ಕೊಡಗು - ಕೇರಳ ಗಡಿ ಮಾಕುಟ್ಟದಲ್ಲಿ ಕಸದ ಸಮಸ್ಯೆ ಉಲ್ಬಣ

 

ಕರ್ನಾಟಕ-ಕೇರಳ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕೊಡಗು ಕೇರಳ ಗಡಿಯ ಮಾಕುಟ್ಟ ಬಳಿ ಮೀಸಲು ಅರಣ್ಯ ಕೇರಳದ ಘನ ತ್ಯಾಜ್ಯಗಳಿಗೆ ಆಶ್ರಯ ನೀಡುವ ತಾಣವೆಂಬಂತೆ ಪರಿಗಣಿಸಿ ಕೇರಳ ರಾಜ್ಯದಿಂದ ಕಸದ ರಾಶಿಗಳನ್ನು ತಂದು ಅರಣ್ಯದಲ್ಲಿ ಸುರಿಯಲಾಗುತ್ತಿದ್ದು, ಅರಣ್ಯ ವಿಭಾಗ ಹಾಗೂ ಜಿಲ್ಲಾಡಳಿತ ಮೀಸಲು ಅರಣ್ಯದ ಪರಿಸರವನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತಗೊಂಡಿದೆ. 

ಗಡಿಯಲ್ಲಿ ಗಡಿ ವಿವಾದ, ಗಡಿನಾಡ ಭಾಷಾ ಸಮಸ್ಯೆ, ವ್ಯಾವಹಾರಿಕ ಸಮಸ್ಯೆ, ಆಡಳಿತ ವ್ಯವಸ್ಥೆ ಅಭಿವೃದ್ದಿ ಸೇರಿದಂತೆ ಹಲವಾರು ಸಮಸ್ಯೆಗಳು ತಲೆದೋರುವುದು ಸಾಮಾನ್ಯ. ಆದರೆ ಕರ್ನಾಟಕ- ಕೇರಳ ಅಂತರರಾಜ್ಯ ಗಡಿಯ ಅರಣ್ಯ ಪ್ರದೇಶದಲ್ಲಿ ಕೇರಳ ರಾಜ್ಯದ ತ್ಯಾಜ್ಯಗಳ ಸುರಿಮಳೆಯಿಂದ ಇದು ಕರ್ನಾಟಕ ರಾಜ್ಯ, ಕೊಡಗು ಜಿಲ್ಲೆಗೆ ತಲೆನೋವಾಗಿ ಪರಿಣಮಿಸಿ ಸಮಸ್ಯೆಗೆ ಮುಕ್ತಿ ದೊರಕದಂತಾಗಿದೆ.

ಪ್ರತಿದಿನ ಕೇರಳದಿಂದ ಲಾರಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿಸಿ ಕೊಂಡು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗುತ್ತಿರು ವುದು ಅರಣ್ಯ ಇಲಾಖೆಗೆ ನಿದ್ದೆಗೆಡುವಂತೆ ಮಾಡಿದೆ. ಇದೀಗ ಈ ಬಗ್ಗೆ ಸಾರ್ವಜನಿಕವಾಗಿಯೂ ಆಕ್ಷೇಪ ವ್ಯಕ್ತಗೊಳ್ಳುತ್ತಿದೆ. ಕಣ್ಣೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಕ್ಕೆ ತೆರಳುವ ಸಾಕಷ್ಟು ಮಂದಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ದಿನಂಪತ್ರಿ ಲೆಕ್ಕವಿಲ್ಲದಷ್ಟು ವಾಹನಗಳು ಸಂಚರಿಸುತ್ತವೆ. ಕೊಡಗು-ಕೇರಳಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ ಕಸದ ರಾಶಿ ಸುರಿಯುವುದರಲ್ಲಿಯೂ ಈ ಸಂಬಂಧ ಮುಂದುವರಿಯ ಬಾರದು ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯ.  ಕೇರಳಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಬಲಬದಿಯಲ್ಲಿ ಮಾಕುಟ್ಟ ಕೆರಟಿ ಮೀಸಲು ಅರಣ್ಯ ಹಾಗೂ ಎಡಬದಿಯಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯಕ್ಕೆ ಸೇರಿದ ಉರ್ಟಿ ಅರಣ್ಯ ಪ್ರದೇಶ ಹಂಚಿಹೋಗಿದ್ದು ಆರ್ಜಿ, ಬೇಟೋಳಿ, ಹೆಗ್ಗಳ, ನಾಂಗಾಲ ಗ್ರಾಮದ ಮೂಲಕ ಸುಮಾರು 22 ಕಿ.ಮೀ ಪ್ರಯಾಣ ಮಾಡಿದರೆ ಕೇರಳ ಗಡಿ ಕೂಟುಹೊಳೆ ತಲುಪುತ್ತದೆ. 

