ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಿದೆ ‘ಗ್ರೇಟರ್ ರಾಜಾಸೀಟ್’
ಆಕರ್ಷಿಸುತ್ತಿದೆ ‘ವ್ಯೂ ಪಾಯಿಂಟ್’ ‘ವಾಕಿಂಗ್ ಪಾಥ್’
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ ಇದೀಗ ತನ್ನ ಸೊಬಗಿನ ವ್ಯಾಪ್ತಿ ಹೆಚ್ಚಿಸಿಕೊಂಡಿಚಿದೆ. ‘ಗ್ರೇಟರ್ ರಾಜಾಸೀಟ್’ ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಿದ್ದು, ಕಾಮಗಾರಿಯೂ ಪೂರ್ಣ ಗೊಂಡಿದೆ.
ಪ್ರಕೃತಿ ಸೌಂದರ್ಯ ಸವಿಯಲು, ಸೂರ್ಯಾಸ್ತದ ಕ್ಷಣವನ್ನು ಕಣ್ತುಂಬಿಕೊಳ್ಳಲು, ಸುಂದರ ಸಂಜೆಯಲ್ಲಿ ವಾಯುವಿಹಾರ ನಡೆಸಲು, ಬೆಳ್ಳಂಬೆಳಿಗ್ಗೆ ಮಂಜಿನ ವಾತಾವರಣಕ್ಕೆ ಮೈಯೊಡ್ಡಲು ರಾಜಾಸೀಟ್ ಹೇಳಿ ಮಾಡಿಸಿದ ಜಾಗ. ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರು ಯಾವುದನ್ನು ತಪ್ಪಿಸಿದರು ರಾಜಾಸೀಟ್ ನೋಡುವುದನ್ನು ‘ಮಿಸ್’ ಮಾಡುವುದಿಲ್ಲ. ಹಸಿರೂರಿಗೆ ಮಂಜಿನ ಸೀರೆ ತೊಡಿಸಿದಂತಿರುವ ಈ ಸುಂದರ ಸ್ಥಳ ಇದೀಗ ಮತ್ತಷ್ಟು ವಿಸ್ತಾರಗೊಂಡಿರುವುದು ರಾಜಾಸೀಟ್‌ನ ಕಳೆಯನ್ನು ದ್ವಿಗುಣಗೊಳಿಸಿದೆ.
ಪ್ರಮುಖ ಆಕರ್ಷಣೆಗಳು
|
ಏನಿದು ‘ಗ್ರೇಟರ್ ರಾಜಾಸೀಟ್’?
ಮೊದಲು ಅರ್ಧ ಎಕರೆಯಲ್ಲಿದ್ದ ರಾಜಾಸೀಟ್ ಇದೀಗ 4.5 ಎಕರೆಗೆ ವಿಸ್ತಾರ ಪಡೆದುಕೊಂಡಿದೆ. ರಾಜಾಸೀಟ್‌ನಲ್ಲಿ ಪ್ರಸ್ತುತ ಇರುವ ‘ವ್ಯೂ ಪಾಯಿಂಟ್’ ಜೊತೆಗೆ ಮತ್ತೇ ಮೂರು ‘ವ್ಯೂ ಪಾಯಿಂಟ್’ ಅನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಈ ಯೋಜನೆಯೇ ‘ಗ್ರೇಟರ್ ರಾಜಾಸೀಟ್’ ಆಗಿದೆ.
ಈ ಮೊದಲು ಕುರುಚಲು ಕಾಡುಗಳಿಂದ ಕೂಡಿದ್ದ ವಿಶಾಲ ಜಾಗವನ್ನು ಆಕರ್ಷಕವಾಗಿ ಪರಿವರ್ತಿಸಿ ಸಂಚರಿಸುವ ಜಾಗದಲ್ಲಿ ಇಂಟರ್ ಲಾಕ್, ವಿವಿಧ ತಳಿಯ ಕಣ್ಮನ ಸೆಳೆಯುವ ಗಿಡಗಳು, ಮೆಟ್ಟಲುಗಳು, ಅಲಂಕಾರಿಕ ಮಂಟಪಗಳು, ೩ ಕಿ.ಮೀ. ವಾಕಿಂಗ್ ಪಾಥ್, ನಡುನಡುವೆ ಗಾರ್ಡನ್, ಕೂರಲು ಕಲ್ಲಿನ ಕುರ್ಚಿಗಳನ್ನು ನಿರ್ಮಿಸಿ ವಿಶೇಷವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ರೂ. ೪.೫೫ ಕೋಟಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ.
