ವಿದ್ಯುತ್ ಗ್ರಾಹಕರಿಗೆ ದರ ಹೆಚ್ಚಳದ ‘ಶಾಕ್’

 

ಬಿಲ್ ದುಬಾರಿ  - ಈ ತಿಂಗಳಿನಿಂದ ಅನ್ವಯ

 

ಗೃಹಜ್ಯೋತಿ ಯೋಜನೆಯಿಂದ 200 ಯೂನಿಟ್ ಉಚಿತ ವಿದ್ಯುತ್ ಎಂದು ಖುಷಿಯಲ್ಲಿದ್ದ ಗ್ರಾಹಕರು ಇದೀಗ ‘ಶಾಕ್’ಗೆ ಒಳಗಾಗುತ್ತಿದ್ದಾರೆ. ದರಹೆಚ್ಚಳದ ಆದೇಶ ಗ್ರಾಹಕರಿಗೆ ಮತ್ತಷ್ಟು ಹೊರೆ ಆಗುವ ಭೀತಿ ಸೃಷ್ಟಿಸಿದೆ. 

ಉಚಿತ ವಿದ್ಯುತ್ ನೀಡುವ ವಿಚಾರ ಗೊಂದಲದಲ್ಲಿರುವ ನಡುವೆಯೇ ದರ ಹೆಚ್ಚಳದ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ವಿವಿಧ ಸ್ತರಗಳಲ್ಲಿನ ವಿದ್ಯುತ್ ದರವನ್ನು ಹೆಚ್ಚಿಸಿರುವ ಸರಕಾರದ ಕ್ರಮ ಚರ್ಚೆಗೆ ಗ್ರಾಸವಾಗಿದೆ. 

ವಿವಿಧ ರೀತಿಯ 18 ವಿಭಾಗಗಳ ವಿದ್ಯುತ್ ದರದಲ್ಲಿ ಏರಿಕೆಯಾಗಿದೆ. ಈ ಸಂಬಂಧ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ದರಪಟ್ಟಿಯನ್ನು ಜಿಲ್ಲಾ ಶಾಖೆಗೂ ರವಾನಿಸಿದ್ದು ಈ ತಿಂಗಳಿನಿಂದ ಹೊಸ ದರ ಅನ್ವಯವಾಗಲಿದೆ. ಸರಕಾರಿ ಯೋಜನೆಯಡಿ ವಿದ್ಯುತ್ ಪಡೆದವರು ಸೇರಿದಂತೆ ಗೃಹೋಪಯೋಗಿ, ವಾಣಿಜ್ಯ ಉದ್ದೇಶ, ಕೃಷಿ ಬಳಕೆಯ ವಿದ್ಯುತ್ ದರದಲ್ಲೂ ಹೆಚ್ಚಳ ಕಂಡಿದೆ. ವಿದ್ಯುತ್ ಸರಬರಾಜು ಕಂಪೆನಿಗಳ ವರಮಾನದ ಕೊರತೆ ಸರಿದೂಗಿಸಲು ಈ ಕ್ರಮವಹಿಸಲಾಗಿದೆ ಎನ್ನಲಾಗಿದೆ. 

ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದವರಿಗೆ ನಿಗದಿತ ದರ ರೂ. 70, ಯೂನಿಟ್‌ಗೆ ರೂ.8.31 ಇತ್ತು. ಇದೀಗ ನಿಗದಿತ ರೂ. 100 ಹಾಗೂ ಯೂನಿಟ್‌ಗೆ ರೂ.8.59 ಮಾಡಲಾಗಿದೆ. ಗೃಹಬಳಕೆಯ ವಿದ್ಯುತ್ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಈ ಮೊದಲಿದ್ದ ನಗರ ಹಾಗೂ ಗ್ರಾಮ ಮಟ್ಟದ ಪ್ರತ್ಯೇಕ ದರವನ್ನು ಇದೀಗ ಒಂದೇ ದರಕ್ಕೆ ತರಲಾಗಿದೆ. ವಾಣಿಜ್ಯ ಉದ್ದೇಶದ ವಿದ್ಯುತ್ ಬಳಕೆದಾರರಿಗೂ ಇದೇ ಕ್ರಮವಹಿಸಲಾಗಿದ್ದು, ನಗರ ಹಾಗೂ ಗ್ರಾಮಕ್ಕೆ ಒಂದೆ ರೀತಿಯ ಶುಲ್ಕ ಇರಲಿದೆ. 

ಮೇ ತಿಂಗಳಿನಲ್ಲಿ ನಿಗಧಿ 

ಸಾಮಾನ್ಯವಾಗಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದರ ಹೆಚ್ಚಳವಾಗುತ್ತದೆ. ಚುನಾವಣೆ ಇದ್ದುದರಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಈ ಪ್ರಕ್ರಿಯೆಯನ್ನು ಮುಂದೂಡಿ ಮೇ ತಿಂಗಳಿನಲ್ಲಿ ದರ ಹೆಚ್ಚಳಕ್ಕೆ ಆದೇಶಿಸಿತ್ತು. 

ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆಯಷ್ಟು (ಶೇ 4.33) ವಿದ್ಯುತ್ ದರ ಹೆಚ್ಚಿಸಲಾಗಿತ್ತು. ನಂತರ, ಅಕ್ಟೋಬರ್ 1ರಂದು ಇಂಧನ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಪರಿಷ್ಕರಿಸಲಾಗಿತ್ತು. ಇದರಿಂದ, ವಿವಿಧ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ದರ ಹೆಚ್ಚಿಸಿದ್ದವು. ಬಳಿಕ, ಡಿಸೆಂಬರ್‌ನಲ್ಲಿ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತಗೊಳಿಸಲಾಗಿತ್ತು.

ವಾಣಿಜ್ಯ ಬಳಕೆದಾರರಿಗೆ ಬಿಸಿ

ವಾಣಿಜ್ಯ ಉದ್ದೇಶಕ್ಕೆ ಸಂಪರ್ಕಗಳಲ್ಲಿನ ವಿದ್ಯುತ್ ದರದಲ್ಲಿಯೂ ಗಣನೀಯ ಏರಿಕೆಯಾಗಿದೆ. ಈ ಮೊದಲು ಪಟ್ಟಣ ಪ್ರದೇಶದಲ್ಲಿ 50 ಕಿ.ವ್ಯಾ. ಒಳಗಿನ ವಿದ್ಯುತ್‌ಗೆ ನಿಗದಿತ ದರ ರೂ. 195, ಗ್ರಾ.ಪಂ. ವ್ಯಾಪ್ತಿಯಲ್ಲಿ ನಿಗದಿತ ದರ ರೂ. 115, 50 ಕಿ.ವ್ಯಾ. ನಂತರದ ಪ್ರತಿ ಹೆಚ್ಚುವರಿ ಕಿ.ವ್ಯಾ. ಬಳಕೆಗೆ ನಿಗದಿತ ದರ ನಗರ ಪ್ರದೇಶಕ್ಕೆ ರೂ. 230 ಹಾಗೂ ಗ್ರಾ.ಪಂ. ಮಟ್ಟದಲ್ಲಿ ರೂ. 220 ಇತ್ತು. 

ಇದೀಗ ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಒಟ್ಟುಗೂಡಿಸಿ ದರದಲ್ಲಿ ಬದಲಾವಣೆ ತರಲಾಗಿದೆ. ಇದರಿಂದ ವ್ಯಾಪಾರ-ವಹಿವಾಟು ನಡೆಸುವವರು ಏರಿಕೆ ಬಿಸಿಗೆ ತುತ್ತಾಗಿದ್ದಾರೆ. 

ಕೈಗಾರಿಕಾ ವಲಯ 

 ಕೈಗಾರಿಕಾ ವಲಯದಲ್ಲಿ ವಿದ್ಯುತ್ ಪಡೆದ ದರವನ್ನು ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ಡಿಮ್ಯಾಂಡ್ ಚಾರ್ಜ್ ಎಂದು ಪಾವತಿ ಮಾಡುತ್ತಿದ್ದ ರೂ. 265ಅನ್ನು ರೂ. 350ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ 1 ರಿಂದ 1 ಲಕ್ಷ ಯೂನಿಟ್ ತನಕದ ಬಳಕೆಗೆ ಪ್ರತಿ ಯೂನಿಟ್‌ಗೆ ರೂ. 7.35 ನಿಗದಿ ಮಾಡಲಾಗಿತ್ತು. ಹೊಸ ಆದೇಶದ ಅನ್ವಯ ಪ್ರತಿ ಯೂನಿಟ್‌ಗೆ ರೂ. 7.40  ಆಗಿದೆ.  

 

ಗೃಹಬಳಕೆ ದರದ ವಿವರ

ಈ ಮೊದಲ ದರ

ಮೊದಲ ಹಂತದ ಕಿಲೋ ವ್ಯಾಟ್‌ಗೆ ನಿಗದಿತ ದರ ರೂ. 100 (ನಗರ ಪ್ರದೇಶಕ್ಕೆ) ; ರೂ. 85 (ಗ್ರಾ.ಪಂ. ವ್ಯಾಪ್ತಿಗೆ)

50 ಕಿಲೋ ವ್ಯಾಟ್‌ನೊಳಗೆ ಬಳಕೆಗೆ ನಿಗದಿತ ದರ ;ರೂ. 110 (ನಗರ ಪ್ರದೇಶಕ್ಕೆ) ; ರೂ. 100 (ಗ್ರಾ.ಪಂ. ವ್ಯಾಪ್ತಿಗೆ)

