ಕೊಡಗು ಜಿಲ್ಲೆಯಲ್ಲಿ 4651 ಅನರ್ಹರ ಬಿ.ಪಿ.ಎಲ್. ಕಾರ್ಡ್ ರದ್ದು

 

ಒಟ್ಟು ರೂ. 7.77 ಲಕ್ಷ ದಂಡ ವಸೂಲಿ 

ತಪ್ಪು ಮಾಹಿತಿ ನೀಡಿ ಅನರ್ಹರು ಕೂಡ ಪಡೆದಿದ್ದ ಆದ್ಯತಾ ಪಡಿತರ ಚೀಟಿಯನ್ನು (ಬಿಪಿಎಲ್ ಕಾರ್ಡ್) ಆಹಾರ ಇಲಾಖೆ ಮುಟ್ಟುಗೋಲು ಹಾಕಿ ರದ್ದುಗೊಳಿಸಿದೆ. ಜಿಲ್ಲೆಯಲ್ಲಿ 4651 ಅನರ್ಹ ಪಡಿತರ ಚೀಟಿ ಪತ್ತೆಯಾಗಿದೆ. ಜೊತೆಗೆ ದಂಡ ವಿಧಿಸಿ ಶಿಸ್ತುಕ್ರಮವನ್ನು ಕೈಗೊಳ್ಳಲಾಗಿದೆ. 

ಕೆಲವು ತಿಂಗಳುಗಳ ಹಿಂದೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಕಾರ್ಡ್ದಾರರ ಮೌಲ್ಯಮಾಪನ ನಡೆಸಿದ ಸಂದರ್ಭ ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಬಿಪಿಎಲ್ ಕಾರ್ಡ್ದಾರರ ‘ಡಾಟಾ’ ಸಂಗ್ರಹಿಸಿ ಅನರ್ಹರನ್ನು ಗುರುತಿಸಿ ಅವರ ಕಾರ್ಡ್ಗಳನ್ನು ಎ.ಪಿ.ಎಲ್. ಆಗಿ ಪರಿವರ್ತನೆಗೊಳಿಸಲಾಗಿದೆ. 

ಪಡಿತರ ಚೀಟಿ ಹೊಂದಿರುವವರ ಪೈಕಿ ಕೆಲವರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಸ್ತರಕ್ಕೆ ಸೇರಿದವರಲ್ಲ, ವಾರ್ಷಿಕ ಆದಾಯ ನಿಗದಿಗಿಂತ ಹೆಚ್ಚಿದೆ, ಕೆಲವರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಸರಕಾರಿ ಸೇವೆಯಲ್ಲಿರುವವರು, ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲವರಿದ್ದಾರೆ ಎಂಬ ಕಾರಣಗಳು ಮುಂದಿಟ್ಟು ಅನರ್ಹರನ್ನು ಪತ್ತೆಹಚ್ಚಲಾಗಿದೆ.  ಆನ್‌ಲೈನ್ ಹಾಗೂ ದಾಖಲಾತಿ ಪರಿಶೀಲನೆ ಮೂಲಕ ಈ ಕೆಲಸವಾಗಿದೆ. ಇದೀಗ ಅನರ್ಹರು ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಪಟ್ಟಿಗೆ ಸೇರಿಸಲಾಗಿದೆ. 

ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಮೂರು ತಾಲೂಕು ಸೇರಿ 4651 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿವೆ. ಈ ಪೈಕಿ ಮಡಿಕೇರಿ ತಾಲೂಕಿನಲ್ಲಿ 1221, ಸೋಮವಾರಪೇಟೆ ತಾಲೂಕಿನಲ್ಲಿ 1968 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 1462 ಆಗಿದೆ. ಅನರ್ಹರಿಂದ ಒಟ್ಟು ರೂ. 7,77,904 ದಂಡವನ್ನು ವಸೂಲಿ ಮಾಡಲಾಗಿದೆ.  

ಜಿಲ್ಲೆಯಲ್ಲಿ ಪ್ರಸ್ತುತ ಅಂತ್ಯೋದಯ, ಎ.ಪಿ.ಎಲ್. ಹಾಗೂ ಬಿಪಿಎಲ್ ಸೇರಿ ಒಟ್ಟು 1,42,716 ಕುಟುಂಬಗಳು ಪಡಿತರ ಚೀಟಿ ಹೊಂದಿವೆ.  ಈ ಪೈಕಿ 37,147 ಎ.ಪಿ.ಎಲ್, ಅಂತ್ಯೋದಯ 9,880 ಹಾಗೂ ಬಿಪಿಎಲ್ ಕಾರ್ಡ್ ಅನ್ನು 11,665 ಕುಟುಂಬ ಹೊಂದಿದೆ.  ಜಿಲ್ಲೆಯ ಪಟ್ಟಣ ಪ್ರದೇಶದಲ್ಲಿ 22, ಗ್ರಾಮಾಂತರ ಪ್ರದೇಶದಲ್ಲಿ 252 ನ್ಯಾಯಬೆಲೆ ಅಂಗಡಿಗಳಿವೆ.  

