್ಯದಿಂದ ಬಂದ ಶಂಕು ಹುಳು?:  ಕಳೆದ 2015ರಲ್ಲಿ ಹಂಡ್ಲಿ ಭಾಗಕ್ಕೆ ಮಂಡ್ಯ ಕಡೆಯಿಂದ ಲಾರಿಯಲ್ಲಿ ಗೊಬ್ಬರ ತರಲಾಗಿದ್ದು, ಇದರೊಳಗೆ ಅಡಗಿದ್ದ ಒಂದೆರಡು ಶಂಕುಹುಳುವನ್ನು ನಿರ್ಲಕ್ಷಿಸಿ ತೋಟದ ಬದಿಯಲ್ಲೇ ಎಸೆದ ಪರಿಣಾಮ ಇಂದು ನೂರಾರು ಬೆಳೆಗಾರರು ಬೆಲೆ ತೆರುವಂತಾಗಿದೆ. ಅಂದು ಕೊಡಗಿನ ನೆಲ ಸೇರಿದ ಆ ಶಂಕುಹುಳುಗಳು ತನ್ನ ವಂಶಾಭಿವೃದ್ಧಿ ಮಾಡಿಕೊಂಡು ಇಂದು ಲೆಕ್ಕಕ್ಕೇ ಸಿಗದಷ್ಟು ಬೆಳೆದು ಬೆಳೆಗಾರರ ಬದುಕನ್ನು ಕೊರೆಯುತ್ತಿದೆ ಎಂದು ಸ್ಥಳೀಯ ಕೃಷಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ಏಳೆಂಟು ವರ್ಷಗಳ ಇವುಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇವೆ. ಪ್ರಥಮವಾಗಿ ಆಫ್ರಿಕನ್ ದೈತ್ಯ ಶಂಕು ಹುಳುಗಳು ಶನಿವಾರಸಂತೆಯ ಬೆಳ್ಳಾರಳ್ಳಿಯ ಸಮೀಪದ ಕೆಲವು ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದವು. ಈ ವರ್ಷವೂ ಕೂಡ ಇದರ ಬಾಧೆ ಪ್ರಾರಂಭವಾಗಿದ್ದು, ಕಾಫಿ ಕಾಂಡಗಳ ಸಿಪ್ಪೆ ಹಾಗೂ ಎಲೆಯನ್ನು ತಿನ್ನುವ ಮೂಲಕ ಗಿಡಗಳ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿದೆ. ಇದರೊಂದಿಗೆ ಅಡಿಕೆ, ಬಾಳೆ, ಪಪ್ಪಾಯಿ, ಕರಿಮೆಣಸು, ಕಿತ್ತಳೆ, ಶುಂಠಿ ಕೃಷಿಯ ಮೇಲೆ ಭಾರೀ ಪ್ರಮಾಣದ ಧಾಳಿ ನಡೆಸುತ್ತಿವೆ.

ಮಳೆಗಾಲದಲ್ಲೇ ಹೆಚ್ಚು ಧಾಳಿ: ಬೇಸಿಗೆ ಸಂದರ್ಭ ಮಣ್ಣಿನೊಳಗೆ ಸೇರುವ ದೈತ್ಯ ಹುಳುಗಳು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮೇಲೆ ಬರುತ್ತವೆ. ಇವುಗಳು ಕಾಫಿ, ಪ್ರತಿ ಮರಗಿಡ, ಶುಂಠಿ, ಕರಿಮೆಣಸು, ಗೆಣಸು, ಗದ್ದೆ ಪೈರು ಸೇರಿದಂತೆ ಎಲ್ಲೆಂದರಲ್ಲಿ ನೆಲೆಕಂಡುಕೊಂಡು ಗಿಡಮರದ ಕಾಂಡಗಳನ್ನು ಕೊರೆಯುವುದು, ಹಸಿರೆಲೆಗಳನ್ನು ತಿನ್ನಲು ಪ್ರಾರಂಭಿಸು ತ್ತವೆ. ಇವುಗಳು ಒಮ್ಮೆ ಧಾಳಿ ನಡೆಸಿದರೆ ನಂತರ ಆ ಕಾಫಿ ಗಿಡ ಬದುಕುಳಿ ಯುವದೇ ಇಲ್ಲ. ಎರಡು ದಶಕಗಳ ಕಾಲ ಆರೈಕೆ ಮಾಡಿಕೊಂಡು ಬಂದಿದ್ದ ಕಾಫಿ ಗಿಡಗಳು ಶಂಕುಹುಳುವಿನ ಬಾಧೆಗೆ ಒಳಗಾಗಿ ಕಣ್ಣೆದುರೇ ನಾಶವಾಗುವ ದನ್ನು ನೋಡುವ ದುರ್ದೈವ ಈ ಭಾಗದ ಬೆಳೆಗಾರರಿಗೆ ಒದಗಿ ಬಂದಿದೆ.

