ಕೊಡಗು ಜಿಲ್ಲಾ ರಸ್ತೆಗಳ ಉಸ್ತುವಾರಿ ಮರೆತ ಪ್ರಾಧಿಕಾರ

ಕಳೆದ ಹಲವು ವರ್ಷಗಳ ಹಿಂದೆ ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಸ್ತರಿಸಲಾಯಿತು. ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಈ ಕಾರ್ಯ ನಿರ್ವಹಿಸಲ್ಪಟ್ಟಿತ್ತು. ಆ ಸಂದರ್ಭ ಕುಶಾಲನಗರದಿಂದ ಮಡಿಕೇರಿವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭ ಅಲ್ಲಲ್ಲಿ ಅಸ್ತಿತ್ವದಲ್ಲಿದ್ದ ಬಸ್ ತಂಗುದಾಣಗಳನ್ನು ಒಡೆದು ಹಾಕಲಾಯಿತು. ರಸ್ತೆ ವಿಸ್ತರಣೆ ನಿಯಮಾನುಸಾರ ಪ್ರಾಧಿಕಾರವು ಎಲ್ಲೆಲ್ಲಿ ಬಸ್ ತಂಗುದಾಣಗಳಿದ್ದವೋ ಅಲ್ಲಲ್ಲಿ ಮತ್ತೆ ತಂಗುದಾಣಗಳನ್ನು ನಿರ್ಮಿಸುವ ಜವಾಬ್ದಾರಿ ಹೊಂದಿತ್ತು. ಏಕೆಂದರೆ ಕುಶಾಲನಗರದಿಂದ ಹುಣಸೂರುವರೆಗಿನ ರಸ್ತೆಯಲ್ಲಿ ಹಾನಿಗೊಳಗಾಗಿದ್ದ ತಂಗುದಾಣಗಳನ್ನು ಪುನರ್ ನಿರ್ಮಿಸಲಾಗಿದೆ. ಆದರೆ ಕೊಡಗು ಜಿಲ್ಲೆಯನ್ನು ಈ ದಿಸೆಯಲ್ಲಿ ಪ್ರಾಧಿಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದಾಗಿ ಅಲ್ಲಲ್ಲಿ ಸಾಮಾನ್ಯ ಜನತೆ ಶಟಲ್ ಬಸ್‌ಗಳಲ್ಲಿ ಪ್ರಯಾಣಿಸಲು ಸೂಕ್ತ ತಂಗುದಾಣಗಳಿಲ್ಲದೆ ಪರಿತಪಿಸುತ್ತಿದ್ದಾರೆ. 

ಮಡಿಕೇರಿ ಅರಣ್ಯ ಭವನದಿಂದ ಪ್ರಾರಂಭಗೊಂಡು ಕೆದಕಲ್‌ವರೆಗೆ ಸೂಕ್ತ ಬಸ್ ತಂಗುದಾಣಗಳಿಲ್ಲವಾಗಿದೆ. ಬೋಯಿಕೇರಿಯಲ್ಲಿ ಸ್ಥಳೀಯರೇ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅರಣ್ಯ ಭವನದ ಬಳಿ ಇದ್ದ ತಂಗುದಾಣವನ್ನು ಅಲ್ಲಿ ಇತ್ತೀಚೆಗೆ ವಾಹನ ಅವಘಡವಾದ ಬಳಿಕ ಆಡಳಿತ ವರ್ಗ ಕೆಡವಿ ಹಾಕಿದೆ. ಬಾಳೆಕಾಡು ಹಾಗೂ ಸಿಂಕೋನಗಳಲ್ಲಿ ಹಳೆಯ ತಂಗುದಾಣಗಳನ್ನು ಹಾಗೆಯೇ ಬಿಡಲಾಗಿದ್ದರೂ, ಅದು ಪುನರ್‌ನಿರ್ಮಿತ ರಸ್ತೆಗಿಂತ ತೀರಾ ಮೇಲ್ಭಾಗದಲ್ಲಿದೆ. ಅಲ್ಲದೆ, ಕಟ್ಟಡಗಳು ಶಿಥಿಲಗೊಂಡು ಕಾಡು ಪಾಲಾಗಿವೆ. 

ಪ್ರಾಧಿಕಾರ ಮತ್ತೊಂದು ಜವಾಬ್ದಾರಿಕೆಯನ್ನು ನಿರ್ವಹಿಸದೆ ನಿರ್ಲಕ್ಷ್ಯ ಮಾಡಿದೆ. ಈ ಹೆದ್ದಾರಿ ಬದಿಗಳಲ್ಲಿ ಬೆಳೆದಿರುವ ಕಾಡು ಮತ್ತು ಸಸ್ಯಗಳನ್ನು ಆಯಾ ಕಾಲಕ್ಕೆ ಕಡಿದು ನಿರ್ವಹಣೆ ಮಾಡಬೇಕಿದೆ. ಆದರೆ ರಸ್ತೆ ಪುನರ್ ನಿರ್ಮಾಣಗೊಂಡು ಅನೇಕ ವರ್ಷಗಳು ಕಳೆದಿದ್ದರೂ ಈ ಕಾರ್ಯವನ್ನು ನಿರ್ವಹಿಸಿಲ್ಲ. ಇದರಿಂದಾಗಿ ತಿರುವು ಪ್ರದೇಶಗಳಲ್ಲಿ ಸಂಚಾರಕ್ಕೆ ತೊಡಕುಂಟಾಗಿ ಅಪಾಯ ಸಂಭವಿಸಬಹುದು. ಈ ಹಿಂದೆ ಕುಶಾಲನಗರದಿಂದ ಮಡಿಕೇರಿವರೆಗೆ ರಸ್ತೆಯ ಮಧ್ಯ ಭಾಗ ರಿಫ್ಲೆಕ್ಟರ್‌ಗಳಿದ್ದು, ರಾತ್ರಿ ಪ್ರಯಾಣ ಸಂದರ್ಭ ವಾಹನಗಳ ಚಾಲನೆ ಸುಸೂತ್ರವಾಗಿ ನಡೆಯುತ್ತಿತ್ತು. ಈ ರಿಫ್ಲೆಕ್ಟರ್‌ಗಳೂ ಹಾಳಾಗಿದ್ದು, ಅದನ್ನು ಸರಿಪಡಿಸುವುದಾಗಲಿ, ಪುನರ್ ಅಳವಡಿಸುವುದಾಗಲಿ ಮಾಡದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ದಿಸೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ತಮ್ಮ ಜವಾಬ್ದಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

ಈ ಬಗ್ಗೆ ಜಿಲ್ಲಾಡಳಿತವೂ ಕೂಡ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.