2009 ರಲ್ಲಿ ಪ್ರಸ್ತಾಪ
ರಾಜಾಸೀಟ್ ವಿಸ್ತರಣೆಯ ಕುರಿತು 2009ರಲ್ಲಿ ಮಡಿಕೇರಿಯ ಎಂ.ಎ. ಕಮರುದ್ದೀನ್ ಎಂಬವರು ಕಂಪ್ಯೂಟರ್‌ನಲ್ಲಿ ವಿನ್ಯಾಸ ಮಾಡಿ ರಾಜಕಾರಣಿ ಎಂ.ಸಿ.ನಾಣಯ್ಯ ಅವರ ಬಳಿ ಪ್ರಸ್ತಾಪ ಮಾಡಿದ್ದರು. ಅವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದರು. ಅಂದಿನ ನಗರಸಭಾ ಸದಸ್ಯೆ ಹಾಗೂ ರಾಜಾಸೀಟ್ ಅಭಿವೃದ್ಧಿ ಸಮಿತಿಯ ಸದಸ್ಯೆ ಆಗಿದ್ದ ಮೋಂತಿ ಗಣೇಶ್ ಅವರಿಗೆ ಈ ಬಗ್ಗೆ ಕಮರುದ್ದೀನ್ ಗಮನ ಸೆಳೆದಿದ್ದರು. ಸಂಬ0ಧಪಟ್ಟ ಇಲಾಖೆಯೂ ಇದನ್ನು ಮೆಚ್ಚಿತ್ತು. ಅಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಅನುದಾನ ಪಡೆದುಕೊಂಡರು.
ಆ ಬಳಿಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಭೂವಿನ್ಯಾಸ ತಜ್ಞರ ನೆರವು ಪಡೆದು ಕೆಲವು ಬದಲಾವಣೆ ಮಾಡಿ ಯೋಜನೆಯನ್ನು ಅನುಷ್ಠಾನ ಮಾಡಲಾಯಿತು. ಕೆಲವೊಂದು ತಾಂತ್ರಿಕ ಕಾರಣ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ವಿಶ್ವವನ್ನೇ ಬಾಧಿಸಿದ ಕೊರೊನಾದಂತ ಪರಿಸ್ಥಿತಿಯಿಂದ ಈ ಯೋಜನೆ ವಿಳಂಬವಾಗ ತೊಡಗಿತು. ಇದೀಗ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ.
ರಾಜಾಸೀಟ್‌ನ ಅಭಿವೃದ್ಧಿ
ವಿಶಾಲಗೊಂಡಿರುವ ರಾಜಾಸೀಟ್ ಹಂತಹAತವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಹೊಸ ಬಗೆಯ ಗಿಡಗಳನ್ನು ನೆಟ್ಟು ಅಂದಗಾಣಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಸಂಗೀತ ಕಾರಂಜಿಯನ್ನು ಆರಂಭಿಸಲಾಗಿದೆ. ಪ್ರಾಣಿಗಳ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಗಿಡ ಇರುವ ಪ್ರದೇಶವನ್ನು ಯಾರು ಮುಟ್ಟದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಈ ಮೊದಲು ಹಗ್ಗವನ್ನು ಬಳಸಿ ಭದ್ರಪಡಿಸಲಾಗಿತ್ತು. ಇದೀಗ ‘ಸ್ಟೀಲ್ ಗ್ರಿಲ್’ ಮಾಡಿ ಅದಕ್ಕೆ ಬಿದುರಿನ ರೀತಿಯಲ್ಲಿ ಬಣ್ಣ ಬಳೆದು ಆಕರ್ಷಕಗೊಳಿಸಲಾಗಿದೆ. ಕಾಮಗಾರಿ ಮುಕ್ತಾಯಗೊಂಡಿದ್ದು, ಅಧಿಕೃತವಾಗಿ ಕೆಲವೇ ದಿನದಲ್ಲಿಯೇ ಗ್ರೇಟರ್ ರಾಜಾಸೀಟ್ ಉದ್ಘಾಟನೆಗೊಳ್ಳಲಿದೆ.
