ವೀರಾಜಪೇಟೆ ಮಿನಿ ವಿಧಾನಸೌಧಕ್ಕೆ ಬೇಕಿವೆ ಮತ್ತಷ್ಟು ಸೌಕರ್ಯಗಳು

 

ಲಿಫ್ಟ್, ಆವರಣ ಗೋಡೆ, ಇಂಟರ್‌ಲಾಕ್ ವ್ಯವಸ್ಥೆಗಳಿಲ್ಲ

ವೀರಾಜಪೇಟೆಯ ಮಿನಿ ವಿಧಾನ ಸೌಧದ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಅಲೆದಾಡುವ ಗೋಳು ನಿರಂತರ ಮುಂದುವರಿದು ಸಾರ್ವಜನಿಕರು ಬೇಸತ್ತಿದ್ದಾರೆ. ದಶಕಗಳಿಂದ ಪೂರ್ಣಗೊಳ್ಳದೆ ಇದ್ದ ಕಾಮಗಾರಿಗಳು ಕಳೆದ ಡಿಸೆಂಬರ್‌ನಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಅನುಕೂಲವಾಗಿತ್ತು. ಆದರೆ ಇದೀಗ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೆ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ವೀಲ್ ಚೇರ್ ಇಲ್ಲದೆ ಮೆಟ್ಟಿಲಿನಲ್ಲಿ ತೆವಳಿಕೊಂಡು ಮಹಡಿ ಮೇಲೆ ಇರುವ ಸಬ್ ರಿಜಿಸ್ಟಾçರ್ ಕಛೇರಿಗೆ ತೆರಳುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತಾಲೂಕು ಕಚೇರಿ ಅಧಿಕಾರಿಗಳು ಪುರಸಭೆಯಿಂದ ವೀಲ್ ಚೇರ್ ತರಿಸಿದ್ದರು. ಪ್ರತಿಯೊಂದು ಕೆಲಸಕ್ಕೂ ಅಲೆಡಾಡಿದ್ದ ಜನತೆಗೆ ಇದೀಗ ‘ಲಿಫ್ಟ್’ ವ್ಯವಸ್ಥೆ ಸೇರಿದಂತೆ ಹಲವಾರು ಕಾಮಗಾರಿಗಳು ದಶಕ ಕಳೆದರೂ ಪೂರ್ಣಗೊಳ್ಳದೆ ಇರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಚ್ಚಾಶಕ್ತಿ ಕೊರತೆ

ಅನುದಾನ, ಇಚ್ಚಾಶಕ್ತಿ ಕೊರತೆ ಕಾರಣ ಮಿನಿ ವಿಧಾನಸೌಧ ಕಾಮಗಾರಿ ದಶಕಗಳಿಂದ ಕುಂಟುತ್ತಾ ಸಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  ವಯಸ್ಸಾದವರಿಗೆ ‘ಲಿಫ್ಟ್’ ಇಲ್ಲದ ಹಿನ್ನೆಲೆ ಕೆಲಸ ಕಾರ್ಯಗಳಿಗೆ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ ಸಾವಿರಾರು ಮಂದಿ ತಮ್ಮ ಕೆಲಸ ಕಾರ್ಯಗಳಿಗೆ ಬಂದುಹೋಗುವ ಹಾಗೂ ಕೋಟಿಗಟ್ಟಲೇ ಹಣ ವಿನಿಯೋಗಿಸಿ ಕಟ್ಟಿರುವ ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಇನ್ನೂ ಮಾಡದೆ ಇರುವ ಕುರಿತು ಹಲವಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದರೊಂದಿಗೆ ಹಲವು ಕೆಲಸಗಳು ನಡೆಯಬೇಕಿದ್ದು, ಇದಕ್ಕೆ ರೂ. 68 ಲಕ್ಷದ ಅವಶ್ಯಕತೆ ಇದೆ. 

13 ವರ್ಷಗಳ ಹಿಂದೆ ಚಾಲನೆ

ಎಲ್ಲಾ ಕಚೇರಿಗಳು ಒಂದೆಡೆ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಿನಿ ವಿಧಾನಸೌಧ ಕಟ್ಟಡವನ್ನು ಬ್ರಿಟಿಷರ ಕಾಲದಲ್ಲಿದ್ದ ಕಟ್ಟಡದ ಸ್ಥಳದಲ್ಲಿ ನಿರ್ಮಾಣ ಮಾಡಲು ಕಳೆದ 13 ವರ್ಷಗಳ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡಿದ್ದರು. ಅಂದಿನ ಶಾಸಕ ಕೆ.ಜಿ ಬೋಪಯ್ಯ 2011ರಲ್ಲಿ ಭೂಮಿಪೂಜೆ ನೆರವೇರಿಸಿದ್ದರು.  ಆರಂಭದಲ್ಲಿ ಗುತ್ತಿಗೆ ಪಡೆದುಕೊಂಡಿದ್ದವರು ಹಿಂದೆ ಸರಿದ ಪರಿಣಾಮ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ನಂತರ ಈ-ಟೆಂಡರ್ ಮೂಲಕ ಕಾಮಗಾರಿ ಗುತ್ತಿಗೆ ಪಡೆದುಕೊಂಡು ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿದ್ದರು. 2023 ಡಿಸೆಂಬರ್ 29 ರಂದು ಮೂರನೇ ಅಂತಸ್ತಿನ ಕಾಮಗಾರಿ ಉದ್ಘಾಟನೆಗೊಂಡು ಸಾರ್ವಜನಿಕ ಉಪಯೋಗಕ್ಕೆ ಬಂತು. ಮಿನಿ ವಿಧಾನಸೌಧ ಮೊದಲ ಹಂತದ ಕಾಮಗಾರಿ ಅಂದಾಜು 2 ಕೋಟಿ ರೂ ಮೊತ್ತದಲ್ಲಿ ನಡೆದು 2018 ರಲ್ಲಿ ಉದ್ಘಾಟನೆಗೊಂಡಿತ್ತು. 6.95 ಕೋಟಿ ರೂ ವೆಚ್ಚದಲ್ಲಿ ಎರಡನೇ ಹಂತದಲ್ಲಿ ಮೊದಲ ಹಾಗೂ ಎರಡನೇ ಮಹಡಿಯ ಕಾಮಗಾರಿ ನಡೆದಿತ್ತು.