ಪೊನ್ನಂಪೇಟೆ ತಾಲೂಕು ಆದರೂ ಅಂತ್ಯ ಕಾಣದ ಜನರ ಸಮಸ್ಯೆ

ತಪ್ಪದ ಅಲೆದಾಟ - ಶಾಶ್ವತ ವ್ಯವಸ್ಥೆಗೆ ಕಾದಿರುವ ಜನರು

 

 

ಪೊನ್ನಂಪೇಟೆ ನೂತನ ತಾಲೂಕಿನ ರಚನೆಗೆ ನೂರಾರು ಹಿರಿಯ ನಾಗರಿಕರು ಸೇರಿದಂತೆ  ಸಾವಿರಾರು ಸಂಖ್ಯೆಯಲ್ಲಿ ಜನರು ಹೋರಾಟ ಮಾಡಿದ ಫಲವಾಗಿ ಪೊನ್ನಂಪೇಟೆ ತಾಲೂಕು ಕಳೆದೆರೆಡು ವರ್ಷಗಳ ಹಿಂದೆ ಅಧಿಕೃತವಾಗಿ ಪೊನ್ನಂಪೇಟೆ ತಾಲೂಕು ರಚನೆಯಾಗಿದೆ.

 ಗ್ರಾಮೀಣ ಭಾಗದ ಜನರು, ರೈತರು, ಕೃಷಿಕರು, ವಯೋವೃದ್ಧರು ಸೇರಿದಂತೆ ಹಲವು ಮಂದಿ ದೂರದ ವೀರಾಜಪೇಟೆಯ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನೂತನ ತಾಲೂಕು ರಚನೆ ಆಗಿತ್ತು, ನಿರಂತರ  ಹೋರಾಟದ ಫಲವಾಗಿ ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿತ್ತಾದರೂ ಜನರಿಗೆ ಬೇಕಾದ ಸೌಕರ್ಯಗಳು ಇನ್ನೂ ಕೂಡ ಈ ಕಚೇರಿಯಲ್ಲಿ ಲಭ್ಯವಾಗುತ್ತಿಲ್ಲ. ಕನಿಷ್ಟ ಪ್ರಮಾಣದ ಸರ್ವೆ ಇಲಾಖೆಯ ನಕ್ಷೆಗಾಗಿ ವೀರಾಜಪೇಟೆ ಕಚೇರಿಗೆ ಅಲೆದಾಡುವುದು ಇನ್ನು ನಿಂತಿಲ್ಲ.

ಈಗಾಗಲೇ ನೂತನ ಕಚೇರಿಗೆ ಎರಡು ವರ್ಷ ಪೂರೈಸಿದೆ. ಒಟ್ಟು ನಾಲ್ಕು ತಹಶೀಲ್ದಾರ್‌ಗಳು ಕೆಲಸ ನಿರ್ವಹಿಸಿದ್ದಾರೆ. ಪ್ರಥಮ ತಹಶೀಲ್ದಾರ್‌ರಾಗಿ ಎ.ಎ. ಕುಸುಮಾ, ಎರಡನೆ ತಹಶೀಲ್ದಾರರಾಗಿ ಕಾವ್ಯರಾಣಿ, ಮೂರನೇ ತಹಶೀಲ್ದಾರರಾಗಿ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಯೋಗಾನಂದ್ ಪ್ರಬಾರ ಹುದ್ದೆಯಲ್ಲಿ ಮುಂದುವರೆದಿದ್ದರು. ನಂತರ ಪ್ರಶಾಂತ್‌ರವರು ಖಾಯಂ ತಹಶೀಲ್ದಾರರಾಗಿ ನೇಮಕಗೊಂಡಿದ್ದರು. 

ಇದೀಗ ಪ್ರಶಾಂತ್‌ರವರು ಆನಾರೋಗ್ಯದ ಹಿನ್ನಲೆಯಲ್ಲಿ ರಜೆ ಮೇಲೆ ತೆರಳಿದ್ದು ವೀರಾಜಪೇಟೆಯ ತಹಶೀಲ್ದಾರ್ ಅರ್ಚನ ಭಟ್  ಪ್ರಸ್ತುತ ಇಲ್ಲಿಯ ಪ್ರಬಾರ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊನ್ನಂಪೇಟೆ ತಾಲೂಕಿಗೆ ೪೯ ಗ್ರಾಮಗಳು ಮತ್ತು ೪ ಹೋಬಳಿಗಳನ್ನೊಳಗೊಂಡ ೨೧ ಗ್ರಾಮ ಪಂಚಾಯಿತಿಗಳು ಒಳಗೊಂಡ ತಾಲೂಕನ್ನು ಅಸ್ತಿತ್ವಕ್ಕೆ ತರಲು ೨೦೦೬ ರಿಂದಲೇ ಸರ್ಕಾರಕ್ಕೆ ನಿರಂತರ ಮನವಿ ಪತ್ರ ಸಲ್ಲಿಸಲಾಗಿತ್ತು. 3-7-2020 ರಂದು ಸರ್ಕಾರದ ಅಂತಿಮ ಆದೇಶದೊಂದಿಗೆ ಪೊನ್ನಂಪೇಟೆ ತಾಲೂಕು ರಚನೆಯಾಯಿತು. 

ಈಗಾಗಲೇ ಪೊನ್ನಂಪೇಟೆ ನೂತನ ತಾಲೂಕು ಕಚೇರಿಗೆ ಸರ್ಕಾರದ ವತಿಯಿಂದ ರೂ.25ಲಕ್ಷ ವೆಚ್ಚದಲ್ಲಿ ಅಗತ್ಯ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಸ್ತಾರವಾದ ಕೊಠಡಿಗಳಿದ್ದರೂ ಇಲ್ಲಿಯ ತನಕ ನೂತನ ತಾಲೂಕಿಗೆ ಒಳಪಡುವ ಕಡತಗಳನ್ನು ವೀರಾಜಪೇಟೆಯ ತಾಲೂಕು ಕಚೇರಿಯಿಂದ ತರುವಲ್ಲಿ ಇಲಾಖೆಯು ನಿರ್ಲಕ್ಷ್ಯ ವಹಿಸಿದೆ . ಇದರಿಂದ ಈ ಭಾಗದ ಜನರ ಪ್ರತಿ ಕಡತಗಳಿಗೂ ವೀರಾಜಪೇಟೆಯ ಕಚೇರಿಯನ್ನು ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಹಲವು ಹುದ್ದೆಗಳು ಇನ್ನೂ ಕೂಡ ಖಾಲಿ ಉಳಿದಿದ್ದು ನೇಮಕಾತಿ ಪ್ರಕ್ರಿಯೆ ಆರಂಭಿಸಿಲ್ಲ. ಪ್ರತಿ ಕಡತವನ್ನು ವೀರಾಜಪೇಟೆಗೆ ಕಳುಹಿಸುವ ಮೂಲಕ ಈ ಭಾಗದ ಜನರಿಗೆ ಹೊಸ ತಾಲೂಕು ರಚನೆಗೊಂಡರೂ ಯಾವುದೇ ರೀತಿಯ ಪ್ರಯೋಜನಗಳು ಕೈಗೆಟಕುತ್ತಿಲ್ಲ. ಕಚೇರಿಯಲ್ಲಿ ಬೆರಳೆಣಿಕೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಕುರ್ಚಿಗಳು ಇನ್ನೂ ಖಾಲಿ ಬಿದ್ದಿವೆ. ನೂತನ ತಾಲೂಕು ರಚನೆಯಿಂದ ಸಮಸ್ಯಗೆ ಪರಿಹಾರ ಲಭಿಸಲಿದೆ ಎಂಬ ಮಹದಾಸೆ ದೂರವಾಗಿದೆಕಂದಾಯ ಇಲಾಖೆಗೆ ಸಂಬAಧಿಸಿದ ಕೆಲಸಗಳು ಈ ಕಚೇರಿಯಲ್ಲಿ ಅಷ್ಟಾಗಿ ನಡೆಯುತ್ತಿಲ್ಲ. ನೂತನ ತಾಲೂಕು ಕೇಂದ್ರದಲ್ಲಿ ತಹಶೀಲ್ದಾರರು ವ್ಯವಸ್ಥೆಗಳಿಲ್ಲದೆ ಕೆಲಸ ನಿರ್ವಹಿಸಲು ಸಹಜವಾಗಿಯೇ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನೂತನ ಕಚೇರಿಗೆ ಆಗಮಿಸಲು ಯಾವುದೇ ಅಧಿಕಾರಿ ಮನಸ್ಸು ಮಾಡುತ್ತಿಲ್ಲ. ಭೌಗೋಳಿಕವಾಗಿ ವಿಸ್ತಾರವಾಗಿರುವ ಪೊನ್ನಂಪೇಟೆ ತಾಲೂಕಿಗೆ ಖಾಯಂ ತಹಶೀಲ್ದಾರರ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸರ್ಕಾರ ಖಾಯಂ ತಹಶೀಲ್ದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

 

ಹುಸಿಯಾದ ಜನರ ನಿರೀಕ್ಷೆ

ಪೊನ್ನಂಪೇಟೆ ನೂತನ ತಾಲೂಕು ರಚನೆಯಿಂದ ಗ್ರಾಮೀಣ ಭಾಗದ ಅದರಲ್ಲೂ ವಿಶೇಷವಾಗಿ ಪೂಕಳ, ಬಿರುನಾಣಿ, ನಿಟ್ಟೂರು, ಕಾರ್ಮಾಡು, ಕುಟ್ಟ ಸೇರಿದಂತೆ ಇನ್ನಿತರ ಭಾಗಗಳಿಂದ ರೆವಿನ್ಯೂ ಇಲಾಖೆಯ ಕೆಲಸಗಳಿಗೆ ವೀರಾಜಪೇಟೆಗೆ ತೆರಳುವುದನ್ನು ಕಡಿಮೆ ಮಾಡುವ ಸಲುವಾಗಿ ಪೊನ್ನಂಪೇಟೆ ತಾಲೂಕು ರಚನೆಗೊಂಡಿದೆ. ಆದರೆ ವರ್ಷ ೨ ಕಳೆದರೂ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ನಿರೀಕ್ಷಿತ ಮಟ್ಟದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬ, ಖಾಯಂ ತಹಶೀಲ್ದಾರರ ನೇಮಕಾತಿ ಇಲ್ಲದೆ ತಾಲೂಕು ಕಚೇರಿ ಇದ್ದರೂ ಇಲ್ಲದಂತಾಗಿದೆ.