ಪೊನ್ನಂಪೇಟೆಗೆ ಬಂದ ಆನೆ ಎಲ್ಲಿಂದ ಬಂತು...?

ದಕ್ಷಿಣ ಕೊಡಗಿನ ಪೊನ್ನಂಪೇಟೆ ಎಂಬ ಪ್ರದೇಶ ಅರಣ್ಯದ ನಡುವೆ ಏನೂ ಇಲ್ಲ... ಇದು ಕೂಡ ಜಿಲ್ಲೆಯ ಕೆಲವು ಪ್ರಮುಖ ಪಟ್ಟಣಗಳಲ್ಲಿ ಒಂದು... ಸುತ್ತಮುತ್ತಲೂ ಕಿ.ಮೀ.ಗಳ ವ್ಯಾಪ್ತಿಪೂರ್ತಿ ಜನನಿಬಿಡ ಪ್ರದೇಶವಾಗಿದ್ದು, ಮನೆಗಳು, ವಾಣಿಜ್ಯ ಕಟ್ಟಡಗಳಿಂದ ಕೂಡಿದೆ. ಮುಖ್ಯ ರಸ್ತೆಯಲ್ಲೂ ವಾಹನ ಸಂಚಾರ ಹೆಚ್ಚಿರುತ್ತದೆ. ಆದರೂ ಪೊನ್ನಂಪೇಟೆ ಪಟ್ಟಣದ ಹೃದಯಭಾಗಕ್ಕೇ ಕಾಡಾನೆ ಲಗ್ಗೆ ಹಾಕಿದೆ. ಮಾರ್ಚ್ 9ರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮುಖ್ಯರಸ್ತೆ ಸೇರಿದಂತೆ ಅಲ್ಲಲ್ಲಿ ನಡೆದಾಡಿ... ಓಡಾಡಿ ಜನರಲ್ಲಿ ಭೀತಿ ಉಂಟುಮಾಡಿದೆ. ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದೆ. ಶಿವರಾತ್ರಿ ಅಂಗವಾಗಿ ಶುಕ್ರವಾರ ರಾತ್ರಿಯಿಡೀ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಜಾವ 5:30ರ ತನಕವೂ ಸಾಂಸ್ಕೃತಿಕ - ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಬೆಳಕು ಹರಿದಂತೇ ಈ ಸ್ಥಳದಿಂದ ಕೇವಲ ಅನತಿ ದೂರದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ತಲ್ಲಣ ಸೃಷ್ಟಿಸಿ ಅಲ್ಲಲ್ಲಿ ಓಡಾಡಿ ಮರೆಯಾಗಿದೆ. ಜನರ ಅದೃಷ್ಟವೆಂಬಂತೆ ಜಾಗರಣೆಯಿದ್ದ ಜನರು ಮನೆಗೆ ಮರಳಿದ ನಂತರದಲ್ಲಿ ಆನೆ ಕಾಣಿಸಿಕೊಂಡಿದೆ. ಇಲ್ಲದಿದ್ದಲ್ಲಿ ಅಪಾಯ ಖಚಿತವಾಗಿತ್ತು ಎಂಬುದು ವಾಸ್ತವ.

ಇಲ್ಲಿ ಉದ್ಭವಿಸಿರುವ ಪ್ರಶ್ನೆ ಏನೆಂದರೆ, ಇಂತಹ ಜನನಿಬಿಡ ಸ್ಥಳಕ್ಕೆ ಸದ್ದು - ಗದ್ದಲದ ನಡುವೆ ಎಲ್ಲಿಂದ ಆನೆ ಬಂತು ಎಂಬುದು..? ಈ ತನಕ ಇಂತಹ ಘಟನೆ ನಡೆದಿರಲಿಲ್ಲ. ಇದೀಗ ಇದರ ಹಿಂದಿನ ರಹಸ್ಯವೊಂದು ಸುದ್ದಿಯಾಗುತ್ತಿದೆ.

