ಸಾಮಾಜಿಕ ಬಹಿಷ್ಕಾರ ಈ ಪ್ರದೇಶದಲ್ಲಿ ಸಾಮಾನ್ಯ..!

ಬಹಿಷ್ಕಾರ ಹಾಕುವದೇ ಒಂದು ಅಪರಾಧ., ಅನಿಷ್ಟ ಪದ್ಧತಿ.,  ಅಂತಹದ್ದರಲ್ಲಿ ಕುಟುಂಬವನ್ನೇ ಸಾಮಾಜಿಕ ಬಹಿಷ್ಕಾರ ಹಾಕುವದೆಂದರೇ..? ಇಂತಹ ಒಂದು ಅಮಾನವೀಯ ಪ್ರಕರಣ ಉತ್ತರ ಕೊಡಗಿನ ಕೂತಿ ಗ್ರಾಮದಲ್ಲಿ ಸಾಮಾನ್ಯವಾಗಿದೆ. ಸಣ್ಣ-ಪುಟ್ಟ ತಪ್ಪುಗಳಿಗೆ ಶಿಕ್ಷೆ ಎಂಬಂತೆ ತಪ್ಪು ಮಾಡಿದ ಕುಟುಂಬಗಳನ್ನು ಬಹಿಷ್ಕಾರ ಹಾಕುವದಲ್ಲದೆ ಗ್ರಾಮದಿಂದ ಹೊರಗಿಟ್ಟು ದಂಡ ಕೂಡ ವಿಧಿಸುವ ಪದ್ಧತಿ ಇಲ್ಲಿದೆ. ಬಹಿಷ್ಕಾರ ಹಾಕುವದು ತಪ್ಪು ಎಂದು ತಿಳಿದಿದ್ದರೂ., ಸರಕಾರ ಕೂಡ ಬಹಿಷ್ಕಾರ ಹಾಕುವವರಿಗೆ ದಂಡ ಸಹಿತ ಶಿಕ್ಷೆ ವಿಧಿಸುವ ಕಾನೂನಿಗೆ ಅಂಗೀಕಾರ ನೀಡಿದ್ದರೂ ಈ ಗ್ರಾಮದಲ್ಲಿ ಮಾತ್ರ ಈ ಪದ್ಧತಿ ಇಂದಿಗೂ ಜಾರಿಯಲ್ಲಿದೆ..!

ಹಿಂದೆ ಪೊಲೀಸ್ ಠಾಣೆ., ಕೋರ್ಟು ಕಚೇರಿಗಳು ಇಲ್ಲದಿದ್ದ ಕಾಲಘಟ್ಟದಲ್ಲಿ ಗ್ರಾಮಸ್ಥರೇ ಸಮಿತಿ ಮಾಡಿಕೊಂಡು ಪಂಚಾಯ್ತಿ ಕಟ್ಟೆಯಲ್ಲಿ ಸೇರಿ ಸಭೆ ಮಾಡಿ ಊರಿನ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ತಪ್ಪು, ಅನ್ಯಾಯಗಳು ನಡೆದಾಗಲೂ ಪಂಚಾಯ್ತಿಯಲ್ಲಿಯೇ ನ್ಯಾಯ ತೀರ್ಮಾನಗಳಾಗುತ್ತಿದ್ದವು. ನಂತರದಲ್ಲಿ ನಾಗರಿಕತೆ ಬೆಳೆಯುತ್ತಿದ್ದಂತೆ ಕಾನೂನುಗಳು ರೂಪಿತವಾಗಿ ಪೊಲೀಸ್ ಠಾಣೆಗಳು, ಕೋರ್ಟ್ ಕಚೇರಿಗಳು ಆರಂಭಗೊಂಡು ಆ ಮೂಲಕ ನ್ಯಾಯ ತೀರ್ಮಾನಗಳಾಗುತ್ತಿವೆ.

