ಭಾರತಕ್ಕೆ ಬರುತ್ತಿರುವ ವಿದೇಶಿ ಕಾಫಿ ತಳಿ
ತಳಿಗಳ ವೈಜ್ಞಾನಿಕ ವಿಶ್ವಾಸಾರ್ಹತೆ ಅಲಭ್ಯ

ಭಾರತದ ಕಾಫಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಹೊಂದಿದೆ. ಅದರಲ್ಲೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲ್ಪಡುವ ಕಾಫಿಯ ಸ್ವಾದಿಷ್ಟ, ಪರಿಮಳದಿಂದಾಗಿ ಕೊಡಗಿನ ಕಾಫಿಯೂ ಪ್ರಸಿದ್ಧಿ ಪಡೆದಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ಕಾಫಿ ಉತ್ಪಾದನೆಯಲ್ಲಿ ಕೊಡಗು ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಇಡೀ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬೂ ಕೂಡ ಕಾಫಿ ಎಂಬದರಲ್ಲಿ ಎರಡು ಮಾತಿಲ್ಲ ಎಂಬ ಅರಿವು ಎಲ್ಲರಿಗೂ ಇದೆ. ಪ್ರಸ್ತುತದ ದಿನಗಳಲ್ಲಿ ಹತ್ತು - ಹಲವಾರು ಸಮಸ್ಯೆಗಳು ಪ್ರಾಕೃತಿಕ ವಿಕೋಪ, ಅತಂತ್ರತೆಗಳ ನಡುವೆಯೂ ಕಾಫಿ ಬೆಳೆಗೆ ಭಾರತದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಇದೀಗ ದೇಶದಲ್ಲಿ ಉತ್ಪಾದಿಸಲ್ಪಡುವ ಕಾಫಿ ತಳಿಗಳ ಜೊತೆಗೆ ವಿದೇಶಿ ತಳಿಯ ಕಾಫಿಯನ್ನು ಬೆಳೆಯುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ. ಯಾವುದೇ ವೈಜ್ಞಾನಿಕವಾದ ದೃಢತೆ ಇಲ್ಲದೆ ವಿದೇಶಿ ತಳಿಯ ಕಾಫಿಯನ್ನು ಭಾರತದಲ್ಲೂ ಪರಿಚಯಿಸುವ ವಿಚಾರದ ಬಗ್ಗೆ ಕೆಲವಾರು ಗೊಂದಲಗಳು ಸೃಷ್ಟಿಯಾಗಿದೆ. ವಿಶ್ವಾಸ ರಹಿತವಾಗಿ ಈ ರೀತಿಯಲ್ಲಿ ಏಕಾಏಕಿ ವಿದೇಶಿ ತಳಿಯನ್ನು ಪರಿಚಯಿಸುವುದು ಮುಂದಿನ ದಿನಗಳಲ್ಲಿ ದೇಶದ ಕಾಫಿ ಉದ್ಯಮಕ್ಕೇ ಭಾರೀ ಹಾನಿಕರವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಏನಿದು ವಿದೇಶಿ ತಳಿ?
ವಿದೇಶಿ ಕಾಫಿ ತಳಿಗಳನ್ನು ಖಾಸಗಿಯಾಗಿ ಪರಿಚಯಿಸುವ - ಬೆಳೆಯುವ ಪ್ರಯತ್ನ ನಡೆದಿರುವುದು ಇದೀಗ ಕಾಫಿ ಮಂಡಳಿಯ ಗಮನಕ್ಕೂ ಬಂದಿದೆ. ಕೆಲವು ಖಾಸಗಿ ವ್ಯಕ್ತಿಗಳು/ ನರ್ಸರಿಗಳು ವಿಯೆಟ್ನಾಂ ಮೂಲದ TSS, TR9, TR11 ಹಾಗೂ ಬ್ರೆಜಿಲ್ ಮೂಲದ ಕಾಫಿ ತಳಿಗಳನ್ನು ಮಾರಾಟ ಮಾಡುತ್ತಿರುವ ನಿದರ್ಶನಗಳು ಪ್ರಸ್ತುತ ಕಂಡು ಬಂದಿವೆ. ಇವುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕರ್ಷಕ ರೀತಿಯಲ್ಲಿ ಜಾಹೀರಾತುಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಸ್ವತಃ ಕಾಫಿ ಮಂಡಳಿಯ ಮೂಲಕವೇ ಎಚ್ಚರಿಕೆ ನೀಡಲಾಗಿದೆ.