50 ಕಿ.ವ್ಯಾ ಮೇಲ್ಪಟ್ಟು ನಿಗದಿತ ದರ ರೂ. 175 (ನಗರ ಪ್ರದೇಶಕ್ಕೆ); ರೂ. 160 (ಗ್ರಾ.ಪಂ. ವ್ಯಾಪ್ತಿಗೆ)

1 ರಿಂದ 50 ಯೂನಿಟ್ ಬಳಕೆಗೆ (ಪ್ರತಿ ಯೂನಿಟ್‌ಗೆ) ರೂ. 4.10  (ನಗರ ಪ್ರದೇಶಕ್ಕೆ) ; ರೂ. 4 (ಗ್ರಾ.ಪಂ. ವ್ಯಾಪ್ತಿಗೆ)

51 ರಿಂದ 100 ಯೂನಿಟ್ ಬಳಕೆಗೆ  ರೂ. 5.60  (ನಗರ ಪ್ರದೇಶಕ್ಕೆ); ರೂ. 5.30 (ಗ್ರಾ.ಪಂ.ವ್ಯಾಪ್ತಿಗೆ)

101 ರಿಂದ 200 ಯೂನಿಟ್‌ಗೆ  ರೂ. 7.15 (ನಗರ ಪ್ರದೇಶಕ್ಕೆ);  ರೂ. 6.85 (ಗ್ರಾ.ಪಂ.ವ್ಯಾಪ್ತಿಗೆ)

200 ಯೂನಿಟ್ ಮೇಲ್ಪಟ್ಟು ರೂ. 8.20 (ನಗರ ಪ್ರದೇಶಕ್ಕೆ); ರೂ. 7.70 (ಗ್ರಾ.ಪಂ.ವ್ಯಾಪ್ತಿಗೆ)

 

ಪ್ರಸ್ತುತ ದರ

 ನಗರ ಹಾಗೂ ಗ್ರಾಮ ಪ್ರದೇಶವನ್ನು ಒಂದುಗೂಡಿಸಿ ಒಂದೇ ದರವನ್ನು ನಿಗದಿಪಡಿಸಲಾಗಿದೆ

50 ಕಿಲೋ ವ್ಯಾಟ್ ತನಕಕ್ಕೆ ನಿಗದಿತ ದರ ರೂ. 110

50 ಕಿಲೋ ವ್ಯಾಟ್ ಮೇಲ್ಪಟ್ಟು  ನಿಗದಿತ ದರ ರೂ. 210 

0 ಯಿಂದ 100 ಯೂನಿಟ್‌ನೊಳಗೆ (ಪ್ರತಿಯೂನಿಟ್‌ಗೆ) ರೂ. 4.75

100 ಯೂನಿಟ್ ಮೀರಿದರೆ ಪ್ರತಿಯೂನಿಟ್‌ಗೆ ರೂ. 7

 

ವಾಣಿಜ್ಯ ಉದ್ದೇಶದ ದರ

ಈ ಮೊದಲ ದರ

50 ಕಿ.ವ್ಯಾ. ಒಳಗಿನ ವಿದ್ಯುತ್‌ಗೆ ನಿಗದಿತ ದರ ರೂ. 125 (ನಗರ);  ರೂ. 115 (ಗ್ರಾ.ಪಂ)

50 ಕಿ.ವ್ಯಾ. ನಂತರದ ಪ್ರತಿ ಹೆಚ್ಚುವರಿ ಕಿ.ವ್ಯಾ. ರೂ. 230 (ನಗರ); ರೂ. 220 (ಗ್ರಾಮ)

1 ರಿಂದ 50 ಯೂನಿಟ್‌ಗೆ (ಪ್ರತಿಯೂನಿಟ್) ರೂ. 8.40 (ನಗರ);  ರೂ. 7.90 (ಗ್ರಾಮ)

50 ಯೂನಿಟ್ ಮೇಲ್ಪಟ್ಟು ರೂ. 9.40 (ನಗರ);  ರೂ. 8.30 (ಗ್ರಾಮ)

 

ಪ್ರಸ್ತುತ ದರ

ನಗರ ಹಾಗೂ ಗ್ರಾಮ ಪ್ರದೇಶವನ್ನು ಒಂದುಗೂಡಿಸಿ ಒಂದೇ ದರವನ್ನು ನಿಗದಿಪಡಿಸಲಾಗಿದೆ

50 ಕಿ.ವ್ಯಾ. ಒಳಗಿನ ವಿದ್ಯುತ್‌ಗೆ ನಿಗದಿತ ದರ ರೂ. 200

50 ಕಿ.ವ್ಯಾ. ನಂತರದ ಪ್ರತಿ ಹೆಚ್ಚುವರಿ ಕಿ.ವ್ಯಾ. ಬಳಕೆಗೆ ನಿಗದಿತ ದರ  ರೂ. 300

ಪ್ರತಿಯೂನಿಟ್‌ಗೆ ರೂ. 8.50