ಆದರೆ, ಈ ಕೂತಿ ಗ್ರಾಮದಲ್ಲಿ ಮಾತ್ರ ಈಗಲೂ ಗ್ರಾಮ ಸಮಿತಿಯ ತೀರ್ಮಾನವೇ ಅಂತಿಮವಾಗಿದೆ. ಗ್ರಾಮದ ಅಭಿವೃದ್ಧಿ, ಏಳಿಗೆಯ ದೃಷ್ಟಿಕೋನದಿಂದ ಇದೊಂದು ಉತ್ತಮ ಬೆಳವಣಿಗೆಯಾಗಿದ್ದರೂ ಸಣ್ಣ ಪುಟ್ಟ ತಪ್ಪುಗಳಾದರೂ ಊರಿಂದಲೇ ಬಹಿಷ್ಕಾರ ಮಾಡುವಂತಹ ಅಮಾನವೀಯ ತೀರ್ಮಾನ ಕೈಗೊಳ್ಳುತ್ತಿರುವದಂತೂ ಸಂವಿಧಾನ ವಿರೋಧಿ ನೀತಿಯೆಂದೇ ಹೇಳಬಹುದು..!

ಬಹಿಷ್ಕಾರಗೊಂಡ ಕುಟುಂಬ

ರಸ್ತೆಗಾಗಿ ತಕರಾರು..!

ಕೂತಿ ಗ್ರಾಮ ನಿವಾಸಿಯಾಗಿರುವ ಸಿ.ಬಿ. ಅಜಂತ ಎಂಬವರು ಅವರಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಸೇರಿದ ಜಾಗದಲ್ಲಿ ತಮ್ಮ ಜಮೀನಿಗೆ ತೆರಳಲು ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಅದೇ ಗ್ರಾಮದ ವ್ಯಕ್ತಿಯೊಬ್ಬರು ತಕರಾರು ಮಾಡಿದ್ದಾರೆ. ಇದಕ್ಕೆ ಅಜಂತ ಒಪ್ಪದಿದ್ದಾಗ ಆ ವ್ಯಕ್ತಿ ಗ್ರಾಮ ಸಮಿತಿಗೆ ಪುಕಾರು ಮಾಡಿದ್ದಾರೆ. ಸಮಿತಿ ಸಭೆಯಲ್ಲಿ ಜಾಗ ಬಿಟ್ಟುಕೊಡಲು ನಿರಾಕರಿಸಿದ ಕಾರಣಕ್ಕಾಗಿ ಗ್ರಾಮ ಸಮಿತಿಯವರು ಅಜಂತ ಅವರನ್ನು ಗ್ರಾಮದಿಂದ ಬಹಿಷ್ಕಾರ ಮಾಡಿ ತೀರ್ಮಾನ ಕೈಗೊಂಡಿದ್ದಾರೆ. 

2019 ರಿಂದ ಬಹಿಷ್ಕಾರ..!

ಈ ಪ್ರಕರಣ ನಡೆದದ್ದು 2019ರಲ್ಲಿ., ಅಂದಿನಿಂದ 2022 ರವರೆಗೆ ಈ ಬಹಿಷ್ಕಾರ ಮುಂದುವರೆದಿತ್ತು. ನಂತರದಲ್ಲಿ ಬಹಿಷ್ಕಾರ ಹಾಕಿರುವ ಬಗ್ಗೆ ಸಹೋದರ ಅಜಿತ್‌ಕುಮಾರ್ ಪೊಲೀಸರಿಗೆ ದೂರು ನೀಡಿ ಯಾವ ಕಾರಣಕ್ಕಾಗಿ ಬಹಿಷ್ಕಾರ ಹಾಕಿರುವದಾಗಿ ಪರಿಶೀಲನೆ ಮಾಡುವಂತೆ ಹಾಗೂ ಗ್ರಾಮ ಸಮಿತಿಯ ನಡಾವಳಿ ಪುಸ್ತಕದಲ್ಲಿ ನಮೂದಿಸಿರುವ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ. ಇದೇ ಒಂದು ಕಾರಣಕ್ಕಾಗಿ ಸಹೋದರನಿಗೆ ಸಹಕಾರ ಮಾಡಿದ್ದಕ್ಕಾಗಿ ಅಜಿತ್‌ಕುಮಾರ್, ತಾಯಿ ಸಾವಿತ್ರಿ ಅವರಿಗೂ ಬಹಿಷ್ಕಾರ ಮಾಡಲಾಗಿದೆ..! 