ಈ ತಳಿಗಳ ವೈಜ್ಞಾನಿಕ ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಯ ಬಗೆಗೆ ಕಾಫಿ ಮಂಡಳಿಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಸೂಕ್ತ ಆಮದು ಅನುಮತಿ ಮತ್ತು ಸಸ್ಯ ಕ್ವಾರಂಟೈನ್ ನಿಯಮಗಳನ್ನು ಪಾಲಿಸದೆ ಭಾರತಕ್ಕೆ ಯಾವುದೇ ವಿದೇಶಿ ಸಸ್ಯ ನೆಡುವ ಸಾಮಗ್ರಿಯನ್ನು ಪರಿಚಯಿಸುವುದರಿಂದ ಭಾರತದಲ್ಲಿ ಇಲ್ಲದಿರುವ ಕೀಟಗಳು, ರೋಗಗಳು ಹಾಗೂ ಹಾನಿಕಾರಕ ಕಳೆಗಳು ದೇಶಕ್ಕೆ ಪ್ರವೇಶಿಸುವ ಸಾಧ್ಯತೆಯ ಅಪಾಯವನ್ನು ಇದೀಗ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಮೂಲಕ ವ್ಯಕ್ತಪಡಿಸಲಾಗಿದೆ. ಈ ಕುರಿತಾಗಿ ಕಾಫಿ ಮಂಡಳಿಯ ಸಂಶೋಧನಾ ನಿರ್ದೇಶಕರಾದ ಡಾ. ಎಂ. ಸೆಂಥಿಲ್‌ಕುಮಾರ್ ಅವರ ಹೇಳಿಕೆಯೊಂದು ಇದೀಗ ಪ್ರಾಮುಖ್ಯತೆ ಪಡೆದಿದೆ.
ವಾಸ್ತವವಾಗಿ, ಭಾರತ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಪ್ರಕಾರವೇ ಯಾವುದೇ ಸಸ್ಯ ನೆಡುವ ಸಾಮಗ್ರಿಯನ್ನು ಆಮದು ಮಾಡಿಕೊಳ್ಳುವುದು ಕಡ್ಡಾಯ ವಾಗಿದೆ. ಇದರಿಂದ ಅಗತ್ಯ ಕ್ವಾರಂಟೈನ್ ನಿಯಮಗಳನ್ನು ಪಾಲಿಸಿ, ತೋಟಗಳ ಪರಿಸರ ವ್ಯವಸ್ಥೆಗೆ ಯಾವುದೇ ಕೀಟ, ರೋಗ ಅಥವಾ ಹಾನಿಕಾರಕ ಕಳೆಗಳು ಪ್ರವೇಶಿಸುವುದನ್ನು ತಡೆಯಬಹುದು.
ಇಲ್ಲಿಯವರೆಗೆ ಯಾವುದೇ ಕಾಫಿ ಉತ್ಪಾದಕ ರಾಷ್ಟçದಿಂದ ವಿದೇಶಿ ಕಾಫಿ ತಳಿಗಳನ್ನು ಆಮದು ಮಾಡಲು ಕಾಫಿ ಮಂಡಳಿಯು ಯಾವುದೇ ಖಾಸಗಿ ನರ್ಸರಿ ಅಥವಾ ಖಾಸಗಿ ತೋಟಗಳಿಗೆ ಅಧಿಕೃತ ಮಾನ್ಯತೆ ಅಥವಾ ಅನುಮೋದನೆ ನೀಡಿಲ್ಲ. ಆದ್ದರಿಂದ, ಅನಧಿಕೃತ ಮೂಲಗಳಿಂದ ಕಾಫಿ ಸಸಿಗಳನ್ನು ಖರೀದಿಸುವುದು ದೇಶದ ಸಂಪೂರ್ಣ ಕಾಫಿ ಉದ್ಯಮಕ್ಕೆ ಹಾನಿಕಾರಕವಾಗುವ ಸಾಧ್ಯತೆಯಿದೆ. ಅಲ್ಲದೆ, ಇಂತಹ ತಳಿಗಳ ಭಾರತೀಯ ಪರಿಸ್ಥಿತಿಗಳಲ್ಲಿನ ಕಾರ್ಯಕ್ಷಮತೆಯನ್ನು ಕಾಫಿ ಮಂಡಳಿಯು ಪರಿಶೀಲಿಸಿ ದೃಢೀಕರಿಸಿಲ್ಲ.
