ಕಳುವಾದ, ಕಳೆದುಹೋದ ಫೋನ್ಅನ್ನು ಬ್ಲಾಕ್ ಮಾಡಲು ಸುಲಭ ಮಾರ್ಗ

ಕೇಂದ್ರ ಸರಕಾರದ CEIR ಪೋರ್ಟಲ್ ಮೂಲಕ ಸಾಧ್ಯ

 

ಮೊಬೈಲ್ ಫೋನ್ ಕಳೆದುಹೋದಲ್ಲಿ ಅದು ಮತ್ತೇ ನಿಮಗೆ ವಾಪಸ್ಸು ಸಿಗುವ ಯಾವುದೇ ಭರವಸೆ ಸಿಗದೆ ಕೇವಲ ಅದರಲ್ಲಿನ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿ ಹೊಸ ಫೋನಿನತ್ತ ಮುಖ ಮಾಡುತ್ತಿದ್ದವರಿಗೆ ಕೇಂದ್ರ ಸರಕಾರವು ಸಿಹಿ ಸುದ್ದಿ ನೀಡಿದೆ. ಕೇಂದ್ರದ CEIR ಪೋರ್ಟಲ್‌ನಲ್ಲಿ ಇದೀಗ ಕಳೆದುಹೋದ ಇಂತಹ ಫೋನ್‌ಗಳ 15 ಅಂಕಿಗಳ IMEI ನಂಬರ್ ಅನ್ನು ನಮೂದಿಸುವುದರೊಂದಿಗೆ ಇತರ ಮಾಹಿತಗಳನ್ನೂ ನೀಡಿದಲ್ಲಿ ಕಳೆದು ಹೋದ ಫೋನ್ ಅನ್ನು ‘ಬ್ಲಾಕ್’ ಮಾಡಬಹುದಾಗಿದೆ. ಬ್ಲಾಕ್ ಮಾಡಿದ ಈ ಫೋನನ್ನು ಯಾರಾದರೂ ಬಳಸಿದಲ್ಲಿ ಅದು ಇರುವ ಸ್ಥಳವನ್ನು ಪತ್ತೆಹಚ್ಚಬಹುದಾಗಿದೆ. ಈ ಒಂದು ತಂತ್ರಾಂಶವನ್ನು ಕೇಂದ್ರ ಸರಕಾರವು ಪ್ರತಿ ರಾಜ್ಯಗಳಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಿದ್ದು ಕರ್ನಾಟಕದಲ್ಲಿ ಕಳೆದ ವರ್ಷದಿಂದಲೇ ಚಾಲ್ತಿಯಲ್ಲಿದೆ. 

CEIR ಲಿಂಕ್‌ಅನ್ನು ಪ್ರವೇಶಿಸಿ ಅದರಲ್ಲಿ ‘ಬ್ಲಾಕ್ ಸ್ಟೋಲನ್/ಲಾಸ್ಟ್ ಫೋನ್’ ಎಂಬ ಆಯ್ಕೆಯ ಮೇಲೆ ಒತ್ತಿದರೆ ಅಲ್ಲಿ ಕಳೆದುಹೋಗಿರುವ ಅಥವಾ ಕಳ್ಳತನಕ್ಕೊಳಗಾದ ಫೋನಿನ ಹಾಗೂ ಫೋನಿನ ಮಾಲಿಕರ ಸಂಪೂರ್ಣ ಮಾಹಿತಿ ನೀಡಿದಲ್ಲಿ ಫೋನ್‌ಅನ್ನು ಬ್ಲಾಕ್ ಮಾಡಲು ಸಾಧ್ಯವಾಗಲಿದೆ. ಬ್ಲಾಕ್ ಆದ ಫೋನನ್ನು ಯಾರಾದರು ಇತರ ಸಿಮ್ ಅಳವಡಿಸಿ ಬಳಸಲು ಪ್ರಯತ್ನಿಸಿದಲ್ಲಿ, ಅದು ವಿಫಲವಾಗಲಿದ್ದು ಈ ಸಂದರ್ಭ ಫೋನ್ ಎಲ್ಲಿದೆ ಎಂಬ ನಿರ್ದಿಷ್ಠ ಸ್ಥಳವಲ್ಲದಿದ್ದರೂ ಅಂದಾಜು ಸ್ಥಳ ಪತ್ತೆಯಾಗಲಿದ್ದು, ಕಳೆದುಹೋದ ಫೋನ್ ಮಾಲೀಕರ ಕೈಸೇರಲು ಸಹಾಯವಾಗಲಿದೆ. 

ಮೊಬೈಲ್ ಫೋನ್ ಕಳೆದುಹೋದಲ್ಲಿ ಮೊದಲು ಪ್ಲೇಸ್ಟೋರ್‌ನಲ್ಲಿ ಕೆ.ಎಸ್.ಪಿ (ಕರ್ನಾಟಕ ಸ್ಟೇಟ್ ಪೊಲೀಸ್) ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಕೆ.ಎಸ್.ಪಿಯ  ‘e-lost’ ಆಯ್ಕೆಯನ್ನು ಬಳಸಿ ‘ಡಿಜಿಟಲ್ ಎಕ್‌ನಾಲೆಡ್ಜ್ಮೆಂಟ್’ ಅನ್ನು ಪಡೆದುಕೊಳ್ಳಬೇಕು. 

ಒಂದು ವೇಳೆ ಫೋನ್ ಕಳುವಾಗಿದ್ದಲ್ಲಿ ಹತ್ತಿರದ ಪಲೋಸ್ ಠಾಣೆಗೆ ಹೋಗಿ ದೂರು ದಾಖಲಿಸಿ ಎಫ್.ಐ.ಆರ್ ಪ್ರತಿ ಪಡೆದುಕೊಳ್ಳಬೇಕು.

ಕಳೆದುಹೋದ ಅಥವಾ ಕಳ್ಳತನವಾದ ಫೋನಿನಲ್ಲಿದ್ದ ಸಿಮ್ ಕಾರ್ಡಿನ ನಕಲು ಪ್ರತಿಯನ್ನು ಸಂಬಂಧಿಸಿದ ಸರ್ವಿಸ್ ಪ್ರೊವೈಡರ್ ಬಳಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಹಾಗೂ ಅದನ್ನು ಸಕ್ರಿಯಗೊಳಿಸಿಕೊಳ್ಳಬೇಕು.

ನಂತರ  CEIR  ಗೆ ಹೋಗಿ ಫೋನ್ ನಂಬರ್‌ನೊಂದಿಗೆ, IMEI ಸಂಖ್ಯೆ, ಫೋನ್ ತಯಾರಕಾ ಸಂಸ್ಥೆ ಹಾಗೂ ಮಾಡಲ್ ಹಾಗೂ ಫೋನ್ ಖರೀದಿ ಬಿಲ್, ಫೋನ್ ಕಳೆದುಹೋದ ಸ್ಥಳ, ದಿನಾಂಕ, ಪೊಲೀಸ್ ಠಾಣಾ ಸರಹದ್ದು, ಫೋನ್ ಮಾಲೀಕನ ಹೆಸರು, ಗುರುತಿನ ಚೀಟಿ ಹಾಗೂ ವಿಳಾಸ ನೀಡಬೇಕು. ಪೊಲೀಸ್ ಕಂಪ್ಲೇಂಟ್ ಸಂಖ್ಯೆ ಎಂಬ ಆಯ್ಕೆಯಲ್ಲಿ ಕೆ.ಎಸ್.ಪಿ ಮೂಲಕ ದೊರೆತ ‘ಡಿಜಿಟಲ್ ಸ್ವೀಕೃತಿ’ ಸಂಖ್ಯೆ ಅಥವಾ ಎಫ್.ಐ.ಆರ್ ಸಂಖ್ಯೆ ಹಾಗೂ ‘ಅಪ್‌ಲೋಡ್ ಪೊಲೀಸ್ ಕಂಪ್ಲೆಂಟ್   ವಿಭಾಗದಲ್ಲಿ ಕೆ.ಎಸ್.ಪಿ ‘ಡಿಜಿಟಲ್ ಸ್ವೀಕೃತಿ’ಯ ಪ್ರತಿ ಅಥವಾ ಠಾಣೆಯಲ್ಲಿ ದೊರೆತ ಎಫ್.ಐ.ಆರ್ ಪ್ರತಿ ಅಪ್‌ಲೋಡ್ ಮಾಡಬೇಕು. ನಂತರ ಕಳೆದು ಹೋದ ಅಥವಾ ಕಳುವಾದ ಫೋನಿನ ನಂಬರ್ ನೀಡಿದರೆ, ಹೊಸದಾಗಿ ಪಡೆದುಕೊಂಡಿರುವ ನಕಲು ಸಿಮ್ ಮೂಲಕ ಒ.ಟಿ.ಪಿ ಬರಲಿದೆ. ಮೇಲಿನ ಎಲ್ಲಾ ಮಾಹಿತಿಗಳೊಂದಿಗೆ ಈ ಒ.ಟಿ.ಪಿಯನ್ನೂ ನಮೂದಿಸಿದರೆ ‘ರಿಕ್ವೆಸ್ಟ್ ಐ.ಡಿ’ ಲಭಿಸಲಿದೆ. ಇದಾದ ೨೪ ಗಂಟೆಗಳಲ್ಲಿ ಫೋನ್ ಬ್ಲಾಕ್ ಮಾಡಲಾಗುತ್ತದೆ.

ಫೋನ್ ಬ್ಲಾಕ್ ಆದರೂ ಸಹ ಪೊಲೀಸರು ಫೋನನ್ನು ಟ್ರ್ಯಾಕ್ ಮಾಡಬಹುದಾಗಿದೆ. ಬ್ಲಾಕ್ ಆದ ಈ ಫೋನನ್ನು ಯಾರಾದರು ಇತರ ಸಿಮ್ ಹಾಕಿ ಬಳಸಲು ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. 