ಇದೀಗ ಅಲ್ಲಲ್ಲಿ ಕಾಣಸಿಗುತ್ತಿರುವ ಈ ಹುಳು, ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿರುತ್ತವೆ ಮತ್ತು ಹಗಲಿನ ವೇಳೆ ಮರಗಳ ಮೇಲೆ, ಬಿದ್ದಿರುವ ರೆಂಬೆ ಕೊಂಬೆಗಳ ಮೇಲೆ, ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತವೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಕಾರ್ಯ ಚಟುವಟಿಕೆ ಆರಂಭಗೊಳ್ಳುತ್ತದೆ. ಇದು ಕಾಫಿ, ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ, ನರ್ಸರಿ ಗಿಡ ಗಳು ಸೇರಿದಂತೆ 500ಕ್ಕೂ ಹೆಚ್ಚು ಸಸ್ಯ ಗಳಿಗೆ ಹಾನಿ ಮಾಡುತ್ತದೆ. ಇದರ ಜೀವಿತಾವಧಿ 3-5 ವರ್ಷಗಳಾಗಿದ್ದು, ಕೆಲವು ಹುಳುಗಳು 9 ವರ್ಷಗಳವ ರೆಗೂ ಜೀವಿಸುತ್ತವೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಯಾಚ್ ಅಂಡ್ ಕಿಲ್ ಮಾತ್ರ ದಾರಿ: ಇದೀಗ ಹಂಡ್ಲಿ, ಬೆಳ್ಳಾರಳ್ಳಿ, ಶಿರಂಗಾಲ, ಕೆರೆಹಳ್ಳಿ ಗ್ರಾಮ ವ್ಯಾಪ್ತಿಯ 250ಕ್ಕೂ ಅಧಿಕ ಏಕರೆ ಕೃಷಿ ಪ್ರದೇಶ ಈ ಹುಳುವಿನ ಬಾಧೆಗೆ ಒಳಗಾಗಿದೆ. ಕಳೆದ 2016ರಲ್ಲಿ ಸುಮಾರು 50 ಏಕರೆ ಪ್ರದೇಶಕ್ಕೆ ವ್ಯಾಪಿಸಿದ ಹುಳುಗಳ ಹಾವಳಿ ಇಂದು 250 ಏಕರೆಗೆ ವಿಸ್ತರಿಸಿದೆ. ಗಂಡು ಹಾಗೂ ಹೆಣ್ಣಿನ ಅಂಶಗಳು ಒಂದೇ ಹುಳದಲ್ಲಿ ಕಾಣಸಿ ಗುತ್ತಿದೆ. ಒಂದು ಹುಳು ಸಾಮಾನ್ಯ ವಾಗಿ ವಾರ್ಷಿಕ 150 ರಿಂದ 200 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇವುಗಳ ಸಂತಾನೋತ್ಪತ್ತಿಯೂ ಶೀಘ್ರವಾಗಿದ್ದು, ಹುಳುಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಇದಕ್ಕೆ ಪರಿಹಾರ ಒಂದೇ ‘ಕ್ಯಾಚ್ ಅಂಡ್ ಕಿಲ್’! ಎಲ್ಲಾ ಹುಳುಗಳನ್ನು ಹಿಡಿದು ನಂತರ ಸಾಯಿಸುವದೇ ಇದಕ್ಕೆ ಉಳಿದಿರುವ ಪರಿಹಾರ. ಇನ್ನಿತರ ಯಾವುದೇ ಕೀಟನಾಶಕದಿಂದ ಇದರ ನಿರ್ಮೂಲನೆ ಪರಿಣಾಮಕಾರಿಯಾಗಿ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದು, ಅದರಂತೆ ಕಳೆದ 2017ರಲ್ಲಿ 25 ಟನ್‌ಗೂ ಅಧಿಕ ಶಂಕುಹುಳುಗಳನ್ನು ಹಿಡಿದು ಸಾಯಿಸಲಾಗಿದೆ!

ನಂತರ 2018 ಹಾಗೂ 2019ರಲ್ಲಿ ಒಂದಿಷ್ಟು ಹುಳುಗಳನ್ನು ಹಿಡಿದು ನಾಶಪಡಿಸಲಾಗಿತ್ತು. ಆದರೆ 2020ರ ಕೊರೊನಾ ವರ್ಷದಲ್ಲಿ ಶಂಕುಹುಳುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಮತ್ತೆ ಅವುಗಳ ಉಪಟಳ ಆರಂಭವಾಗಿದೆ. ಸುಧಾರಣಾ ಕ್ರಮಗಳನ್ನು ನಿರಂತರವಾಗಿ ಪಾಲಿಸಿದರೆ ಇವುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ತಜ್ಞರು ಅಭಿಪ್ರಾಯಿಸಿದ್ದಾರೆ.

ಬೆಳ್ಳಾರಳ್ಳಿ-ಹಂಡ್ಲಿ ಗ್ರಾಮ ವ್ಯಾಪ್ತಿಯ ಸುರೇಶ್‌ಬಾಬು, ಪುಷ್ಪಾ ನಾಗರಾಜ್, ಪವನ್, ಸಂತೋಷ್ ಕುಮಾರ್, ಪ್ರದೀಪ್, ಶಿವಶೇಖರ್ ಸೇರಿದಂತೆ ಅವರುಗಳಿಗೆ ಸೇರಿದ ಕಾಫಿ ತೋಟ, ಗದ್ದೆಗಳಲ್ಲಿ ಹೆಚ್ಚಾಗಿ ಕಂಡುಬಂದಿರುವ ಈ ಹುಳುಗಳು ಕೃಷಿಯನ್ನು ಭಾಗಶಃ ನಾಶಪಡಿಸುತ್ತಿವೆ. ಬೆಳೆಗಾರರು ದಿನನಿತ್ಯ ಆತಂಕದ ಕ್ಷಣಗಳನ್ನೇ ಎದುರಿಸುತ್ತಿದ್ದಾರೆ.

ಶಂಕುಹುಳುಗಳು ಅಂಟಿನ ದ್ರವವನ್ನು ಒಳಗೊಂಡಿದ್ದು, ಇವುಗಳನ್ನು ಕೈಯಿಂದ ಮುಟ್ಟಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಕೂಲಿ ನೀಡಿ ಕಾರ್ಮಿಕರ ಮನವೊಲಿಸಿ ಕೆಲಸ ಮಾಡಿಸಿಕೊಳ್ಳಬೇಕಿದೆ. ಕೆಲವೊಮ್ಮೆ ನಮ್ಮ ತೋಟವನ್ನು ರಕ್ಷಿಸಿಕೊಳ್ಳಲು ಅನ್ಯ ಮಾರ್ಗವಿಲ್ಲದೇ ನಾವುಗಳೇ ಶಂಕುಹುಳುಗಳನ್ನು ಹಿಡಿಯುತ್ತಿದ್ದೇವೆ ಎಂದು ಬೆಳೆಗಾರರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಒಟ್ಟಾರೆ ಹುಳುಗಳನ್ನು ಕ್ಯಾಚ್ ಅಂಡ್ ಕಿಲ್ ಮೂಲಕವೇ ನಿಯಂತ್ರಿಸಬೇಕು ಎಂದು ಕಾಫಿ ಮಂಡಳಿಯ ತಜ್ಞರು ತಿಳಿಸಿದ್ದಾರೆ. ಈ ಭಾಗದ ಕೃಷಿಕರ ಜೀವನಾಧಾ ರವಾಗಿರುವ ಕಾಫಿ, ಬಾಳೆ, ಕರಿಮೆಣಸು, ತರಕಾರಿ ಬೆಳೆಗಳನ್ನು ಶಂಕುಹುಳುಗಳಿಂದ ರಕ್ಷಿಸಿಕೊಳ್ಳಲು ಬೆಳೆಗಾರರು ಹೆಣಗಾಡುತ್ತಿದ್ದಾರೆ. ಈಗಾಗಲೇ 300 ಏಕರೆಗೂ ಅಧಿಕ ಪ್ರದೇಶದಲ್ಲಿ ಶಂಕುಹುಳುಗಳು ಕಂಡುಬಂದಿದ್ದು, ಇವುಗಳ ನಿರ್ಮೂಲನೆಗೆ ಕಾಫಿ ಮಂಡಳಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಹತೋಟಿ ಕ್ರಮಗಳೇನು-ಕಾಫಿ ಮಂಡಳಿಯಿಂದ ಸಲಹೆಗಳೇನು?

ಆಫ್ರಿಕನ್ ದೈತ್ಯ ಶಂಕುಹುಳುಗಳು ಕಂಡುಬಂದಿರುವ ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಶಂಕುಹುಳುಗಳನ್ನು ಹಿಡಿದು ಸಾಯಿಸುವುದೇ ಸದ್ಯಕ್ಕೆ ಉಳಿದಿರುವ ಪರಿಹಾರ. ಹುಳುಗಳನ್ನು ಆಕರ್ಷಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾಮೂಹಿಕ ನಿಯಂತ್ರಣ ಕ್ರಮಗಳನ್ನು ಕೈಗೊಂಡಾಗ ಮಾತ್ರ ಸಮಸ್ಯೆಯ ಸಂಕೋಲೆಯಿಂದ ಹೊರ ಬರಬಹುದು. ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ. ಚಂದ್ರಶೇಖರ್ ಅವರ ಸೂಚನೆಯಂತೆ ಈಗಾಗಲೇ ಶಂಕು ಹುಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ನಿಯಂತ್ರಣದ ಬಗ್ಗೆ ಬೆಳೆಗಾರರಿಗೆ ಎಲ್ಲಾ ರೀತಿಯ ತರಬೇತಿ, ಮಾಹಿತಿ ನೀಡಲಾಗಿದೆ ಎಂದು ಜೆಎಲ್‌ಓ ರಂಜಿತ್ ತಿಳಿಸಿದ್ದಾರೆ.

ರಾಸಾಯನಿಕ ಬಳಕೆ: ಒಂದು ಏಕರೆ ಪ್ರದೇಶದಲ್ಲಿ ಹುಳುಗಳ ನಿಯಂತ್ರಣಕ್ಕೆ  160-240 ಗ್ರಾಂ ಲಾರ್ವಿನ್ ಪುಡಿಯನ್ನು 60 ಕೆ.ಜಿ. ಅಕ್ಕಿ ತೌಡಿನೊಂದಿಗೆ ಮಿಶ್ರ ಮಾಡಿ ನಂತರ ೬ ಕೆ.ಜಿ. ಬೆಲ್ಲವನ್ನು 5 ಲೀಟರ್ ಬಿಸಿ ನೀರಿನಲ್ಲಿ ಕರಗಿಸಿ, ಬೆಲ್ಲದ ದ್ರಾವಣಕ್ಕೆ 300 ಮಿ.ಲೀ. ಹರಳೆಣ್ಣೆ ಮಿಶ್ರ ಮಾಡಿ, ಈ ದ್ರಾವಣವನ್ನು ನಿಧಾನವಾಗಿ ತೌಡು-ಲಾರ್ವಿನ್ ಮಿಶ್ರಣದೊಂದಿಗೆ ಮಿಶ್ರಮಾಡಬೇಕು. ನಂತರ 150 ಗ್ರಾಂ ಮಿಶ್ರಣದ ಉಂಡೆಗಳನ್ನು ಪ್ರತಿ 4 ಗಿಡಗಳ ಮಧ್ಯೆ 400 ಸ್ಥಳಗಳಲ್ಲಿ ಇರಿಸಬೇಕು.

