‘ಟೂರಿಸಂ ಹಬ್’ ಕುಶಾಲನಗರಕ್ಕೆ ಹಾರಂಗಿ ಆನೆ ಶಿಬಿರ ಗರಿ
ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಸ್ಥಳ ಸೇರ್ಪಡೆ - ಪ್ರವಾಸೋದ್ಯಮಿಗಳಲ್ಲಿ ಭಾರೀ ನಿರೀಕ್ಷೆ
ಹಾರಂಗಿಯಲ್ಲಿ ಆರಂಭವಾಗಿರುವ ನೂತನ ಆನೆ ಶಿಬಿರ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಕೊಡಗಿನ ಪ್ರಮುಖ ‘ಟೂರಿಸಂ ಹಬ್’ ಆಗಿರುವ ಕುಶಾಲನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಮತ್ತಷ್ಟು ಗರಿಗೆದರುವ ಆಶಾಭಾವನೆ ಕಂಡುಬರುತ್ತಿದೆ. ಇದು ಪ್ರವಾಸೋದ್ಯಮಿಗಳ ಖುಷಿಗೂ ಕಾರಣವಾಗಿದೆ.
‘ಪ್ರವಾಸೋದ್ಯಮದ ಮರುಚಿಂತನೆ - ಬಿಕ್ಕಟ್ಟಿನಿಂದ ಪರಿವರ್ತನೆ ಕಡೆಗೆ’ ಇದು ಈ ವರ್ಷದ ಅಂತರರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್.
ಇದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆ ಸ್ಥಳೀಯವಾಗಿ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲು ಆದ್ಯತೆ ನೀಡಿದೆ. ಈ ಬಾರಿಯ ವನ್ಯಜೀವಿ ಸಪ್ತಾಹದ ಕೊನೆಯ ದಿನ ಕೊಡಗಿನಲ್ಲಿ ಹೊಸ ಆನೆ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವ ಮೂಲಕ ಅರಣ್ಯ ಇಲಾಖೆಯೂ ‘ಸ್ಥಳೀಯ ಪ್ರವಾಸೋದ್ಯಮ’ಕ್ಕೆ ತನ್ನ ಕೊಡುಗೆ ನೀಡಿದೆ.
ಒಂದು ಆನೆ ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಜ್ಞರ ಸಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಹಾರಂಗಿ ಹಿನ್ನೀರಿನ ಅತ್ತೂರು ಅರಣ್ಯ ಪ್ರದೇಶದಲ್ಲಿ ಹೊಸ ಸಾಕಾನೆ ಶಿಬಿರವನ್ನು ಅರಣ್ಯ ಇಲಾಖೆ ಆರಂಭಿಸಿದೆ. ಆದರೆ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ದೊಡ್ಡ ಕೊಡುಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೊಸ ಆನೆ ಶಿಬಿರದಿಂದ ದುಬಾರೆ ಮೇಲಿನ ಒತ್ತಡ ಬಹುತೇಕ ಕಡಿಮೆಯಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಮತ್ತೊಂದು ಕಡೆಯಲ್ಲಿ ಈ ಆನೆ ಶಿಬಿರದಿಂದಾಗಿಯೇ ಹಾರಂಗಿಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವೀಕ್ಷಣೆಗೆ ಸೀಮಿತ ಸ್ಥಳಗಳು ಮಾತ್ರ ಇದ್ದ ಕಾರಣ ನಿರಾಸೆಯಿಂದ ಮರಳುತ್ತಿದ್ದರು. ಇನ್ನು ಈ ಕೊರತೆ ದೂರವಾಗಲಿದೆ.
ಹಾರಂಗಿ ಜಲಾಶಯದ ಬಳಿಯಲ್ಲೇ ಹೊಸ ಸಾಕಾನೆ ಶಿಬಿರ ಇರುವುದರಿಂದ ಜಲಾಶಯ ವೀಕ್ಷಣೆಗೆ ಬರುವವರಿಗೆ ಈ ಭಾಗದಲ್ಲೇ ಒಂದು ದಿನ ಕಳೆಯುವ ಅವಕಾಶ ಇದೆ. ಜಲಾಶಯ ಆವರಣದ ವಿಶಾಲ ಉದ್ಯಾನವನದಲ್ಲಿ ಅಡ್ಡಾಡಿ ಪಕ್ಕದಲ್ಲೇ ಇರುವ ಸಾಕಾನೆ ಶಿಬಿರಕ್ಕೆ ತೆರಳಬಹುದು. ಅಲ್ಲಿ ಒಂದಿಷ್ಟು ಹೊತ್ತು ಬೋಟಿಂಗ್ ಮಾಡಿ, ಆನೆಗಳನ್ನು ವೀಕ್ಷಿಸಿ, ಸೂರ್ಯಾಸ್ತಮಾನವನ್ನು ಕಣ್ತುಂಬಿಸಿಕೊಳ್ಳುವ ಸಮಯಕ್ಕೆ ಹಾರಂಗಿಯ ಸಂಗೀತ ಕಾರಂಜಿ ಆರಂಭವಾಗಿರುತ್ತದೆ.
ದುಬಾರೆ ಸಾಕಾನೆ ಶಿಬಿರಕ್ಕೆ ಹೋಲಿಸಿದರೆ ಪ್ರವಾಸೋದ್ಯಮದ ವಿವಿಧ ಚಟುವಟಿಕೆಗಳಿಗೆ ಹೊಸ ಆನೆ ಶಿಬಿರದಲ್ಲಿ ಸಾಕಷ್ಟು ಅವಕಾಶಗಳಿದೆ. ಅತ್ತೂರು ಅರಣ್ಯ ಪ್ರದೇಶದ 40 ಎಕರೆ ಜಾಗದಲ್ಲಿ ವೃಕ್ಷೋದ್ಯಾನವಿದ್ದು , ಈ ಪೈಕಿ 15 ಎಕರೆ ಜಾಗವನ್ನು ಆನೆ ಶಿಬಿರಕ್ಕೆ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಸದ್ಯ ಇಲ್ಲಿ ಆನೆ ಶಿಬಿರ ಜೊತೆ ಪೆಡಲ್ ಬೋಟ್, ಸೂರ್ಯಾಸ್ತಮಾನ ವೀಕ್ಷಣೆ ವ್ಯವಸ್ಥೆ ಇದೆ. ಭವಿಷ್ಯದಲ್ಲಿ ಹಿನ್ನೀರಿನಲ್ಲಿ ಬೋಟಿಂಗ್, ಚಿಟ್ಟೆ ಮತ್ತು ಪಕ್ಷಿ ವೀಕ್ಷಣೆಗೂ ಅವಕಾಶ ಕಲ್ಪಿಸಲು ಇಲಾಖೆ ಚಿಂತನೆ ನಡೆಸಿದೆ.
ಪ್ರಾಣಿ ದಯಾ ಸಂಘದವರ ಆಕ್ಷೇಪದ ಹಿನ್ನೆಲೆಯಲ್ಲಿ ಆನೆ ಸಫಾರಿ ನಡೆಸದಂತೆ ಸುಪ್ರೀಂ ಕೋರ್ಟ್ ಆದೇಶ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಜೊತೆ ಮಾತನಾಡಿ ಆನೆ ಸಫಾರಿಗೆ ಅವಕಾಶ ಕೊಡುವಂತೆ ಮನವಿ ಮಾಡಲಾಗುವುದು. ಇದರಿಂದ ಪ್ರವಾಸಿಗರನ್ನು ಸೆಳೆಯಬಹುದು. ಅರಣ್ಯ ಇಲಾಖೆಗೂ ಆದಾಯ ಬರುತ್ತದೆ. -ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿ ಶಾಸಕ |
ಮುಂದಿನ ದಿನಗಳಲ್ಲಿ ಇಲ್ಲಿನ ವೃಕ್ಷೋದ್ಯಾನದಲ್ಲಿ ಮರಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಚಿಟ್ಟೆಗಳು, ಪಕ್ಷಿಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ. ಬೋಟಿಂಗ್ ವ್ಯವಸ್ಥೆ ಮಾಡಲು ಕೂಡ ಚಿಂತನೆ ನಡೆಯುತ್ತಿದೆ. -ಬಿ.ಎನ್. ನಿರಂಜನ ಮೂರ್ತಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು |