ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಶೀತಪೀಡಿತ ಪ್ರದೇಶದ ಗ್ರಾಮಸ್ಥರು

 

ಹುದುಗೂರು, ಕಾಳಿದೇವನ ಹೊಸೂರಿನ ಮನೆಗಳ ಗೋಡೆಗಳಲ್ಲಿ ಬಿರುಕು, ಭೂಮಿ ಶೀತಮಯ

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು ಗ್ರಾಮಗಳು ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ ಪ್ರದೇಶಗಳಾಗಿವೆ. ವರ್ಷದಿಂದ ವರ್ಷಕ್ಕೆ ಈ ವ್ಯಾಪ್ತಿಯ ಅನೇಕ  ಮನೆಗಳಲ್ಲಿ  ಶೀತದಿಂದಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಇದರೊಂದಿಗೆ ಅಲ್ಲಿನ ಭೂಮಿಯೂ ಸಹ ಶೀತಮಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಗ್ರಾಮಗಳಿರುವ ಮೇಲ್ಭಾಗದ ಪ್ರದೇಶದಲ್ಲಿ ಹಾರಂಗಿಯ ಮುಖ್ಯ ನಾಲೆ, ಕೆಳಭಾಗದಲ್ಲಿ ಹಾರಂಗಿ ನದಿ ಇದೆ. ಇನ್ನೊಂದು ಭಾಗದಲ್ಲಿ ಕಕ್ಕೆ ಹೊಳೆಯು ಸಹ ಹರಿಯುತ್ತಿರುವು ದರಿಂದ ಶೀತವಲಯದ ಮಧ್ಯದಲ್ಲಿರುವ ಈ ಗ್ರಾಮಗಳ ಮನೆಗಳು ಹಾಗೂ ಆ ಪ್ರದೇಶ ಸಂಪೂರ್ಣ ಶೀತಮಯವಾಗಿವೆ. ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಮನೆಯ ಗೋಡೆಗಳು ಬೀಳುವಂತಹ ಸ್ಥತಿ ತಲುಪಿವೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಸ್ಥಳೀಯರನ್ನು ಕಾಡುತ್ತಿದ್ದು, ಈ ಸಾಲಿನ ಅತಿಯಾದ ಮಳೆಯಿಂದಾಗಿ ಕೆಲವು ಮನೆಯ ಗೋಡೆಗಳು ನೆಲಸಮ ವಾಗಿವೆ. ಆದ್ದರಿಂದಾಗಿ  ಈ ಪ್ರದೇಶವನ್ನು ಶೀತ ಪೀಡಿತ ಪ್ರದೇಶ ಎಂದು ಘೋಷಿಸುವಂತೆ, ಆ ಮೂಲಕ ಅನುದಾನವನ್ನು ನೀಡಿ ಮನೆಗಳ ದುರಸ್ತಿ, ನಾಲೆಗಳ ಅಭಿವೃದ್ಧಿ ಆಗಬೇಕೆಂದು ಶೀತಪೀಡಿತ ಹುದುಗೂರು, ಕಾಳಿದೇವನ ಹೊಸೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಮಸ್ಯೆಯ ಬಗ್ಗೆ  10ಕ್ಕೂ ಹೆಚ್ಚು ವರ್ಷಗಳಿಂದ ಆಡಳಿತ, ಜನಪ್ರತಿನಿಧಿಗಳಿಗೆ ಸೇರಿದಂತೆ ರಾಜ್ಯಮಟ್ಟದಲ್ಲಿ ಕಂದಾಯ, ನೀರಾವರಿ ಇಲಾಖೆಗಳಿಗೆ ಮನವರಿಕೆ ಮಾಡುತ್ತಾ ಬಂದಿದ್ದರೂ ಆಡಳಿತ, ಜನಪ್ರತಿನಿಧಿಗಳಿಂದ ಸ್ಪಂದನ ಮಾತ್ರ ಶೂನ್ಯವಾಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯನ್ನು ಹೆಚ್ಚು ವಿಸ್ತರಣೆ ಮಾಡುವ  ಸಂದರ್ಭ ಅಣೆಕಟ್ಟೆ  ನಿರ್ಮಾಣ ಸಮಯದಲ್ಲಿ ಕಟ್ಟಿದ ಮುಖ್ಯನಾಲೆಯ ಮೇಲ್ಭಾಗದ ಕಾಲುವೆಯು ಕಿರಿದಾಗಿದ್ದು,  ನಾಲೆಯಲ್ಲಿ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ  ನಾಲೆಯ ನೀರು  ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಕಾಲುವೆ ಗಳಲ್ಲಿ  ನೀರು