ಸೂರ್ಯೋದಯ ವೀಕ್ಷಣೆ
ಈ ಮೊದಲು ರಾಜಾಸೀಟ್‌ನ ‘ವ್ಯೂ ಪಾಯಿಂಟ್’ನಲ್ಲಿ ಸೂರ್ಯಾಸ್ತದ ದೃಶ್ಯ ಮಾತ್ರ ಕಣ್ತುಂಬಿಕೊಳ್ಳಬಹುದಿತ್ತು. ಇದೀಗ ಸೂರ್ಯೋದಯದ ಸವಿಯನ್ನು ವೀಕ್ಷಿಸಲು ಗ್ರೇಟರ್ ರಾಜಾಸೀಟ್‌ನಲ್ಲಿ ಅವಕಾಶ ದೊರೆಯಲಿದೆ. ಪೂರ್ವ ದಿಕ್ಕಿನಲ್ಲಿ ಎತ್ತರದಲ್ಲಿರುವ ಗೋಪುರದಿಂದ ಸೂರ್ಯೋದಯ ನೋಡಬಹುದಾಗಿದೆ. ಇದರಿಂದ ಮುಂದೆ ಬೆಳ ಗ್ಗಿನ ಜಾವವೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಾಯೋಗಿಕವಾಗಿ ಪ್ರವಾಸಿಗರನ್ನು ಹೊಸ ‘ವ್ಯೂ ಪಾಯಿಂಟ್’ಗಳಿಗೆ ಬಿಡಲಾಗುತ್ತಿದ್ದು, ನೋಡಿದವರು ಸಂಭ್ರಮಿಸುವ ದೃಶ್ಯ ಕಂಡುಬರುತ್ತಿದೆ.
ವಾಯುವಿಹಾರಕ್ಕೆ ಸೂಕ್ತ
ಹಳೆಯ ಒಂದು ಸೇರಿದಂತೆ ಒಟ್ಟು ೩ ವ್ಯೂ ಪಾಯಿಂಟ್‌ಗಳು ಇದೀಗ ರಾಜಾಸೀಟ್‌ನಲ್ಲಿವೆ. ಇವುಗಳೊಂದಿಗೆ ೩ ಕಿ.ಮೀ. ವಿಶಾಲ ‘ವಾಕಿಂಗ್ ಪಾಥ್’ ವಾಯುವಿಹಾರ ಪ್ರಿಯರಿಗೆ ಖುಷಿ ನೀಡುತ್ತಿದೆ. ಬೆಳಿಗ್ಗೆ ವಾಕಿಂಗ್ ಮಾಡಲು ಇದು ಸೂಕ್ತ ಸ್ಥಳವಾಗಿದೆ. ಪ್ರವಾಸಿಗರೊಂದಿಗೆ ಸ್ಥಳೀಯರಿಗೂ ಈ ಜಾಗ ಪ್ರಿಯವಾಗಲಿದೆ. ೪.೫೦ ಎಕರೆ ಜಾಗವನ್ನು ಸದ್ಬಳಕೆ ಮಾಡಿಕೊಂಡು ಇಂಟರ್ ಲಾಕ್ ಅಳವಡಿಸಿ ‘ವಾಕಿಂಗ್ ಪಾಥ್’ ನಿರ್ಮಾಣ ಮಾಡಲಾಗಿದೆ. ಏರಿಳಿತ ಪ್ರದೇಶವಾಗಿರುವುದರಿಂದ ಮೆಟ್ಟಿಲು, ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದ್ದು, ಆಕರ್ಷಣಿಯ ಹೂವಿನ ಗಿಡಗಳು ಸೆಳೆಯುತ್ತಿವೆ.
ಕಾಮಗಾರಿ ಪೂರ್ಣಗೊಂಡಿದೆ ಸದ್ಯದಲ್ಲಿಯೇ ಅಧಿಕೃತವಾಗಿ ಗ್ರೇಟರ್ ರಾಜಾಸೀಟನ್ನು ಉದ್ಘಾಟಿಸಲಾಗುವುದು. ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವ ಚಿಂತನೆ ಇದೆ; ಈ ಯೋಜನೆಯಿಂದ ಪ್ರವಾಸೋದ್ಯಮ ಮತ್ತಷ್ಟು ಬೆಳೆವಣಿಗೆ ಸಾಧಿಸಲಿದೆ. - ಯತೀಶ್ ಉಲ್ಲಾಳ, ಉಪವಿಭಾಗಾಧಿಕಾರಿ ಹಾಗೂ ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ |