ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಅನಾರೋಗ್ಯದಿಂದ ಬಳಲುತ್ತಿದೆ - ಚಿಕಿತ್ಸೆ ಕೊಡಿಸುವವರು ಯಾರು?

ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ಮೇಜರ್ ಸರ್ಜರಿಯ ಅಗತ್ಯವಿದೆ. ವೈದ್ಯರ ಕೊರತೆಯಿಂದ ಆಸ್ಪತ್ರೆ ನರಳುತ್ತಿದ್ದು, ಸ್ವತಃ ವೈದ್ಯರೇ ಶಾಸಕರಾಗಿದ್ದರೂ ಸಹ ಈ ಭಾಗದ ರೋಗಿಗಳ ಸಂಕಷ್ಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.  ಇರುವ ವೈದ್ಯರಲ್ಲಿ ಕೆಲವರು ರಜೆಯಲ್ಲಿದ್ದು, ಶಾಸಕರೇ ಕರೆ ಮಾಡಿ ಕರೆದರೂ ಸಹ ಬರಲೊಪ್ಪುತ್ತಿಲ್ಲ. ಪರಿಣಾಮ ಆಸ್ಪತ್ರೆ ಐಸಿಯುನಲ್ಲಿದ್ದು, ರೋಗಿಗಳು ಮಡಿಕೇರಿ, ಮಂಗಳೂರು, ಮೈಸೂರಿಗೆ ಹೋಗುವ ಪರಿಸ್ಥಿತಿ ತಪ್ಪಿಲ್ಲ. ಪ್ರಸ್ತುತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರುಗಳೇ ಇಲ್ಲದ್ದರಿಂದ ನರ್ಸ್ಗಳೇ ವೈದ್ಯರಂತಾಗಿದ್ದಾರೆ. ಅನಾರೋಗ್ಯದಿಂದ ಬಳಲುವ, ಅಪಘಾತಕ್ಕೀಡಾಗಿ ಆಗಮಿಸುವ ರೋಗಿಗಳನ್ನು ತಕ್ಷಣಕ್ಕೆ ನರ್ಸ್ಗಳೇ ಉಪಚರಿಸಿ, ಮಾನವೀಯ ಸೇವೆ ಒದಗಿಸುತ್ತಿದ್ದಾರೆ. ಹೆಚ್ಚಿನ ತಪಾಸಣೆ, ಚಿಕಿತ್ಸೆ ಬೇಕಿದ್ದರೆ ಮಡಿಕೇರಿ ಅಥವಾ ಮೈಸೂರಿಗೆ ಶಿಫಾರಸ್ಸು ಮಾಡುತ್ತಿದ್ದಾರೆ.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 15 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ ನಾಲ್ವರು ಮಾತ್ರ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಇದರಲ್ಲಿ ಮಹಿಳಾ ತಜ್ಞರು ರಜೆಯಲ್ಲಿದ್ದಾರೆ. ಉಳಿದ ಮೂವರಲ್ಲಿ ದಂತ ವೈದ್ಯರು ಎನ್‌ಹೆಚ್‌ಎಂ ಅಡಿಯಲ್ಲಿ ಪ್ರತಿ ವಾರದ ಶನಿವಾರ ಮಾತ್ರ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಉಳಿದಂತೆ ಒಂದು ಇ.ಎನ್.ಟಿ. ಮತ್ತು ಜನರಲ್ ಮೆಡಿಸನ್ ವೈದ್ಯರು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಈ ವೈದ್ಯರುಗಳೂ ಸಹ ಇಲ್ಲಿಂದ ವರ್ಗಾವಣೆ ಬಯಸಿ ಬೇರೆಡೆ ತೆರಳಿದರೂ ಆಶ್ಚರ್ಯವಿಲ್ಲ ಎಂಬಷ್ಟರ ಮಟ್ಟಿಗೆ ಕರ್ತವ್ಯದ ಒತ್ತಡದಲ್ಲಿದ್ದಾರೆ. ಇದರಲ್ಲಿ ಓರ್ವ ವೈದ್ಯರ ಪತ್ನಿ ಶಾಂತಳ್ಳಿ ಸಮುದಾಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ, ಇರುವ ಒತ್ತಡದ ನಡುವೆಯೂ ಜನರಲ್ ಮೆಡಿಸನ್ ವೈದ್ಯರು ಬಿಡುವಿಲ್ಲದ ಸೇವೆ ನೀಡುತ್ತಿದ್ದಾರೆ.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರು, ಮಕ್ಕಳ ತಜ್ಞರು, ಜನರಲ್ ಸರ್ಜನ್, ಮೂಳೆ ತಜ್ಞರು, ಅರವಳಿಕೆ ತಜ್ಞರು, ನೇತ್ರ ತಜ್ಞರು, ರೇಡಿಯಾಲಜಿಸ್ಟ್, ನಾಲ್ವರು ತುರ್ತು ವೈದ್ಯಾಧಿಕಾರಿಗಳು ಇರಬೇಕಿದ್ದರೂ ಈವರೆಗೆ ನಿಯೋಜನೆಯಾಗಿಲ್ಲ. ಮಹಿಳಾ ತಜ್ಞರು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಸದ್ಯ ರಜೆಯಲ್ಲಿದ್ದಾರೆ. ಎನ್‌ಹೆಚ್‌ಎಂ ಅಡಿಯಲ್ಲಿ ಓರ್ವ ದಂತ ವೈದ್ಯರು ನಿಯೋಜನೆಗೊಂಡಿದ್ದರೂ ಸಹ ಅವರು ವಾರದ ಶನಿವಾರ ಮಾತ್ರ ಆಸ್ಪತ್ರೆಗೆ ಬರುತ್ತಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಓರ್ವ ಇಎನ್‌ಟಿ ತಜ್ಞರು, ಓರ್ವ ಜನರಲ್ ಮೆಡಿಸಿನ್ ತಜ್ಞರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂತೆ ದಿನವಾದ ಸೋಮವಾರದಂದು ದೂರದ ಗ್ರಾಮೀಣ ಭಾಗದಿಂದ 250 ರಿಂದ 300 ಮಂದಿ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ಇತರ ದಿನಗಳಲ್ಲಿ ಕನಿಷ್ಟ 100 ಮಂದಿ ವಿವಿಧ ಕಾರಣಗಳಿಗಾಗಿ ಆಸ್ಪತ್ರೆಗೆ ಬರುತ್ತಾರೆ. ಆದರೆ ರೋಗಿಗಳ ರೋಗವನ್ನು ಗುಣಪಡಿಸಬೇಕಾದ ವೈದ್ಯರುಗಳೇ ಈ ಆಸ್ಪತ್ರೆಯಲ್ಲಿ ಇಲ್ಲವಾಗಿದ್ದಾರೆ. 

ಆಸ್ಪತ್ರೆಯಲ್ಲಿ 2 ಪ್ರಥಮ ದರ್ಜೆ ಸಹಾಯಕರು, ಟೈಪಿಸ್ಟ್, ರೆಕಾರ್ಡ್ ಕೀಪರ್, ಶುಶ್ರೂಷಕ ಅಧೀಕ್ಷಕರು, 4 ಕಿರಿಯ ಆರೋಗ್ಯ ಸಹಾಯಕಿಯರು, ಪ್ರಯೋಗ ಶಾಲಾ ತಂತ್ರಜ್ಞ, ಜೂನಿಯರ್ ಫಾರ್ಮಸಿಸ್ಟ್, ಎಲೆಕ್ಟ್ರಿಷಿಯನ್, ಇಸಿಜಿ ತಂತ್ರಜ್ಞ, ವಾಹನ ಚಾಲಕ ಹುದ್ದೆಗಳು ಖಾಲಿ ಬಿದ್ದು, ಹಲವಷ್ಟು ವರ್ಷಗಳಾಗಿವೆ. ಗ್ರೂಪ್ ಡಿಯಲ್ಲಿ 48 ಹುದ್ದೆಗಳು ಮಂಜೂರಾಗಿದ್ದರೂ, ಹೊರಗುತ್ತಿಗೆ ಆಧಾರದ ಮೇರೆ 24 ಮಂದಿ ಕೆಲಸ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ‘ಇಲ್ಲ’ಗಳ ನಡುವೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಿದೆ! ಇಲ್ಲಿ ಕಳೆದ ಕೆಲ ವರ್ಷಗಳ ಹಿಂದಷ್ಟೇ ರೂ. 1 ಕೋಟಿ ವೆಚ್ಚದಲ್ಲಿ 300 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ನಡೆದಿವೆ. ಐಸಿಯು ಘಟಕ ಸ್ಥಾಪಿಸಲಾಗಿದೆ. ರೂ. 95ಲಕ್ಷ  ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ, ರೂ. 60 ಲಕ್ಷ ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣಗೊಂಡಿದೆ. ಎಲ್ಲಾ ಬೆಡ್‌ಗಳಿಗೂ ಆಮ್ಲಜನಕ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಹೈಟೆಕ್ ಪ್ರಯೋಗ ಶಾಲೆ, ಡಯಾಲಿಸಿಸ್ ಘಟಕ, ಶಸ್ತçಚಿಕಿತ್ಸಾ ಘಟಕ, ಅಪಘಾತ ಮತ್ತು ತುರ್ತು ಸೇವಾ ಘಟಕ, ಹೆರಿಗೆ ವಿಭಾಗ, 10 ಹಾಸಿಗೆಯುಳ್ಳ ಐಸಿಯು ಘಟಕ, ಎಕ್ಸ್ರೇ ಘಟಕ ಸೇರಿದಂತೆ ಇನ್ನಿತರ ವ್ಯವಸ್ಥೆಗಳು ಈ ಆಸ್ಪತ್ರೆಯಲ್ಲಿವೆ. ಆದರೆ ಇವುಗಳನ್ನು ಬಳಕೆ ಮಾಡಿಕೊಂಡು ಸಾರ್ವಜನಿಕ ರೋಗಿಗಳಿಗೆ ಸೇವೆ ಒದಗಿಸಲು ಅತೀ ಅಗತ್ಯವಾಗಿರುವ ವೈದ್ಯರುಗಳೇ ಇಲ್ಲಿ ಇಲ್ಲ. ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ಧ ಸಾರ್ವಜನಿಕರು, ರೋಗಿಗಳು ಸರ್ಕಾರವನ್ನು ಶಪಿಸಲು ಆರಂಭಿಸಿದ್ದಾರೆ.  ಕಳೆದ ಸಾಲಿನಲ್ಲಿ ಐದಾರು ಮಂದಿ ವೈದ್ಯರುಗಳು ಒತ್ತಡದ ನಡುವೆಯೂ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದರು. ಕೊರೊನಾ ಸಂದರ್ಭವೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಓರ್ವ ವೈದ್ಯರು ಮಾತ್ರ ರೋಗಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಕೊಠಡಿ ಮುಂದೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಬಗ್ಗೆ ಗಮನ ಹರಿಸಿ, ವೈದ್ಯರನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