ನಿಲ್ಲುತ್ತಿರುವುದರಿಂದ ನೀರಿನ ತೇವಾಂಶ ಕೆಳ ಪ್ರದೇಶದ ಗ್ರಾಮಗಳಿಗೆ ತಟ್ಟುತ್ತಿದೆ. ಈ ಕಾರಣದಿಂದ ಮನೆಗಳ ಗೋಡೆ ಬಿರುಕು ಬಿಡುವುದಲ್ಲದೆ ಕೃಷಿ ಭೂಮಿಯು ಸಹ ಶೀತ ಪ್ರದೇಶಗಳಾಗಿ ಪರಿವರ್ತನೆಯಾಗಿವೆ. ಇದರಿಂದಾಗಿ ಈ ವ್ಯಾಪ್ತಿಯ ಭೂಮಿಯಲ್ಲಿ  ಯಾವ ಬೆಳೆಯೂ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ವ್ಯಾಪ್ತಿಯ ರೈತರ ಬದುಕು  ಕಷ್ಟಕರವಾಗಿದೆ ಎಂದು ಈ ವ್ಯಾಪ್ತಿಯ ರೈತರುಗಳಾದ ರಮೇಶ್, ಕೆ.ಜೆ.  ತಿಮ್ಮಯ್ಯ, ಪುಟ್ಟರಾಜ, ಸುನೀತಾ, ಪೂವಯ್ಯ ಸೇರಿದಂತೆ ಅನೇಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹುದುಗೂರು, ಕಾಳಿದೇವನ ಹೊಸೂರಿನ ಗ್ರಾಮಸ್ಥರು ಮೈಸೂರು ವಿಭಾಗದ ಪ್ರಾಧಿಕಾರದ ಆಯುಕ್ತರಿಗೆ ಖುದ್ದಾಗಿ ತೆರಳಿ ಸಮಸ್ಯೆ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದ ನಂತರ ಪ್ರಾಧಿಕಾರದ ಆಯುಕ್ತರ ಕಚೇರಿಯಿಂದ ಕಾವೇರಿ ನೀರಾವರಿ ನಿಗಮಕ್ಕೆ ಎರಡು ಬಾರಿ ಪತ್ರ ಬಂದರೂ ಇದುವರೆಗೂ ಯಾವುದೇ ಸಮರ್ಪಕವಾದ ವರದಿಯನ್ನು ನೀರಾವರಿ ಇಲಾಖೆ ನೀಡದೆ ನಿರ್ಲಕ್ಷ್ಯ ವಹಿಸಿದೆ. ರಾಜ್ಯ ಕಂದಾಯ ಮತ್ತು ನೀರಾವರಿ ಇಲಾಖೆಯ ಜಂಟಿ ನಿರ್ದೇಶಕರಿಗೂ ಮನವಿ ಸಲ್ಲಿಸಿ 10 ವರ್ಷಗಳು ಕಳೆದರೂ ಇದುವರೆಗೂ ಯಾವುದೇ ಇಲಾಖೆ ಕ್ರಮ ಕೈಗೊಳ್ಳದೆ 2 ಗ್ರಾಮಗಳನ್ನು ಸಂಪೂರ್ಣ ನಿರ್ಲಕ್ಷಿಸಿವೆ. ಜಿಲ್ಲಾಧಿಕಾರಿಗೂ ಈ ವಿಷಯದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ನೀರಾವರಿ ಇಲಾಖೆಯೊಂದಿಗೆ ಹುದುಗೂರು ಗ್ರಾಮದಲ್ಲಿ  ಈ ವಿಷಯಕ್ಕೆ ಸಂಬಂಧಿಸಿದಂತೆ  ವಿಶೇಷ  ಸಭೆಯನ್ನು ಕರೆದು ಶೀತ ಪ್ರದೇಶದ ಗ್ರಾಮಗಳ ರೈತರ ಸಮ್ಮುಖದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಜ್ಯ ಸರಕಾರದ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿ ಹುದುಗೂರು ಗ್ರಾಮವು ಸೇರಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಹಾಗೂ ಈಗಾಗಲೇ ಎರಡೂ ಗ್ರಾಮಗಳಲ್ಲಿ ಆಗುತ್ತಿರುವ ಮನೆಗಳ ಗೋಡೆಗಳ ಕುಸಿತ ಸೇರಿದಂತೆ ಶೀತಮಯವಾಗುತ್ತಿರುವ ಭೂಮಿ ಯನ್ನು ಪರಿಶೀಲಿಸಿ ಶೀತಪೀಡಿತ ಪ್ರದೇಶಗಳೆಂದು ಘೋಷಿಸಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನವನ್ನು ಇಲಾಖೆಯ ಮುಖೇನ ಬಿಡುಗಡೆಗೊಳಿಸಿ ನಾಲೆಯ ಉಪ ಕಾಲುವೆಗಳ ದುರಸ್ತಿ ಮಾಡುವುದರೊಂದಿಗೆ ಹಾನಿಯಾಗಿರುವ ಮನೆಗಳ ಮಾಲೀಕರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವುದು ಅಗತ್ಯವಿದೆ.