ಅನುದಾನಕ್ಕಾಗಿ ಕಾಯುತ್ತಿರುವ ಗಾಂಧಿ ಸ್ಮಾರಕ
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಭಾಷಣ ಮಾಡಿದ ಕುರುಹಿಗಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗಾಂಧಿ ಮೈದಾನ ನಿರ್ಮಾಣ ಮಾಡಲಾಗಿದೆ. ಗಾಂಧಿ ಪ್ರತಿಮೆಯನ್ನೂ ಕೂಡ ನಿರ್ಮಿಸಲಾಗಿದೆ. ಅವರ ಚಿತಾಭಸ್ಮವನ್ನು ಕೂಡ ಜಿಲ್ಲಾ ಖಜಾನೆಯಲ್ಲಿರಿಸಿ ವರ್ಷಂಪ್ರತಿ ಹುತಾತ್ಮರ ದಿನದಂದು ಹೊರತೆಗೆದು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪೂಜಿಸಲಾಗುತ್ತದೆ. ಇದೀಗ ಗಾಂಧಿ ಮೈದಾನದಲ್ಲಿಯೇ ಶಾಶ್ವತವಾದ ಗಾಂಧಿ ಸ್ಮಾರಕ ನಿರ್ಮಾಣದೊಂದಿಗೆ ಅಲ್ಲಿಯೇ ಚಿತಾಭಸ್ಮವನ್ನಿರಿಸಿ ಪ್ರತಿನಿತ್ಯ ಸ್ಮರಿಸುವದರೊಂದಿಗೆ ಪ್ರವಾಸಿಗರಿಗೂ ತಿಳಿಯಪಡಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿ ಪೂರ್ಣ ಗೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಸರಕಾರದ ಅನುದಾನ ಒದಗಿ ಬರಬೇಕಿದೆ..!
ಗಾಂಧಿ ಮೈದಾನದ ಒಂದು ಬದಿಯಲ್ಲಿ ಗಾಂಧೀಜಿ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ವರ್ಷಂಪ್ರತಿ ಹುತಾತ್ಮರ ದಿನವಾದ ಜನವರಿ 30 ರಂದು ಖಜಾನೆಯಿಂದ ಚಿತಾಭಸ್ಮವನ್ನು ಜಿಲ್ಲಾಡಳಿತ, ಸರ್ವೋದಯ ಸಮಿತಿಯವರು, ಸ್ವಾತಂತ್ರ್ಯ ಹೋರಾಟಗಾರರು, ಸಂಘ ಸಂಸ್ಥೆಗಳ ಪ್ರಮುಖರೆಲ್ಲ ಸೇರಿ ಮೆರವಣಿಗೆ ಮೂಲಕ ತಂದು ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಿ ಮತ್ತೆ ಜಿಲ್ಲಾ ಖಜಾನೆಗೆ ಕೊಂಡೊಯ್ಯಲಾಗುತ್ತದೆ. ಈ ಒಂದು ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳುವ ಸರ್ವೋದಯ ಸಮಿತಿ ಜಿಲ್ಲಾಡಳಿತದ ಮೂಲಕ ಶಾಶ್ವತ ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಹಾಗಾಗಿ ಸರಕಾರ ಮಂಜೂರಾತಿ ನೀಡಿ ಸ್ಮಾರಕ ನಿರ್ಮಾಣಕ್ಕೆ ಮೊದಲ ಹಂತವಾಗಿ ರೂ.50 ಲಕ್ಷ ಅನುದಾನ ಕೂಡ ಬಿಡುಗಡೆ ಮಾಡಿತ್ತು.
