ಕಾಡಾನೆ ಸೆರೆ ನೋಡಲು ಚೆನ್ನ : ಹಿಂದಿದೆ ಕಠಿಣ ಪರಿಶ್ರಮ

 

ಒಂದು ಆನೆ ಹಿಡಿಯಲು 5 ರಿಂದ 7 ಲಕ್ಷ  - ಹರಸಾಹಸದ ಕಾರ್ಯಾಚರಣೆ ಹೀಗಿರಲಿದೆ

 

ಕೊಡಗಿನಲ್ಲಿ ದಿನೇ ದಿನೇ ಕಾಡಾನೆ-ಮಾನವ ಸಂಘರ್ಷ ಎಲ್ಲೆ ಮೀರುತ್ತಿದ್ದು, ಬಹುತೇಕ ಜಿಲ್ಲೆಯಾದ್ಯಂತ ಜನರು ಆತಂಕದ ಪರಿಸ್ಥಿತಿಯ ನಡುವೆ ಬದುಕುವಂತಾಗಿದೆ. ಭಾರೀ ಕಾಟ ಕೊಡುವ ಕೆಲವೊಂದು ಪುಂಡಾನೆಗಳನ್ನು ಇದೀಗ ಆಗಿಂದ್ದಾಗೆ ಅರಣ್ಯ ಇಲಾಖೆಯ ಮೂಲಕ ಸೆರೆ ಹಿಡಿಯಲಾಗುತ್ತಿದೆ. ಈ ಕಾಡಾನೆ ಸೆರೆಯ ಕಾರ್ಯಾಚರಣೆ ಮೇಲ್ನೋಟಕ್ಕೆ ನೋಡಲು ಚೆನ್ನ. ಆದರೆ, ಈ ಆನೆ ಸೆರೆ ಕಾರ್ಯಾಚರಣೆಯ ಹಿಂದಿದೆ ಬಲು ರೋಚಕವಾದ ಹರಸಾಹಸದ ಪ್ರಕ್ರಿಯೆಗಳು ಎಂಬುದು ಜನಸಾಮಾನ್ಯರಿಗೆ ತಿಳಿದಿಲ್ಲ. ಅರಣ್ಯ ಇಲಾಖೆಯಲ್ಲಿಯೂ ಈ ಕಾರ್ಯಾಚರಣೆಗೆ ಮುಂದಾಗುವ ಅಧಿಕಾರಿ-ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಇತರರಿಗೆ ಇದರ ಹರಸಾಹಸದ ವಿಚಾರ ಬಹುಶಃ ತಿಳಿದಿರಲಿಕ್ಕಿಲ್ಲವೇನೋ..?

ಮೊದಲು ಬೇಕು ಅನುಮತಿ : ಅಲ್ಲಲ್ಲಿ ಭಾರೀ ಉಪಟಳ ನೀಡುವ ಆನೆಗಳ ಬಗ್ಗೆ ಸಾರ್ವಜನಿಕರು ಬೆಳೆಗಾರರಿಂದ ಸಹಜವಾಗಿ ಅರಣ್ಯ ಇಲಾಖೆಗೆ ಪುಕಾರು ಬರುತ್ತದೆ. ಇದರಂತೆ ಅರಣ್ಯ ಇಲಾಖೆಯ ಆ ವ್ಯಾಪ್ತಿಯ ಸಿಬ್ಬಂದಿಗಳು ಮೊದಲು ಪುಂಡಾಟಿಕೆ ಹೆಚ್ಚಿರುವ ಆನೆಗಳನ್ನು ಗುರುತಿಸಬೇಕಾಗುತ್ತದೆ. ಇದರ ಜಾಡು ಅರಸುತ್ತಾ ಫೋಟೋಗ್ರಫಿ, ವೀಡಿಯೋಗ್ರಫಿಯ ಮೂಲಕ ಈ ಬಗ್ಗೆ ಕೆಳಹಂತದಿಂದ ಮೇಲ್ಮಟ್ಟದ ತನಕ ವರದಿಯನ್ನು ಮೊದಲು ಸಲ್ಲಿಸಬೇಕು. ಇದರ ಕೂಲಂಕುಶ ಅಧ್ಯಯನದೊಂದಿಗೆ ಬೆಂಗಳೂರಿನ ಪಿ.ಸಿ.ಸಿ.ಎಫ್ (ವನ್ಯಜೀವಿ) ಅವರಿಂದ ಅಂತಿಮವಾಗಿ ಆನೆ ಹಿಡಿಯಲು ಅನುಮತಿ ಸಿಗಬೇಕು. 