ಪೊನ್ನಂಪೇಟೆಗೆ ಲಗ್ಗೆಯಿಟ್ಟ ಗಂಡಾನೆ ಕೊಡಗಿನದ್ದಲ್ಲ. ಕಳೆದ ಜನವರಿ 18 ರಂದು ಹಾಸನದ ಸಕಲೇಶಪುರ ವ್ಯಾಪ್ತಿಯಲ್ಲಿ ಆನೆಯೊಂದನ್ನು ಸೆರೆಹಿಡಿಯಲಾಗಿತ್ತು. ಈ ಆನೆಯನ್ನು ಸೆರೆಹಿಡಿದ ಬಳಿಕ ತಂದದ್ದು ದುಬಾರೆ ಸಾಕಾನೆ ಶಿಬಿರಕ್ಕೆ... ಇಲ್ಲಿ ಕೇವಲ ಒಂದೆರಡು ದಿನ ಬಂದಿಯಾಗಿದ್ದ ಈ ಆನೆಯನ್ನು ಮತ್ತೆ ಇಲ್ಲಿನ ಅರಣ್ಯಕ್ಕೆ ಬಿಡಲಾಗಿದೆ. ಅಲ್ಲಿಂದ ಈ ಪುಂಡಾನೆ ಅಲ್ಲಲ್ಲಿ ತಿರುಗಾಡುತ್ತಿದ್ದು, ನಿನ್ನೆ ಪೊನ್ನಂಪೇಟೆಗೆ ಹೆಜ್ಜೆ ಹಾಕಿದೆ ಎಂದು ಖಚಿತವಾಗಿ ಹೇಳಲಾಗುತ್ತಿದೆ.

ಇದು ಕೇವಲ ಊಹಾಪೋಹವೂ ಅಲ್ಲ ಎಂಬುದೂ ಸತ್ಯ... ಏಕೆಂದರೆ ಪ್ರಸ್ತುತ ದುಬಾರೆ ಶಿಬಿರದಲ್ಲಿ ಸಕಲೇಶಪುರದಿಂದ ತರಲಾಗಿದ್ದ ಆನೆ ಇಲ್ಲವೇ ಇಲ್ಲ. ಮತ್ತೊಂದು ಸ್ಪಷ್ಟತೆ ಎಂದರೆ ಈ ಆನೆಯನ್ನು ಸೆರೆಹಿಡಿದ ಸಂದರ್ಭ ತೆಗೆದಿರುವ ಚಿತ್ರಗಳಲ್ಲಿ ಇರುವ ಆನೆಯೇ ಇದು ಎಂಬುದೂ ಬೆಳಕಿಗೆ ಬಂದಿದೆ. ಅಷ್ಟೇ ಎತ್ತರ, ದಪ್ಪ ಮಾತ್ರವಲ್ಲ, ಸೆರೆಹಿಡಿದ ಸಂದರ್ಭ ಆನೆಯ ಕಿವಿಯೊಂದರ ತುದಿಯಲ್ಲಿ (ಬಲಕಿವಿ)  ತೂತ ಇರುವುದು ಚಿತ್ರದಲ್ಲಿ ಕಂಡುಬಂದಿತ್ತು. ಇದೀಗ ಪೊನ್ನಂಪೇಟೆಗೆ ಬಂದ ಆನೆಯ ಕಿವಿಯ ತುದಿಯಲ್ಲೂ ಇದೇ ತೂತ ಕಂಡುಬಂದಿದೆ. ಪೊನ್ನಂಪೇಟೆಯಲ್ಲಿ ಹಲವರು ಮೊಬೈಲ್‌ನಲ್ಲಿ ಈ ಸಲಗದ ಓಡಾಟದ ವೀಡಿಯೋ- ಫೋಟೋ ಕ್ಲಿಕ್ಕಿಸಿದ್ದಾರೆ. ಇದನ್ನು ಸ್ಪಷ್ಟವಾಗಿ ಅವಲೋಕಿಸಿದರೆ, ಸಕಲೇಶಪುರದಿಂದ ತಂದಿರುವ ಆನೆಯೇ ಇದಾಗಿದೆ ಎಂಬುದು ಅರಿವಿಗೆ ಬರುತ್ತಿದೆ. ಆನೆಯನ್ನು ತಂದ ತಕ್ಷಣವೇ ಯಾರಿಗೂ ತಿಳಿಯದಂತೆ ಕೊಡಗಿನ ಅರಣ್ಯಕ್ಕೆ ಏಕೆ ಬಿಡಲಾಗಿದೆ ಎಂಬುದು ಈಗಿನ ಪ್ರಶ್ನೆ. ವಯನಾಡು ಮಾದರಿಯಲ್ಲಿ ಅಪಾಯ ಸಂಭವಿಸಿದ್ದರೆ ಇದಕ್ಕೆ ಯಾರು ಹೊಣೆ...?