ಶಾಸಕರು ಕರೆದರೂ ಬರಲೊಪ್ಪದ ವೈದ್ಯರು

ಸ್ವತಃ ಶಾಸಕರೇ ಕರೆದರೂ ಈ ಆಸ್ಪತ್ರೆಗೆ ವೈದ್ಯರುಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ಉಪಕರಣಗಳು, ವಸತಿ ಗೃಹ, ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿದ್ದರೂ ವೈದ್ಯರು ಮಾತ್ರ ಬರುತ್ತಿಲ್ಲ. ಒಂದು ವೇಳೆ ನಿಯೋಜನೆಗೊಂಡರೂ ಸಹ ತಮ್ಮದೇ ಆದ ಪ್ರಭಾವ ಬೀರಿ ಇಲ್ಲಿಂದ ಹೋಗುತ್ತಿದ್ದಾರೆ. ಶಾಸಕರು ಇಲ್ಲೇ ಕೆಲಸ ಮಾಡಿ ಎಂದು ನಿರ್ದೇಶನ ನೀಡಿದರೆ ‘ನಮ್ಮನ್ನು ವರ್ಗಾವಣೆಗೊಳಿಸಿ, ತಪ್ಪಿದ್ದಲ್ಲಿ ಸ್ವಯಂ ನಿವೃತ್ತಿ ಪಡೆದುಕೊಳ್ಳುತ್ತೇವೆ’ ಎನ್ನುತ್ತಿದ್ದಾರೆ.

ವೈದ್ಯರೇ ಶಾಸಕರಾದರೂ ಮುಗಿದಿಲ್ಲ ಗೋಳು

ಸೋಮವಾರಪೇಟೆಯನ್ನು ಒಳಗೊಂಡಂತೆ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಸ್ವತಃ ವೈದ್ಯರಾದ ಡಾ. ಮಂತರ್ ಗೌಡ ಅವರಿದ್ದಾರೆ. ಈಗಾಗಲೇ ಮೂರ್ನಾಲ್ಕು ಬಾರಿ ಆಸ್ಪತ್ರೆಗೆ ಭೇಟಿಯನ್ನೂ ನೀಡಿದ್ದಾರೆ. ಆದರೆ ವ್ಯವಸ್ಥೆಗಳಲ್ಲಿ ಸುಧಾರಣೆ ಮಾತ್ರ ಆಗಿಲ್ಲ. ಚುನಾವಣೆ ಸಂರದರ್ಭ ಆಸ್ಪತ್ರೆಯ ಅವ್ಯವಸ್ಥೆಗಳೂ ಸಹ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಕೆಯಾಗಿದ್ದವು. ಇದಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಇರುವ ವೈದ್ಯರುಗಳೂ ಸಹ  ವರ್ಗಾವಣೆ ಮಾಡಿಸಿಕೊಂಡು ಇಲ್ಲಿಂದ ಹೋಗಿದ್ದಾರೆ. ಮಹಿಳಾ ತಜ್ಞ ಡಾ. ಶಿವಪ್ರಸಾದ್ ಅವರು ರಜೆಯಲ್ಲಿದ್ದು, ಜನರಲ್ ಮೆಡಿಸಿನ್ ವೈದ್ಯರಾದ ಡಾ. ಕಿರಣ್ ಮಾತ್ರ ದಿನದ 24 ಗಂಟೆಯೂ ದುಡಿಯುತ್ತಿದ್ದಾರೆ. ಇಎನ್‌ಟಿ ತಜ್ಞರೂ ಸಹ ತಮ್ಮ ಕಾರ್ಯವ್ಯಾಪ್ತಿ ಮೀರಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಉತ್ತಮ ಸೇವೆ ಸಲ್ಲಿಸುತ್ತಿದ್ದ ಡಾ. ಸತೀಶ್ ಅವರು ಇಲ್ಲಿಂದ ತೆರಳಿದ ನಂತರ ಇರುವ ವೈದ್ಯರಿಗೆ ಕೆಲಸದ ಭಾರ ಅಧಿಕವಾಗಿದೆ.