70 ಸಾವಿರ ದಂಡ..!

ಗ್ರಾಮ ಸಮಿ ತಿಯ ತೀರ್ಮಾನದಂತೆ ಅಜಂತ ಯಾವದೇ ಅಂಗಡಿಗೆ ಹೋಗುವಂತಿಲ್ಲ, ಗ್ರಾಮದೊಳಗಡೆ ತಿರುಗಾಡುವಂತಿಲ್ಲ, ಯಾರೊಂದಿಗೂ ಸೇರುವಂತಿಲ್ಲ, ಒಂದು ವೇಳೆ ಯಾರಾದರೂ ಸೇರಿದರೆ, ಮಾತನಾಡಿಸಿದರೆ ಅವರುಗಳಿಗೆ ದಂಡ ವಿಧಿಸುವ ನಿಯಮವನ್ನೂ ಹೇರಲಾಗಿದೆ. ಅಷ್ಟೇ ಅಲ್ಲದೆ ಅಜಂತ ಅವರಿಗೆ ತಪ್ಪು ಕಾಣಿಕೆಯಾಗಿ ರೂ.70 ಸಾವಿರ ದಂಡ ವಿಧಿಸಲಾಗಿದೆ..!

ತಂದೆಗೂ ನೋಟೀಸ್..!

ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಸಮಿತಿಯ ತೀರ್ಮಾನವನ್ನು ಒಪ್ಪಿಕೊಳ್ಳದೆ ಸಭೆಯಿಂದ ಅಜಂತ ಎದ್ದು ಹೋಗಿದ್ದಾರೆ ಎಂಬ ಕಾರಣ ನೀಡಿ ಅಜಂತ ಅವರ ತಂದೆ ಸಿ.ಆರ್.ಬೋಪಯ್ಯ ಅವರಿಗೂ ಸಮಿತಿ ನೋಟೀಸ್ ನೀಡಿದೆ. ಗ್ರಾಮಸ್ಥರ ತೀರ್ಮಾನದಂತೆ ಇನ್ನು ಮುಂದೆ  ಗ್ರಾಮದ ಸಹಕಾರವನ್ನು ನಿಲ್ಲಿಸಲಾಗಿದೆ. ಆದ್ದರಿಂದ ತಾವೂ ಸಹಕಾರ ನೀಡಬಾರದು ಎಂದು, ಒಂದು ವೇಳೆ ಸಹಕಾರ ನೀಡಿದ್ದಲ್ಲಿ ತಮಗೂ ಕೂಡ ಗ್ರಾಮದ ಸಹಕಾರ ಇರುವದಿಲ್ಲವೆಂದು ಈ ಮೂಲಕ ತಿಳಿಯಪಡಿಸುತ್ತೇವೆ ಎಂದು ನೋಟೀಸಿನಲ್ಲಿ ಸೂಚಿಸಲಾಗಿದೆ. ಸ್ವಂತ ಮಗನಿಗೆ ಸಹಕಾರ ನೀಡಬಾರದೆನ್ನುವದು ಯಾವ ರೀತಿಯ ನ್ಯಾಯ.,?  ಕುಟುಂಬವಾದರೂ ಹೇಗೇ ಸಹಿಸುತ್ತದೆ..!?

 ಎಲ್ಲಿಗೂ ಹೋಗುವಂತಿಲ್ಲ..!

