ಕರಗದೆ ನಿಂತಿರುವ ಮಡಿಕೇರಿಯ ಕಸದ ಗುಡ್ಡ
ಶುದ್ಧ ಗಾಳಿಯಲ್ಲಿ ಅಗ್ರಸ್ಥಾನದಲ್ಲಿರುವ ಮಡಿಕೇರಿಯ ವಾತಾವರಣಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ‘ಕಸದ ಗುಡ್ಡ' ಕರಗುವ ನಿರೀಕ್ಷೆ ಕಮರಿ ಹೋಗುತ್ತಿದ್ದು, ಕಸ ವಿಲೇವಾರಿ ಪ್ರಕ್ರಿಯೆಗೆ ಚಾಲನೆ ನೀಡಿ ಒಂದು ತಿಂಗಳು ಸಮೀಪಿಸಿದರೂ ಇದುವರೆಗೂ ಒಂದಿAಚು ಕಸವೂ ಅಲ್ಲಿಂದ ಕದಲದೆ ಯೋಜನೆಗೆ ಮಂಕು ಕವಿದಿದೆ. ಕಳೆದ ಹತ್ತಾರು ವರ್ಷಗಳಿಂದ ಮಡಿಕೇರಿ ನಗರದ ಕಸ ವಿಲೇವಾರಿಯಾಗುತ್ತಿರುವ ‘ಸ್ಟೋನ್ ಹಿಲ್' ಕಸದ ಗುಡ್ಡವಾಗಿ ಪರಿವರ್ತನೆಯಾಗಿ ಸೌಂದರ್ಯಯುತ ಪರಿಸರಕ್ಕೆ ಹೆಸರುವಾಸಿಯಾಗಿರುವ ಮಂಜಿನ ನಗರಿಯ ಕಳೆಯನ್ನು ಕೆಡಿಸುತ್ತಿದೆ. ಅಲ್ಲದೆ ರೋಗ-ರುಜಿನಗಳು ಹರಡುವ ತಾಣವಾಗಿಯೂ ಮಾರ್ಪಡುತ್ತಿದೆ.
‘ಸ್ಟೋನ್ ಹಿಲ್'ನಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಮೊದಲಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ನಗರಸಭೆ ಹತ್ತಾರು ಬಾರಿ ಕಸ ವಿಲೇವಾರಿ ಸಂಬAಧ ಟೆಂಡರ್ ನಡೆಸಿದರೂ ಫಲಪ್ರದವಾಗಿರಲಿಲ್ಲ. ಕೊನೆಗೆ ಮಹಾರಾಷ್ಟçದ ಉತ್ಕರ್ಷ್ ಬಾಳಸಾಹೇಬ್ ಪಾಟೀಲ್ ಎಂಬವರು ಮುಂದೆ ಬಂದು ವಿಲೇವಾರಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಆದರೆ, ಇದುವರೆಗೂ ವಿಲೇವಾರಿ ಪ್ರಕ್ರಿಯೆ ಆರಂಭವಾಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಏಪ್ರಿಲ್ 11 ರಂದು ಸಂಸದ ಯದುವೀರ್ ಒಡೆಯರ್, ಶಾಸಕ ಡಾ. ಮಂತರ್ ಗೌಡ ಅವರುಗಳು ನಗರಸಭಾ ಸದಸ್ಯರು, ಸಾರ್ವಜನಿಕರ ಸಮ್ಮುಖದಲ್ಲಿ ವಿಲೇವಾರಿ ಕಾರ್ಯಕ್ಕೆ ಚಾಲನೆ ನೀಡಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ದರು. ಆದರೆ, ಇದುವರೆಗೂ ಕಸ ವಿಲೇವಾರಿಗೊಳ್ಳದೆ ಹಾಗೆಯೇ ಉಳಿದಿದ್ದು, ಮುಂಗಾರು ಕಾಲಿಟ್ಟರೆ ಕಸ ವಿಂಗಡಣೆ, ವಿಲೇವಾರಿ ಕಷ್ಟ ಸಾಧ್ಯವಾಗುತ್ತದೆ.
ರೂ. 5 ಕೋಟಿ ವೆಚ್ಚದ ಯೋಜನೆ
ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ನಗರದ ಸುಬ್ರಮಣ್ಯ ನಗರದ ಸ್ಟೋನ್ ಹಿಲ್‌ನಲ್ಲಿ ಶೇಖರಣೆಗೊಂಡಿದ್ದ ಪಾರಂಪರಿಕ ಕಸಗಳ ವಿಲೇವಾರಿಗೆ ರೂ. ೫.೪೪ ಕೋಟಿ ವೆಚ್ಚ ತಗುಲಲಿದ್ದು, ಪೂರ್ಣಗೊಳಿಸಲು ೯ ತಿಂಗಳ ನಿರ್ದಿಷ್ಟ ಅವಧಿಯನ್ನು ನೀಡಲಾಗಿದೆ. ಕೇಂದ್ರ ಸರಕಾರ ಶೇ ೫೦, ರಾಜ್ಯ ಶೇ ೩೩, ನಗರಸಭೆ ಶೇ ೧೭ ರಷ್ಟು ಅನುದಾನವನ್ನು ಇದಕ್ಕಾಗಿ ಭರಿಸಲಿದೆ. ಸಂಗ್ರಹಗೊAಡಿರುವ 76,636 ಟನ್‌ಗೂ ಹೆಚ್ಚು ಪ್ರಮಾಣದ ಕಸ ಈ ಮೂಲಕ ವಿಲೇವಾರಿಗೊಳ್ಳಬೇಕಾಗಿದೆ. ಈ ಬಗ್ಗೆ ವಿಚಾರಿಸಿದರೆ ‘ಮುಂದಿನ ಒಂದು ವಾರದೊಳಗೆ ಆರಂಭವಾಗುತ್ತದೆ' ಎಂಬ ಉತ್ತರ ದೊರೆಯುತ್ತದೆ. ಸ್ಥಳಕ್ಕೆ ತೆರಳಿ ನೋಡಿದ ಸಂದರ್ಭ ಯಾವುದೇ ಯಂತ್ರೋಪಕರಣವೂ ಇನ್ನೂ ಬಂದಿಲ್ಲದಿರುವುದು ಗೋಚರಿಸುತ್ತದೆ. ಜೊತೆಗೆ ಯಂತ್ರವನ್ನಿಡಲು ಬೇಕಾದ ಸ್ಥಳವನ್ನು ಈಗ ಸಮತಟ್ಟು ಮಾಡಲಾಗುತ್ತಿರುವುದು ಕಾಣಬಹುದಾಗಿದೆ.
