ಕೌಟುಂಬಿಕ ಹಾಕಿ ವೈಭವಕ್ಕೆ ಸಜ್ಜಾಗುತ್ತಿರುವ ನಾಪೋಕ್ಲು

 

1996ರಲ್ಲಿ 60 ಕೊಡವ ಕುಟುಂಬಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಪಾಂಡಂಡ ಕಪ್‌ನ ಮೂಲಕ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡು ನಂತರದ ವರ್ಷಗಳಲ್ಲಿ ವಿಶ್ವದ ಗಮನ ಸೆಳೆದಿರುವ ಕೊಡವ ಕೌಟುಂಬಿಕ ವಾರ್ಷಿಕ ಹಾಕಿ ಉತ್ಸವ ಕಳೆದ ನಾಲ್ಕು ವರ್ಷಗಳಿಂದ ಕಾರಣಾಂತರಗಳಿಂದ ನಡೆದಿಲ್ಲ. 22 ಸತತ ವರ್ಷಗಳಲ್ಲಿ ಭಾರೀ ಹೆಸರು ಮಾಡಿದ್ದ ಕೌಟುಂಬಿಕ ಹಾಕಿ ಇದೀಗ ಮತ್ತೆ ತನ್ನ ಗತವೈಭವವನ್ನು ಮರುಕಳಿಸುವತ್ತ ಸಾಗುತ್ತಿದೆ.

2018ರಲ್ಲಿ ನಡೆದ ಕುಲ್ಲೇಟಿರ ಕಪ್‌ನ ಬಳಿಕ ಪ್ರಾಕೃತಿಕ ದುರಂತ, ಕೋವಿಡ್‌ನ ಪರಿಸ್ಥಿತಿಯಿಂದಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ ಈ ‘ಹಾಕಿ ನಮ್ಮೆ’ ಅನಿವಾರ್ಯವಾಗಿ ಸ್ಥಗಿತಗೊಳ್ಳುವಂತಾಗಿತ್ತು. ಇದೀಗ 23ನೆಯ ವರ್ಷದ ಹಾಕಿ ನಮ್ಮೆಯನ್ನು ನಾಲ್‌ನಾಡಿನವರಾದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ನಾಲ್ಕು ವರ್ಷಗಳ ಅಂತರವನ್ನು ಮರೆಯಾಗಿಸಿ ಹಿಂದಿನ ವೈಭವವನ್ನು ನೆನಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಸೆಲೆಬ್ರೆಟಿಗಳು, ಪ್ರಮುಖ ಕ್ರೀಡಾಪಟುಗಳು ಹಾಕಿ ಉತ್ಸವಕ್ಕೆ ಶುಭ ಕೋರಿ ಕಳುಹಿಸಿರುವ ವೀಡಿಯೋ ಸಂದೇಶಗಳು ಹರಿದಾಡುತ್ತಿವೆ. ಅಂಜುಬಾಬಿ ಜಾರ್ಜ್, ಅನುಪಮ್ ಖೇರ್, ಪ್ರಕಾಶ್ ಪಡುಕೋಣೆ ಸೇರಿದಂತೆ ಕೊಡಗಿನ ವಿವಿಧ ತಾರೆಯರು ಕ್ರೀಡಾಪಟುಗಳು ತಮ್ಮ ಸಂದೇಶಗಳ ಮೂಲಕ ಉತ್ತೇಜಿಸುತ್ತಿದ್ದಾರೆ.

336 ತಂಡಗಳು

ಅಪ್ಪಚೆಟ್ಟೋಳಂಡ ಕಪ್ ಹಾಕಿಗೆ 336 ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ ಎಂದು ಉತ್ಸವ ಸಮಿತಿ ಪ್ರಮುಖರಾದ ಮನು ಮುತ್ತಪ್ಪ ತಿಳಿಸಿದ್ದಾರೆ.