ನಿರ್ಮಿತಿ ಕೇಂದ್ರದಿಂದ ಕೆಲಸ
ಅನುದಾನ ಬಿಡುಗಡೆಗೊಂಡ ಬಳಿಕ ಜಿಲ್ಲಾಡಳಿತ ನಿರ್ಮಾಣ ಕಾರ್ಯವನ್ನು ಸರಕಾರದ ಅಂಗಸಂಸ್ಥೆ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದು, ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದೆ. ಸ್ಮಾರಕ ಕಟ್ಟಡ, ಕಿಟಕಿಗಳಿಗೆ ಸರಳುಗಳು, ಬಾಗಿಲು ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಇನ್ನುಳಿದಂತೆ ಎರಡನೇ ಹಂತದ ಕಾಮಗಾರಿಗೆ ಅನುದಾನ ಇನ್ನಷ್ಟೇ ಬಿಡುಗಡೆ ಯಾಗಬೇಕಿದ್ದು, ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಒಂದು ಕೋಟಿಗೆ ಪ್ರಸ್ತಾವನೆ
ಸರಕಾರ ಬಿಡುಗಡೆ ಮಾಡಿದ ರೂ.50ಲಕ್ಷ ಅನುದಾನದಲ್ಲಿ ಈಗಾಗಲೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳಿಗಾಗಿ ಸರಕಾರಕ್ಕೆ ರೂ.ಒಂದು ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬಿಡುಗಡೆಗೊಂಡಲ್ಲಿ ಮುಂದಿನ ಹುತಾತ್ಮರ ದಿನಾಚರಣೆ ವೇಳೆ ಭವನ ಲೋಕಾರ್ಪಣೆಗೊಳ್ಳಬಹುದು.
ಜ.30ಕ್ಕೆ ಆಗಲಿದೆಯೇ..?
ಕಳೆದ ವರ್ಷದಿಂದ ಕಾಮಗಾರಿ ಆರಂಭಗೊಂಡಿದ್ದು, ಕೆಲ ಕಾಲ ಕಾರ್ಮಿಕರಿಲ್ಲದೆ ಸ್ಥಗಿತಗೊಂಡಿದ್ದು, ಇದೀಗ ಮತ್ತೆ ಆರಂಭಗೊಂಡು ಒಂದು ಹಂತಕ್ಕೆ ಬಂದಿದೆ. ಮುಂಬರುವ ಜನವರಿ 30ರಂದು ಸರ್ವೋದಯ ದಿನಾಚರಣೆ ಬರಲಿದ್ದು, ಆ ವೇಳೆಗೆ ಕಾಮಗಾರಿ ಪೂರ್ಣಗೊಂಡಲ್ಲಿ ಚಿತಾ ಭಸ್ಮವನ್ನು ಇರಿಸಿ ಅಲ್ಲಿಯೇ ಸರ್ವಧರ್ಮ ಪ್ರಾರ್ಥನೆ ಸಲ್ಲಿಸುವ ಇಂಗಿತ ಸರ್ವೋದಯ ಸಮಿತಿಯದ್ದಾಗಿದೆ. ಒಂದು ವೇಳೆ ಈ ಜನವರಿ 30ರೊಳಗಡೆ ಆಗದಿದ್ದಲ್ಲಿ ಇನ್ನು ಮುಂದಿನ ಜನವರಿ 30ರವರೆಗೆ ಸಾಧ್ಯವಾಗುವದಿಲ್ಲ, ಚಿತಾಭಸ್ಮವನ್ನು ಖಜಾನೆಯಿಂದ ಹೊರಗಡೆ ತೆಗೆಯುವಂತಿಲ್ಲ.
ಇಚ್ಛಾಶಕ್ತಿ ಬೇಕು
ಸ್ಮಾರಕಕ್ಕೆ ಬೇಕಾಗುವ ಅನುದಾನಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರು, ಶಾಸಕರ ಗಮನಕ್ಕೂ ತರಲಾಗಿದೆ. ಸಚಿವರು, ಶಾಸಕರು ಅಧಿವೇಶನಕ್ಕೆ ತೆರಳಿದ್ದು ಅಧಿವೇಶನದಲ್ಲಿ ಈ ಬಗ್ಗೆ ಸರಕಾರದ ಗಮನ ಸೆಳೆದು ಅನುದಾನ ತಂದುಕೊಟ್ಟಲ್ಲಿ ಮುಂದಿನ ಒಂದು ತಿಂಗಳಲ್ಲಿ ಸ್ಮಾರಕ ತಲೆ ಎತ್ತಬಹುದು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲಿ ಅಗತ್ಯವಾಗಿದೆ.