34 ಕೋಟಿ ವೆಚ್ಚದ ಭಾಗಮಂಡಲ ಸೇತುವೆ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ ಐದು ವರ್ಷ ಕಳೆದಿದೆ!

 

 

ಹೊರಜಿಲ್ಲೆ, ಹೊರರಾಜ್ಯಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ಕಾವೇರಿ ನದಿಯು ಸಂಗಮವಾಗಿ ಮುಂದುವರಿಯುವ ಭಾಗಮಂಡಲ ತ್ರಿವೇಣಿ ಸಂಗಮವು ವಾರ್ಷಿಕ ಮಳೆಗಾಲದಲ್ಲಿ ಉಕ್ಕಿ ಹರಿದು ಭಗಂಡೇಶ್ವರ ಸನ್ನಿಧಿಯ ಅರ್ಧದಷ್ಟು ಎತ್ತರಕ್ಕೆ ಪ್ರವಹಿಸಿ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯ ಕಾಮಗಾರಿ ಪ್ರಾರಂಭವಾಗಿ ಐದು ಕಾಲು ವರ್ಷಗಳು ಸರಿದಿವೆ. ಆದರಿನ್ನೂ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಳೆಗಾಲದಲ್ಲಿ  ದೋಣಿ, ರ‍್ಯಾಫ್ಟ್ ಮೂಲಕ ಸಂಗಮಾವೃತ ರಸ್ತೆಯನ್ನು ದಾಟುತ್ತಿದ್ದ ಸ್ಥಳೀಯರು ಇಷ್ಟೊತ್ತಿಗಾಗಲೇ ಮೇಲ್ಸೇತುವೆಯ ಮೂಲಕ ತಮ್ಮ ತಮ್ಮ ವಾಹನಗಳಲ್ಲಿ ಸುಗಮವಾಗಿ ಸಂಚರಿಸ ಬೇಕಾಗಿತ್ತಾದರೂ ಸಣ್ಣ ಪ್ರಮಾಣದ ಮಳೆ ಬಂದರೂ ಅರ್ಧಂಬರ್ಧ ಕಾಮಗಾರಿಯಿಂದಾಗಿ ಸೃಷ್ಟಿಯಾಗುವ ಕೆಸರುಮಯ ರಸ್ತೆಯಲ್ಲಿ ಕಳೆದೈದು ವರ್ಷಗಳಿಂದ ಸಂಕಟದಿಂದ ಸಂಚರಿಸುತ್ತಿದ್ದಾರೆ. ಸಂಗಮದ ಮೇಲಿನಿಂದ ಬೀಸುವ ತಂಪಾದ ಗಾಳಿಯನ್ನು ಉಸಿರಾಡುವ ಬದಲು ಸ್ಥಳೀಯರು ಬೇಸಿಗೆ-ಚಳಿಗಾಲದ ಒಣ ಋತು ಸಂದರ್ಭ ಧೂಳನ್ನು ಸೇವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ವರ್ಷದ ಮಳೆಗಾಲ ಇನ್ನು 4,5 ತಿಂಗಳುಗಳಲ್ಲಿ ಆಗಮಿಸಲಿದ್ದು, ‘ಮುಂದಿನ ಮಳೆಗಾಲದ ಒಳಗೆ ಮೇಲ್ಸೇತವೆ ರೆಡಿ ಆಗುತ್ತೆ’ ಎಂಬ ಜನಪ್ರತಿನಿಧಿಗಳ, ಅಧಿಕಾರಿಗಳ ‘ಭರವಸೆಯ’ ಮಾತುಗಳಿಗೆ ಮೇಲ್ಸೇತುವೆಯೇ ಪ್ರತಿಧ್ವನಿಸಬೇಕಿದೆ.