ಮೊಬೈಲ್ ಫೋನ್ ಮೂಲಕ *#06# ಸಂಖ್ಯೆಗೆ ಕರೆ ಮಾಡಿದ್ದಲ್ಲಿ ಫೋನಿನ್  IMEI ಸಂಖ್ಯೆಯನ್ನು ಪಡೆಯಬಹುದಾಗಿದೆ. ಇದನ್ನು ಎಲ್ಲಾದರೂ ಸಂಗ್ರಹಿಸಿಟ್ಟಲ್ಲಿ ಮುಂದಿನ ದಿನಗಳಲ್ಲಿ ಫೋನ್ ಕಳುವಾದಲ್ಲಿ ಸಹಾಯಕ್ಕೆ ಬರಲಿದೆ. ಫೋನ್ ಖರೀದಿಸಿದಾಗ ದೊರಕುವ ಬಾಕ್ಸ್ನಲ್ಲಿಯೂ IEMI ಸಂಖ್ಯೆ ನಮೂದಾಗಿರುತ್ತದೆ.

CEIR ಪೋರ್ಟಲ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು https://youtu.be/n7C10hsr6S4 ಯೂಟ್ಯೂಬ್ ಲಿಂಕ್‌ನಲ್ಲಿ ಪಡೆಯಬಹುದಾಗಿದೆ.

ಫೋನ್ ದೊರೆತ ಮೇಲೆ ಅನ್‌ಬ್ಲಾಕ್ ಮಾಡಿ

ಪೊಲೀಸ್ ಪುಕಾರು ನೀಡಿ ಪೋರ್ಟಲ್ ಮೂಲಕ ಫೋನ್ ಬ್ಲಾಕ್ ಮಾಡಿದ 24 ಗಂಟೆಗಳಲ್ಲಿ ಫೋನ್ ಬ್ಲಾಕ್ ಆಗಲಿದೆ. ನಂತರ ಅದನ್ನು ಪೊಲೀಸರು ಟ್ರಾö್ಯಕ್ ಮಾಡಿ ಫೋನ್ ನಿಮಗೆ ವಾಪಸ್ಸು ದೊರೆತ ಬಳಿಕ ಮೇಲಿನ ಲಿಂಕ್ ಮೂಲಕವೇ ಫೋನ್ ಅನ್‌ಬ್ಲಾಕ್ ಆಯ್ಕೆ ಮೂಲಕ ಫೋನನ್ನು ಮತ್ತೇ ಉಪಯೋಗ ಮಾಡಬಹುದಾಗಿದೆ. ಬ್ಲಾಕ್ ಮಾಡಿದ ಸಂದರ್ಭ ದೊರೆತ ‘ರಿಕ್ವೆಸ್ಟ್ ಐ.ಡಿ’ ಯನ್ನು ನಮೂದಿಸಿ ಫೋನ್ ಅನ್‌ಬ್ಲಾಕ್ ಮಾಡಬಹುದಾಗಿದೆ.

ಕೊಡಗಿನಲ್ಲಿ ಇದುವರೆಗೂ CEIRಪೋರ್ಟಲ್‌ನಲ್ಲಿ ಫೋನ್ ಬ್ಲಾಕ್ ಮಾಡಲು ಯಾವುದೇ ಮನವಿಗಳು ಬಂದಿಲ್ಲ. ಇತರ ಜಿಲ್ಲೆಗಳಲ್ಲಿ ಹಲವಾರು ಕಳವು ಪ್ರಕರಣಗಳು ದಾಖಲಾಗಿದ್ದು, ಮಾಲೀಕರಿಗೆ ಫೋನ್‌ಗಳು ವಾಪಸ್ಸು ದೊರಕಿವೆ. ಅಇIಖ ಫೊರ್ಟಲ್ ಮೂಲಕ ಬ್ಲಾಕ್ ಮಾಡಲು ವಿನಂತಿ ಮಾಡಿದಕ್ಷಣ ದೂರಸಂಪರ್ಕ ಇಲಾಖೆಯು ದೂರುದಾರರ ಮಾಹಿತಿಯನ್ನು ಪರಿಶೀಲಿಸಿ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳಿಗೆ ಫೋನ್‌ಅನ್ನು ಬ್ಲಾಕ್ ಮಾಡಲು ಆದೇಶಿಸಿದ ಬಳಿಕ ಫೋನ್ ಬ್ಲಾಕ್ ಆಗಲಿದೆ. ಕಳೆದುಹೋದ ಅಥವಾ ಕಳುವಾದ ಫೋನನ್ನು ಬೇರೆ ಯಾರಾದರು ಇತರ ಸಿಮ್ ಅಳವಡಿಸಿ ಬಳಸಲು ಯತ್ನಿಸಿದರೆ ಮಾತ್ರ ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ಕರ್ನಾಟಕದಲ್ಲಿ CEIR ಪೋರ್ಟಲ್ ಚಾಲ್ತಿಯಲ್ಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

- ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