ತಯಾರು ಹೇಗಿರಲಿದೆ? : ಪಿ.ಸಿ.ಸಿ.ಎಫ್ ಹಂತದ ಅಧಿಕಾರಿಯ ಅನುಮತಿಯ ಬಳಿಕ ಇದರ ತಯಾರಿ ಆರಂಭವಾಗುತ್ತದೆ. ಮೊದಲು ಕಾರ್ಯಾಚರಣೆಗೆ ಬೇಕಾದ ಹಗ್ಗದ ಸಿದ್ಧತೆಬೇಕು. ಚೂಡಿಯ ಮಾದರಿಯ ಈ ಹಗ್ಗಕ್ಕೆ ಬೇಕಾದ ಕಚ್ಚಾವಸ್ತುವನ್ನು ದೂರದ ಪಶ್ಚಿಮ ಬಂಗಾಳದಿಂದ ತರಿಸಬೇಕು. ಇದನ್ನು ಪಿಂಡಿ ಎಂದು ಹೇಳಲಾಗುತ್ತದೆ. ಒಂದು ಆನೆ ಹಿಡಿಯಲು ಎರಡು ಪಿಂಡಿಯಷ್ಟು (ಸುಮಾರು 100 ಕೆ.ಜಿ.) ಕಚ್ಚ ವಸ್ತು ಅಗತ್ಯ. ಇದರ ಮೊತ್ತ ಕೆ.ಜಿ.ಗೆ ರೂ. 350 ರಿಂದ 400 ರಷ್ಟಿರುತ್ತದೆ. ಇದನ್ನು ಹಗ್ಗ ತಯಾರಿಸಲು ಸ್ಥಳೀಯ ಕಾವಾಡಿಗಳಿಗೆ ಅಥವಾ ಪರಿಣಿತರಾಗಿರುವವರಿಗೆ ನೀಡಲಾಗುತ್ತದೆ. ಒಂದು ಆನೆ ಸೆರೆಗೆ ಸುಮಾರು ಮೂರು ಹಗ್ಗ ಬೇಕು. ಈ ಹಗ್ಗ ನೆಯ್ಸಲು ಒಂದಕ್ಕೆ 6,500 ರೂ. ಪಾವತಿಸಬೇಕು. ಇದಕ್ಕೆ ಅಂದಾಜು 15 ರಿಂದ 18 ಸಾವಿರ ಬೇಕಾಗುತ್ತದೆ. 

ನಂದ-ಗಾದಿ: ಹಗ್ಗದ ತಯಾರಿ ಜೊತೆಗೆ ಕಾರ್ಯಾಚರಣೆಗೆ ಸುಮಾರು ಐದಾರು ಸಾಕಾನೆಗಳನ್ನು ಬಳಸುವುದು ಅನಿವಾರ್ಯ. ಈ ಸಾಕಾನೆಗಳ ಮೇಲೆ ಬೆಡ್‌ನ ಮಾದರಿ ಕೂರಲು ವ್ಯವಸ್ಥೆ ಇರುವಂತೆ ಮಾಡಬೇಕು. ಇದನ್ನು ನಂದ-ಗಾದಿ ಎನ್ನಲಾಗುತ್ತದೆ. ಆರು ಆನೆಗಳಿದ್ದರೆ ಆರು ನಂದ-ಗಾದಿ ಬೇಕಾಗುತ್ತದೆ. ಈ ನಂದಗಾದಿಗೆ ಅಂದಾಜು 1.25 ಲಕ್ಷ ರೂ. ಬೇಕು. ಇದರೊಂದಿಗೆ ಟ್ವೆನ್ ಮಾದರಿಯ ಹಗ್ಗಗಳು (ಈ ಹಗ್ಗಗಳು ಆನೆಗೆ ನೋವು ತಾರದ ಹಾಗೆ ಬಟ್ಟೆಯ ರೀತಿಯಲ್ಲಿರಬೇಕು.) ಅಗತ್ಯ. 

ಮೈಸೂರು ಮೃಗಾಲಯದಿಂದ ಔಷಧಿ : ಆನೆ ಹಿಡಿಯಲು ಅಗತ್ಯವಾಗಿ ಕೆಲವೊಂದು ಮಾದರಿಯ ಔಷಧಿಗಳು ಬೇಕು. ಆಟೋಫಿನ್, ಜೈಲೊಫಿಲ್, ರಿವರ್ಷನ್ ಎಂಬಿತ್ಯಾದಿ ಔಷಧಿಗಳನ್ನು ಮೈಸೂರು ಮೃಗಾಲಯದಿಂದ ತರಿಸಿಕೊಳ್ಳಲಾಗುತ್ತದೆ. 

ಮೃಗಾಲಯಕ್ಕೆ ಈ ಔಷಧಿಗಳನ್ನು ಸೌತ್ ಆಫ್ರಿಕಾ ಮತ್ತಿತರ ಕಡೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಟ್ರ್ಯಾಂಕ್ವಿಲೈಸರ್ ಗನ್   ಸದ್ಯಕ್ಕೆ ಅರಣ್ಯ ಇಲಾಖೆಯ ಬಳಿಯಿರುತ್ತದೆ. ಇದರೊಂದಿಗೆ ಆನೆ ಬಿದ್ದ ನಂತರದಲ್ಲಿ ಉಪಚರಿಸಲು ಗ್ಲೂಕೋಸ್, ಎಣ್ಣೆ ಮತ್ತಿತರ ವಸ್ತುಗಳು ಬೇಕು. ಇದಕ್ಕೆ ಸುಮಾರು 25 ಸಾವಿರ ವೆಚ್ಚವಾಗಲಿದೆ. 