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯು ಕಾಫಿ ತಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವ್ಯಾಪಕ ಸಂಶೋಧನೆ ನಡೆಸುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಬಹು-ಸ್ಥಳೀಯ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಯಾವುದೇ ಹೊಸ ತಳಿಯನ್ನು ರೈತರಿಗೆ ಶಿಫಾರಸು ಮಾಡುತ್ತದೆ. ಇದರ ಉದ್ದೇಶ ದೇಶದಲ್ಲಿ ಸುಸ್ಥಿರ ಹಾಗೂ ಆರ್ಥಿಕವಾಗಿ ಲಾಭದಾಯಕ ಕಾಫಿ ಕೃಷಿಯನ್ನು ಉತ್ತೇಜಿಸುವುದು ಮತ್ತು ರೈತರು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟ ತಳಿಗಳು/ಕ್ಲೋನ್ಗಳು/ಹೈಬ್ರಿಡ್ಗಳನ್ನು ಮಾತ್ರ ಬೆಳೆಸುವಂತೆ ಮಾಡುವುದು.
ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸಂಘಗಳು, ಬೆಳೆಗಾರರು ಹಾಗೂ ಸಂಬಂಧಿತ ಹಿತಾಸಕ್ತಿದಾರರು ಇಂತಹ ಆಕರ್ಷಕ ಜಾಹೀರಾತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಸಹ ರೈತರು/ಬೆಳೆಗಾರರಿಗೆ ಇಂತಹ ಮಾಹಿತಿಯ ಸತ್ಯಾಸತ್ಯತೆಯನ್ನು ಕಾಫಿ ಮಂಡಳಿಯ ವಿಜ್ಞಾನಿಗಳೊಂದಿಗೆ ಪರಿಶೀಲಿಸಿಕೊಂಡ ನಂತರವೇ ಯಾವುದೇ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ. ಇದರಿಂದ ದೇಶದ ಕಾಫಿ ಉದ್ಯಮದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಸೆಂಥಿಲ್ ಕುಮಾರ್ ಉಲ್ಲೇಖಿಸಿದ್ದಾರೆ.
ಶಿವಮೊಗ್ಗದಿಂದ ಪೂರೈಕೆ
‘ಶಕ್ತಿ’ಗೆ ತಿಳಿದು ಬಂದಂತೆ ಶಿವಮೊಗ್ಗದ ನರ್ಸರಿಯೊಂದರಿಂದ ಈ ರೀತಿಯ ತಳಿಗಳು ಪೂರೈಕೆಯಾಗುತ್ತಿವೆ. ಕೊಡಗು ಜಿಲ್ಲೆಯ ಹಲವರೂ ಶಿವಮೊಗ್ಗಕ್ಕೆ ತೆರಳಿ ಗಿಡಗಳನ್ನು ತಂದಿದ್ದಾರೆ. ಗಿಡವೊಂದಕ್ಕೆ ರೂ. ೧೩೦ ಇದರೊಂದಿಗೆ ಇತರೆ ವೆಚ್ಚ ಸೇರಿ ರೂ. ೨೦೦ ರಷ್ಟು ವೆಚ್ಚವೂ ತಗುಲಿದಂತಾಗಿದೆ.
