ಕಲುಷಿತ ತಾಣವಾಗುತ್ತಿರುವ ಕುಶಾಲನಗರ
ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಅಭಿವೃದ್ಧಿ ಯೋಜನೆಗಳು ಮಾತ್ರ ಇನ್ನೂ ಕೆಳದರ್ಜೆಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಕಲುಷಿತ ತ್ಯಾಜ್ಯ ನೇರವಾಗಿ ಕಾವೇರಿ ನದಿ ಒಡಲು ಸೇರುತ್ತಿದ್ದು, ನದಿ ನೀರು ಕಲುಷಿತಗೊಳ್ಳುವುದರೊಂದಿಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತೆರಳುವ ಸಂದರ್ಭ ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಬೃಹತ್ ವಾಣಿಜ್ಯ ಸಂಕೀರ್ಣಗಳು, ಲಾಡ್ಜ್ಗಳು ಮತ್ತು ಬಡಾವಣೆಗಳಿಂದ ಹೊರ ಬರುವ ಲಕ್ಷಾಂತರ ಲೀಟರ್ ಕಲುಷಿತ ನೀರು ಚರಂಡಿ ಮೂಲಕ ಹರಿದು ನದಿಯ ಒಡಲು ಸೇರುತ್ತಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ನಿಟ್ಟಿನಲ್ಲಿ ವಾಣಿಜ್ಯ ಕಟ್ಟಡಗಳ ಮಾಲೀಕರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಪಂಚಾಯಿತಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ನೀರು ಹರಿಸಲು ನಿರ್ಮಾಣಗೊಂಡಿರುವ ಚರಂಡಿಗಳಲ್ಲಿ ಶೌಚ ತ್ಯಾಜ್ಯವು ಸೇರಿದಂತೆ ಕಲುಷಿತ ತ್ಯಾಜ್ಯಗಳನ್ನು ನಿತ್ಯ ಹರಿಸುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಕುಶಾಲನಗರ ಪಟ್ಟಣದ ಕೆ.ಬಿ ಕಾಲೇಜು ಬಳಿ, ದಂಡಿನಪೇಟೆ, ಮಾರುಕಟ್ಟೆ, ಸಾಯಿ ದೇವಾಲಯ, ಬೈಚನಹಳ್ಳಿ ಬಳಿ ನೇರವಾಗಿ ಕಲುಷಿತ ತ್ಯಾಜ್ಯ ಹರಿಸುತ್ತಿರುವುದು ಕಂಡು ಬಂದಿದ್ದರೂ, ಸಂಬಂಧಿಸಿದ ಪಂಚಾಯಿತಿ ಮಾತ್ರ ದಿವ್ಯ ಮೌನಕ್ಕೆ ಶರಣಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಲಿಖಿತ ದೂರುಗಳನ್ನು ನೀಡಿದರೂ, ಯಾವುದೇ ರೀತಿಯ ಸ್ಪಂದನ ಲಭಿಸುತ್ತಿಲ್ಲ ಎನ್ನುವುದು ಸಾರ್ವಜನಿಕ ಸಂಘ ಸಂಸ್ಥೆಗಳ ಆರೋಪವಾಗಿದೆ. ನದಿ, ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ಸರ್ಕಾರ ಹಾಗೂ ನ್ಯಾಯಾಲಯದ ಹಸಿರು ಪೀಠದಿಂದ ಕಟ್ಟುನಿಟ್ಟಿನ ಆದೇಶವಿದ್ದರೂ, ಈ ಬಗ್ಗೆ ಅಧಿಕಾರಿಗಳು ತಲೆಕೆಡೆಸಿಕೊಂಡಂತ್ತಿಲ್ಲ.
ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್ ‘ಶಕ್ತಿ’ಯೊಂದಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಪಂಚಾಯಿತಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೊಳಿಸಿ ಕ್ರಿಯಾಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.
ದಿನನಿತ್ಯ ಹೊರಸೂಸುವ ಅಸಹ್ಯ ದುರ್ವಾಸನೆಯಿಂದ ಇಡೀ ಪರಿಸರ ಮಲಿನಗೊಳ್ಳುತ್ತಿದ್ದು, ಜನರಿಗೆ ಓಡಾಡಲು ಕಷ್ಟಕರವಾಗಿದೆ ಎಂದು ಮೈಸೂರು - ಕೊಡಗು ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಗೂ ನದಿತಟದಲ್ಲಿರುವ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಕುಶಾಲನಗರ- ಕೊಪ್ಪ ಗಡಿಭಾಗದ ಅರಣ್ಯ ತಪಾಸಣಾ ಕೇಂದ್ರದ ಬಳಿ ಚರಂಡಿಯಲ್ಲಿ ಶೌಚ ತ್ಯಾಜ್ಯವನ್ನು ಹರಿಸುತ್ತಿದ್ದು, ಇಲ್ಲಿನ ತಪಾಸಣಾ ಕೇಂದ್ರದ ಸಿಬ್ಬಂದಿಗಳು ದಿನದ ೨೪ ಗಂಟೆ ಮೂಗು ಮುಚ್ಚಿ ಕೆಲಸ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ವಾಹನಗಳಲ್ಲಿ ತೆರಳುವ ಪ್ರಯಾಣಿಕರು ಸಹಿತ ಸ್ವಲ್ಪ ಕಾಲ ಅಸಹ್ಯ ವಾಸನೆಯನ್ನು ತಡೆಯಲಾರದೆ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಚರಂಡಿ ಮೇಲೆ ಕೋವಿಡ್ ತಪಾಸಣಾ ಕೇಂದ್ರದ ಕಟ್ಟಡವೊಂದು ನಿರ್ಮಾಣಗೊಂಡಿದೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ನದಿಗೆ ಕಲುಷಿತ ತ್ಯಾಜ್ಯ ನೇರವಾಗಿ ಸೇರುತ್ತಿರುವ ಬಗ್ಗೆ ಸ್ಥಳೀಯ ಆಡಳಿತ, ಜಿಲ್ಲಾಡಳಿತದ ಗಮನಕ್ಕೆ ಹಲವು ಬಾರಿ ಲಿಖಿತ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಶಾಶ್ವತ ಯೋಜನೆಗಳನ್ನು ರೂಪಿಸಿ ಕಲುಷಿತ ತ್ಯಾಜ್ಯ ನದಿಗೆ ಸೇರದಂತೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಮಳೆ ನೀರು ಹರಿಸಲು ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಚರಂಡಿಯಲ್ಲಿ ವಾಣಿಜ್ಯ ಕಟ್ಟಡಗಳ ತ್ಯಾಜ್ಯಗಳನ್ನು ಹರಿಸಲು ನಿರ್ಬಂಧವಿದ್ದರೂ, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಪುರಸಭೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಕುಶಾಲನಗರ ಪುರಸಭೆ ಆಯುಕ್ತರಾಗಿರುವ ಶಿವಪ್ಪ ನಾಯ್ಕ್, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.