ಕಣ್ಣಿಟ್ಟಿರುವ ಇಲಾಖೆ

ತಪ್ಪು ಮಾಹಿತಿ ನೀಡಿ ಎಪಿಎಲ್ ಕಾರ್ಡ್ ಪಡೆಯುವವರ ಮೇಲೆ ಆಹಾರ ಇಲಾಖೆ ಕಣ್ಣಿಟ್ಟಿದೆ. ಆನ್‌ಲೈನ್ ಮೂಲಕ ಪ್ರಕ್ರಿಯೆ ನಡೆಯುವ ಹಿನ್ನೆಲೆ ಅವರ ಆದಾಯ, ಆಸ್ತಿಪಾಸ್ತಿಯ ವಿವರವನ್ನು ಪರಿಶೀಲಿಸಬಹುದಾಗಿದೆ.  ಆದಾಯ ತೆರಿಗೆ ಪಾವತಿಸುವವರ ಪಟ್ಟಿಯನ್ನು ಆದಾಯ ತೆರಿಗೆ ಇಲಾಖೆ ಮೂಲಕ ಪಡೆಯಲಾಗುತ್ತಿದೆ. ನಕಲಿ ಅಥವಾ ಸುಳ್ಳು ಮಾಹಿತಿ ನೀಡಿದ್ದಲ್ಲಿ ದಂಡ ವಿಧಿಸಿ ಕ್ರಮಕೈಗೊಳ್ಳಲಾಗುತ್ತಿದೆ.

ನೂತನ ಸರಕಾರ ಘೋಷಿಸಿರುವ ‘ಗ್ಯಾರೆಂಟಿ’ ಯೋಜನೆಗಳಿಗಾಗಿ ಇದೀಗ ಬಿಪಿಎಲ್ ಕಾರ್ಡ್ಗೆ ಬೇಡಿಕೆಯೂ ಹೆಚ್ಚಾಗಿದೆ. ಸರಕಾರದ ಉಚಿತ ಸೇವೆ ಪಡೆಯಲು ಬಿಪಿಎಲ್ ಅಗತ್ಯವಾಗಿರುವ ಹಿನ್ನೆಲೆ ಅನರ್ಹರು ಕೂಡ ಕಾರ್ಡ್ ಪಡೆಯಲು ಮುಂದಾಗುತ್ತಿದ್ದಾರೆ. ಇವೆಲ್ಲಕ್ಕು ಕಡಿವಾಣ ಹಾಕುವ ನಿಟ್ಟಿನಲ್ಲಿ ಆಹಾರ ಇಲಾಖೆ ಕ್ರಮಕೈಗೊಳ್ಳುತ್ತಿದೆ. 

2,112 ಕಾರ್ಡ್ ವಿತರಣೆಗೆ ಬಾಕಿ 

ಜಿಲ್ಲೆಯಲ್ಲಿ 2,112 ಬಿಪಿಎಲ್ ಕಾರ್ಡ್ ವಿತರಣೆಗೆ ಬಾಕಿ ಉಳಿದುಕೊಂಡಿದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ ವಿತರಣೆ ಸಾಧ್ಯವಾಗಿರಲಿಲ್ಲ. ಇದುವರೆಗೂ 6,660 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 4,210 ಅರ್ಜಿ ವಿಲೇವಾರಿಯಾಗಿ ಕಾರ್ಡ್ ವಿತರಿಸಲಾಗಿದೆ. 338 ಅರ್ಜಿಗಳು ತಿರಸ್ಕೃತಗೊಂಡಿವೆ. ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನ ಜಿಲ್ಲೆಗೆ 2,835 ಬಿಪಿಎಲ್ ಕಾರ್ಡ್ ವಿತರಿಸುವ ಗುರಿ ನೀಡಲಾಗಿತ್ತು. ಇದನ್ನು ಈಗಾಗಲೇ ಪೂರೈಸಲಾಗಿದೆ.  ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಮುಂದುವರೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದ ಮಾಹಿತಿ ನೀಡಿದ್ದಾರೆ.