 

2004 ರಲ್ಲಿ ಸೇತುವೆ ನಿರ್ಮಾಣಕ್ಕೆ ಮನವಿ 

 

2014 ರ ಜುಲೈನಲ್ಲಿ ತ್ರಿವೇಣಿ ಸಂಗಮ ಜಲಾವೃತಗೊಂಡು ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿತ್ತು. ಈ ಸಂದರ್ಭ ಹಿರಿಯ ಕಾಂಗ್ರೆಸ್ ಪ್ರಮುಖ ಮಿಟ್ಟು ಚಂಗಪ್ಪ, ಮಾಜಿ ಸಚಿವ ಎಂ.ಎA ನಾಣಯ್ಯ, ಮಾಜಿ ಎಮ್.ಎಲ್.ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಮುಖರಾದ ದಿವಂಗತ ಬಿ.ಟಿ ಪ್ರದೀಪ್,  ಜೆ.ಎ ಕರುಂಬಯ್ಯ, ಮನೆಯಪಂಡ ಪೊನ್ನಪ್ಪ ಹಾಗೂ ಭಾಗಮಂಡಲದ ನಾಗರಿಕರು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರಿಗೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದರು. ಕೆಲ ದಿನಗಳ ಬಳಿಕವೇ ಮನವಿಗೆ ಸ್ಪಂದನ ದೊರೆತು ಕಾಮಗಾರಿಗೆ ಅನುಮೋದನೆ ದೊರಕಿತು.

 

4 ಮುಖ್ಯಮಂತ್ರಿಗಳನ್ನು ಕಂಡರೂ ಪೂರ್ಣಗೊಳ್ಳದ ಸೇತುವೆ

 

ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆದ ಸಂದರ್ಭ ಕೊಡಗಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು, 2018ರ ಜನವರಿ 9 ರಂದು ಜಿಲ್ಲೆಯಲ್ಲಿ ಒಟ್ಟು ರೂ.165.59 ಕೋಟಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ರೂ.29 ಕೋಟಿ 62 ಲಕ್ಷ ವೆಚ್ಚದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಗೂ ಮಡಿಕೇರಿಯಿಂದಲೇ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಇದಲ್ಲದೆ ಹೆಚ್ಚುವರಿಯಾಗಿ ರೂ. 4.5 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆಯ ಪ್ರವೇಶ ದ್ವಾರಗಳ ಕಾಮಗಾರಿ ಸೇರಿ ಒಟ್ಟು 34.12 ಕೋಟಿಯ ಯೋಜನೆ ಇದಾಗಿದೆ. 5 ವರ್ಷಗಳ ಆಡಳಿತ ಕಾಲಾವಧಿಯಲ್ಲಿ ಕರ್ನಾಟಕ ರಾಜ್ಯದ ಅಸ್ಥಿರ ಆಡಳಿತದಿಂದಾಗಿ ಕುಮಾರಸ್ವಾಮಿ ಬಳಿಕ ಯಡಿಯೂರಪ್ಪ, ನಂತರ ಬಸವರಾಜ ಬೊಮ್ಮಾಯಿ ಸಿ.ಎಂ ಗಳಾಗಿದ್ದು ಇದೀಗ ನೂತನ ಸರಕಾರದಲ್ಲಿ ಮತ್ತೆ ಪುನಃ ಸಿದ್ದರಾಮಯ್ಯ ಅವರೇ ಸಿ.ಎಂ ಆಗಿದ್ದಾರಾದರೂ ಮೇಲ್ಸೇತುವೆ ಮಾತ್ರ ಪೂರ್ಣಗೊಂಡಿರದೇ ಇರುವುದು ವಿಪರ್ಯಾಸ. ಒಟ್ಟು 4 ಮುಖ್ಯಮಂತ್ರಿಗಳನ್ನು ಕಂಡಿರುವ ಅಪೂರ್ಣ ಮೇಲ್ಸೇತುವೆ 5ನೇ ಮುಖ್ಯಮಂತ್ರಿ ನೋಡದಿದ್ದರೆ ಸಾಕು ಎಂಬಂತಾಗಿದೆ ಭಾಗಮಂಡಲ ನಿವಾಸಿಗಳ ಪರಿಸ್ಥಿತಿ.