ಈ ಒಂದು ಬಹಿಷ್ಕಾರದಿಂದಾಗಿ ಇದೀಗ ಅಜಂತ ಅವರ ಕುಟುಂಬ ಎಲ್ಲಿಗೂ ಹೋಗುವಂತಿಲ್ಲ, ಯಾರೊಂದಿಗೂ ಸೇರುವಂತಿಲ್ಲ, ಇವರೊಂದಿಗೂ ಯಾರೂ ಬೆರೆಯುವಂತಿಲ್ಲ. ಒಂದು ವೇಳೆ ಇವರನ್ನು ಮಾತನಾಡಿಸಿದರೆ ಅವರುಗಳಿಗೆ ದಂಡ ಖಚಿತ. ಕನಿಷ್ಟ ಅಂದರೂ ರೂ.25ಸಾವಿರ ದಂಡ ವಿಧಿಸಲಾಗುತ್ತದೆ. ಹಾಗಾಗಿ ಯಾರೂ ಕೂಡ ಈ ಕುಟುಂಬವನ್ನು ಮಾತನಾಡಿಸಲು ಮುಂದೆ ಬರುತ್ತಿಲ್ಲ, ರಸ್ತೆ ಬದಿಯಲ್ಲಿಯೇ ಮನೆ ಇರುವ ಈ ಕುಟುಂಬದವರು ದಾರಿಯಲ್ಲೇನಾದರೂ ಕಂಡರೆ ಊರವರವರು ಅವರನ್ನೇ ಓಡಿಸುವಂತಹ ಪರಿಸ್ಥಿತಿ ಇಲ್ಲಿದೆ..!

ಮೂರು ತಲೆಮಾರಿನಿಂದ ಇದ್ದಾರೆ..!

ಈ ಕುಟುಂಬ ಇದೇ ಗ್ರಾಮದಲ್ಲಿ ಮೂರು ತಲೆಮಾರುಗಳನ್ನು ಕಂಡಿದೆ. ಸಾಲದಕ್ಕೆ ಅಜಂತ ಅವರ ತಾಯಿ ಗ್ರಾಮ ಪಂಚಾಯ್ತಿ ಸದಸ್ಯರಾಗಿಯೂ ಈ ಗ್ರಾಮದ ಜನರ ಸೇವೆ ಮಾಡಿದ್ದಾರೆ. ಸಾಧು ಸ್ವಭಾವದವರಾಗಿರುವ ಸಾವಿತ್ರಿ  1978ರಲ್ಲಿಯೇ ಗ್ರಾಮ ಪಂಚಾಯ್ತಿ ಸದಸ್ಯಯರಾಗಿದ್ದವರು. ನಂತರದಲ್ಲಿ ಮತ್ತೊಮ್ಮೆ 1994ರಲ್ಲಿಯೂ ಆಯ್ಕೆಯಾಗಿ ಈ ಗ್ರಾಮದ ಜನರ ಸೇವೆ ಮಾಡಿದವರು. ವಿಪರ್ಯಾಸವೆಂದರೆ ಇದೀಗ ಅದೇ ಗ್ರಾಮದ ಜನರು ಮಾತೆಯನ್ನು ಬಹಿಷ್ಕಾರ ಮಾಡಿ ದೂರ ಮಾಡಿರುವದು..!

ಮನೆ ಮುರಿದು ಹಲ್ಲೆ..!