ಸುಸಜ್ಜಿತ ಗ್ಯಾಲರಿ: ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಆವರಣದಲ್ಲಿ ಪಂದ್ಯಾವಳಿಗಾಗಿ ಮೂರು ಮೈದಾನಗಳನ್ನು ಸಿದ್ಧಪಡಿಸಲಾಗುತ್ತಿದೆ. ಆರಂಭಿಕ ಪಂದ್ಯಾವಳಿ ಮೂರು ಮೈದಾನದಲ್ಲಿ ದಿವಸಕ್ಕೆ ತಲಾ 8 ಪಂದ್ಯಗಳಂತೆ ಒಟ್ಟು 24 ಪಂದ್ಯಗಳನ್ನು ನಡೆಸಲಾಗುವುದು. ಪ್ರೀಕ್ವಾರ್ಟರ್ ನಂತರದಿಂದ ಒಂದೇ ಮೈದಾನದಲ್ಲಿ ಪಂದ್ಯ ಜರುಗಲಿದೆ. ಈ ಮುಖ್ಯ ಮೈದಾನದಲ್ಲಿ ಸುಮಾರು 25 ಸಾವಿರ ಕ್ರೀಡಾಭಿಮಾನಿಗಳು ಕುಳಿತು ಪಂದ್ಯ ವೀಕ್ಷಿಸಲು ಸುಸಜ್ಜಿತ ಗ್ಯಾಲರಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೈದಾನದ ಮೂರು ಬದಿಯ ಸುತ್ತಲೂ ರೂ. 25 ಲಕ್ಷ ವೆಚ್ಚದಲ್ಲಿ ಗ್ಯಾಲರಿ ತಲೆ ಎತ್ತಿದೆ. ನಾಳೆಯಿಂದ ವಿಐಪಿ ಗ್ಯಾಲರಿಯ ಕೆಲಸ ಆರಂಭ ಗೊಳ್ಳಲಿದೆ.

ಸಿ.ಎಂ. ಭಾಗಿ: ಮಾರ್ಚ್ 18 ರಂದು ಉತ್ಸವ ಆರಂಭ ಗೊಳ್ಳಲಿದ್ದು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿಥಿಗಳಾಗಿ  ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಇವರೊಂದಿಗೆ ಕ್ರೀಡಾ ಸಚಿವರು,  ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಪ್ರಮುಖ ಆಟಗಾರರು ಇನ್ನಿತರ ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾಗವಹಿಸುತ್ತಿದ್ದಾರೆ.

ಭವ್ಯ ಮೆರವಣಿಗೆ: ಉದ್ಘಾಟನಾ ದಿನದಂದು ನಾಪೋಕ್ಲು ಪಟ್ಟಣದಲ್ಲಿ ಭವ್ಯವಾದ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಉತ್ಸವಕ್ಕೆ ಇನ್ನಷ್ಟು ಕಳೆ ಒದಗಿಸಲಾಗುವುದು. ನಂತರ ಮೈದಾನ ದಲ್ಲಿಯೂ ವಿವಿಧ ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ.

ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ತೀರ್ಪುಗಾರರ ಸಂಘ ಸೇರಿದಂತೆ ತಾಂತ್ರಿಕ ಸಮಿತಿಯವರು ಸಹಕಾರ ನೀಡುತ್ತಿದ್ದಾರೆ. ಸಿ.ಎಂ. ಉಪಸ್ಥಿತಿಯಲ್ಲಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಸಿಲ್ವರ್ ಸ್ಟಿಕ್ ಹಾಗೂ ಚೆಂಡಿನ ಮೂಲಕ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ.

ಕ್ರೀಡಾಪಟುಗಳಿಗೆ ಗೌರವ

ಅಂತಿಮ ಪಂದ್ಯಾವಳಿಯ ದಿನ ವಿವಿಧ ಕ್ರೀಡೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಕೊಡಗಿನ ಕ್ರೀಡಾಪಟುಗಳನ್ನು ಜಾತಿ, ಧರ್ಮದ ಭೇದ ಇಲ್ಲದೆ ಗೌರವಿಸಲಾಗುತ್ತಿದೆ.

