ಆಕಸ್ಮಿಕ ಅವಘಡಗಳಿಗೆ ತುತ್ತಾದರೆ ಸಿಗಲಿದೆ ಭಾರಿ ಮೊತ್ತದ ಪರಿಹಾರ
ಅಂಚೆ ಇಲಾಖೆಯಿಂದ ಜಾರಿಯಾಗಿದೆ ಸಮೂಹ ಅಪಘಾತ ಸುರಕ್ಷಾ ಪಾಲಿಸಿ
ಭಾರತೀಯ ಅಂಚೆ ಇಲಾಖೆಯು ಸಾಮಾನ್ಯ ಜನರಿಗೆ ನೆರವಾಗಲೆಂದು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ.
ಆಕಸ್ಮಿಕ ಅವಘಡಗಳಿಗೆ ತುತ್ತಾಗಿ ಸಾವನ್ನಪ್ಪಿದರೆ ಅಥವಾ ಅಂಗವೈಕಲ್ಯತೆಗೆ ಒಳಗಾದರೆ ಅಂತವರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯ ಅಂಗ ಸಂಸ್ಥೆಯಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್. ಟಾಟಾ ಎಐಜಿ ಮತ್ತು ಬಜಾಜ್ ಅಲೈನ್ಸ್ ಜೊತೆ ಜಂಟಿಯಾಗಿ ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಅಡಿ ವಿಮೆ ಸೌಲಭ್ಯ ಜಾರಿಗೆ ತಂದಿದ್ದು, ವರ್ಷಕ್ಕೆ ಕೇವಲ 399 ಅಥವಾ 396 ರೂ. ಗಳನ್ನು ಪಾವತಿಸಿದರೆ ರೂ.10 ಲಕ್ಷದವರೆಗೆ ಪರಿಹಾರ ಪಡೆಯಬಹುದಾಗಿದೆ.
ಅಂಚೆ ಕಚೇರಿಗೆ ತೆರಳಿ ಪೋಸ್ಟಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಈ ಪಾಲಿಸಿ ಕುರಿತು ವಿಚಾರಿಸಿ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ನೀಡಿ ರೂ. 2೦೦ ಪಾವತಿಸಿ ಖಾತೆ ತೆರೆಯಬೇಕು, ಖಾತೆ ತೆರೆದ ಬಳಿಕ ವರ್ಷಕ್ಕೊಮ್ಮೆ ರೂ. 399ಅಥವಾ 396 ರೂಗಳನ್ನು ಪ್ರತಿ ವರ್ಷ ಪಾವತಿಸುತ್ತಾ ಬಂದರೆ ಯಾವುದೇ ರೀತಿಯ ಅಪಘಾತ, ಅವಘಡಗಳಿಂದ ಮರಣ, ಶಾಶ್ವತ ಸಂಪೂರ್ಣ ಅಥವಾ ಶಾಶ್ವತ ಭಾಗಶ: ಅಂಗವೈಕಲ್ಯತೆಗೆ ಒಳಗಾದರೆ ರೂ. 10 ಲಕ್ಷ ಮೊತ್ತದ ಪರಿಹಾರ ಪಡೆಯಬಹುದಾಗಿದೆ. ಖಾತೆ ತೆರೆಯುವ ವೇಳೆ ನಾಮಿನಿಯ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ ಮಾಹಿತಿಗಳನ್ನು ನೀಡಿದರೆ ಮರಣ ಹೊಂದಿದ ವ್ಯಕ್ತಿಯ 10 ಲಕ್ಷ ಪರಿಹಾರ ನಾಮಿನಿಗೆ ಲಭ್ಯವಾಗುತ್ತದೆ.