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಜೋಯಪ್ಪ ಎಂಬವರಿಗೆ ಸೇರಿದ ನಿವೇಶನವನ್ನು ಬಿಟ್ಟುಕೊಡದ ಕಾರಣಕ್ಕಾಗಿ ಅವರ ಪುತ್ರ ನವೀನ್‌ಕುಮಾರ್ ಎಂಬವರು ನಿರ್ಮಿಸಿದ್ದ ಮನೆ ಮುರಿದು ಹಲ್ಲೆ ನಡೆಸಿ ಬಹಿಷ್ಕಾರ ಹಾಕಲಾಗಿದೆ. ನವೀನ್ ಅವರ ತಂದೆ ಜೋಯಪ್ಪ ಅವರ ಹೆಸರಿಗೆ ಕೂತಿ ಗ್ರಾಮದ ಸ.ನಂ735ರಲ್ಲಿ 3.45 ಸೆಂಟ್ ನಿವೇಶನ 1988ರಲ್ಲಿಯೇ ಮಂಜೂರಾಗಿದೆ. ಈ ಜಾಗದಲ್ಲಿ ನವೀನ್ ಒಂದು ಸಣ್ಣ ಮನೆ( ಶೀಟ್ ಹಾಕಿದು) ನಿರ್ಮಿಸಿಕೊಂಡಿದ್ದರು. ಆದರೆ ಆ ಜಾಗವನ್ನು ಒಂದು ಸಮುದಾಯದ ಸಮುದಾಯ ಭವನಕ್ಕೆ ಬಿಟ್ಟುಕೊಡಬೇಕೆಂದು ಗ್ರಾಮ ಸಮಿತಿಯವರು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಸಮಿತಿಯವರು ಆ ಸ್ಥಳದಲ್ಲಿದ್ದ ಮನೆಯನ್ನು ಮುರಿದು ಸಾಮಗ್ರಿಗಳನ್ನು ಕೊಂಡೊಯ್ದು ಸಮಿತಿಯ ಭವನದೊಳಗಡೆ ಇರಿಸಿಕೊಂಡಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಇದ್ದು, ಮೊಕದ್ದಮೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ನವೀನ್ ಮೇಲೆ ಸಭೆಯಲ್ಲಿಯೇ ಹಲ್ಲೆ ನಡೆಸಿದ್ದಲ್ಲದೆ ಅವರ ಮೇಲೆಯೇ ದೂರು ದಾಖಲಿಸಿರುವ ಪ್ರಸಂಗವೂ ನಡೆದಿದೆ..! ಇಷ್ಟೇ ಅಲ್ಲದೇ ನವೀನ್ ಮೇಲೆ ರೂ.40 ಸಾವಿರ ದಂಡ ಕೂಡ ವಿಧಿಸಲಾಗಿದೆ..!

ತಂದೆಯ ಮೇಲೆಯೂ ಬಹಿಷ್ಕಾರ..!

ಇಷ್ಟು ಮಾತ್ರವಲ್ಲ., ನವೀನ್ ಅವರ ತಂದೆ 73 ವರ್ಷ ಪ್ರಾಯದ ಜೋಯಪ್ಪ ಅವರ ಮೇಲೆಯೂ ಬಹಿಷ್ಕಾರ ಹೇರಲಾಗಿತ್ತು. ಮನೆಗೆ ಕುಡಿಯುವ ನೀರಿನ ಸಂಪರ್ಕ ಕಡಿತ ಮಾಡಿದ ವಿಚಾರಕ್ಕೆ ಸಂಬಂಧಿಸಿದAತೆ ಪ್ರಶ್ನೆ ಮಾಡಿದ ಕಾರಣಕ್ಕಾಗಿ 1992ರಲ್ಲಿ ಬಹಿಷ್ಕಾರ ಹಾಕಿದ್ದಲ್ಲದೆ ರೂ. 40 ಸಾವಿರ ದಂಡ ಕೂಡ ವಿಧಿಸಲಾಗಿತ್ತು..!