 

ಅಕ್ಟೋಬರ್ 2018ರಲ್ಲಿ ಕಾಮಗಾರಿಗೆ ಚಾಲನೆ

 

ಮೇಲ್ಸೇತುವೆ ಕಾಮಗಾರಿಗೆ 2018ರ ಜನವರಿಯಲ್ಲಿ ಭೂಮಿಪೂಜೆಯಾಗಿದ್ದರೂ, 2018ರ ಅಕ್ಟೋಬರ್ 28ಕ್ಕೆ ಕಾಮಗಾರಿ ಪ್ರಾರಂಭವಾಯಿತು. ತೇಜಸ್ ಸನ್ಟಾçಪ್  ಪ್ರೈವೇಟ್  ಲಿಮಿಟೆಡ್ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಅಕ್ಟೋಬರ್ 27 ರಂದು ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಯನ್ನು 29ಕ್ಕೆ ಪ್ರಾರಂಭಿಸಿತು. ಮೇಲ್ಸೇತುವೆಗಾಗಿ ಹೆಚ್ಚುವರಿ ಜಾಗದ ಅಗತ್ಯವಿದ್ದು, ಸುತ್ತಮುತ್ತಲಿನ ಸುಮಾರು 31 ಮಂದಿಯಿಂದ ನಿಗಮದವರು ಜಾಗ ಖರೀದಿ ಮಾಡಿದ್ದಾರೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರ ಮಳೆಗಾಲದ ಸಮಸ್ಯೆಗೆ ಪರಿಹಾರ ಕಂಡುಕೊಡಬೇಕಿದ್ದುದು, ಐದು ಕಾಲು ವರ್ಷಗಳಾದರೂ ಪೂರ್ಣಗೊಳ್ಳದೆ ಇರುವುದು ವಿಪರ್ಯಾಸ.

 

ಜನವರಿ ಇನ್ನೂ ಅಂತ್ಯವಾಗಿಲ್ಲವೇ..?? 

 

‘ಮಳೆ ತೀವ್ರಗೊಂಡು ಪ್ರವಾಹ ಸೃಷ್ಟಿಯಾಗಿದೆ’, ‘ಈ ಬಾರಿ ಕೊರೊನಾದಿಂದ ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯ’ ಎಂಬಿತ್ಯಾದಿ ನೆಪಗಳ ಆಶ್ರಯದಲ್ಲಿ ಒಂದೂವರೆ ವರ್ಷದ ಕಾಮಗಾರಿ ಐದು ವರ್ಷಗಳವರೆಗೂ ತಳ್ಳಲ್ಪಟ್ಟಿದೆ. ಇದೀಗ ನೂತನ ಸರಕಾರ ರಚನೆಯಾದ ಬಳಿಕ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು ಅವರು, ಜನವರಿ 9 ರಂದು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜನವರಿ ಅಂತ್ಯದೊಳಗೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರತಿ ನಿತ್ಯವೂ ಕಾಮಗಾರಿಯ ವಿವರ ನೀಡುವಂತೆಯೂ ಈ ಸಂದರ್ಭ ಸೂಚನೆ ನೀಡಿದ್ದರು. ಆದರೆ ಇದು ಕೇವಲ ಮಾತಾಗಿಯೇ ಉಳಿದಿದ್ದು ಫೆಬ್ರವರಿ ಅಂತ್ಯಕ್ಕೂ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

 

ಬೀಳುತ್ತಿವೆ ಕಾಂಕ್ರಿಟ್ ಪುಡಿಗಳು

 

 

ಮೇಲ್ಸೇತುವೆಯ ಕೆಳ ಭಾಗದಿಂದ ಕೆಳಗಿನ ರಸ್ತೆಗೆ ಕಾಂಕ್ರಿಟ್ ತುಂಡುಗಳು ಬೀಳುತ್ತಿದ್ದು, ಮೊದಲೇ ತಡವಾಗಿರುವ ಕಾಮಗಾರಿಯ ಗುಣಮಟ್ಟವೂ ಕಳಪೆಯಾಗಿರುವುದು ಎದ್ದು ಕಾಣುತ್ತಿದೆ. ಇದಲ್ಲದೆ ಮೇಲ್ಸೇತುವೆಯಿಂದ ಮಳೆನೀರು ಸರಾಗವಾಗಿ ಹೊರಹರಿಯಲು ಕೆಲವೆಡೆ ಪೈಪ್‌ಗಳಿಗಾಗಿ ರಂದ್ರಗಳಿವೆಯಾದರೂ ಪೈಪ್‌ಗಳು ಮಾತ್ರ ಇನ್ನೂ ಅಳವಡಿಸದೆ ಮಳೆ ಬಂದರೆ ಕೆಳಗಿನ ರಸ್ತೆಗೆ ಜಲಪಾತದಂತೆ ನೀರು ಸುರಿಯುತ್ತದೆ. ಕೆಳಗಿನ ರಸ್ತೆಯಲ್ಲಿ ಚರಂಡಿಯು ರಸ್ತೆಗಿಂತ ಎತ್ತರವಿರುವ ಕಾರಣ, ಜನರಿಗೆ ಸಹಕಾರಿಯಾಗಬೇಕಿದ್ದ ಸೇತುವೆ ಹೊಸ ಸಮಸ್ಯೆಗಳಿಗೆ ಆಸ್ಪದ ನೀಡುತ್ತಿದೆ.

 

ರಸ್ತೆಗೆ ಹೊಂದಿಕೊಂಡಿರುವ ಪಿಲ್ಲರ್‌ಗಳು..!  ಅಪಾಯ ಕಟ್ಟಿಟ್ಟ ಬುತ್ತಿ

 

 

ಮೇಲ್ಸೇತುವೆಗೆ ಬೆಂಬಲವಾಗಿ ನಿಲ್ಲಬೇಕಿರುವ ಪಿಲ್ಲರ್‌ಗಳು ಕೆಳಗಿನ ರಸ್ತೆಯನ್ನೇ ಆವರಿಸಿವೆ. ಬಸ್, ಲಾರಿ ಮಾತ್ರವಲ್ಲದೆ ಇತರ ಸಣ್ಣ ವಾಹನಗಳೂ ಈ ಕೆಳಗಿನ ರಸ್ತೆಯಲ್ಲಿ ಸಂಚರಿಸುವಾಗ ಚಾಲಕರು ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ಕೆಳಗಿನ ರಸ್ತೆಯಲ್ಲಿ ವಾಹನವನ್ನು ‘ಓವರ್‌ಟೇಕ್’ ಮಾಡಲು ಪ್ರಯತ್ನಿಸಿದರೆ ಅಥವಾ ಸ್ವಲ್ಪ ಬಲ ಭಾಗಕ್ಕೆ ವಾಹನಗಳು ಸರಿದರೆ ಈ ಪಿಲ್ಲರ್‌ಗಳಿಗೆ ಅಪ್ಪಳಿಸಿ ಅಪಘಾತ ಸೃಷ್ಟಿಯಾಗುವುದು ಖಚಿತ. ಈಗಾಗಲೇ ಹಲವಾರು ಸ್ಥಳೀಯರ ವಾಹನಗಳಿಗೆ ಈ ರೀತಿ ಹಾನಿಯಾಗಿರುವ ನಿದರ್ಶನಗಳಿವೆ.

 

ಬೃಹತ್ ಬಸ್‌ಗಳಿಗೆ ಪ್ರವೇಶವಿಲ್ಲ

 

 

ಮಡಿಕೇರಿಯಿಂದ ಆಗಮಿಸುವವರು ಸಂಗಮಕ್ಕೆ ಅಥವಾ ಭಗಂಡೇಶ್ವರ ಸನ್ನಿಧಿಗೆ ತೆರಳಬೇಕಾದರೆ ಮೇಲ್ಸೇತುವೆ ಬದಲು ಕೆಳಗಿನ ರಸ್ತೆಯಲ್ಲಿ ತೆರಳಬೇಕಿದೆ. ಆದರೆ ಈ ರಸ್ತೆಯ ಪ್ರವೇಶವು ಕಿರಿದಾಗಿದ್ದು, ಕ್ಷೇತ್ರಕ್ಕೆ ಭಕ್ತಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಖಾಸಗಿ ಬೃಹತ್ ಗಾತ್ರದ ವೋಲ್ವೋ ಮಲ್ಟಿ ಆ್ಯಕ್ಸಲ್ ಬಸ್‌ಗಳಿಗೆ ತೆರಳಲಸಾಧ್ಯ. ಇಂತಹ ವಾಹನಗಳು ಮೇಲ್ಸೇತುವೆ ದಾಟಿ ನಿರ್ಗಮಿಸಿ ಅಲ್ಲಿ ಪಾರ್ಕ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

 

ಅದ್ಭುತ ‘ಇಂಜಿನಿಯರಿಂಗ್’..!

 

 

ಈ ಚಿತ್ರ ಒಮ್ಮೆ ಗಮನಿಸಿ - ಮೇಲ್ಸೇತುವೆಯಿಂದ ನಿರ್ಗಮಿಸುವ ವಾಹನಗಳ ಚಾಲಕರಿಗೆ ಕೆಳಗಿನ ರಸ್ತೆಯಿಂದ ಬರುವ ವಾಹನಗಳು ಕಾಣುವುದೇ ಇಲ್ಲ. ಎರಡು ವಾಹನಗಳು ಮುಖ್ಯರಸ್ತೆಯನ್ನು ಒಂದೆ ಸಮಯದಲ್ಲಿ ಸಂಪರ್ಕಿಸಿ ಅಪಘಾತಕ್ಕೆ ಆಸ್ಪದ ನೀಡುವಂತೆ ಮೇಲ್ಸೇತುವೆಯ ತಡೆಗೋಡೆಯನ್ನು ಕೆಳಗಿಳಿಸದೆ ಎತ್ತರದಲ್ಲೇ ಇರಿಸಲಾಗಿದೆ. ಇಂತಹದೊಂದು ಅದ್ಭುತ ಇಂಜಿನಿಯರಿಂಗ್ ‘ಐಡಿಯ’ ಬರುವುದಾದರೂ ಹೇಗೆ..?

ಜನವರಿ ಅಂತ್ಯದೊಳಗೆ ಪೂರ್ತಿ ಕಾಮಗಾರಿ ಮುಗಿಸುವಂತೆ ಸಚಿವರು ಸೂಚಿಸಿದ್ದು, ಇದು ಕನಸಿನಲ್ಲಿ ಆಗಬೇಕಿದೆ ಅಷ್ಟೇ. ಪ್ರಾಯೋಗಿಕವಾಗಿ ಇನ್ನೂ ಕಾಮಗಾರಿ ಮುಂದುವರಿಯಲಿದೆ. ಡಾಂಬರೀಕರಣವೇ ಪ್ರಾರಂಭಿಸಿಲ್ಲ. ಮಳೆ ಬಂದಲ್ಲಿ ಮೇಲ್ಸೇತುವೆಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಸರಿಯಾಗಿ ಕಲ್ಪಿಸಿಲ್ಲ. ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಕೆಲವೇ ಕೆಲವೆಡೆ ನೀರು ಹೊರಸಾಗಲೆಂದು ಸೃಷ್ಟಿಸಿರುವ ರಂದ್ರಗಳಿಗೆ ಪೈಪ್ ಅಳವಡಿಸದೆ ಇರುವುದರಿಂದ ಮೇಲ್ಸೇತುವೆ ಮೇಲೆ ನಿಂತ ನೀರು ಕೆಳಗಿನ ರಸ್ತೆಯ ಮಧ್ಯಭಾಗಕ್ಕೆ ಬೀಳುತ್ತಿದೆ. ಕೆಳಗಿನ ರಸ್ತೆಯಲ್ಲಿ ಚರಂಡಿ ಕಾಮಗಾರಿಯೂ ಸರಿಯಾಗಿ ನಡೆದಿಲ್ಲ. ರಸ್ತೆಗಿಂತಲೂ ಎತ್ತರದಲ್ಲಿ ಚರಂಡಿ ಏರಿಸಲಾಗಿದ್ದು ನೀರು ರಸ್ತೆಯಲ್ಲಿಯೇ ನಿಂತಿರುತ್ತದೆ.