ರೂ. 7 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು..?

 

ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲೆಂದು ಆರಂಭಗೊಂಡ ಮಡಿಕೇರಿಯ ಮಂಗಳೂರು ರಸ್ತೆಯಲ್ಲಿರುವ ಡಿ.ಸಿ ಕಚೇರಿ ತಡೆಗೋಡೆ ನಿರ್ಮಾಣ ಯೋಜನೆ ಇದೀಗ 2 ಮಳೆಗಾಲ ಕಳೆದು, 3ನೇ ಮಳೆಗಾಲ ಸಮೀಪಿಸಿದರೂ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ. ತಡೆಗೋಡೆ ತಲೆಎತ್ತಿ ಮಳೆಯ ಆರ್ಭಟಕ್ಕೆ ಸಮಸ್ಯೆ ಉಂಟಾಗಿ ತಡೆಗೆ ಹಾಕಿದ್ದ ಕಾಂಕ್ರೀಟ್ ಪ್ಯಾನಲ್‌ಗಳನ್ನು ತೆರವು ಮಾಡಿ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಂಡ ಕೀರ್ತಿ ಇಲಾಖೆಗೆ ಸಲ್ಲುತ್ತದೆ. 2021 ರಿಂದ ಯೋಜನೆ ಕಾರ್ಯಗತ ಹಂತದಲ್ಲಿಯೇ ಇದ್ದು, ಈ ವರ್ಷವೂ ಮುಕ್ತಾಯಗೊಳ್ಳುವುದು ಅನುಮಾನವಾಗಿದೆ.

2018ರಲ್ಲಿ ಸುರಿದ ಭಾರೀ ಮಳೆ, ಉಂಟಾದ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಅದೆಷ್ಟೋ ರಸ್ತೆ, ಸೇತುವೆ, ಆಸ್ತಿ-ಪಾಸ್ತಿ, ತಡೆಗೋಡೆ ಹಾನಿಯಾಗಿ ವ್ಯತಿರಿಕ್ತ ಪರಿಣಾಮ ಸೃಷ್ಟಿಯಾಗಿತ್ತು. ಅದೇ ರೀತಿ 2019ರಲ್ಲಿ ನೈಸರ್ಗಿಕ ವಿಕೋಪ  ಸಂಭವಿಸಿದ ಸಂದರ್ಭ ಜಿಲ್ಲಾಡಳಿತ ಭವನ ಎದುರಿನ ಬರೆಯಿಂದ ಮಣ್ಣು ಕುಸಿದ ಪರಿಣಾಮ ಜೊತೆಗೆ ಕೆಳಗಿನ ರಸ್ತೆ ರಾಷ್ಟ್ರೀಯ ಹೆದ್ದಾರಿ 275 ಆಗಿರುವ ಹಿನ್ನೆಲೆ ಮುಂದಾಗಬಹುದಾದ ಅವಘಡ ತಪ್ಪಿಸಲು ಜರ್ಮನ್ ತಂತ್ರಜ್ಞಾನದ ‘ಆರ್.ಯು. ವಾಲ್’ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿತು.

 

ತಾ. 27-11-2019 ರಂದು ಪ್ರಕ್ರಿಯೆ ಆರಂಭಗೊಂಡು, ರೂ. 7 ಕೋಟಿ ಕ್ರಿಯಾಯೋಜನೆ ತಯಾರಿಸಿ ತಾ. 22-11-2020ಕ್ಕೆ ಕಾಮಗಾರಿ ಕಾರ್ಯಾದೇಶ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಅಯ್ಯಪ್ಪ ಕನ್ಸ್ಟ್ರಕ್ಷನ್ ಕಂಪೆನಿಗೆ ನೀಡಿ ಮುಂದಿನ 11 ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಗಡುವು ನೀಡಿ ರೂ. 6.25 ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿತ್ತು.  

 

ತ್ವರಿತವಾಗಿ ಆರಂಭಗೊಂಡ ತಡೆಗೋಡೆ ಕಾಮಗಾರಿ 2022ರ ಹೊತ್ತಿಗೆ ಪ್ಯಾನಲ್‌ಗಳನ್ನು ಅಳವಡಿಸಿ ಕೆಲಸ ಒಂದು ಹಂತಕ್ಕೆ ಪೂರ್ಣಗೊಂಡು ಮೇಲ್ಭಾಗದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ 2022 ಜುಲೈ ತಿಂಗಳಿನಲ್ಲಿ ತಡೆಗೋಡೆಯ ಅಲ್ಲಲ್ಲಿ ಕಾಣಿಸಿಕೊಂಡ ಉಬ್ಬು, ಬಿರುಕುಗಳು ಆತಂಕ ಸೃಷ್ಟಿಸಿತ್ತು. 

 

ರಾಷ್ಟ್ರೀಯ ಹೆದ್ದಾರಿ 275 ರಸ್ತೆಯನ್ನು ಹಾದುಹೋಗುವ ಈ ತಡೆಗೋಡೆ ಭಯಕ್ಕೆ ಕಾರಣವಾಯಿತು. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುವ ಹಿನ್ನೆಲೆ 2022ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನೇ ಕೆಲ ದಿನಗಳು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲೆಯ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತಕ್ಷಣ ಅಧಿಕಾರಿಗಳು ಕ್ರಮಕ್ಕೆ ಮುಂದಾದರು. ಅಳವಡಿಸಿದ್ದ ಪ್ಯಾನಲ್‌ಗಳನ್ನು ಕಳಚಿ, ತಡೆ ಗೋಡೆಗೆ ವಿಶಾಲವಾದ ಟಾರ್ಪಲ್ ಹಾಕಿ ಜರ್ಮನ್ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದರು. ಆದರೆ, ಮಳೆಯ ಆರ್ಭಟಕ್ಕೆ ಪ್ಲಾಸ್ಟಿಕ್‌ನಿಂದ ನೀರು ಸೋರಿಕೆಯಾಗಿ ಬರೆಯೊಳಗೆ ನುಗ್ಗಿ ತಡೆಗೋಡೆ ಯೋಜನೆ ಅಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು.

 

ಅಂದಿನ ಶಾಸಕರುಗಳು ಕೂಡ ಈ ಯೋಜನೆ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಮಣ್ಣಿನ ಪರೀಕ್ಷೆ ನಡೆಸದೆ, ಜನಪ್ರತಿನಿಧಿಗಳ, ತಜ್ಞರ ಹಾಗೂ ಸ್ಥಳೀಯರ ಸಲಹೆ ಪಡೆಯದೆ ಯೋಜನೆ ಮಾಡಲಾಗಿದೆ ಎಂದು ದೂಷಿಸಿದ್ದರು. ಇದು ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಹಾಗೂ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಆರೋಪಿಸಿ ಇಲಾಖೆ ಅಧಿಕಾರಿ ವಿರುದ್ಧ ಲೋಕಾಯುಕ್ತ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. ತಜ್ಞರು ಸ್ಥಳ ಪರಿಶೀಲಿಸಿ ಸಮಸ್ಯೆಯ ಬಗ್ಗೆ ಅವಲೋಕನ ನಡೆಸಿದ್ದರು. ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಅಧಿಕಾರಿ ದೇವರಾಜು ಅವರನ್ನು ಸರಕಾರ ಅಮಾನತ್ತು ಮಾಡಿತ್ತು. 

 

 

ಜರ್ಮನ್ ತಂತ್ರಜ್ಞಾನ

 

ರೂ. 7 ಕೋಟಿಯ ಮೆಗಾ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಂಡ ಅಧಿಕಾರಿಗಳು ಇದರ ಸಾಧಕ-ಬಾಧಕಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದರು. ಮಣ್ಣು ಪರೀಕ್ಷೆಯಂತಹ ಕನಿಷ್ಟ ಮಾನದಂಡಕ್ಕೂ ಮುಂದಾಗಿಲ್ಲ ಎಂಬ ಆರೋಪವೂ ಮೊದಲಿನಿಂದ ಇದೆ. ನಿರ್ಮಾಣ ಆರಂಭಿಸಿ ಒಂದೇ ವರ್ಷದಲ್ಲಿ ಅಂದರೆ 2022ರಲ್ಲಿ ಭಾರೀ ಉಬ್ಬು ಹಾಗೂ ಬಿರುಕುಗಳು ತಡೆಗೋಡೆಯ ಪ್ಯಾನಲ್‌ನಲ್ಲಿ ಕಾಣಿಸಿಕೊಂಡಾಗಲೇ ಈ ತಂತ್ರಜ್ಞಾನದ ಬಗೆಗಿನ ನಂಬಿಕೆ ಹೋಗಿದೆ. ಮೊದಲು ತಡೆಗೋಡೆಗೆ ಮೆಷ್ ಅಳವಡಿಸಿ, ಮಣ್ಣು ತುಂಬಿ ಪ್ಯಾನಲ್‌ಗಳನ್ನು ಜೋಡಿಸುತ್ತಾ ಹೋಗಿದ್ದಾರೆ. ಆದರೆ, ಮಳೆಯ ನೀರು ಮಣ್ಣಿನೊಳಗೆ ಸೇರಿದ ಪರಿಣಾಮ ಪ್ಯಾನಲ್‌ಗಳಲ್ಲಿ ಉಬ್ಬು, ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿತ್ತು. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಹಿನ್ನೆಲೆ ಬಾಕಿ ಮೊತ್ತ ಪಾವತಿ ಮಾಡದೆ ಗುತ್ತಿಗೆ ಪಡೆದ ಸಂಸ್ಥೆಯ ಮೂಲಕವೇ ತಡೆಗೋಡೆಯ ಮರುನಿರ್ಮಾಣಕ್ಕೆ ಮುಂದಾಗಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಕೆಲಸ ನಡೆಯುತ್ತಲೆ ಇದೆ. ಆದರೆ, ಶೇ. 20 ರಷ್ಟು ಕಾಮಗಾರಿ ಇದುವರೆಗೂ ಮುಗಿದಿಲ್ಲ. ಅಳವಡಿಸಿದ್ದ 40 ಅಡಿ ಎತ್ತರ, 140 ಮೀಟರ್ ಅಗಲದ  ‘ಆರ್.ಯು.ವಾಲ್’ ಪ್ಯಾನಲ್‌ಗಳ ಅರ್ಧದಷ್ಟು ತೆರವುಗೊಳಿಸಿ, ಮಣ್ಣುಗಳನ್ನು ತೆಗೆದು ಆ ಜಾಗಕ್ಕೆ ಜಲ್ಲಿ ಕಲ್ಲು, ದೊಡ್ಡ ಗಾತ್ರದ ಬೆಲ್ಟ್, ತಡೆಗೋಡೆಗೆ ಕಬ್ಬಿಣದ ಗ್ರಿಲ್ ಹಾಕಿ ಅದನ್ನು ಬೃಹತ್ ಸ್ಕೂçಗಳಿಂದ ಗಟ್ಟಿಗೊಳಿಸುವ ಕೆಲಸ ನಡೆಯುತ್ತಲೇ ಇದೆ. ಜೊತೆಗೆ ಪೈಪ್‌ಗಳನ್ನು ಅಳವಡಿಸಿ ನೀರು ಸರಾಗವಾಗಿ ಹರಿಯಲು ಕೆಲಸ ನಡೆಯುತ್ತ್ತಲಿದೆ. ಇದು ಮುಕ್ತಾಯಗೊಂಡ ಬಳಿಕ ಉಳಿದ ಅರ್ಧ ಭಾಗದ ಪ್ಯಾನಲ್‌ಗಳನ್ನು ಕಳಚಿ ಕೆಲಸ ನಿರ್ವಹಿಸಬೇಕಾಗಿದೆ.

 

ಈ ವರ್ಷ ಮುಕ್ತಾಯ ಅನುಮಾನ

 