ಪಪ್ಪಾಯ-ರಾಸಾಯನಿಕ: 160-240 ಗ್ರಾಂ ಲಾರ್ವಿನ್ ಪುಡಿಯನ್ನು ಕತ್ತರಿಸಿದ 60 ಕೆ.ಜಿ. ಪಪ್ಪಾಯ ಹಸಿ ಕಾಯಿ/ಎಲೆ/ಕಾಂಡ ಬೆರೆಸಿ ನಂತರ ೬ ಕೆ.ಜಿ. ಪುಡಿ ಬೆಲ್ಲವನ್ನು ಮಿಶ್ರಣ ಮಾಡಿ, ಒಂದು ಏಕರೆ ಪ್ರದೇಶಕ್ಕೆ 150 ಗ್ರಾಂ ಮಿಶ್ರಣದ ತುಂಡುಗಳನ್ನು 400 ಸ್ಥಳಗಳಲ್ಲಿ ಪ್ರತಿ 4 ಗಿಡಗಳ ಮಧ್ಯೆ ಇಡಬೇಕು. ಶೇಖರಣೆಗೊಳ್ಳುವ ಶಂಕುಹುಳುಗಳನ್ನು ಮಣ್ಣಿನಲ್ಲಿ ಗುಂಡಿ ತೋಡಿ, ಅದರೊಳಗೆ ಹುಳುಗಳನ್ನು ಸುರಿದು ಉಪ್ಪು-ಸುಣ್ಣ ಹಾಕಿ ಮಣ್ಣು ಮುಚ್ಚಬೇಕು. ಹೀಗೆ ಮಾಡಿದ್ದಲ್ಲಿ ಒಂದೆರಡು ದಿನಗಳಲ್ಲಿ ಎಲ್ಲಾ ಹುಳುಗಳು ಸಾವನ್ನಪ್ಪುತ್ತವೆ.ಅಥವಾ ಶೇ. 5ರಷ್ಟು ಮೆಟಾಲ್ಡಿಹೈಡ್ ಹರಳುಗಳನ್ನು ಶಂಕುಹುಳುಗಳು ಹೆಚ್ಚು ಕಂಡುಬರುವ ಸ್ಥಳಗಳಲ್ಲಿ-ಗಿಡಗಳ ಬುಡದಲ್ಲಿ ಹರಡಬೇಕು ಎಂದು ಕಾಫಿ ಮಂಡಳಿಯ ತಂತ್ರಜ್ಞರು ಸಲಹೆ ನೀಡಿದ್ದಾರೆ.

ಇದೀಗ ತೇವಾಂಶ ಕಡಿಮೆ ಇರುವ ಹಿನ್ನೆಲೆ ಹೆಚ್ಚಿನ ಹುಳುಗಳು ಹೊರಗೆ ಬರುತ್ತಿಲ್ಲ. ಮಳೆ ಆರಂಭವಾಗಿ ತೇವಾಂಶ ಅಧಿಕವಾದಂತೆ ಹುಳುಗಳು ಮೇಲೆ ಬಂದು ಹಸಿರನ್ನು ತಿನ್ನಲು ಪ್ರಾರಂಭಿಸುತ್ತವೆ. ಬೆಳೆಗಾರರು ಸಾಮೂಹಿಕವಾಗಿ ನಿಯಂತ್ರಣ ಕ್ರಮ ಕೈಗೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಈ ಬಗ್ಗೆಯೂ ಮಂಡಳಿಯಿಂದ ತಿಳುವಳಿಕೆ ನೀಡಲಾಗುತ್ತಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.