ಪ್ರದರ್ಶನ ಪಂದ್ಯ: ಉದ್ಘಾಟನಾ ದಿನದಂದು ಕರ್ನಾಟಕ ಇಲವೆನ್ ಹಾಗೂ ಜೂನಿಯರ್ ಇಂಡಿಯಾ ಮತ್ತು ಕೂರ್ಗ್ ಇಲವೆನ್ ಹಾಗೂ ಸೇನೆಯ ಕೂರ್ಗ್ ರೆಜಿಮೆಂಟ್ ತಂಡಗಳ ನಡುವೆ ಎರಡು ಪ್ರದರ್ಶನ ಪಂದ್ಯಗಳು ಜರುಗಲಿವೆ.

ಮೈದಾನ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು ಸೇರಿದಂತೆ ಕಾಫಿ ಮಂಡಳಿ ಹಾಗೂ ಇತರ ಸರಕಾರಿ ಇಲಾಖೆಗಳ ಮಳಿಗೆ ಸೇರಿ ಸುಮಾರು 60 ಸ್ಟಾಲ್‌ಗಳು ಇರುತ್ತವೆ. ರೂ. 1.50 ಕೋಟಿಯಿಂದ ರೂ. 2 ಕೋಟಿಯ ಅಂದಾಜು ವೆಚ್ಚದಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ. ಸರಕಾರ ರೂ. 1 ಕೋಟಿಯ ಆಶ್ವಾಸನೆ ನೀಡಿದೆ.

ವಿಜೇತರಿಗೆ ಭಾರೀ ಬಹುಮಾನ

ಅಪ್ಪಚೆಟ್ಟೋಳಂಡ ಕಪ್ ವಿಜೇತ ಕುಟುಂಬ ರೂ. 3 ಲಕ್ಷ ಹಾಗೂ ಟ್ರೋಫಿ ಪಡೆಯಲಿದ್ದರೆ, ರನ್ನರ್ಸ್ ತಂಡ ರೂ. 2 ಲಕ್ಷ ಹಾಗೂ ಟ್ರೋಫಿ, ಮೂರನೇ ಸ್ಥಾನಕ್ಕೆ ರೂ. 1 ಲಕ್ಷ ಹಾಗೂ ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡ ರೂ. 50 ಸಾವಿರ ನಗದು ಹಾಗೂ ಟ್ರೋಫಿ ಗಳಿಸಲಿದೆ ಎಂದು ಮನು ಮುತ್ತಪ್ಪ ಸಮಿತಿ ಪರವಾಗಿ ಮಾಹಿತಿ ನೀಡಿದ್ದಾರೆ.

ವಿವಿಧ ವಿಭಾಗದ ಸಾಧಕರಿಗೂ ಬಹುಮಾನವಿದೆ. ವಿಶೇಷವಾಗಿ ಕೊಡವ ಪಾರಂಪರಿಕ ಪೀಚೆಕತ್ತಿ, ಒಡಿಕತ್ತಿ, ಸಿಲ್ವರ್ ಸ್ಟಿಕ್‌ನಂತಹ ವಸ್ತುಗಳನ್ನು ಕಾಣಿಕೆಯಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಸಹಕಾರವೂ ಕುಟುಂಬಕ್ಕೆ ಲಭಿಸಿದೆ. ಸುತ್ತಲೂ ಕಾವೇರಿ ಹರಿಯುವ ಪ್ರದೇಶ ಇದಾಗಿದ್ದು, ಅಧಿಕ ಕ್ರೀಡಾಭಿಮಾನಿಗಳು ಜಮಾಯಿಸುವ ನಾಪೋಕ್ಲು ಇದೀಗ ಹಾಕಿ ಹಬ್ಬದ ಆರಂಭದ ನಿರೀಕ್ಷೆಯಲ್ಲಿದ್ದು, ಪಟ್ಟಣಕ್ಕೆ ಹೊಸ ಕಳೆ ಬರುತ್ತಿದೆ.