ಲೋಕೋಪಯೋಗಿ ಇಲಾಖೆ ಈ ವರ್ಷದ ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಗುರಿ ನೀಡಿದೆ. ಆದರೆ, ಈ ವರ್ಷ ಅಂತ್ಯವಾದರೂ ಈ ಕೆಲಸ ಪೂರ್ಣಗೊಳ್ಳುವುದು ಅನುಮಾನ. ಮೇ-ಜೂನ್ ತಿಂಗಳಿನಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, 4-5 ತಿಂಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುವುದಿಲ್ಲ. ಅದೇ ರೀತಿ ಈ ಯೋಜನೆಗೆ ಬಿಸಿಲಿನ ಅವಶ್ಯಕತೆ ಹೆಚ್ಚಿದೆ.  ಇದರೊಂದಿಗೆ ಇನ್ನೂ ಅರ್ಧದಷ್ಟು ತಡೆಗೋಡೆ ಈ ಹಿಂದೆ ಹಾಕಿದ್ದ ಮಣ್ಣಿನ ನಡುವೇ ಇದೆ. ಅದನ್ನು ತೆರವುಗೊಳಿಸಲು ಕಾಲಾವಕಾಶದ ಅವಶ್ಯಕತೆ ಇರುವ ಹಿನ್ನೆಲೆ ಕಾಮಗಾರಿ ಮತ್ತಷ್ಟು ವೇಗ ಕಳೆದುಕೊಂಡು ನಿಧಾನಗತಿ ಯಲ್ಲಿಯೇ ಸಾಗಲಿದೆ ಎಂದು ಮೇಲ್ನೋಟಕ್ಕೆ ಕಂಡುಬರುವ ಸತ್ಯವಾಗಿದೆ. ಸಮರ್ಪಕವಾಗಿ ಅಧ್ಯಯನ ನಡೆಸದೆ ಮಾಡಿದ ಯೋಜನೆ ವಿವಾದಗ್ರಸ್ತವಾಗಿದೆ. ಈ ರೀತಿ ಕಾಮಗಾರಿ ಬದಲು ಜಿಲ್ಲೆಯ ವಾತಾವರಣಕ್ಕೆ ಪೂರಕವಾದ ಯೋಜನೆ ರೂಪಿಸುವ ಆಗ್ರಹ ಜನರಿಂದ ಕೇಳಿಬರುತ್ತಿದೆ.

 

ಅಧಿಕಾರಿಗಳಿಂದ ನಿರುತ್ತರ

 

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿರುತ್ತರ ದೊರೆಯುತ್ತಿದೆ. ತಡೆಗೋಡೆ ಪೂರ್ಣಗೊಳಿಸುವ ಯಾವುದೇ ಆಸಕ್ತಿ ಅವರಿಂದ ಕಂಡುಬರುತ್ತಿಲ್ಲ. ಗುತ್ತಿಗೆ ಪಡೆದವರಿಂದ ಕೆಲಸ ನಡೆಯುತ್ತಿದೆ. ಹೊಸ ಅನುದಾನ ನೀಡುವುದಿಲ್ಲ. ಅವರಿಂದಲೇ ಕಾಮಗಾರಿ ನಡೆಯುತ್ತದೆ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯೋಜನೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರೆ, ‘ನೀವೆ ಸ್ಥಳಕ್ಕೆ ತೆರಳಿ ನೋಡಿ’ ಎಂಬ ಸಬೂಬು ಅಧಿಕಾರಿ ಸಿದ್ದೇಗೌಡ ಅವರಿಂದ ಬರುತ್ತದೆ.  ಜೊತೆಗೆ ಇದೆಲ್ಲ ಜರ್ಮನ್ ಟೆಕ್ನಾಲಜಿ ಅಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ.

 

ಕೆಲಸ ಮಾಡುವುದು ಕಷ್ಟ

 

ಕೆಲಸ ಕಾರ್ಯಗತದ ಬಗ್ಗೆ ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸ್ಥಳಕ್ಕೆ ತೆರಳಿದ ಸಂದರ್ಭ ಅಲ್ಲಿನ ಕಾರ್ಮಿಕರು ಇಲ್ಲಿ ಕೆಲಸ ಮಾಡುವುದು ಕಷ್ಟ. ಹಂತಹAತವಾಗಿ ಕೆಲಸ ನಿರ್ವಹಿಸಬೇಕು. ಆತುರವಾಗಿ ಮಾಡಿದರೆ ಮತ್ತೆ ತಡೆಗೋಡೆ ಕೆಲಸ ಹಾಳಾಗುತ್ತದೆ. ಜಲ್ಲಿಕಲ್ಲು ಹಾಕಿ ರೋಲ್ ಮಾಡಿ, ಮೆಷ್ ಅಳವಡಿಸಿ ಕಾದು ಮತ್ತೆ ಅದೇ ರೀತಿ ಪ್ರಕ್ರಿಯೆ ಮೇಲ್ಭಾಗದ ತನಕ ಮಾಡಬೇಕು. ಮಳೆ ಬಂದರೆ ಕೆಲಸ ಅಸಾಧ್ಯ ಎಂದು ‘ಶಕ್ತಿ’ಯೊಂದಿಗೆ ಹೇಳಿಕೊಂಡಿದ್ದಾರೆ.