ನಿಯಮ ಉಲ್ಲಂಘನೆ
ವಿದೇಶದಿAದ ಯಾವುದೇ ಗಿಡಗಳನ್ನು ಈ ರೀತಿಯ ತಳಿಗಳನ್ನು ಭಾರತಕ್ಕೆ ತರಲು ಪರಿಚಯಿಸಲು ಹಲವಾರು ನಿಬಂಧನೆಗಳಿವೆ. ಆದರೆ ಇಲ್ಲಿ ನರ್ಸರಿ ಮಾಡಿರುವವರು ಯಾವುದೇ ನಿಯಮ ಪಾಲಿಸಿಲ್ಲವೆನ್ನಲಾಗಿದೆ. ಗಿಡಗಳನ್ನು ತಂದಾಗ 40 ರಿಂದ 90 ದಿನ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಜತೆಗೆ ಇದರ ವೈಜ್ಞಾನಿಕ ಪರಿಶೀಲನೆಯೊಂದಿಗೆ ಇದು ದೇಶಕ್ಕೆ ಸೂಕ್ತವಾಗುವುದೇ ಎಂದೂ ದೃಢಪಡಬೇಕು. ಆದರೆ ಇದ್ಯಾವದೂ ಇಲ್ಲಿ ಪಾಲನೆಯಾಗದಿರುವುದು ಗಂಭೀರ ವಿಚಾರವಾಗಿದೆ.
ಸಂಬಂಧಿಸಿದವರಿಗೆ ನೋಟೀಸ್
ವಿದೇಶ ತಳಿಯ ಗಿಡ ಮಾರಾಟಕ್ಕೆ ಸಂಬಂಧಿಸಿದಂತೆ ಕಾಫಿ ಮಂಡಳಿಯ ಮೂಲಕ ನೋಟೀಸ್ ನೀಡಿ ವಿವರಣೆ ಕೇಳಿರುವದಾಗಿಯೂ ‘ಶಕ್ತಿ’ಗೆ ತಿಳಿದು ಬಂದಿದೆ. ಎಲ್ಲಿಂದ ತರಲಾಗಿದೆ, ಯಾವ ರೀತಿಯಲ್ಲಿ ಭಾರತಕ್ಕೆ ಬಂದಿದೆ ಎಂಬ ವಿವರ ಕೇಳಲಾಗಿದ್ದು, ಇದರ ಪರಿಶೀಲನೆಗೂ ಮುಂದಾಗಲಾಗಿದೆ.
ಚರ್ಚೆಗೆ ಬರಲು ಕಾರಣಗಳು
ವಿದೇಶಿ ತಳಿಯ ಗಿಡಗಳನ್ನು ಬೆಳೆಗಾರರು ಹೊಸ ಪ್ರಯತ್ನ, ಉತ್ತಮ ಫಸಲಿನ ಆಸೆಯಿಂದ ಬೆಳೆಯಲು ಮುಂದಾಗುವುದು ಸಹಜ. ಆದರೆ ಇಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಕೆಲವಾರು ಅಂಶಗಳು ಇವೆ.
ವಿದೇಶದಲ್ಲಿ ಈ ತಳಿಯ ನೈಜತೆ ಏನು ಅಲ್ಲಿನ ವಾತಾವರಣಕ್ಕೂ ಭಾರತದ ವಾತಾವರಣ, ಮಣ್ಣಿಗೂ ಹೊಂದಾಣಿಕೆಯಾಗುವುದೇ, ಅಲ್ಲಿ ಈ ತಳಿಯಲ್ಲಿ ರೋಗಬಾಧೆ - ಕೀಟಬಾಧೆಗಳಿವೆಯೇ ಇದು ದೇಶಕ್ಕೆ ಭವಿಷ್ಯದಲ್ಲಿ ಮಾರಕವಾಗಲಿದೆಯೇ ಎಂಬಿತ್ಯಾದಿ ಚರ್ಚೆಗಳು ಇದೀಗ ಕಾಫಿ ಬೆಳೆಗಾರರಲ್ಲಿ ಆರಂಭವಾಗಿವೆ.
‘ಶಕ್ತಿ’ಗೆ ತಿಳಿದು ಬಂದಂತೆ ಸಕಲೇಶಪುರ ಮೂಲದ ಪ್ರಮುಖ ಬೆಳೆಗಾರರೊಬ್ಬರೇ ಈ ಬಗ್ಗೆ ಕಾಫಿ ಮಂಡಳಿಗೆ ಪತ್ರ ಬರೆದು ಗಮನ ಸೆಳೆದ ಆಧಾರದಂತೆ ಇದೀಗ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಪರಿಶೀಲನೆಗೆ ಮುಂದಾಗಿದೆ.