ಕಸ ಏನಾಗುತ್ತದೆ?
ಕಸವನ್ನು ವಿಂಗಡಿಸಿ ವಿಲೇವಾರಿ ಮಾಡುವ ಬಗ್ಗೆ ತೀವ್ರ ಕೌತುಕ ಜನವಲಯದಲ್ಲಿದೆ. 76,636 ಟನ್ ಕಸ ವಿಲೇವಾರಿ . ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ಬೃಹತ್ ‘ಸ್ಪಿನಿಂಗ್ ಮಿಷಿನ್’ ಆಂದ್ರಪ್ರದೇಶದಿAದ ಮಡಿಕೇರಿಗೆ ಬರಬೇಕಾಗಿದೆ. ಈ ಯಂತ್ರಕ್ಕೆ ಕಸವನ್ನು ತುಂಬಲಾಗುತ್ತದೆ. ಅನಂತರ ಯಂತ್ರವೇ ಕಸವನ್ನು ವಿಂಗಡಿಸಿ ಪ್ಲಾಸ್ಟಿಕ್ ವಸ್ತುಗಳನ್ನು ಬೇರ್ಪಡಿಸಿ ಹಸಿಕಸದ ಮೂಲಕ ಗೊಬ್ಬರವನ್ನು ಹೊರಹಾಕುತ್ತದೆ. ಸಂಗ್ರಹಗೊಳ್ಳುವ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಗುಜರಿಗೆ ಹಾಕಲಾಗುತ್ತದೆ. ಗೊಬ್ಬರವನ್ನು ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಗುತ್ತಿಗೆ ಪಡೆದ ಸಂಸ್ಥೆಯ ಮೇಲ್ವಿಚಾರಕ ಪ್ರದೀಪ್ ಮಾಹಿತಿ ನೀಡಿದರು.
ಮಳೆ ಬಂದರೆ ಅಡ್ಡಿ
ಕಸ ವಿಲೇವಾರಿಗೆ ಕನಿಷ್ಟ 9 ತಿಂಗಳ ಕಾಲ ಹಿಡಿಯುತ್ತದೆ. ಇದಕ್ಕೆ ಮೊದಲು ಕಸ ಬಿಸಿಲಿನಲ್ಲಿ ಒಣಗಬೇಕು. ಇದರಿಂದ ವಿಂಗಡಣೆಗೆ ಸುಲಭವಾಗುತ್ತದೆ ಎಂದು ಸಂಸ್ಥೆಯವರು ಹೇಳುತ್ತಾರೆ. ಮಳೆ ಬಂದರೆ ವಿಲೇವಾರಿ ಪ್ರಕ್ರಿಯೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಒಣಗಿರುವ ಕಸದ ಮೇಲೆ ಮಳೆ ಬಿದ್ದು ತೇವಾಂಶದಿAದ ಕೂಡಿದರೆ ಒಣಗಲು ಮತ್ತಷ್ಟು ಕಾಲ ಹಿಡಿಯುವುದರ ಪರಿಣಾಮ ವಿಲೇವಾರಿ ವಿಳಂಬವಾಗುತ್ತದೆ ಎಂಬ ಕಳವಳ ವ್ಯಕ್ತವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಆದಷ್ಟು ಪ್ರಮಾಣದ ಕಸ ವಿಲೇವಾರಿ ನಡೆಯಬೇಕಾಗಿತ್ತು. ವಿಲೇವಾರಿಗೆ ಚಾಲನೆ ನೀಡುವ ಸಂದರ್ಭವೂ ಶಾಸಕ, ಸಂಸದರು ಹೆಚ್ಚಿನ ಸಿಬ್ಬಂದಿ ಬಳಸಿಕೊಂಡು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಪೌರಾಯುಕ್ತ ರಮೇಶ್ ಕೂಡ ಸಂಸ್ಥೆಯವರ ಗಮನ ಸೆಳೆದು, ಶೀಘ್ರ ವಿಲೇವಾರಿಗೆ ಮನವಿ ಮಾಡಿದ್ದರು. ಆದರೆ, ವಿಳಂಬದಿAದ ಕಸದ ಗುಡ್ಡ ಕರಗುವ ನಿರೀಕ್ಷೆ ದೂರವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿಲೇವಾರಿ ಕಾರ್ಯಕ್ಕೆ ವೇಗ ನೀಡ ಬೇಕಾಗಿದೆ.