ಮಡಿಕೇರಿ ಮಂಗಳಾದೇವಿ ನಗರ ಬೆಟ್ಟದಲ್ಲಿ ಮರಗಳ ಹನನ

 

 

ಅರಣ್ಯ ಇಲಾಖೆಯಿಂದ ಮೊಕದ್ದಮೆ ದಾಖಲು

 

 

ಮಂಜಿನ ನಗರಿ ಮಡಿಕೇರಿ ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದ್ದು, ಅಲ್ಲಲ್ಲಿ ರೆಸಾರ್ಟ್, ವಿಲ್ಲಾಗಳ ನಿರ್ಮಾಣಕ್ಕಾಗಿ ಮರಗಳನ್ನು ಕಡಿದುರುಳಿಸಿ ಬೆಟ್ಟಗಳನ್ನು ಕೊರೆಯಲಾಗುತ್ತಿದೆ. ಅಂತೆಯೇ ಬೆಟ್ಟ ಪ್ರದೇಶವಾದ, ಅಪಾಯದ ತೂಗು ಕತ್ತಿಯನ್ನು ತಲೆಯ ಮೇಲೇ ತೂಗಾಡಿಸಿಕೊಂಡೇ ಇರುವ ಮಂಗಳಾದೇವಿ ನಗರದಲ್ಲಿ ಮತ್ತೆ ಮರಗಳ ಹನನವಾಗಿದ್ದು, ಬೆಟ್ಟ ಪ್ರದೇಶವನ್ನೇ ಯಂತ್ರಗಳ ಮೂಲಕ ಕೊರೆಯಲಾಗುತ್ತಿದೆ. ಅರಣ್ಯ ಸಂಪತ್ತಾಗಿರುವ ಬೆಲೆ ಬಾಳುವ ಮರಗಳನ್ನು ಯಾವದೇ ಪೂರ್ವಾನು ಮತಿ ಇಲ್ಲದೆ ಕಡಿದುರುಳಿಸಿರುವ ಕಾರಣಕ್ಕಾಗಿ ಇದೀಗ ಅರಣ್ಯ ಇಲಾಖೆ ಸಂಬಂಧಿಸಿದ ಜಾಗದ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿದೆ.

 

ಮಂಗಳಾದೇವಿ ನಗರದ ಬೆಟ್ಟ ಪ್ರದೇಶದಲ್ಲಿನ ಎಸ್.ಅಪ್ಪಾರಾವ್ ಎಂಬವರಿಗೆ ಸೇರಿದ ಸ.ನಂ. 543/73 18.95 ಎಕರೆ ಹಾಗೂ ಎಸ್.ಸುಬ್ಬಯ್ಯಮ್ಮ ಅವರಿಗೆ ಸೇರಿದ ಸ.ನಂ. 543/74ರಲ್ಲಿ 19.10 ಎಕರೆ ಸುಮಾರು 38.5 ಎಕರೆ ಜಾಗದಲ್ಲಿ ರೆಸಾರ್ಟ್ ಕಾರ್ಯಕ್ಕೆ ಮುಂದಾಗಿ ದ್ದಾರೆ. 2016-17ರಲ್ಲಿ ಜಾಗವನ್ನು ಭೂಪರಿವರ್ತನೆ ಮಾಡಿಕೊಂಡು ಕೆಲಸ ಆರಂಭಿಸಲಾಗಿತ್ತು. 2018ರಲ್ಲಿ ಭೂಕುಸಿತ ಆದ ಬಳಿಕ ಕೆಲಸ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕೆಲಸ ಆರಂಭಗೊಂಡಿದ್ದು, ಜಾಗದಲ್ಲಿ ಕಾಡು ಜಾತಿಯ ಮರಗಳಿದ್ದುದನ್ನು ಕಡಿದುರುಳಿಸಲಾಗಿದೆ. ನಿಯಮಾನುಸಾರ ಮರ ಕಡಿತಲೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿಯ ಅಗತ್ಯವಿದ್ದು, ಯಾವದೇ ಅನುಮತಿ ಪಡೆಯದೇ ಇರುವ ಹಿನ್ನೆಲೆಯಲ್ಲಿ ಇದೀಗ ಇಲಾಖೆಯಿಂದ ಮೊಕದ್ದಮೆ ದಾಖಲಿಸಲಾಗಿದೆ.

 

ಮೂವರ ವಿರುದ್ಧ ಮೊಕದ್ದಮೆ

 

ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ 75ರಿಂದ 80ರಷ್ಟು ವಿವಿಧ ಜಾತಿಯ ಮರಗಳನ್ನು ಕಡಿದಿರುವದರಿಂದ ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ವೆಂಕಟೇಶ್ವರ ವಿ. ರೆಡ್ಡಿ , ಮಡಿಕೇರಿ ಮಂಗಳಾದೇವಿ ನಗರದ ಎಸ್.ಅಪ್ಪಾರೆಡ್ಡಿ ಹಾಗೂ ಎಸ್. ಸುಬ್ಬಯಮ್ಮ ಅವರುಗಳ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 62, 80, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಕಲಂ 8, 15, 22ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅಲ್ಲದೆ ಕಡಿದ ಮರಗಳ ಬೇರು ಸಹಿತ ಕೀಳಲಾಗಿದ್ದು, ಸ್ಥಳದಲ್ಲಿ ಸಿಕ್ಕ ಬೇರು ಸಹಿತ ರಾಶಿ ಹಾಕಲಾಗಿದ್ದ ಸೌದೆಯನ್ನು ಅಮಾನತ್ತುಪಡಿಸಲಾಗಿದೆ. ತಾ.11-6-2023ರಂದು ಮೊಕದ್ದಮೆ ದಾಖಲಿಸಲಾಗಿದೆ.

 

ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ

 

ಮಂಗಳಾದೇವಿ ನಗರದಲ್ಲಿ ಖಾಸಗಿ ವ್ಯಕ್ತಿಗಳು  50 ಎಕರೆಗೂ ಅಧಿಕ ಖಾಸಗಿ ಅರಣ್ಯವನ್ನು ಸರ್ವ ನಾಶ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಸ್ಥಗಿತ ಕೋರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪನವರು ಜಿಲ್ಲಾಧಿಕಾರಿ ಮತ್ತು ನಗರಸಭೆಗೆ ದೂರು ನೀಡಿದ್ದಾರೆ. ಇದರೊಂದಿಗೆ ಪರಿಸರವಾದಿಗಳು ಕೂಡ ಈ ಕಾಮಗಾರಿ ಬಗ್ಗೆ ಆಕ್ಷೇಪವೆತ್ತಿದ್ದಾರೆ.

ಮಂಗಳಾದೇವಿನಗರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಈ ಹಿಂದೆ ಭೂಕುಸಿತಗೊಂಡು ಒಮ್ಮೆಲೆ ಆರು ಮಂದಿ ಭೂ ಸಮಾಧಿಯಾಗಿದ್ದರೆ, ನಂತರದಲ್ಲಿ ತಡೆಗೋಡೆ ಕುಸಿದು ವಿದ್ಯಾರ್ಥಿಯೊಬ್ಬ ಅಸುನೀಗಿದ್ದ. ಇದೀಗ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಸನಿಹದಲ್ಲಿಯೇ ನಿರ್ಮಾಣ ಹಂತದಲ್ಲಿದ್ದ ಬೃಹತ್ ಕಟ್ಟಡದ ಗೋಡೆ ಕುಸಿದು ಈರ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದರು. 2018ರಲ್ಲಿ ಭೂಕುಸಿತ ಉಂಟಾಗಿ ಹಲವಾರು ಮನೆಗಳು ನೆಲಕಚ್ಚಿವೆ. ಆತಂಕ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದ್ದು ಬೆಟ್ಟದ ತಪ್ಪಲಿನ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಅದೂ ಅಲ್ಲದೆ  ಮಂಗಳಾದೇವಿ ನಗರ ಸೂಕ್ಷ್ಮ ಪ್ರದೇಶ, ವಾಸಕ್ಕೆ ಯೋಗ್ಯವಾದ ಪ್ರದೇಶವಲ್ಲ ಎಂದು ಭೂವಿಜ್ಞಾನಿಗಳು ವರದಿ ಕೂಡ ನೀಡಿದ್ದಾರೆ. 

 

ಜಿಲ್ಲಾಡಳಿತಕ್ಕೆ ಅವಕಾಶ

 

ಮಡಿಕೇರಿ ಸುತ್ತಮುತ್ತಲ ಬೆಟ್ಟ ಪ್ರದೇಶಗಳನ್ನು ಭೂ ವಿಜ್ಞಾನಿಗಳು ಸೂಕ್ಷ್ಮ ಪ್ರದೇಶವೆಂದೂ ಎಚ್ಚರಿಕೆ ನೀಡಿದ್ದರೂ ಕೆಲವೊಂದು ಕಡೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದೀಗ ಮಂಗಳಾದೇವಿ ನಗರದಲ್ಲಿ ಮತ್ತೆ ಆತಂಕ ಆರಂಭವಾಗಿದೆ. ಖಾಸಗಿ ಜಾಗದಲ್ಲಿ ಕಾಮಗಾರಿ ನಡೆಯುತ್ತಿರುವದರಿಂದ ಸಾರ್ವಜನಿಕರಿಗೆ ಏನೂ ಮಾಡಲಾಗದ ಪರಿಸ್ಥಿತಿ. ಮರಕಡಿತಲೆಗೆ ಅನುಮತಿ ಪಡೆಯದ ಕಾರಣಕ್ಕಾಗಿ ಮಾತ್ರ ಇಲಾಖೆಯಿಂದ ಮೊಕದ್ದಮೆ ದಾಖಲಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಬೆಟ್ಟ ಕೊರೆಯುತ್ತಿರುವದಕ್ಕೆ, ಅವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳಿಗೆ ಮಾತ್ರವೇ ಅವಕಾಶವಿದ್ದು, ಜಿಲ್ಲಾಡಳಿತ ಇತ್ತ ಗಮನಹರಿಸಿ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬದು ಇಲ್ಲಿನ ನಾಗರಿಕರ ಅಂಬೋಣ.