ಅಪಘಾತದಿಂದ ಅಂಗಾಂಗ ಛೇದನಕ್ಕೊಳಗಾದರೆ ಅಥವಾ ಅಪಘಾತದಿಂದ ಪಾರ್ಶ್ವವಾಯು ಸಂಭವಿಸಿದರೂ 10 ಲಕ್ಷ ರೂ ಪರಿಹಾರ ಸಿಗಲಿದೆ. ಮಾತ್ರವಲ್ಲದೆ ಅಪಘಾತದಿಂದ ಆಸ್ಪತ್ರೆಗೆ ದಾಖಲಾದರೆ ವೈದ್ಯಕೀಯ ವೆಚ್ಚಕ್ಕಾಗಿ ಗರಿಷ್ಠ ರೂ. 60 ಸಾವಿರದವರೆಗೆ ಪರಿಹಾರ ಪಡೆಯಬಹುದಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗದೆ ಚಿಕಿತ್ಸೆ ಪಡೆದರೆ ಗರಿಷ್ಠ ರೂ. 30 ರೂ. ಸಾವಿರದವರೆಗೆ ಪರಿಹಾರ ಸಿಗಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರೆ 10 ದಿನಗಳವರೆಗೆ ದಿನಕ್ಕೆ ರೂ. 1 ಸಾವಿರದಂತೆ ವೈದ್ಯಕೀಯ ಖರ್ಚಿಗೆ ಹಣ ಸಿಗಲಿದೆ. ಅಪಘಾತದಿಂದ ಮರಣ ಹೊಂದಿದ ವ್ಯಕ್ತಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗರಿಷ್ಠ ರೂ. 1 ಲಕ್ಷವನ್ನು ಪಡೆಯಬಹುದಾಗಿದೆ. ಅಪಘಾತ ಸಂಭವಿಸಿದ ವೇಳೆ ಪ್ರಯಾಣ ವೆಚ್ಚವಾಗಿ ಗರಿಷ್ಠ ರೂ. 25 ಸಾವಿರಗಳವರೆಗೆ ಹಣ ಪಾವತಿಯಾಗಲಿದ್ದು, ಅಂತಿಮ ಸಂಸ್ಕಾರಕ್ಕೂ ಗರಿಷ್ಠ ರೂ.5 ಸಾವಿರ ಹಣ ಲಭಿಸಲಿದೆ. 18 ವರ್ಷದಿಂದ 65 ವರ್ಷದೊಳಗಿನವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯಾವುದಕ್ಕೆ ಅನ್ವಯ?
ಈ ಯೋಜನೆ ಕೇವಲ ವಾಹನ ಅಪಘಾತಕ್ಕೆ ಮಾತ್ರ ಸೀಮಿತವಲ್ಲ. ಪ್ರಾಕೃತಿಕ ವಿಕೋಪ, ಪ್ರಾಣಿಗಳಿಂದಾಗುವ ಧಾಳಿ, ವಿದ್ಯುತ್ ಶಾಕ್, ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವು, ಮರದಿಂದ ಬಿದ್ದು ಸಾವು, ಸಿಲಿಂಡರ್ ಸ್ಫೋಟ, ಕಾಲು ಜಾರಿ ಬಿದ್ದು ಸಂಭವಿಸುವ ಸಾವು ನೋವುಗಳಿಗೂ ಈ ಯೋಜನೆ ಅನ್ವಯವಾಗಲಿದೆ. ರೂ. 10 ಲಕ್ಷ ಪರಿಹಾರ ಪಡೆಯುವ ನಿಟ್ಟಿನಲ್ಲಿ ಆಕಸ್ಮಿಕ ಅವಘಡಕ್ಕೆ ಸಂಬAಧಿಸಿದ ಎಫ್.ಐ.ಆರ್. ಮರಣೋತ್ತರ ಪರೀಕ್ಷಾ ವರದಿ ಅತ್ಯಗತ್ಯವಾಗಿದೆ. ಯಾವುದೇ ಆಸ್ಪತ್ರೆಯಲ್ಲಿ ದಾಖಲಾದರೂ ಆಸ್ಪತ್ರೆಯ ವೈದ್ಯರ ವರದಿ, ಬಿಲ್‌ಗಳನ್ನು ಹಾಜರುಪಡಿಸಿ ಈ ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಚೆಕಚೇರಿ ಅಥವಾ ಈ 9995967217 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.