ನಕ್ಷತ್ರ ವೀಕ್ಷಣೆಗೆ ದಕ್ಷಿಣ ಭಾರತದಲ್ಲೇ ತಲಕಾವೇರಿ ಸೂಕ್ತ ಪ್ರದೇಶ

 

ಬೆಂಗಳೂರು ಅಸ್ಟ್ರೋನಾಮಿಕಲ್ ಸೊಸೈಟಿಯಿಂದ ವರ್ಷಂಪ್ರತಿ ನಡೆಯುತ್ತಿರುವ ‘ಸ್ಟಾರ್ ಪಾರ್ಟಿ’

 

ತಲಕಾವೇರಿಯಲ್ಲಿ ಬಿ.ಎ.ಎಸ್ ಸದಸ್ಯರು

 

ದಟ್ಟ ಕಾನನದ ನಡುವೆ, ಯಾವುದೇ ಕೃತಕ ಬೆಳಕಿನ ಪ್ರಭಾವವಿಲ್ಲದಿರುವ ತಲಕಾವೇರಿಯ ಚಳಿಗಾಲದ ಮೋಡ ರಹಿತ ಸ್ಪಷ್ಟ ಆಗಸವು ಖಗೋಳಾಸಕ್ತರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಖಗೋಳಾಸಕ್ತರ ಪೈಕಿ ಬೆಂಗಳೂರಿನ ಬಿ.ಎ.ಎಸ್(ಬೆಂಗಳೂರು ಅಸ್ಟ್ರೋನಾಮಿಕಲ್ ಸೊಸೈಟಿ) ಸದಸ್ಯರು ಕಳೆದ 3 ವರ್ಷಗಳಿಂದ ಪ್ರತಿ ವರ್ಷ ನವೆಂಬರ್, ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯ ಮೋಡ ರಹಿತ ಮಳೆ ಇಲ್ಲದ ವಾತಾವರಣದಲ್ಲಿ ತಲಕಾವೇರಿ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ‘ಸ್ಟಾರ್ ಪಾರ್ಟಿ’ ಆಯೋಜಿಸುತ್ತಾ ಬಂದಿದ್ದು, ನಕ್ಷತ್ರ, ಗ್ರಹ, ತಾರಾಗಣ(ಗ್ಯಾಲೆಕ್ಸಿ) ಸೇರಿದಂತೆ ಬಾಹ್ಯಾಕಾಶದ ಇತರ ವಿಸ್ಮಯಗಳನ್ನು ವೀಕ್ಷಿಸುವುದಲ್ಲದೆ ಪರಸ್ಪರ ವಿಚಾರ ವಿನಿಮಯ, ಜ್ಞಾನ ಹಂಚಿಕೆ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ನಕ್ಷತ್ರ ವೀಕ್ಷಣೆಗೆ ಪ್ರಮುಖವಾಗಿ ಬೆಳಕು ರಹಿತ ವಾತಾವರಣ ಅಗತ್ಯವಿದೆ. ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿ ರಾತ್ರಿಯೂ ಕೃತಕ ಬೆಳಕಿನ ವಾತಾವರಣವಿರುವುದರಿಂದ ಅತ್ಯಾಧುನಿಕ ಟೆಲಿಸ್ಕೋಪ್‌ಗಳ ಸಹಾಯದಲ್ಲೂ ಖಗೋಳ ವೀಕ್ಷಣೆ ಕಷ್ಟಸಾಧ್ಯವಾಗಲಿದೆ. ಕೊಡಗಿನ ಪರಿಸರವು ಬಹುತೇಕ ಕೃತಕ ಬೆಳಕು ರಹಿತವಾಗದ್ದು, ದಕ್ಷಿಣ ಕೊಡಗಿನ ಹಲವು ಭಾಗಗಳು ಖಗೋಳವೀಕ್ಷಣೆಗೆ ಉತ್ತಮ ತಾಣವಾಗಿದೆ. ಬಿ.ಎ.ಎಸ್ ಸದಸ್ಯರು ಈ ಹಿಂದೆ ದಕ್ಷಿಣ ಕೊಡಗಿನಲ್ಲಿ ನಕ್ಷತ್ರ ವೀಕ್ಷಣೆ ಆಯೋಜಿಸುತ್ತಾ ಬಂದಿದ್ದರು. ನಾಪೋಕ್ಲುನಲ್ಲಿಯೂ ಕೆಲವು ಬಾರಿ ‘ಸ್ಟಾರ್ ಪಾರ್ಟಿ’ ಆಯೋಜನೆ ಮಾಡಿದ್ದ ಬಿ.ಎ.ಎಸ್. ಇದೀಗ ತಲಕಾವೇರಿಯಂತಹ ಜನರಹಿತ, ಕೃತಕ ಬೆಳಕು ರಹಿತ ಪ್ರದೇಶದಲ್ಲಿ ಖಗೋಳವೀಕ್ಷಣೆಯಲ್ಲಿ ತೊಡಗಿದ್ದಾರೆ.

2006 ರಂದು ಪ್ರಾರಂಭವಾದ ಬಿ.ಎ.ಎಸ್, ಸಮಾನಮನಸ್ಕರನ್ನು ಒಂದುಗೂಡಿಸಿ ಗೂಗಲ್ ಗ್ರೂಪ್ಸ್, ಟೆಲಿಗ್ರಾಮ್ ಜಾಲತಾಣಗಳ ಮುಖಾಂತರ ತನ್ನ 1,200 ಕ್ಕೂ ಹೆಚ್ಚು ಸದಸ್ಯರಿಗೆ ‘ಸ್ಟಾರ್ ಪಾರ್ಟಿ’ಗಳ ಬಗ್ಗೆ ಮಾಹಿತಿ ನೀಡುತ್ತದೆ. ಪ್ರತಿ ಸ್ಟಾರ್ ಪಾರ್ಟಿಯಲ್ಲಿ ಕನಿಷ್ಟ 30 ರಿಂದ ಗರಿಷ್ಠ 50 ಮಂದಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಹಿಂದೆ ತಮಿಳುನಾಡಿನ ಯಳಗಿರಿ ಬೆಟ್ಟ ಪ್ರದೇಶ ಸೇರಿದಂತೆ ಇತರ ಕೆಲವು ಬೆಳಕು ಮಾಲಿನ್ಯ ರಹಿತ ಪ್ರದೇಶಗಳಲ್ಲಿ ‘ಸ್ಟಾರ್ ಪಾರ್ಟಿ’ ಆಯೋಜನೆ ಮಾಡುತ್ತಿದ್ದ ಬಿ.ಎ.ಎಸ್ ಮೊದಲಿಗೆ  2013ರಲ್ಲಿ ವೀರಾಜಪೇಟೆಯ ಗ್ರಾಮೀಣ ಭಾಗಗಳಲ್ಲಿ, ನಾಪೋಕ್ಲುವಿನಲ್ಲಿ ನಂತರ 2020ರಿಂದೀಚೆಗೆ ತಲಕಾವೇರಿಯಲ್ಲಿ ‘ಸ್ಟಾರ್ ಪಾರ್ಟಿ’ ನಡೆಸುತ್ತಿದೆ.

ಅಮಾವಾಸ್ಯೆ ವಾರಾಂತ್ಯ ಸೂಕ್ತ

ಮೋಡ ರಹಿತ ವಾತಾವರಣವಿದ್ದರೂ ಸುತ್ತಮುತ್ತ ಬೆಳಕಿದ್ದರೆ ನಕ್ಷತ್ರ ವೀಕ್ಷಣೆ ಕಷ್ಟಸಾಧ್ಯ. ಆದ ಕಾರಣ ನಗರ ಪ್ರದೇಶಗಳಿಂದ ಹೊರವಲಯದಲ್ಲಿರುವ ತಲಕಾವೇರಿ ಇಂತಹ ಖಗೋಳವೀಕ್ಷಣೆಗೆ ಸೂಕ್ತ ಸ್ಥಳ. ಅದ್ಯಾಗೂ ಹುಣ್ಣಿಮೆ ದಿನ ಅಥವಾ ಹುಣ್ಣಿಮೆಗೆ ಆಸುಪಾಸು ದಿನಗಳಲ್ಲಿ (ಶುಕ್ಲ ಪಕ್ಷೆಯ 15 ದಿನಗಳಲ್ಲಿ) ಚಂದ್ರನ ಪ್ರಕಾಶಮಾನದಿಂದಾಗಿ ಖಗೋಳದಲ್ಲಿ ನಕ್ಷತ್ರ ಗ್ರಹಗಳ ಸ್ಪಷ್ಟ ಗೋಚರ ಸುಲಭವಲ್ಲ. ಆದುದರಿಂದ ಅಮಾವಾಸ್ಯೆ ಹಾಗೂ ಅಮಾವಾಸ್ಯೆ ಆಸುಪಾಸಿನ ದಿನಗಳಲ್ಲಿಯೇ (ಕೃಷ್ಣ ಪಕ್ಷ) ‘ಸ್ಟಾರ್ ಪಾರ್ಟಿ’ ನಡೆಸಲು ಸೂಕ್ತ. 

ಜನವರಿ 20 ರಿಂದ 23 ರವರೆಗೆ ಮುಂದಿನ ‘ಸ್ಟಾರ್ ಪಾರ್ಟಿ’

ಕಳೆದ ವರ್ಷ, ಅಂದರೆ 2022ರ ಡಿಸೆಂಬರ್  23 ರಿಂದ 27ರವರೆಗೆ ತಲಕಾವೇರಿಯಲ್ಲಿ ನಕ್ಷತ್ರ ವೀಕ್ಷಣೆ ಆಯೋಜಿಸಿದ್ದ ಬೆಂಗಳೂರು  ಅಸ್ಟ್ರೋನಾಮಿಕಲ್ ಸೊಸೈಟಿ ಈ ವರ್ಷ ತನ್ನ ಮೊದಲ ‘ಸ್ಟಾರ್ ಪಾರ್ಟಿ’ಯನ್ನು ಜನವರಿ 20 ರಿಂದ 23ರವರೆಗೆ ತಲಕಾವೇರಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಿದೆ. ಜನವರಿ 21 ಅಮಾವಾಸ್ಯೆ ಆಗಿರುವುದರಿಂದ ನಕ್ಷತ್ರ ವೀಕ್ಷಣೆ ಸುಲಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಎ.ಎಸ್‌ನ ಗೂಗಲ್ ಗ್ರೂಪ್ಸ್ ಲಿಂಕ್  https://groups.google.com/g/b-a-s ಮೂಲಕ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ. 

 

ಬೆಂಗಳೂರು ಅಸ್ಟ್ರೋನಾಮಿಕಲ್  ಸೊಸೈಟಿ 2006ನೆ ಇಸವಿಯಲ್ಲಿ ಪ್ರಾರಂಭಗೊಂಡಿದ್ದು, ನಕ್ಷತ್ರ ವೀಕ್ಷಣೆಯಲ್ಲಿ ಆಸಕ್ತಿ ಇರುವವರು ಸಕ್ರಿಯರಾಗಿದ್ದಾರೆ. ಬಹುತೇಕ ಮಂದಿ ಉದ್ಯೋಗದಲ್ಲಿದ್ದು, ಹೆಚ್ಚಿನ ಮಂದಿ ಸಾಫ್ಟ್ವೇರ್ ಸಂಸ್ಥೆಗಳಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ನಕ್ಷತ್ರ ವೀಕ್ಷಣೆಗೆ ಅವಶ್ಯವಿರುವ ಟೆಲಿಸ್ಕೋಪ್ ಇತ್ಯಾದಿ ಪರಿಕರಗಳು ಎಲ್ಲರ ಬಳಿ ಇಲ್ಲದಿದ್ದರೂ ಪರಸ್ಪರ ಹಂಚಿಕೊಂಡು ನಕ್ಷತ್ರ ವೀಕ್ಷಣೆ ಸೇರಿದಂತೆ ಖಗೋಳಶಾಸ್ತ್ರ ಸಂಬಂಧ ಜ್ಞಾನ ಹಂಚಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.  

ವಿಶ್ವನಾಥ್ ಎಸ್.ಕೆ, ಬಿ.ಎ.ಎಸ್ ಸ್ವಯಂ ಸೇವಕ