ಭಾಗಮಂಡಲ ಮೇಲ್ಸೇತುವೆ ಕೆಲಸ ಮತ್ತೆ ವಿಳಂಬ

ಜಿಲ್ಲೆಯ ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಎರಡು ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿದ್ದು, ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುತ್ತಿದ್ದರು. ತಲಕಾವೇರಿ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಅಯ್ಯಂಗೇರಿ, ಕೋರಂಗಾಲ, ಸಣ್ಣಪುಲಿಕೋಟು ಹಾಗೂ ಚೇರಂಗಾಲದ ಜನರಿಗೆ, ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಲು ತೊಂದರೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಇಲ್ಲಿಗೆ ಪರ್ಯಾಯ ವ್ಯವಸ್ಥೆ ಆಗಬೇಕೆಂದು ಒತ್ತಾಯ ಕೇಳಿ ಬರುತ್ತಿದೆ. 2007ರ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ನಿಯಂತ್ರಿಸಲು ಆಗಿನ ಉಸ್ತುವಾರಿ ಸಚಿವ ಜಾರ್ಜ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನಕ್ಕಾಗಿ ಬಂದ ಸಂದರ್ಭ ಗ್ರಾಮಸ್ಥರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಪ್ರಸ್ತಾಪಿಸಿದ ಆಗಿನ ಉಸ್ತುವಾರಿ ಸಚಿವರು ಕೆಲವು ದಿನಗಳಲ್ಲಿ 28 ಕೋಟಿ 86 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸೂಚಿಸಿದರು ಅಂತೆಯೇ ಜಿಲ್ಲೆಯಲ್ಲಿ ಮೊದಲ ಮೇಲ್ಸೇತುವೆಯಾಗಿ 2018ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 2019ರ ಜನವರಿ ಯಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿತು. ಇದೀಗ ಮೇಲ್ಸೇತುವೆ ಕಾಮಗಾರಿ ಶೇ.90ರಷ್ಟು ಮುಕ್ತಾಯಗೊಂಡಿದ್ದರೂ, ಈ ವರ್ಷದ ಮಳೆಗಾಲಕ್ಕೆ ಜನರಿಗೆ ಸಂಚಾರಕ್ಕೆ ಲಭ್ಯವಾಗಲು ಅನಿಶ್ಚಿತತೆ ಕಂಡುಬರುತ್ತಿದೆ.

ಕೊನೆಯ ಭಾಗದಲ್ಲಿ ಮೇಲ್ಸೇತುವೆಯ ಮೂರು ಕಡೆಗಳಲ್ಲಿ ಹತ್ತಿ ಇಳಿಯುವ ಕೆಲಸ ಬಾಕಿ ಉಳಿದಿದ್ದು ಟೆಂಡರ್ ಪ್ರಕ್ರಿಯೆ ಆದರೂ ಮಳೆಗಾಲಕ್ಕೆ ಇನ್ನು ಮೂರು ತಿಂಗಳು ಬಾಕಿ ಉಳಿದಿದ್ದರು ಕೆಲಸ ಆರಂಭವಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಮೇಲ್ಸೇತುವೆ ಟೆಂಡರ್ ಪ್ರಕ್ರಿಯೆ 18 ತಿಂಗಳ ಗುತ್ತಿಗೆ ಹೊಂದಿದ್ದು, ಈಗಾಗಲೇ 40 ತಿಂಗಳು ಪೂರ್ಣಗೊಂಡರೂ ಪೂರ್ಣ ಕಾಮಗಾರಿ ಮುಕ್ತಾಯ ಆಗಿಲ್ಲ. AVRತೇಜಸ್ ಇನ್ಫೊಟೆಕ್  ಪ್ರೈವೇಟ್ ಲಿಮಿಟೆಡ್ ಮೇಲ್ಸೇತುವೆ ಗುತ್ತಿಗೆ ಹೊಂದಿದ್ದು, ರೂ. 28 ಕೋಟಿ ರೂಪಾಯಿಗಳಲ್ಲಿ ಕೆಲಸ ಆರಂಭವಾಗಿ ತದನಂತರ ಬೇಡಿಕೆ ಇಟ್ಟ ಹಿನ್ನೆಲೆ ಸರ್ಕಾರ ಮತ್ತೆ ಹೆಚ್ಚುವರಿ ಆಗಿ ಮೂರು ಕೋಟಿ ಬಿಡುಗಡೆಗೊಳಿಸಿ ಇದೀಗ ಶೇ. 90ರಷ್ಟು ಕೆಲಸ ಕಾರ್ಯ ಗಳಾದರೂ, ಮೇಲ್ ಸೇತುವೆಯ ಇಳಿಯುವ ಮತ್ತು ಏರುವ ಸ್ಥಳಗಳಲ್ಲಿ ಮತ್ತೆ ನಾಲ್ಕುವರೆ ಕೋಟಿ ಬಿಡುಗಡೆ ಗೊಂಡಿದ್ದು, ಒಟ್ಟು 36.46 ಕೋಟಿ ರೂಪಾಯಿ ಈ ಕಾಮಗಾರಿಗೆ ಬಳಕೆ ಆಗುತ್ತಿದೆ.

18 ತಿಂಗಳ ಕಾಮಗಾರಿಗೆ 43 ತಿಂಗಳ ಕಾಮಗಾರಿ ಕೆಲಸಕ್ಕೆ ತೆಗೆದುಕೊಂಡಿದೆ ಇದರಲ್ಲಿ ಕೊರೊನಾ ಮತ್ತು ಮಳೆಗಾಲದ ಹಿನ್ನೆಲೆಯಲ್ಲಿ ಕೆಲವು ತಿಂಗಳು ಕೆಲಸ ಕಾರ್ಯ ಸ್ಥಗಿತಗೊಂಡಿತ್ತು. 

ಮೇಲ್ಸೇತುವೆ ಕೆಳಭಾಗದ ರಸ್ತೆ ಬದಿಯಲ್ಲಿ ಒಳ ಚರಂಡಿ ಕಾರ್ಯ ಮುಗಿದಿದ್ದು, ನಾಪೋಕ್ಲು ರಸ್ತೆಯ  ಕಾಂಕ್ರೀಟೀಕರಣ ಬಾಕಿ ಉಳಿದಿದ್ದು ಇದೀಗ ಮೇಲ್ಸೇತುವೆಯ ಕನ್ನಿಕೆ ಮತ್ತು ಕಾವೇರಿಯ ನದಿಯ ಮೇಲ್ಭಾಗದಲ್ಲಿ ಅಡ್ಡಲಾಗಿ ಭೀಮ್‌ಗಳನ್ನು ಇರಿಸಲಾಗಿದ್ದು, ಇದರಲ್ಲಿ ಎರಡು ಕಡೆಗಳಲ್ಲಿ ಕಾಂಕ್ರೀಟ್ ಹಾಕಲು ಬಾಕಿ ಉಳಿದಿದೆ. ಮೇಲ್ಸೇತುವೆಯಲ್ಲಿ ಡಾಮರೀಕರಣ ಹಾಗೂ ಲೈಟಿಂಗ್ ವ್ಯವಸ್ಥೆಗಳು ಏಪ್ರಿಲ್ ಅಂತ್ಯಕ್ಕೆ ಮುಕ್ತಾಯಗೊಳಲಿದೆ ಎಂದು ಕೆಲಸದ ಉಸ್ತುವಾರಿಗಳು ತಿಳಿಸಿದ್ದಾರೆ. ಅಲ್ಲದೆ ಇದೀಗ ಮೇಲ್ಸೇತುವೆಯ ಮೂರು ಕಡೆ ಹತ್ತಿ ಇಳಿಯುವ ಸ್ಥಳಗಳಿಗೆ ರಿಟರ್ನಿಂಗ್ ವಾಲ್ ಕಾಂಕ್ರೀಟ್ ರಸ್ತೆಗೆ ಎವಿಆರ್ ಸಂಸ್ಥೆಯು ಒಂದು ಕೋಟಿ ಐವತ್ತು ಲಕ್ಷದಲ್ಲಿ ಮಾಡಿಕೊಳ್ಳುವುದಾಗಿ ಒಪ್ಪಿಗೆ ನೀಡಿದ್ದಾರೆ. ಈ ಕೆಲಸಕ್ಕೆ ರೂ. ನಾಲ್ಕು ಕೋಟಿ ಬಿಡುಗಡೆಗೊಳಿಸಿ ಟೆಂಡರ್ ಪ್ರಕ್ರಿಯೆ ಬೇರೆಯವರು ತೆಗೆದುಕೊಂಡಿದ್ದು ಅದರಲ್ಲಿ ಒಂದೂವರೆ ಸೆಂಟ್ ಖಾಸಗಿ ಜಾಗಕ್ಕೆ ದಾಖಲಾತಿಗಳು ಹೊಂದಿಕೆ ಆಗದ ಕಾರಣ ಕೆಲಸ ವಿಳಂಬವಾಗಿದೆ ಇದರಿಂದ ಗುತ್ತಿಗೆದಾರ ಕೆಲಸ ಮಾಡಲು ತಡವಾಗಿದ್ದು ಇನ್ನು ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಜೊತೆಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದರೆ ವಿಳಂಬವಾಗುವ ಸಾಧ್ಯತೆಯಿದೆ. ಈ ಹಿನೆಲೆ ಕೂಡಲೇ ಕಾರ್ಯ ಆರಂಭಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದು, ತಕ್ಷಣ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ಬಾರಿಯ ಮಳೆಗಾಲಕ್ಕೆ ಮುನ್ನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಣ ಪಡೆದುಕೊಂಡರೂ ರಸ್ತೆ ಅಗಲೀಕರಣ ಆಗಿಲ್ಲ. ಮೇಲ್ಸೇತುವೆಯ ಲಕ್ಕಿ ಸ್ಟಾರ್ ಬಳಿ ಈಗಾಗಲೇ ಖಾಸಗಿ ಜಾಗಕ್ಕೆ ಪರಿಹಾರ ನೀಡಲಾಗಿದ್ದು, ಜಾಗವನ್ನು ಇದುವರೆಗೆ ಮೇಲ್ಸೇತುವೆ ಕಾಮಗಾರಿ ವಹಿಸಿಕೊಂಡವರು ಸ್ವಾಧೀನ ಮಾಡಿಕೊಂಡಿಲ್ಲದಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಈಡು ಮಾಡಿದೆ. ಕೂಡಲೇ ಮೇಲ್ಸೇತುವೆಯ ಏರಿ ಇಳಿಯುವ ಸ್ಥಳದ ಕೆಲಸ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಿ ಎಂದು ಜನತೆ ಆಗ್ರಹಿಸಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಜನರಿಗೆ ಮೇಲ್ಸೇತುವೆಯಲ್ಲಿ ಸಂಚರಿಸುವ ಭಾಗ್ಯ ಸಿಗಬಹುದೇ? ಎಂದು ಕಾದು ನೋಡಬೇಕಿದೆ. 

 

ಗುಣಮಟ್ಟ ಪರಿಶೀಲನೆ ಅವಶ್ಯ

ಕಾವೇರಿ ಕನ್ನಿಕೆ ನದಿಯ ಬಳಿ ಮೇಲ್ ಸೇತುವೆ ನಾಲ್ಕು ಪಿಲ್ಲರ್‌ಗಳಿಗೆ ಕಾಂಕ್ರಿಟೀಕರಣ ಮಾಡಬೇಕಿದ್ದು, ಇದರ ಕಾಂಕ್ರೀಟಿನ ಗುಣಮಟ್ಟ ಹೆಚ್ಚಿಗೆ ಬೇಕೆಂದು ಕಾವೇರಿ ನೀರಾವರಿ ನಿಗಮಕ್ಕೆ ನಾವು ಪತ್ರ ಬರೆದಿದ್ದು ಇದಕ್ಕೆ ಒಪ್ಪಿಗೆ ನೀಡಿದ ನಂತರ ಕಾಂಕ್ರೀಟಿಕರಣ ನಡೆಯಲಿದೆ. ಮೇಲ್ ಸೇತುವೆಯ ಡಾಮರೀಕರಣ ಮತ್ತು ಲೈಟಿಂಗ್ ವ್ಯವಸ್ಥೆ ಏಪ್ರಿಲ್ ಅಂತ್ಯದೊಳಗೆ ಮುಗಿಯಲಿದ್ದು, ನಾವು ಒಪ್ಪಿದ ನಿಬಂಧನೆಗಳಿಗನುಗುಣವಾಗಿ ಮೇಲ್ ಸೇತುವೆ ಕಾಮಗಾರಿ ಮುಗಿಸಿಕೊಡಲಾಗುವುದು.

-ಹರಿನಾರಾಯಣ, ಕ್ವಾಲಿಟಿ ಮ್ಯಾನೇಜರ್