ಹಾಲಿನ ಬೆಲೆ ಏರಿಕೆ - ಜಿಲ್ಲೆಯಲ್ಲಿ ಐದು ಸಾವಿರ ಲೀಟರ್ ಬಳಕೆ ಇಳಿಕೆ

ರಾಜ್ಯ ಸರಕಾರ ದಿನ ನಿತ್ಯ ಬಳಕೆಯ ನಂದಿನಿ ಹಾಲಿನ ದರ ಏರಿಸಿದ ಬೆನ್ನಲ್ಲೇ ಹಾಲಿನ ಬಳಕೆಯಲ್ಲಿ ಐದು ಸಾವಿರದಷ್ಟು ಇಳಿಕೆಯಾಗಿದೆ.

ರಾಜ್ಯದ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಳೆದ ಅ.29ರಂದು ನಡೆದ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಯಂತೆ ಏರಿಕೆ ಮಾಡಲಾಗಿತ್ತು. ಹೆಚ್ಚಿಗೆ ಮಾಡಲಾದ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ಹಾಲು ಉತ್ಪಾದಕರಿಗೆ, ಹಾಗೂ 1 ರೂಪಾಯಿಯನ್ನು ಕೆಎಂಎಫ್‌ಗೆ ನೀಡುವಂತೆ ತೀರ್ಮಾನಿಸಲಾಗಿತ್ತು. ಕಳೆದ ನವೆಂಬರ್ 1ರಿಂದಲೇ ಈ ನೂತನ ದರ ಜಾರಿಗೆ ಬಂದಿದೆ. ಆದರೆ, ಹೊಸ ದರ ಜಾರಿಗೆ ಬಂದಾಗಿನಿಂದಲೇ ಹಾಲಿನ ಮಾರಾಟ ಹಾಗೂ ಖರೀದಿಯಲ್ಲಿ ಭಾರೀ ಇಳಿಕೆಯಾಗಿದೆ.

ಹಾಸನ ಹಾಲು ಒಕ್ಕೂಟದ ಕೆಎಂಎಫ್‌ನ ಕೂಡಿಗೆಯಲ್ಲಿರುವ ಹಾಲಿನ ಡೈರಿಯಿಂದ ಕೊಡಗು ಜಿಲ್ಲೆಗೆ ಸರಬರಾಜಾಗುತ್ತಿರುವ ಹಾಲಿನ ಪ್ರಮಾಣದಲ್ಲಿ ದಿಢೀರನೇ ಕುಸಿತ ಕಂಡಿದೆ. ಕೂಡಿಗೆ ಡೈರಿಗೆ ಕೊಡಗು ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳಿಂದ ಪ್ರತಿನಿತ್ಯ 52ಸಾವಿರ ಲೀಟರ್ ಹಾಲು ಬರುತ್ತದೆ. ಇದುವರೆಗೆ ಅಷ್ಟೂ ಹಾಲೂ ಜಿಲ್ಲೆಯ ವಿವಿಧೆಡೆಗಳಿಗೆ ಸರಬರಾಜಾಗುತ್ತಿದ್ದವು. ಆದರೆ, ಇದೀಗ ದರ ಪರಿಷ್ಕರಣೆಯ ಬಳಿಕ ಹಾಲಿನ ಸರಬರಾಜಿನಲ್ಲಿ ಇಳಿಕೆಯಾಗಿದೆ. ಪ್ರತಿನಿತ್ಯ 52 ಸಾವಿರ ಲೀಟರ್ ಹಾಲು ಬರುತ್ತಿದ್ದು, ಅದನ್ನು ಡೈರಿಯಲ್ಲಿ ಸಂಸ್ಕರಿಸಲಾಗುತ್ತಿದೆ. ಆದರೆ, 45ರಿಂದ 47ಸಾವಿರ ಲೀಟರ್‌ನಷ್ಟು ಮಾತ್ರ ಜಿಲ್ಲೆಯ ವಿವಿಧೆಡೆಗಳಿಗೆ ಸರಬರಾಜಾಗುತ್ತಿದೆ. ಇನ್ನುಳಿದ ಸುಮಾರು 4ರಿಂದ 5ಸಾವಿರ ಲಿಟರ್‌ನಷ್ಟು ಹಾಲು ಡೈರಿಯಲ್ಲಿಯೇ ಉಳಿಕೆಯಾಗುತ್ತಿದೆ.

ಖರೀದಿಗೆ ಹಿಂದೇಟು..!

ಸರಕಾರ ದಿಢೀರನೇ ಪ್ರತಿ ಲೀಟರ್ ಹಾಲಿಗೆ 6 ರಿಂದ 12 ರೂಪಾಯಿಯಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಹೊಡೆತ ಬಿದ್ದಂತಾಗಿದೆ. ದಿನ ನಿತ್ಯ ಉಪಯೋಗಿಸುವ ಪೌಷ್ಟಿಕಾಂಶದ ಹಾಲಿನ ದರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿರುವದರಿಂದ ಸಾಮಾನ್ಯವಾಗಿ ಜನರಿಗೆ ಹೊರೆಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನದೊಂದಿಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಜನರು ಕೂಡ ಹಾಲು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಪ್ರತಿನಿತ್ಯ ಖರೀದಿ ಮಾಡುತ್ತಿದ್ದವರು ಎರಡು- ಮೂರು ದಿನಗಳಿಗೊಮ್ಮೆ ಖರೀದಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಖರೀದಿಸುವದನ್ನೇ ನಿಲ್ಲಿಸಿದ್ದಾರೆ..!

ಕಾಫಿ-ಟೀ ಏರಿಕೆ..!

 ಇತ್ತ ಹಾಲಿನ ದರ ಏರಿಕೆಯಾಗುತ್ತಿದ್ದಂತೆ ಹೊಟೇಲ್‌ಗಳಲ್ಲಿ ಕಾಫಿ-ಟೀಗಳ ದರ ಕೂಡ ಏರಿಕೆಯಾಗಿದೆ. ಸಾಮಾನ್ಯ ಹೊಟೇಲ್‌ಗಳಲ್ಲಿ ಒಂದು ಲೋಟ ಕಾಫಿ-ಟೀಗೆ ರೂ.15 ಇದ್ದುದು ಇದೀಗ ರೂ. 20ಕ್ಕೆ ಏರಿದೆ. ದೊಡ್ಡ, ಐಷಾರಾಮಿ ಹೊಟೇಲ್‌ಗಳಲ್ಲಿ ಇನ್ನೂ ದುಬಾರಿಯಾಗಿದೆ. ಹಾಗಾಗಿ ಸಾಮಾನ್ಯ ಜನರು ಹೊಟೇಲ್‌ಗಳಲ್ಲಿ ಕಾಫಿ-ಟೀ ಕುಡಿಯುವದನ್ನು ಕೂಡ ಕಡಿಮೆ ಮಾಡಿದ್ದಾರೆ. ಇದೂ ಕೂಡ ಹಾಲಿನ ಸರಬರಾಜು ಹಾಗೂ ಖರೀದಿಯ ಮೇಲೆ ಪರಿಣಾಮ ಬೀರಿದೆ.

ಉತ್ಪಾದಕರಿಗೆ ಸಮಸ್ಯೆ..!

ಒಟ್ಟಾರೆ ಸರಕಾರ ಹಾಲು ಉತ್ಪಾದಕರ ನೆರವಿಗೆ ಧಾವಿಸಲು ಮುಂದಾಗಿ ಇದೀಗ ಅದೇ ಉತ್ಪಾದಕರಿಗೆ ಸಮಸ್ಯೆ ತಂದೊಡ್ಡಿದAತಾಗಿದೆ. ಹಾಲು ಮಾರಾಟ-ಸರಬರಾಜು ಕಡಿಮೆಯಾದರೆ ವಿಧಿಯಿಲ್ಲದೆ ಹಾಲು ಖರೀದಿಸುವ ಕೆಎಂಎಫ್ ಕೂಡ ಖರೀದಿ ಮಾಡುವದನ್ನು ಕಡಿಮೆ ಮಾಡಲಿದೆ. 

ಇದರಿಂದ ಪ್ರತಿನಿತ್ಯ ಹಾಲು ಉತ್ಪಾದಿಸಿ ಮಾರಾಟ ಮಾಡುವ ಹಾಲು ಉತ್ಪಾದಕರಿಗೂ ತೊಂದರೆಯಾಗಲಿದೆ. ದಿನ ಕಳೆದಂತೆ ಹಾಲು ಉತ್ಪಾದನೆಯೂ ಕುಂಠಿತಗೊಳ್ಳಲಿದೆ. ಈ ನಿಟ್ಟಿನಲ್ಲಿ ಸರಕಾರ ಹಾಲಿನ ದರದ ಪರಿಷ್ಕರಣೆ ಬಗ್ಗೆ ಮತ್ತೊಮ್ಮೆ ಪರಮಾರ್ಷಿಸಬೇಕಿದೆ.