ಪುರಾತನ ಕಾಲದಲ್ಲಿ ಇದ್ದಂತಹ ಜೀತ ಪದ್ಧತಿ, ಕಟ್ಟೆ ಪಂಚಾಯ್ತಿ ತೀರ್ಮಾನ, ಬಹಿಷ್ಕಾರ ಮುಂತಾದುವನ್ನು ಕೊನೆಗಾಣಿಸಿ ಕಾನೂನು-ಕಟ್ಟಳೆಗಳ ಮೂಲಕ ನ್ಯಾಯ ತೀರ್ಮಾನವಾಗುತ್ತಿರುವ ಇಂದಿನ 21ನೇ ಶತಮಾನದಲ್ಲಯೂ ಸಾಮಾಜಿಕ ಬಹಿಷ್ಕಾರದಂತಹ ಪಿಡುಗು ಮುಂದುವರೆದಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವೇ ಸರಿ..!          

ಪರಿಶಿಷ್ಟರಿಗೆ ಪ್ರವೇಶವಿಲ್ಲ..!

ಈ ಗ್ರಾಮದಲ್ಲಿ ಗ್ರಾಮ ಸಮಿತಿ ಸಭೆ ಹಾಗೂ ಅಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಪ್ರವೇಶವಿಲ್ಲ. ಸಭೆಗೆ ತೆರಳಿದರೆ ಎಲ್ಲರೂ ಕುಳಿತಾದ ಮೇಲೆ ಕೊನೆಯ ಸಾಲಿನಲ್ಲಿ ಕುಳಿತು ಎದ್ದು ಹೋಗಬೇಕು, ಯಾವದೇ ಚರ್ಚೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಇನ್ನು ದೇವಾಲಯ ಹಾಗೂ ಸಮಿತಿಯ ಎಲ್ಲ ಕೆಲಸ ಕಾರ್ಯಗಳಿಗೂ ಇವರುಗಳು ಬೇಕು, ಆದರೆ., ದೇವಾಯಲಯದ ಒಳಗಡೆ ಇವರುಗಳಿಗೆ ಪ್ರವೇಶವಿಲ್ಲ..! ಅದೆಷ್ಟೋ ವರ್ಷಗಳ ಹಿಂದೆ ಈ ರೀತಿಯಲ್ಲಿ ಪರಿಶಿಷ್ಟರಿಗೆ ದೇವಾಲಯಗಳಿಗೆ ಪ್ರವೇಶ ನಿಷಿದ್ಧವಿತ್ತು. 12ನೇ ಶತಮಾನದಲ್ಲಿ ಬಸವಣ್ಣನವರು ಇಂತಹ ಅನಿಷ್ಟ ಪದ್ಧತಿ ವಿರೋಧಿಸಿ ಕ್ರಾಂತಿ ಮಾಡಿದ ಬಳಿಕ ಎಲ್ಲರೂ ಸಮಾನರು ಎಂದು ಸಾರಲಾಯಿತು. ಆದರೂ ಇಂತಹ ಅನಿಷ್ಟ ಪದ್ಧತಿ ಇಂದಿಗೂ ಇಲ್ಲಿ ಜೀವಂತವಾಗಿದೆ ಎಂದರೆ ಇದೊಂದು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕಿ ಎನ್ನಬಹುದು..! ‘ನಮಗಳಿಗೆ ಈ ಗ್ರಾಮದಲ್ಲಿ ಜೀವನ ಮಾಡುವದೇ ಒಂದು ರೀತಿಯ ಹಿಂಸೆ ಅನಿಸುತ್ತಿದೆ, ಬಹಿಷ್ಕಾರ, ದೇವರನ್ನು ನೋಡಿ ಪೂಜಿಸುವಂತಿಲ್ಲ, ಯಾರೊಂದಿಗೂ ಸೇರುವಂತಿಲ್ಲ, ಗುಲಾಮರ ರೀತಿಯಲ್ಲಿ ಬದುಕುತ್ತಿದ್ದೇವೆ’ ಎಂದು ಗ್ರಾಮದ ಪರಿಶಿಷ್ಟ ವರ್ಗದ ಅನಿಲ್ ಹಾಗೂ ಇನ್ನಿತರರು ದುಖಃದಿಂದ ಹೇಳುತ್ತಾರೆ.