ಇನ್ನೂ ಏನೇನು? : ಈ ಎಲ್ಲಾ ಸಿದ್ಧತೆಗಳೊಂದಿಗೆ ಕ್ರೇನ್, ಜೆ.ಸಿ.ಬಿ, ಆನೆಗೆ ಹಾಕಲು ಬೆಲ್ಟ್, ಸಾಗಾಟಕ್ಕೆ ಕೇಜ್ ಮಾದರಿಯ ಲಾರಿಗಳು ಸಿದ್ಧವಿರಬೇಕು. ಆನೆಯನ್ನು ಮತ್ತೌಷಧಿ ನೀಡಿ ಬೀಳಿಸಿದ ನಂತರ ಹಾಗೂ ಸೆರೆ ಹಿಡಿದ ಬಳಿಕ ನಿರ್ದಿಷ್ಟ ಸ್ಥಳಕ್ಕೆ ಸೇರಿಸುವ ತನಕವೂ ಇವುಗಳ ವ್ಯವಸ್ಥೆ ಇರಬೇಕು. 

ಈ ಎಲ್ಲಾ ಸಿದ್ಧತೆ ಬಳಿಕವಷ್ಟೆ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಮೊದಲು ಪರಿಣಿತರು-ವೈದ್ಯರು ಆನೆಗೆ ಸಾಕಾನೆ ಮೇಲೆ ಕುಳಿತು   ಟ್ರ್ಯಾಕ್ವಿಲ್ಐಸ್ ಮಾಡುತ್ತಾರೆ. ಕಾರ್ಯಾಚರಣೆ ತಂಡದಲ್ಲಿ ಸುಮಾರು 60 ರಿಂದ 70 ಮಂದಿ ಸಿಬ್ಬಂದಿಗಳು, ಮಾವುತರು ಇರುತ್ತಾರೆ. ಇವರೆಲ್ಲರಿಗೆ ಅಡುಗೆ, ಊಟದ ವ್ಯವಸ್ಥೆಯೂ ಬೇಕು. ಕಾಡಾನೆ ಪ್ರಜ್ಞೆ ಕಳೆದು ಬಿದ್ದ ತಕ್ಷಣ ತಂಪು ಮಾಡಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನೂ ಈ ತಂಡ ಜೊತೆಗೆ ಒಯ್ಯಬೇಕಾಗುತ್ತದೆ. ಕಾರ್ಯಾಚರಣೆಗೆ ಇಳಿದ ತಕ್ಷಣವೇ ಆನೆ ಪತ್ತೆಯಾದಲ್ಲಿ ಒಂದಷ್ಟು ಖರ್ಚು ಕಡಿಮೆಯಾಗಲಿದೆ. ತಡವಾದಷ್ಟು ವೆಚ್ಚ ಹೆಚ್ಚುತ್ತದೆ. 

ಕಾರ್ಯಾಚರಣೆ ಸಂದರ್ಭದಲ್ಲಿ ತೋಟವಾದಲ್ಲಿ ಸಾಕಷ್ಟು ನಷ್ಟ ಉಂಟಾಗಲಿದ್ದು, ಇದಕ್ಕೂ ಪರಿಹಾರದ ವ್ಯವಸ್ಥೆಯಾಗಬೇಕು. ಜೊತೆಗೆ ಸಾರ್ವಜನಿಕರನ್ನು ನಿಯಂತ್ರಿಸುವುದು ಕೂಡ ಪ್ರಯಾಸಕರವಾದದ್ದು. ಈ ಎಲ್ಲಾ ಹರ ಸಾಹಸದ ಮೂಲಕ ಒಂದು ಆನೆಯನ್ನು ಸೆರೆಹಿಡಿಯಬೇಕಾಗುತ್ತದೆ. 

ನಂತರದಲ್ಲೂ ಸಮಸ್ಯೆ : ಸೆರೆ ಹಿಡಿಯಲ್ಪಟ್ಟ ಆನೆಯನ್ನು ನಂತರದಲ್ಲಿ  ಮಲೆ ಮಹದೇಶ್ವರ ಬೆಟ್ಟ ಅಥವಾ ಬಂಡಿಪುರಕ್ಕೆ ಸಾಗಿಸಿ ಬಿಡಲಾಗುತ್ತದೆ. ಈ ಸಂದರ್ಭದಲ್ಲಿ ಪುಂಡಾನೆಯನ್ನು ಹಿಡಿದು ತರುತ್ತಿರುವ ಮಾಹಿತಿ ದೊರೆತಲ್ಲಿ ಆ ವ್ಯಾಪ್ತಿಯ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿ, ಇದಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡಿರುವುದೂ ಈ ಹಿಂದಿನ ಕೆಲವು ಕಾರ್ಯಾಚರಣೆಗಳ ಸಂದರ್ಭ ನಡೆದಿರುವುದು ವರದಿಯಾಗಿದೆ.