 

ಎರಡು ದಿನಗಳ ಹಿಂದೆ ಆಂಧ್ರದ ಲಾರಿಯೊಂದನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿತ್ತು. ಈ ಹಿಂದೆ ಮಾಕುಟ್ಟದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಕೇರಳದ ಟಿಪ್ಪರ್ ವಾಹನವೊಂದನ್ನು ಬೇಟೋಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಮೂವರು ಚಾಲಕರಿಗೆ ದಂಡ ವಿಧಿಸಿದ ಬೆನ್ನಲ್ಲೇ, ಫೆ.5 ರಂದು ಬೆಳಿಗ್ಗೆ ಮತ್ತೊಮ್ಮೆ ಕೇರಳದ ದೊಡ್ಡ ಲಾರಿ ಹಾಗೂ ಪಿಕಪ್ ವಾಹನದಿಂದ ಮಾಕುಟ್ಟ ಅರಣ್ಯದ ರಸ್ತೆಬದಿಯಲ್ಲಿ ತ್ಯಾಜ್ಯ ಸುರಿಯುತಿದ್ದಾಗ ಅರಣ್ಯ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. 

ವಶಕ್ಕೆ ಪಡೆಯಲಾದ ಲಾರಿ

ಮಾಕುಟ್ಟ ಬ್ರಹ್ಮಗಿರಿ ವನ್ಯ ಜೀವಿ ವಲಯದ ಉರಟಿ ಮತ್ತು ಮಾಕುಟ್ಟ ಮೀಸಲು ಕೆರಟ್ಟಿ ಅರಣ್ಯದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಕೇರಳ ರಾಜ್ಯದ ತ್ಯಾಜ್ಯ ಸುರಿಯುತ್ತಿ ರುವುದರಿಂದ ವನ್ಯ ಪ್ರಾಣಿಗಳು ತ್ಯಾಜ್ಯವನ್ನು ಸೇವಿಸಲು ರಸ್ತೆಗೆ ಬರುತ್ತಿದ್ದು ವನ್ಯ ಜೀವಿಗಳ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದ್ದು ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕಿದೆ.

ಮಾಕುಟ್ಟದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಒಂದು ಇದ್ದರೂ ಕೂಡ ಅಲ್ಲಿನ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ರಾಜ್ಯ ಪ್ರವೇಶಿಸುವ ಕನಿಷ್ಟ ಸರಕು ಸಾಗಾಣಿಕ ವಾಹನಗಳನ್ನು ಕೂಡ ತಪಾಸಣೆ ನಡೆಸದೇ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುತ್ತಿರುವುದರಿಂದಲೇ ಈ ಸಮಸ್ಯೆ ಉದ್ಭವವಾಗುತ್ತಿದೆ. ಇಲಾಖೆಯ ತಪಾಸಣಾ ಕೇಂದ್ರದಲ್ಲಿ ತಪಾಸಣೆ ನಡೆಸಿ, ಸೂಕ್ತ ಕ್ರಮಕೈಗೊಂಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ವೀರಾಜಪೇಟೆ ಕಡೆಯಿಂದಲೂ ಕೂಡ ತ್ಯಾಜ್ಯವನ್ನು ಎಸೆಯಲೆಂದೆ ಕೆಲ ವಾಹನಗಳು ಮಾಕುಟ್ಟ ಕಡೆ ತೆರಳುತ್ತಿದ್ದು ಈ ಬಗ್ಗೆಯೂ ನಿಗಾ ವಹಿಸಬೇಕಿದೆ.

ಆಸ್ಪತ್ರೆಯ ಮಾರಕ ತ್ಯಾಜ್ಯಗಳು ಲೋಡುಗಟ್ಟಲೆ ಒಳ ನುಸುಳುವಾಗ ತಪಾಸಣೆ ಕೇಂದ್ರದಲ್ಲಿ ಕಣ್ಣಿದ್ದು ಕುರುಡಂತಾಗಿರುವ ಸಿಬ್ಬಂದಿಗಳ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡುತ್ತಿವೆ ಅವರನ್ನು ಪತ್ತೆ ಮಾಡಿ ಬಂಧಿಸಬೇಕೆಂದು ಆರ್ಜಿ, ಬೇಟೋಳಿ ಮತ್ತು ವೀರಾಜಪೇಟೆಯ ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಪ್ರದೇಶದಲ್ಲಿ ತಂದು ಸುರಿಯುತ್ತಿರುವ ತ್ಯಾಜ್ಯಗಳನ್ನು ಕಾಡುಪ್ರಾಣಿಗಳು ಸೇವಿಸುತ್ತಿರುವು ದರಿಂದ ಅವುಗಳಿಗೆ ಮಾರಕ, ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿ ಸಂಕುಲಗಳು ಸಾವನ್ನಪ್ಪುತ್ತಿರುವುದರಿಂದ, ಸಂಬಂಧಪಟ್ಟ ಆರೋಪಿ ಗಳನ್ನು ವನ್ಯ ಪ್ರಾಣಿ ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಿ ಬಂಧಿಸ ಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಗಳಿಗೆ ಆಗ್ರಹಿಸಿದ್ದಾರೆ. 

ಕನಿಷ್ಟ ಸಂಜೆ 6 ರಿಂದ ಬೆಳಿಗ್ಗೆ 9ರವರಿಗೆ ಈ ಭಾಗದಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಹಲವು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟರೆ, ಮಾಕುಟ್ಟದಿಂದ ವೀರಾಜಪೇಟೆಗೆ ಕನಿಷ್ಟ ಸಮಯದಲ್ಲಿ ತಲುಪುವಂತೆ ಸಮಯ ನಿಗದಿ ಮಾಡಿ ತಪಾಸಣೆ ನಡೆಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಾಹನಗಳಲ್ಲಿ ಬರುವ ಚಾಲಕರು ಅಲ್ಲಲ್ಲಿ ಕಸದ ಮೂಟೆಗಳನ್ನು ಎಸೆದು ಹೋಗುತ್ತಾರೆ. ಅಂತವರನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ. ಇದನ್ನು ತಡೆಗಟ್ಟಲು ಕ್ಯಾಮರಾ ಅಳವಡಿಸಲಾಗಿದೆ. ಅರಣ್ಯದ ಭಾಗದಲ್ಲಿ ಎಲ್ಲೂ ವಾಹನ ನಿಲ್ಲಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ರಾತ್ರಿ ಹಗಲು ಗಸ್ತು ಏರ್ಪಡಿಸಲಾಗಿದೆ. ಕಸ ಹಾಕಿದವರಿಗೆ ದುಬಾರಿ ದಂಡ ವಿಧಿಸಲಾಗುವುದು, ಚೆಕ್‌ಪೋಸ್ಟ್ ನಲ್ಲಿಯೂ ತಪಾಸಣೆ ಕೈಗೊಳ್ಳಲಾಗುವುದು.

-ನೆಹರು ಕೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ವೀರಾಜಪೇಟೆ ವಿಭಾಗ

 

ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಅರಣ್ಯದಲ್ಲಿ ಕಸ ಎಸೆದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದ್ದು, ಕಸ ಎಸೆಯದಂತೆ ಫಲಕ ಅಳವಡಿಸಲಾಗಿದೆ. ಕ್ಯಾಮರಾ ಅಳವಡಿಕೆ, ರಾತ್ರಿ ಸಂಪೂರ್ಣ ಗಸ್ತು, ಚೆಕ್‌ಪೋಸ್ಟ್ ಬಳಿ ಕಡ್ಡಾಯ ತಪಾಸಣೆ, ವಾಹನಗಳ ನಿಲುಗಡೆಗೆ ಅವಕಾಶ ನೀಡದಂತೆ ಕ್ರಮ, ಹಗಲು ರಾತ್ರಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

-ಶ್ರೀನಿವಾಸ್ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಮಡಿಕೇರಿ ವನ್ಯಜೀವಿ ವಿಭಾಗ