ಕೊಡಗು - ಸೋಲು ಗೆಲುವಿನ ನಡುವೆ ಕೈ-ಕಮಲಗಳ ಮತಗಳಿಕೆ ಹೇಗಿದೆ ?

 

2023ರ ವಿಧಾನ ಸಭಾ ಚುನಾವಣೆ ರಾಜಕೀಯ ಪರಿಣಿತರ ಅನುಭವೀ ಕಾರ್ಯಕರ್ತರ ಲೆಕ್ಕಾಚಾರಗಳನ್ನು ರಾಜ್ಯದಲ್ಲಿ ತಲೆಕೆಳಗೆ ಮಾಡಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ವಿಸ್ಮಯಕಾರಿಯಾಗಿ ಬದಲಾವಣೆಗೊಂಡಿವೆ.

ಆಶ್ಚರ್ಯವೆಂದರೆ ಕಳೆದ ಎರಡು ದಶಕಗಳಿಂದಲೂ ನಿರಂತರ ಗೆಲುವಿನ ಹಾದಿಯಲ್ಲಿ ಸಾಗಿ ಬಂದ ಬಿ.ಜೆ.ಪಿ.ಗೆ ಈ ಹಿಂದೆ ಸೋಲಿನಲ್ಲಿಯೇ ಮುಂದುವರಿದಿದ್ದ ಕಾಂಗ್ರೆಸ್ ಆಘಾತಕಾರಿ ಪ್ರಹಾರ ನೀಡಿರುವುದು, ಮೂರನೇ ಸ್ಥಾನದಲ್ಲಿ ರಾಷ್ಟ್ರೀಯ ಪಕ್ಷಗಳ ಸೋಲು-ಗೆಲುವಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಗಮನಾರ್ಹ ಮತಗಳನ್ನು ಪಡೆಯುತ್ತಿದ್ದ ಜೆ.ಡಿ.ಎಸ್. ಸಂಪೂರ್ಣವಾಗಿ ನೆಲಕಚ್ಚಿರುವುದು.

ಸೋತರೂ ಅಧಿಕ ಮತ

ಆಶ್ಚರ್ಯವೆಂದರೆ ಮಡಿಕೇರಿ ಕ್ಷೇತ್ರದಲ್ಲಿ ನಿರಂತರ ಗೆಲುವಿನ ಜಯಭೇರಿ ಬಾರಿಸುತ್ತಿದ್ದ ಬಿ.ಜೆ.ಪಿ.ಯ ಮಂಡೇಪಂಡ ಪಿ. ಅಪ್ಪಚ್ಚುರಂಜನ್ ಅವರು ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಮಂಥರ್ ಗೌಡ ಅವರಿಂದ 4,402 ಮತಗಳ ಅಂತರದಲ್ಲಿ ಸೋಲು ಅನುಭವಿಸಿರುವುದು. ಬಿ.ಜೆ.ಪಿ. ಅಭ್ಯರ್ಥಿ ರಂಜನ್ ಸೋತಿದ್ದರೂ 2008ರ ಶೇಕಡಾವಾರು ಮತಕ್ಕಿಂತ ಅಧಿಕ ಮತಗಳಿಸಿರುವುದು ಮತ್ತೊಂದು ವಿಸ್ಮಯವಾಗಿದೆ. ಆಗ ಅವರು ಜನತಾದಳ ಮಾಜಿ ಸಚಿವ ಬಿ. ಎ. ಜೀವಿಜಯ ಅವರನ್ನು 16,015 ಮತಗಳಿಂದ ಪರಾಭವಗೊಳಿಸಿದ್ದರು.  ಆದರೆ, ಆಗ ಅವರು ಗಳಿಸಿದ ಶೇಕಡಾವಾರು ಮತ 41.68. ಈಗಿನ ಚುನಾವಣೆಯಲ್ಲಿ ಅವರು ಸೋತಿದ್ದರೂ ಗಳಿಸಿದ ಶೇಕಡವಾರು ಮತ 45.36 ಆಗಿದ್ದು, ಕಳೆದ ಚುನಾವಣೆಗಿಂತ ಶೇ.  3.68ಅಧಿಕ ಮತಗಳಿಸಿದ್ದಾರೆ. ಕಾಂಗ್ರೆಸ್‌ನ  ಮಂಥರ್‌ಗೌಡ ಅವರು ಶೇ. 47.84 ಮತ ಪಡೆದು ರಂಜನ್ ಅವರನ್ನು ಶೇ. 2.48 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆದರೆ ಮಡಿಕೇರಿ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಮತಗಳು ಹೆಚ್ಚಾಗಿವೆಯೇ ಹೊರತು ಕಡಿಮೆಯಾಗಿಲ್ಲ. ಹಾಗಿದ್ದರೆ ಸೋಲನುಭವಿಸಲು ಕಾರಣವೇನು ? ಆಗ ಮಡಿಕೇರಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಪ್ರಾಬಲ್ಯ ಹೊಂದಿದ್ದು, ಅಭ್ಯರ್ಥಿ ಬಿ. ಎ. ಜೀವಿಜಯ ಅವರು ಶೇ. 32.23 ಮತಗಳಿಸಿದ್ದರು. ಈಗ ಜೆ.ಡಿ.ಎಸ್. ನಿಂದ ಸ್ಪರ್ಧಿಸಿದ ನಾಪಂಡ ಮುತ್ತಪ್ಪ ಅವರು ಕೇವಲ 6,233 ಮತ ಪಡೆದು ಶೇ. 3.51 ಮತದೊಂದಿಗೆ ಹಿಂದೆ ಜೆ.ಡಿ.ಎಸ್. ಪಡೆದಿದ್ದ ಮತಗಳಿಗಿಂತ ಶೇ. 28.72 ಕಡಿಮೆಯಾಗಿದ್ದು ಹೀನಾಯ ಸೋಲುಂಟಾಗಿದೆ. ಜೆ.ಡಿ.ಎಸ್.ನ ಈ ಎಲ್ಲಾ ಮತಗಳು ಕಾಂಗ್ರೆಸ್‌ಗೆ  ಈ ಬಾರಿ ಹಸ್ತಾಂತರಗೊಂಡು ಕಾಂಗ್ರೆಸ್ ಅಭ್ಯರ್ಥಿ ಮಂಥರ್‌ಗೌಡ ಶೇ. 47.84 ಮತ ಪಡೆಯಲು ಸಾಧ್ಯವಾಯಿತು. 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ. ಪಿ. ಚಂದ್ರಕಲಾ ಅವರು ಕೇವಲ ಶೇ. 22.55 ಮತ ಪಡೆದಿದ್ದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್‌ಗೌಡ ಅವರಿಗೆ ಶೇ. 47.84 ರಷ್ಟು ಮತ ಲಭ್ಯವಾಗಿದ್ದು ಕಳೆದ ಚುನಾವಣೆಗಿಂತ 25.29 ಅಧಿಕ ಮತ ಲಭಿಸಿ ನೂತನ ದಾಖಲೆ ಸ್ಥಾಪಿಸಲ್ಪಟ್ಟಿದೆ.

2018ರಲ್ಲಿ ಮಡಿಕೇರಿ ಕ್ಷೇತ್ರದಲ್ಲಿ 1,69,458 ಮಂದಿ ಮತದಾನ ಮಾಡಿದ್ದು, 5 ವರ್ಷಗಳ ಬಳಿಕದ ಈಗಿನ ಚುನಾವಣೆಯಲ್ಲಿ 1,77,416 ಮಂದಿ ಮತದಾನ ಮಾಡಿದ್ದು, 7,958 ಮಂದಿ ಅಧಿಕ ಮತದಾರರು ಈ ಬಾರಿ ಹೆಚ್ಚಳಗೊಂಡಿದ್ದಾರೆ.

ವೀರಾಜಪೇಟೆಯಲ್ಲಿ ಬಿ.ಜೆ.ಪಿ.ಗೆ ಕಡಿಮೆ

ಇದಕ್ಕೆ ತದ್ವಿರುದ್ಧವಾಗಿ ವೀರಾಜಪೇಟೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕೆ. ಜಿ. ಬೋಪಯ್ಯ ಅವರಿಗೆ ಕಳೆದ 2008ರ ಚುನಾವಣೆಗಿಂತ ಕಡಿಮೆ ಮತಗಳು ಲಭ್ಯವಾಗಿವೆ. 2018ರಲ್ಲಿ ಅವರಿಗೆ ಶೇ. 49.40 ಮತಗಳು ದೊರೆತಿದ್ದವು. ಪ್ರಸಕ್ತ ಸಾಲಿನಲ್ಲಿ ಶೇ. 47.38 ಕ್ಕೆ ಇಳಿದಿದ್ದು ಶೇ. 2.02ರಷ್ಟು ಕಡಿಮೆಯಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಕಳೆದ ಚುನಾವಣೆಗೆ ಹೋಲಿಸಿದರೆ. ಆಶ್ಚರ್ಯಕರವಾಗಿ ಶೇ.9ರಷ್ಟು ಮತಗಳು ಈ ಚುನಾವಣೆಯಲ್ಲಿ ಅಧಿಕವಾಗಿ ಲಭ್ಯವಾಗಿದೆ. 2018ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಸಿ. ಎಸ್. ಅರುಣ್‌ಮಾಚಯ್ಯ ಅವರು ಶೇ. 40.90 ಮತಗಳಿಸಿದ್ದರು.  ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನೂತನವಾಗಿ ಸ್ಪರ್ಧಿಸಿದ್ದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಶೇ. 49.94 ಮತಗಳನ್ನು ಗಳಿಸಿ ದಾಖಲೆ ಸ್ಥಾಪಿಸಿದ್ದಾರೆ. ಬಿ.ಜೆ.ಪಿ.ಯ ಬೋಪಯ್ಯ ಅವರನ್ನು  4,291 ಮತಗಳಿಂದ ಪರಾಭವಗೊಳಿಸಿ ಶೇ. 2.56 ಅಂತರದಲ್ಲಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಬೋಪಯ್ಯ ಅವರು ಕಾಂಗ್ರೆಸ್‌ನ ಅರುಣ್ ಮಾಚಯ್ಯ ಅವರನ್ನು 13,353 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಕಳೆದ ಚುನಾವಣೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಎಂ. ಸಂಕೇತ್ ಪೂವಯ್ಯ ಅವರು 11,224 ಮತ ಪಡೆದು ಶೇ. 7.11 ಸಾಧನೆ ಮಾಡಿದ್ದರು. ಈ ಬಾರಿ ಜೆ.ಡಿ.ಎಸ್.ನಿಂದ ಸ್ಪರ್ಧಿಸಿದ್ದ ಎಂ. ಎ. ಮನ್ಸೂರ್ ಆಲಿ ಅವರು ಕೇವಲ ಶೇ. 0.66 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ. ಕಳೆದ ಚುನಾವಣೆಗಿಂತ ಜೆ.ಡಿ.ಎಸ್. ಶೇ. 6.45ರಷ್ಟು ಕಡಿಮೆ ಮತಗಳಿಸಿದ್ದು, ಈ ಎಲ್ಲಾ ಮತಗಳೂ ಕಾಂಗ್ರೆಸ್ ಪಾಲಾಗಿರುವ ಸಾಧ್ಯತೆ ಇದೆ. ವೀರಾಜಪೇಟೆ ಕ್ಷೇತ್ರದಲ್ಲಿ 2018ರಲ್ಲಿ 1,57,772 ಮಂದಿ ಮತದಾನ ಮಾಡಿದ್ದು, ಪ್ರಸಕ್ತ ಚುನಾವಣೆಯಲ್ಲಿ 1,67,778 ಮಂದಿ ಮತದಾನ ಗೈದಿದ್ದಾರೆ. ಕಳೆದ ಸಾಲಿಗಿಂತ ಪ್ರಸಕ್ತ ಚುನಾವಣೆಯಲ್ಲಿ 10,006 ಮಂದಿ ಮತದಾರರು ಹೆಚ್ಚಳಗೊಂಡಿದ್ದಾರೆ.

ಲೋಕಸಭಾ ಚುನಾವಣೆ

2019ರ ಲೋಕಸಭಾ ಚುನಾವಣೆಯನ್ನು ಅವಲೋಕಿಸಿದರೆ ಆಗ ಬಿ.ಜೆ.ಪಿ. ಅತ್ಯಂತ ಬಲಯುತವಾಗಿತ್ತು ಎಂಬದು ಕಂಡು ಬರುತ್ತದೆ. ಆಗ ಬಿ.ಜೆ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪ್‌ಸಿಂಹ ಅವರು ಮಡಿಕೇರಿ ಕ್ಷೇತ್ರದಲ್ಲಿ ಒಟ್ಟು 1,69,243 ಮತಗಳ ಪೈಕಿ 1,02161 ಮತಗಳನ್ನು ಪಡೆದು ಶೇ.60.36 ದಾಖಲೆ ಸ್ಥಾಪಿಸಿದ್ದರು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಜಯ್ ಶಂಕರ್ ಅವರು 58,185 ಮತ ಪಡೆದು ಶೇ. 34.38ರಷ್ಟು ಮಾತ್ರ ಮತಗಳಿಸಲು ಸಫಲರಾಗಿದ್ದರು. ಅದೇ ರೀತಿ ವೀರಾಜಪೇಟೆ ಕ್ಷೇತ್ರದಲ್ಲಿಯೂ ಬಿ.ಜೆ.ಪಿ. ಅಧಿಕ ಪ್ರಾಬಲ್ಯ ಸಾಧಿಸಿತ್ತು. ಒಟ್ಟು 1,59,287 ಮತಗಳ ಪೈಕಿ ಬಿ.ಜೆ.ಪಿ.ಯ ಪ್ರತಾಪ್ ಸಿಂಹ ಅವರು 96,235 ಮತ ಪಡೆದು ಶೇ. 60.42ರಷ್ಟು ಸಾಧನೆಗೈದಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಜಯ್‌ಶಂಕರ್ ಅವರು 54,738 ಮತ ಪಡೆದು ಶೇ. 34.49ರಷ್ಟು ಮಾತ್ರ ಮತಗಳಿಸಿದ್ದರು.

ಎಲ್ಲಿಂದೆಲ್ಲಿಗೆ ಬದಲಾವಣೆ ?

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮತದಾರರು ಪ್ರತ್ಯೇಕವಾದ ತೀರ್ಪನ್ನು ನೀಡುತ್ತಾರೆ. ಆದರೆ, ಕೇವಲ 4 ವರ್ಷದ ಅವಧಿಯಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಲೋಕಸಭಾ ಚುನಾವಣೆಯ  ಮತಗಳಿಕೆಗಿಂತ  ಮಡಿಕೇರಿ ಕ್ಷೇತ್ರದಲ್ಲಿ ಶೇ. 14.95 ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಶೇ. 13.04 ಕಡಿಮೆ ಮತಗಳಿಕೆ ಮೂಲಕ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ ಎನ್ನಬಹುದೇನೋ ?! ಅಲ್ಲದೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಬಳಿಕ ಮಡಿಕೇರಿ ಕ್ಷೇತ್ರದಲ್ಲಿ ಶೇ. 17.46 ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಶೇ. 15.45 ಅಧಿಕ ಮತಗಳನ್ನು ಈಗಿನ ವಿಧಾನಸಭಾ ಚುನಾವಣೆಯಲ್ಲಿ ಗಳಿಸುವ ಮೂಲಕ ಹೆಮ್ಮೆಯಿಂದ ಬೀಗುವಂತಾಗಿದೆ ಯೇನೋ ?!